ಭಾನುವಾರ, ಸೆಪ್ಟೆಂಬರ್ 26, 2021
21 °C

ಹಾಕಿ: ಗೋಲಿನ ಮಳೆ ಸುರಿಸಿದ ಭಾರತ

ಪಿಟಿಐ Updated:

ಅಕ್ಷರ ಗಾತ್ರ : | |

ಹಾಕಿ: ಗೋಲಿನ ಮಳೆ ಸುರಿಸಿದ ಭಾರತ

ಕೌಂಟಾನ, ಮಲೇಷ್ಯಾ: ನಾಲ್ಕನೇ ವರ್ಷದ ಏಷ್ಯನ್‌ ಚಾಂಪಿಯನ್ಸ್‌ ಟ್ರೋಫಿ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸುವ ನೆಚ್ಚಿನ ತಂಡವೆನಿಸಿರುವ ಭಾರತ ತನ್ನ ಮೊದಲ ಪಂದ್ಯದಲ್ಲಿಯೇ ವಿಜೃಂಭಿಸಿದೆ. ಎದುರಾಳಿ ಜಪಾನ್‌ ಎದುರು 10–2 ಗೋಲುಗಳಿಂದ ಸುಲಭ ಗೆಲುವು ಪಡೆದಿದೆ.ಮುಂಬರುವ ಮಹತ್ವದ ಅಂತರರಾಷ್ಟ್ರೀಯ ಟೂರ್ನಿಗಳಿಗೆ ಸಜ್ಜಾಗಲು ಈ ಟೂರ್ನಿ ಪ್ರಮುಖ ವೇದಿಕೆಯಾಗಿದೆ. ಆದ್ದರಿಂದ ಪಿ.ಆರ್‌. ಶ್ರೀಜೇಶ್‌ ನಾಯಕತ್ವದ ಭಾರತ ತಂಡಕ್ಕೆ ಪ್ರತಿಪಂದ್ಯವೂ ಮುಖ್ಯವೆನಿಸಿದೆ.ಕೌಂಟಾನ ಹಾಕಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಭಾರತದ ಆಟಕ್ಕೆ ಸಾಟಿಯಾಗಲು ಎದುರಾಳಿ ತಂಡಕ್ಕೆ ಸಾಧ್ಯವೇ ಆಗಲಿಲ್ಲ. ಜಪಾನ್‌ 23 ಮತ್ತು 38ನೇ ನಿಮಿಷಗಳಲ್ಲಿ ಎರಡು ಗೋಲುಗಳನ್ನು ಗಳಿಸಿದ್ದು ಹೊರತುಪಡಿಸಿದರೆ ಪಂದ್ಯದ ಉಳಿದ ಸಮಯದಲ್ಲಿ ರೂಪಿಂದರ್ ಪಡೆಯದ್ದೇ ಪಾರುಪತ್ಯ.ಪೆನಾಲ್ಟಿ ಕಾರ್ನರ್‌ ಪರಿಣತ ರೂಪಿಂದರ್ ಪೆನಾಲ್ಟಿ ಕಾರ್ನರ್‌ ಮೂಲಕವೇ ಆರು ಗೋಲುಗಳನ್ನು ಹೊಡೆದರು. ಜಪಾನ್‌ ಬಲಿಷ್ಠ ತಂಡವಲ್ಲವೆಂಬುದನ್ನು ಮೊದಲೇ ಅರಿತಿದ್ದ ಭಾರತಕ್ಕೆ ರಮಣದೀಪ್‌ ಸಿಂಗ್‌ ಎರಡನೇ ನಿಮಿಷದಲ್ಲಿ ಮೊದಲ ಗೋಲು ತಂದಿತ್ತು ಆರಂಭಿಕ ಮುನ್ನಡೆಗೆ ಕಾರಣರಾದರು. ಈ ಆಟಗಾರ 15ನೇ ನಿಮಿಷದಲ್ಲಿ ಇನ್ನೊಂದು ಗೋಲನ್ನು ಗಳಿಸಿದರು.ಮೊದಲ ಕ್ವಾರ್ಟರ್‌ನ 15 ನಿಮಿಷಗಳ ಆಟ ಮುಗಿದಾಗ ಭಾರತ 4–0 ಗೋಲುಗಳಿಂದ ಮುನ್ನಡೆ ಹೊಂದಿತ್ತು. ರೂಪಿಂದರ್‌ (9 ಮತ್ತು 12ನೇ ನಿಮಿಷ) ಗೋಲುಗಳನ್ನು ಕಲೆ ಹಾಕಿದ್ದರು.