ನೆಲದ ನುಡಿಗಟ್ಟಿಗೆ ಶೋಭೆ ತಂದ ಡಿಲಾನ್‌

7

ನೆಲದ ನುಡಿಗಟ್ಟಿಗೆ ಶೋಭೆ ತಂದ ಡಿಲಾನ್‌

Published:
Updated:
ನೆಲದ ನುಡಿಗಟ್ಟಿಗೆ ಶೋಭೆ ತಂದ ಡಿಲಾನ್‌

ಅಮೆರಿಕದ ಸಾರ್ವಕಾಲಿಕ ಹಾಡುಗಾರನೆಂಬ ಖ್ಯಾತಿಗೆ ಒಳಗಾದ ಕವಿಯೊಬ್ಬನಿದ್ದರೆ ಆತನೇ ಬಾಬ್ ಡಿಲಾನ್. ಈತನ ಪ್ರಭಾವ ಎಷ್ಟೆಂದರೆ ‘ಬಾಬ್ ಡಿಲಾನ್ ಮ್ಯೂಜಿಕ್’ ಮಾದರಿಯೊಂದು ರೂಪುಗೊಂಡಿದೆ. ಇದನ್ನು ಕಲಿಯುವ ಮತ್ತು ಹಾಡುವ ಶಿಷ್ಯಕೋಟಿ ಜಗತ್ತಿನಾದ್ಯಂತ ಹರಡಿದೆ. ಈತ ಅಮೆರಿಕದ ಯುದ್ಧಪರ ನೀತಿ ಮತ್ತು ಮನುಷ್ಯ ವಿರೋಧಿ ಅಭಿವೃದ್ಧಿಯ ದಾಹದ ಎದುರು ಸೆಟೆದು ನಿಂತು, ಅವನ್ನು ಧಿಕ್ಕರಿಸಿ ಬರೆದವ ಮತ್ತು ಹಾಡಿದವ. ಈ ಕಾರಣಕ್ಕೆ ಡಿಲಾನ್‌ ಈ ಬಾರಿ, ನೊಬೆಲ್‌ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಗೀತರಚನೆಕಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಾಮಾನ್ಯ ಕುಟುಂಬದ ಹಿನ್ನೆಲೆಯ ಡಿಲಾನ್, ಅಮೆರಿಕದ ಜನಪ್ರಿಯ ಸಂಗೀತ ಮತ್ತು ಸಂಸ್ಕೃತಿಯ ಮೇಲೆ ಸತತ ಆರು ದಶಕಗಳ ಕಾಲ ಇನ್ನಿಲ್ಲದ ಪ್ರಭಾವವನ್ನು ಬೀರಿದ ಏಕೈಕ ಸಂಗೀತಗಾರ. ಇವರ ‘ಬ್ಲೋವಿನ್ ಇನ್ ದ ವಿಂಡ್’ ಮತ್ತು ‘ದ ಟೈಮ್ಸ್ ದೆ ಆರ್ ಎ ಚೇಂಜಿನ್’ ಎನ್ನುವ ಹಾಡುಗಳು ಅಮೆರಿಕದ ನಾಗರಿಕ ಹಕ್ಕು ಮತ್ತು ಯುದ್ಧವಿರೋಧಿ ಚಳವಳಿಗಳ ರಾಷ್ಟ್ರಗೀತೆಗಳಂತಿವೆ. ಅವರ ನೂರಾರು ಹಾಡುಗಳು ಹೋರಾಟಕ್ಕೆ ಪ್ರೇರಣೆಯಾಗಿವೆ. ಅಮೆರಿಕದಂತಹ ಯುದ್ಧದಾಹದ ದೇಶದಲ್ಲಿದ್ದೂ ಇದೆಲ್ಲಾ ಹೇಗೆ ಸಾಧ್ಯವಾಯಿತು ಎನ್ನುವ ಅಚ್ಚರಿಯ ಕಾರಣಕ್ಕೂ ಇವರು ಜಾಗತಿಕ ಸಾಹಿತ್ಯ ವಲಯದಲ್ಲಿ ಚರ್ಚೆಯ ಕುತೂಹಲ ಹುಟ್ಟಿಸಿದ್ದಾರೆ. ನೊಬೆಲ್‌ ಪ್ರಶಸ್ತಿಯ ಮೂಲಕ ‘ಗೀತ ರಚನೆ’ ಮತ್ತು ‘ಜನತೆಯ ನುಡಿಗಟ್ಟಿನ ಹಾಡುಗಾರಿಕೆ’ಗೆ ಮೊತ್ತಮೊದಲು ಮನ್ನಣೆ ತಂದುಕೊಡುವ ಮೂಲಕ, ಜಗದ ಮೌಖಿಕ ಪರಂಪರೆಯ ಚರಿತ್ರೆಯಲ್ಲಿ ಹೊಸದೊಂದು ದಾಖಲೆ ಬರೆದಿದ್ದಾರೆ.