ಆರಂಭಿಕ ಮುನ್ನಡೆ ಭಾರತದ ಆಟಗಾರರಲ್ಲಿ ಸಾಕಷ್ಟು ವಿಶ್ವಾಸ ತುಂಬಿತ್ತು. ಚೆಂಡಿನ ಮೇಲೆ ಹಿಡಿತ ಕಳೆದುಕೊಳ್ಳದಂತೆ ಎಚ್ಚರಿಕೆ ವಹಿಸಿ ಮೇಲಿಂದ ಮೇಲೆ ಗೋಲು ಗಳಿಸಿದ ಭಾರತ ಎದುರಾಳಿ ತಂಡದ ಒತ್ತಡವನ್ನು ಹೆಚ್ಚಿಸಿತು. ಎರಡನೇ ಕ್ವಾರ್ಟರ್‌ನಲ್ಲಿ ಬಂದ ನಾಲ್ಕು ಗೋಲುಗಳು ಇದಕ್ಕೆ ಸಾಕ್ಷಿ. ಆ ಗೋಲುಗಳನ್ನು ರೂಪಿಂದರ್‌ (17 ಹಾಗೂ 22ನೇ ನಿಮಿಷ), ತಲ್ವೀಂದರ್ ಸಿಂಗ್‌ (19ನೇ ನಿ.) ಮತ್ತು ಆಕಾಶದೀಪ ಸಿಂಗ್‌ (28ನೇ ನಿ.) ತಂದಿಟ್ಟರು. ರೂಪಿಂದರ್ ಅವರಿಗೆ ಒಟ್ಟು ಹತ್ತು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದ್ದವು.ಮೊದಲರ್ಧದ ಆಟ ಮುಗಿದಾಗ ಭಾರತ 8–1ರಲ್ಲಿ ಮುನ್ನಡೆ ಹೊಂದಿತ್ತು. ಇನ್ನುಳಿದ ಎರಡು ಕ್ವಾರ್ಟರ್‌ಗಳಲ್ಲಿಯೂ ಚುರುಕಾಗಿ ಆಡಿ ಗೋಲುಗಳ ಸಂಖ್ಯೆ ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿತು. ಆದರೆ ಜಪಾನ್ ತಂಡ ಮೂರನೇ ಕ್ವಾರ್ಟರ್‌ನಲ್ಲಿ ರಕ್ಷಣಾ ವಿಭಾಗದಲ್ಲಿ ಕೊಂಚ ಚುರುಕುತನ ತೋರಿದ್ದರಿಂದ ಈ ಅವಧಿಯಲ್ಲಿ ಭಾರತಕ್ಕೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ನಾಲ್ಕು ಮತ್ತು ಕೊನೆಯ ಅವಧಿಯಲ್ಲಿ ರೂಪಿಂದರ್‌ (46 ಮತ್ತು 47ನೇ ನಿ.) ಹಾಗೂ ಅಫನ್‌ ಯೂಸುಫ್‌ (50ನೇ ನಿ.) ಚೆಂಡನ್ನು ಗುರಿ ಸೇರಿಸಿ ಗೆಲುವಿನ ಅಂತರ ಹೆಚ್ಚಿಸಿದರು.ಅಗ್ರಸ್ಥಾನ: ಈ ಗೆಲುವಿನ ಮೂಲಕ ಭಾರತ ತಂಡ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ದಿನದ ಇನ್ನೊಂದು ಪಂದ್ಯದಲ್ಲಿ ಮಲೇಷ್ಯಾ 4–2 ಗೋಲುಗಳಿಂದ ಪಾಕಿ ಸ್ತಾನವನ್ನು ಮಣಿಸಿ ಮೂರು ಪಾಯಿಂಟ್‌ಗಳನ್ನು ಪಡೆಯಿತು. ಭಾರ ತದ ಖಾತೆಯಲ್ಲಿಯೂ ಇಷ್ಟೇ ಪಾಯಿಂಟ್ಸ್‌ ಇವೆ. ಆದರೆ ಗೋಲು ಗಳಿಕೆಯ ಆಧಾರದ ಮೇಲೆ ಭಾರತ ಮೊದಲ ಸ್ಥಾನದಲ್ಲಿದೆ.ಈ ಟೂರ್ನಿಯಲ್ಲಿ ಭಾರತ, ಪಾಕಿ ಸ್ತಾನ, ಚೀನಾ, ಜಪಾನ್‌, ದಕ್ಷಿಣ ಕೊರಿಯಾ ಮತ್ತು ಮಲೇಷ್ಯಾ ತಂಡಗಳು ಪಾಲ್ಗೊಂಡಿವೆ. ಇದೇ ತಿಂಗಳು 30 ರಂದು ಫೈನಲ್‌ ಆಯೋಜನೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.