ಅಬ್ರಹಾಂ ಜಿಮ್ಮೆರ್‌ಮ್ಯಾನ್ ಮತ್ತು ಬೆಟ್ಟಿಸ್ಟೋನ್‌ರ ಮಗನಾಗಿ ಮಿನ್ನೆಸೋಟದ ದಲತ್‌ನಲ್ಲಿ 1941ರ ಮೇ 24ರಂದು ಡಿಲಾನ್‌ ಜನಿಸಿದರು. ಇವರ ಮೂಲ ಹೆಸರು ರಾಬರ್ಟ್ ಅಲೆನ್ ಜಿಮ್ಮೆರ್‌ಮ್ಯಾನ್. ಜೆವಿಷ್ ಎನ್ನುವ ಪುಟ್ಟ ಬುಡಕಟ್ಟು ಸಮುದಾಯಕ್ಕೆ ಸೇರಿದ ಟರ್ಕಿ ಮೂಲದ ಪೂರ್ವಜರು ಯುದ್ಧಕಾಲದಲ್ಲಿ ವಲಸೆ ಬಂದವರು. ಡಿಲಾನ್ ಮುಂದೆ ಜನಪ್ರಿಯತೆಗೆ ಬಂದಾಗ ಕ್ರೈಸ್ತ ಧರ್ಮಕ್ಕೆ ಸೇರ್ಪಡೆಗೊಂಡರು. ಸಾರಲೋಂಡ್ಸ್‌ ಎಂಬಾಕೆಯೊಂದಿಗೆ 1965ರಲ್ಲಿ ಮದುವೆಯಾದ ಡಿಲಾನ್‌, 1977ರ ಹೊತ್ತಿಗೆ ವಿಚ್ಛೇದನ ಪಡೆದರು. ನಂತರ ಕೆರೋಲಿನ್ ಡೆನ್ನಿಸ್‌ ಎಂಬುವವರನ್ನು 1986ರಲ್ಲಿ ಮದುವೆಯಾಗಿ 1992ರಲ್ಲಿ ಬೇರ್ಪಟ್ಟರು. ಹೀಗೆ ಸಾಂಸಾರಿಕ ಜೀವನ ಏರುಪೇರಿನಿಂದ ಕೂಡಿರುವ ಡಿಲಾನ್‌ ಅವರಿಗೆ ಜೆಸ್ಸಿ ಬೈರನ್, ಅನ್ನಾ ಲಿ, ಸ್ಯಾಮ್ಯುಯಲ್, ಜಾಕೊಬ್, ಡೆಸ್ಸಿರಿ ಎಂಬ ಐವರು ಮಕ್ಕಳಲ್ಲದೆ, ವಿಚ್ಛೇದಿತ ಮಡದಿ ಸಾರಾ ಅವರಿಂದ ದತ್ತು ಪಡೆದ ಮಗಳು ಮಾರಿಯಾ ಸಹ ಜೊತೆಗಿದ್ದಾಳೆ. ಮಗ ಜಾಕೊಬ್ ತಂದೆಯಂತೆ ಸಂಗೀತದ ಹಾದಿಯಲ್ಲಿದ್ದಾನೆ. ‘ದ ವಾಲ್ ಫ್ಲವರ್ಸ್‌್’ ಎನ್ನುವ ಬ್ಯಾಂಡ್‌ನಲ್ಲಿ ಗಾಯಕನಾಗಿ ಅಮೆರಿಕದಲ್ಲಿ ಖ್ಯಾತನಾಗಿದ್ದಾನೆ. ಜೆಸ್ಸಿ ಬೈರನ್‌ ಸಿನಿಮಾ ನಿರ್ದೇಶಕನಾಗಿ, ಮಾರಿಯಾ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ಧಿ ಪಡೆದಿದ್ದಾರೆ.

ನೆಲದ ನುಡಿಗಟ್ಟಿನಲ್ಲಿ ತಮ್ಮದೇ ಆದ ವಿಶಿಷ್ಟ ಲಯವನ್ನು ರೂಪಿಸಿಕೊಂಡಿರುವ ಡಿಲಾನ್‌ ಅವರ ಬರಹ ಮತ್ತು ಸಂಗೀತದ ಎಳೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕನ್ನಡದ ವರಕವಿ ಬೇಂದ್ರೆಯವರ ಜತೆ ಇವರನ್ನು ಹೋಲಿಸಬಹುದು. ಕನ್ನಡದ ಸಂದರ್ಭದಲ್ಲಿ ‘ಕ್ಯಾಸೆಟ್ ಕವಿಗಳು’ ಎಂದು ಕೆಲವರನ್ನು ವ್ಯಂಗ್ಯ ಮಾಡುವಂತೆ, ಅಮೆರಿಕದ ಕೆಲವು ಕ್ಲಾಸಿಕಲ್ ಕವಿಗಳು ಕೂಡ ಡಿಲಾನ್‌ ಅವರನ್ನು ‘ಬೀದಿಯ ಹಾಡುಗಾರ’ ಎಂದು ವ್ಯಂಗ್ಯದಿಂದ ಜರಿದಿದ್ದರು. ಇಂತಹವರೇ ಡಿಲಾನ್‌ಗೆ ನೊಬೆಲ್ ನೀಡಿರುವುದರಿಂದ ಪ್ರಶಸ್ತಿ ಕಳೆಗುಂದಿತು ಎಂದು ರಗಳೆ ತೆಗೆದಿದ್ದಾರೆ.

ಡಿಲಾನ್‌ ಅವರ ಸಂಗೀತದ ವಿಸ್ತರಣೆಯು ಅವರ ಕಲಾಕೃತಿಗಳಲ್ಲೂ ಮುಂದುವರಿದಿದೆ. ಅವರ ರೇಖೆ ಮತ್ತು ಚಿತ್ರಕಲೆಯನ್ನು ಒಳಗೊಂಡ ಆರು ಪುಸ್ತಕಗಳು ಪ್ರಕಟವಾಗಿವೆ. ಜಗತ್ತಿನ ಪ್ರಮುಖ ಕಲಾ ಗ್ಯಾಲರಿಗಳಲ್ಲಿ ಅವರ  ಕಲಾಕೃತಿಗಳಿವೆ. ಅವರ ಸಂಗೀತದಲ್ಲಿ ಅಡಕವಾದ ಭಗ್ನಪ್ರೇಮ, ಯುದ್ಧದ ನಿರರ್ಥಕತೆ, ಸ್ವಾರ್ಥ, ವಿಶ್ವಾಸದ್ರೋಹ, ವೇದನೆ, ಸಾವು, ನೈತಿಕ ಅಧಃಪತನ, ಪರಿಶುದ್ಧ ಪ್ರೇಮ ಮುಂತಾದವುಗಳನ್ನು ಗುರುತಿಸಲು ಈ ಕಲಾಕೃತಿಗಳು ನೆರವಾಗುತ್ತವೆ. ಸಂಗೀತದ ಲಯದೊಳಗೆ ಬೆರೆತ ಸಂವೇದನೆ ಅವರ ಕಲಾಕೃತಿಗಳಲ್ಲಿ ಚಿತ್ರರೂಪ ಪಡೆದಿದೆ ಎಂದು ವಿಮರ್ಶಕರು ಅಭಿಪ್ರಾಯ ಪಟ್ಟಿದ್ದಾರೆ.

ಡಿಲಾನ್ ಅವರು ಸಂಯೋಜಿಸಿದ ಲಕ್ಷಾಂತರ ಆಲ್ಬಮ್‌ಗಳು ಜಗತ್ತಿನಾದ್ಯಂತ ಮಾರಾಟವಾಗಿವೆ. ಹೀಗೆ ಜನಸಾಮಾನ್ಯರ ಮನದಲ್ಲಿ ನೆಲೆಸಿರುವ ಡಿಲಾನ್ ‘ಪ್ರಶಾಂತ ಪರ್ವತವೊಂದರಲ್ಲಿ ವಿರಮಿಸುವಿಕೆಯೇ ನನ್ನ ಸಂಗೀತದ ಎಳೆ. ಸಂಗೀತದ ಆಳದಲ್ಲಿ ನನಗೊಂದು ಬೆಳಕು ಕಾಣುತ್ತದೆ, ಅದೇ ನನ್ನ ಧರ್ಮ’ ಎಂದು ವಿವರಿಸುತ್ತಾರೆ. ಅಮೆರಿಕದ ಸಂಗೀತ ತಜ್ಞರು ‘ಹಳ್ಳಿಗಾಡಿನ ಜನಪದ ಸಂಗೀತ ಮತ್ತು ಬ್ಲೂಸ್ ಮ್ಯೂಜಿಕ್‌ ಅನ್ನು ರಾಕ್ ಹಿನ್ನೆಲೆಯಲ್ಲಿ ಸಂಯೋಜಿಸುವುದು ಬಹುದೊಡ್ಡ ಸವಾಲು. ಇಂತಹ ಸಂಯೋಜನೆಯೇ ಡಿಲಾನ್‌ ಅವರ ಮಹತ್ವದ ಕೊಡುಗೆ. ಅದುವೇ ಆತನನ್ನು ಸರ್ವಶ್ರೇಷ್ಠ ಸಂಗೀತಗಾರನನ್ನಾಗಿಸಿದೆ’ ಎಂದು ಹೇಳುತ್ತಾರೆ. ಹೀಗೆ ಜನಸಾಮಾನ್ಯರ ನುಡಿಗಟ್ಟನ್ನು ಬಹಳಷ್ಟು ಎತ್ತರಕ್ಕೆ ಕೊಂಡೊಯ್ದು ಅದರ ಬಗೆಗೆ  ಕ್ಲಾಸಿಕಲ್ ಕವಿಗಳು ಮತ್ತು ಸಂಗೀತಗಾರರಿಗಿದ್ದ ತಾತ್ಸಾರದ ಮನಸ್ಥಿತಿಗೆ ಸೆಡ್ಡು ಹೊಡೆದದ್ದು ಡಿಲಾನ್‌ ಅವರ ಶಕ್ತಿಯಾಗಿದೆ.

‘ಟೈಮ್ಸ್’ ಪತ್ರಿಕೆ ಸಿದ್ಧಪಡಿಸಿದ ‘ಶತಮಾನದ ನೂರು ಶ್ರೇಷ್ಠ ವ್ಯಕ್ತಿಗಳ’ ಪಟ್ಟಿಯಲ್ಲಿ ಡಿಲಾನ್‌ ಅವರನ್ನೂ ಸೇರಿಸಿ ಒಂದು ಟಿಪ್ಪಣಿ ಬರೆದು ‘ಡಿಲಾನ್‌ ಮಾಸ್ಟರ್ ಪೊಯಟ್, ಸಾಮಾಜಿಕ ವಿಮರ್ಶೆಯ ತೀಕ್ಷ್ಣಮತಿ, ಪ್ರತಿಸಂಸ್ಕೃತಿಯ ಪ್ರೇರಕ ಶಕ್ತಿ’ ಎಂದು ಬಣ್ಣಿಸಿದೆ. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ 2012ರಲ್ಲಿ ‘ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ’ ಅನ್ನು ಡಿಲಾನ್‌ ಅವರಿಗೆ ನೀಡುತ್ತಾ ‘ಈತನಿಗಿಂತ ದೊಡ್ಡ ಸಂಗೀತಗಾರ ಅಮೆರಿಕದ ಚರಿತ್ರೆಯಲ್ಲಿ ಇಲ್ಲ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ರೋಲಿಂಗ್ ಸ್ಟೋನ್ ಎಂಬ ಸಂಸ್ಥೆ 2011ರಲ್ಲಿ ಮಾಡಿದ ‘ಸಾರ್ವಕಾಲಿಕ ನೂರು ಶ್ರೇಷ್ಠ ಕಲಾವಿದರ’ ಪಟ್ಟಿಯಲ್ಲಿ ಡಿಲಾನ್‌ ಎರಡನೆಯವರು. ‘ಲೈಕ್ ಎ ರೋಲಿಂಗ್ ಸ್ಟೋನ್’ ಎನ್ನುವ ಅವರ ಹಾಡು ‘ಎಲ್ಲಾ ಕಾಲದ ಸರ್ವಶ್ರೇಷ್ಠ ಗೀತೆ’ ಎನ್ನುವ ಮೆಚ್ಚುಗೆಗೆ ಪಾತ್ರವಾಗಿದೆ. ಇಷ್ಟೆಲ್ಲಾ ಕಾರಣಗಳಿಂದಾಗಿ ಅಮೆರಿಕದ ಪ್ರಜ್ಞಾವಂತರು ಕಳೆದ 20 ವರ್ಷಗಳಿಂದ ಡಿಲಾನ್‌ ಅವರಿಗೆ ನೊಬೆಲ್ ಬರಬೇಕೆಂದು ‘ಸ್ವೀಡಿಷ್ ಅಕಾಡೆಮಿಗೆ’ ಸಾರ್ವಜನಿಕ ಒತ್ತಡ ತಂದಿದ್ದರು. ಅದರ ಪ್ರತಿಫಲ 2016ರಲ್ಲಿ ದಕ್ಕಿದೆ.

‘ಜೀವಂತವಿರುವಾಗ ನೀವು ಬಿಡುವಿಲ್ಲದ ಕೆಲಸಗಾರರಾಗದಿದ್ದರೆ ಸತ್ತಾಗ ಆಗುತ್ತೀರಾ’ ಎನ್ನುವ ಡಿಲಾನ್‌ ಅವರ ಹಾಡಿನ ಸಾಲೊಂದು ತಮ್ಮನ್ನು ಪ್ರಭಾವಿಸಿದ ಬಗ್ಗೆ ಆ್ಯಪಲ್ ಜನಕ ಸ್ಟೀವ್ ಜಾಬ್ಸ್ ಹೇಳಿಕೊಂಡಿದ್ದರು. ಅಷ್ಟೇ ಅಲ್ಲ ಡಿಲಾನ್‌ ಅವರ ಗೀತೆಯ ಸಾಲುಗಳು ಲಕ್ಷಾಂತರ ಜನರನ್ನು ಪ್ರಭಾವಿಸಿ ಅವರ ಬದುಕಿನ ದಿಕ್ಕನ್ನು ಬದಲಿಸಿವೆ.

‘ಡಿಲಾನ್ ನೊಬೆಲ್ ಪ್ರಶಸ್ತಿಯ ಸಾಹಿತ್ಯದ ವ್ಯಾಖ್ಯಾನವನ್ನು ಬದಲಿಸಿದ್ದಾರೆ. ಅಮೆರಿಕದ ಸಂಗೀತ ಕ್ಷೇತ್ರದ ದಂತಕತೆಯಂತಿರುವ ಅವರಿಗೆ ಪ್ರಶಸ್ತಿ ಬಂದಿರುವುದು ನನಗೆ ಅತೀವ ಸಂತಸ ಉಂಟುಮಾಡಿದೆ’ ಎಂದು ಲೇಖಕ ಸಲ್ಮಾನ್ ರಶ್ದಿ ಶ್ಲಾಘಿಸಿದ್ದಾರೆ. ಹೀಗೆ ಜನನುಡಿಯನ್ನು ನೊಬೆಲ್‌ ಪಟ್ಟಕ್ಕೇರಿಸಿದ ಡಿಲಾನ್ ತಮ್ಮ ಇನ್ನಷ್ಟು ಗೀತೆಗಳ ಮೂಲಕ ನೆಲದ ಸಂವೇದನೆಯ ಕಂಪನ್ನು ಜಗದಗಲ ಪಸರಿಸಬೇಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry