ಸೋಮವಾರ, ಡಿಸೆಂಬರ್ 9, 2019
16 °C
ಚುನಾವಣಾ ನಾಡಿನಿಂದ-15

ಹಿಲರಿ ವೇಗಕ್ಕೆ ನಿಯಂತ್ರಣ, ಮಿಂಚಂಚೆ ಪ್ರಕರಣ

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

ಹಿಲರಿ ವೇಗಕ್ಕೆ ನಿಯಂತ್ರಣ, ಮಿಂಚಂಚೆ ಪ್ರಕರಣ

‘ನಾನು ಅಧ್ಯಕ್ಷನಾದರೆ, ನಿಮ್ಮ ಇ-ಮೇಲ್ ಪ್ರಕರಣದ ಬಗ್ಗೆ ತನಿಖೆ ನಡೆಸಲು ವಿಶೇಷ ಫಿರ್ಯಾದಿಯನ್ನು ನೇಮಿಸುತ್ತೇನೆ. ನೀವು ಜೈಲಿಗೆ ಹೋಗಬೇಕಾಗುತ್ತದೆ.’ ಇದು ಎರಡನೆಯ ಸಂವಾದದಲ್ಲಿ ಡೊನಾಲ್ಡ್‌ ಟ್ರಂಪ್ ಅವರು ಹಿಲರಿ ಕ್ಲಿಂಟನ್ ಕುರಿತು ಆಡಿದ ಮಾತು. ಈ ಮಾತಿನಿಂದಲೇ ಟ್ರಂಪ್ ಚರ್ಚೆಯಲ್ಲಿ ಮೇಲುಗೈ ಸಾಧಿಸಿದರು.ಪ್ರಸಕ್ತ ಚುನಾವಣೆಯಲ್ಲಿ ಹಿಲರಿ ಕಾಲಿಗೆ ತೊಡಕಾಗಿರುವ ಸಂಗತಿಯೂ ಇದೇ. ಮೊದಲಿನಿಂದಲೂ ಹಿಲರಿ ಅವರ ಬಗ್ಗೆ ಸಾಕಷ್ಟು ಆರೋಪಗಳಿವೆ. ಹಿಲರಿ ಸುಳ್ಳುಬುರುಕಿ, ಭ್ರಷ್ಟ ರಾಜಕಾರಣಿ, ಕ್ಲಿಂಟನ್ ಅವಧಿಯಲ್ಲಿ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡವರು, ಉದ್ಯಮಿಗಳಿಗೆ ಅನುಕೂಲವಾಗುವಂತಹ ಕಾಯ್ದೆ ರೂಪಿಸಲು ಸಾಕಷ್ಟು ಹಣ ಪಡೆದವರು ಎಂಬ ಮಾತುಗಳು ಹಿಲರಿ 2008ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದಾಗಲೂ ಕೇಳಿಬಂದಿತ್ತು.ಆಗ ಡೆಮಾಕ್ರಟಿಕ್ ಪಕ್ಷದಿಂದ ಉಮೇದುವಾರರಾಗಲು ಕಣದಲ್ಲಿದ್ದ ಬರಾಕ್ ಒಬಾಮ, ‘ಹಿಲರಿ ಅವರ ಭ್ರಷ್ಟಾಚಾರದ ಬಗ್ಗೆ ದೊಡ್ಡ ಪಟ್ಟಿ ನನ್ನ ಬಳಿ ಇದೆ’ ಎಂದು ಪ್ರಾಥಮಿಕ ಚುನಾವಣಾ ಸಂದರ್ಭದಲ್ಲಿ ಹೇಳಿದ್ದರು. ಈ ಬಾರಿ ಬರ್ನಿ ಸ್ಯಾಂಡರ್ಸ್ ಕೂಡ, ಹಿಲರಿ ಭ್ರಷ್ಟಾಚಾರದ ಬಗ್ಗೆ ಸಾಕಷ್ಟು ಮಾತನಾಡಿದ್ದರು. ಇದೀಗ ಟ್ರಂಪ್, ಹಿಲರಿ ಅವರ ವಿರುದ್ಧ ಭ್ರಷ್ಟಾಚಾರ ಎಂಬ ಪ್ರಬಲ ಅಸ್ತ್ರವನ್ನೇ ಬಳಸುತ್ತಿದ್ದಾರೆ. ಅದಕ್ಕೆ ಪೂರಕವಾಗಿ ಮಿಂಚಂಚೆ ಪ್ರಕರಣ ಟ್ರಂಪ್ ಸಹಾಯಕ್ಕೆ ಒದಗಿದೆ.ಏನಿದು ಹಿಲರಿ ಮಿಂಚಂಚೆ ಪ್ರಕರಣ? ನಿಮಗೆ ತಿಳಿದೇ ಇದೆ. 2008ರಲ್ಲಿ ಒಬಾಮ ಅಧ್ಯಕ್ಷರಾದ ಬಳಿಕ, ಹಿಲರಿ ಅವರಿಗೆ ತಮ್ಮ ಸಂಪುಟದಲ್ಲಿ ಮಹತ್ವದ ಸ್ಥಾನ ನೀಡಿದ್ದರು. 2009ರ ಜನವರಿಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿಯಾಗಿ ಹಿಲರಿ ನಿಯುಕ್ತಿಗೊಂಡರು. ಅಂದಿನಿಂದ ಕಚೇರಿಯ ಕೆಲಸಗಳಿಗೆ ಹಿಲರಿ ತಮ್ಮ ಖಾಸಗಿ ಮಿಂಚಂಚೆ ಬಳಸುತ್ತಿದ್ದರು. ಆದರೆ ಅದು 2013ರ ವರೆಗೂ ಬೆಳಕಿಗೆ ಬಂದಿರಲಿಲ್ಲ. 2012ರ ಸೆಪ್ಟೆಂಬರ್ ತಿಂಗಳಿನಲ್ಲಿ ಲಿಬಿಯಾದ ಬೆಂಗಾಝಿಯಲ್ಲಿ, ಅಮೆರಿಕದ ರಾಜತಾಂತ್ರಿಕ ಕಚೇರಿಯ ಮೇಲೆ ದಾಳಿ ನಡೆದು ನಾಲ್ಕು ಅಮೆರಿಕನ್ನರ ಹತ್ಯೆಯಾಗಿತ್ತು.ಆ ಬಗ್ಗೆ ಅಮೆರಿಕದ ಕಾಂಗ್ರೆಸ್ ಕೂಲಂಕಷ ತನಿಖೆಗೆ ಆದೇಶಿಸಿತು. ತನಿಖಾ ಸಂಸ್ಥೆ, ಹಿಲರಿ ಅವರ ಇ-ಮೇಲ್ ಪರಿಶೀಲಿಸಲು ಮುಂದಾದಾಗ, ವಿದೇಶಾಂಗ ಇಲಾಖೆ ತನ್ನ ಬಳಿ, ಹಿಲರಿ ಅವರು ಆಡಳಿತಕ್ಕೆ ಸಂಬಂಧಿಸಿದಂತೆ ರವಾನಿಸಿರುವ ಎಂಟು ಇ-ಮೇಲ್ ಮಾತ್ರ ಇವೆ ಎಂದು ಉತ್ತರಿಸಿತ್ತು. ಈ ಸುದ್ದಿಯ ಬೆನ್ನತ್ತಿದ ‘ನ್ಯೂಯಾರ್ಕ್ ಟೈಮ್ಸ್’ 2013ರ ಮಾರ್ಚ್ನಲ್ಲಿ, ಹಿಲರಿ ಅವರು ಖಾಸಗಿ ಸರ್ವರ್ ಮೂಲಕ ಮಿಂಚಂಚೆಗಳನ್ನು ರವಾನಿಸಿದ್ದಾರೆ ಎಂಬ ಸುದ್ದಿ ಪ್ರಕಟಿಸಿತು.ಕ್ಲಿಂಟನ್ ಕುಟುಂಬ ತನ್ನದೇ ಆದ ಸರ್ವರ್ ಹೊಂದಿದ್ದು, ಅದರ ನಿರ್ವಹಣೆಯನ್ನು ನ್ಯೂಜೆರ್ಸಿ ಮೂಲದ ಖಾಸಗಿ ಕಂಪನಿಯೊಂದಕ್ಕೆ ವಹಿಸಲಾಗಿದೆ. ಹಿಲರಿ ವಿದೇಶಾಂಗ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದಷ್ಟು ದಿನ, ಖಾಸಗಿ ಸರ್ವರ್ ಬಳಸಿಕೊಂಡೇ ಎಲ್ಲ ವ್ಯವಹಾರಗಳನ್ನೂ ನಡೆಸಿದ್ದಾರೆ ಎಂಬುದು ಬೆಳಕಿಗೆ ಬಂತು. ಕಾಂಗ್ರೆಸ್ ಆ ಬಗ್ಗೆ ಪ್ರಶ್ನಿಸಿ ಪತ್ರ ಬರೆದರೂ ಹಿಲರಿ ಉತ್ತರಿಸಲಿಲ್ಲ.ತನಿಖಾ ಸಂಸ್ಥೆ ಪಟ್ಟು ಹಿಡಿದಾಗ, ಖಾಸಗಿ ಇ-ಮೇಲ್ ಮಾಹಿತಿ ಒದಗಿಸಲು, ಹಿಲರಿ ಸಮಯ ಕೋರಿದರು. ‘ಸರ್ಕಾರದಿಂದ ಕೊಡಮಾಡಲಾಗಿದ್ದ ಮೊಬೈಲಿನಲ್ಲಿ ಕೇವಲ ಕಚೇರಿಯ ಅಧಿಕೃತ ಇ-ಮೇಲ್ ಬಳಸಬಹುದಿತ್ತು. ನನ್ನ ಖಾಸಗಿ ಇ-ಮೇಲ್ ಬಳಸಲು ಮತ್ತೊಂದು ಉಪಕರಣವನ್ನೂ ಜೊತೆಯಲ್ಲಿ ಕೊಂಡಯ್ಯಬೇಕಿತ್ತು. ಹಾಗಾಗಿ ಒಂದೇ ಮೊಬೈಲಿನಲ್ಲಿ ಎರಡೂ ಇ-ಮೇಲ್ ಬಳಸಲು ಅನುವಾಗುವಂತೆ ಖಾಸಗಿ ಸರ್ವರ್ ಮತ್ತು ಉಪಕರಣ ಬಳಸಿಕೊಂಡೆ’ ಎಂದು ಹಿಲರಿ ಸಬೂಬು ನೀಡಿದ್ದರು. ತಿಂಗಳ ಬಳಿಕ ಸುಮಾರು 30 ಸಾವಿರ ಇ-ಮೇಲ್ ಮಾಹಿತಿಯನ್ನು, 55 ಸಾವಿರ ಪುಟಗಳ ಮುದ್ರಿತ ರೂಪದಲ್ಲಿ ತನಿಖಾ ಸಂಸ್ಥೆಗೆ ನೀಡಲಾಯಿತು. ಆದರೆ ಇನ್ನೂ ಸಾಕಷ್ಟು ಮಿಂಚಂಚೆಗಳು ಬಹಿರಂಗಗೊಂಡಿರಲಿಲ್ಲ.ಇದೇ ಅವಧಿಯಲ್ಲಿ ಹಿಲರಿ 32 ಸಾವಿರ ಇತರೆ ಇ-ಮೇಲ್‌ಗಳನ್ನು ಅಳಿಸಿಹಾಕಿದ್ದಾರೆ ಎಂಬ ಸುದ್ದಿ ಸದ್ದು ಮಾಡಿತು. ಕ್ಲಿಂಟನ್ ಆಪ್ತ ಸಹಾಯಕಿ ಚೆರಿಲ್ ಮಿಲ್ಸ್, ಕಚೇರಿಗೆ ಸಂಬಂಧ ಪಡದ ಇ-ಮೇಲ್ ಅಳಿಸಿಹಾಕಲು ಸರ್ವರ್ ನಿರ್ವಹಿಸುತ್ತಿದ್ದ ಖಾಸಗಿ ಕಂಪನಿಗೆ ಸೂಚಿಸಿದ್ದರು ಎಂಬುದು ಜಾಹೀರಾಯಿತು. ಇದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿತು. ಮುಖ್ಯವಾಗಿ ಹಿಲರಿ ವಿರುದ್ಧ ಎರಡು ಆರೋಪಗಳು ಕೇಳಿ ಬಂದವು.ಹಿಲರಿ, ಆಡಳಿತಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ತಮ್ಮ ಖಾಸಗಿ ಸರ್ವರ್ ಮೂಲಕ ರವಾನಿಸಿ, ಭದ್ರತೆಯ ವಿಷಯದಲ್ಲಿ ರಾಜಿಯಾಗಿದ್ದಾರೆ. ಜೊತೆಗೆ ಸರ್ಕಾರದ ಕೆಲಸಕ್ಕೆ ಖಾಸಗಿ ಇ-ಮೇಲ್ ಬಳಸಿ, ಆಡಳಿತದ ಪಾರದರ್ಶಕತೆಗೆ ಧಕ್ಕೆ ತಂದಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯನ್ವಯ, ಯಾವುದೇ ಮಾಹಿತಿ ಪಡೆಯಲು ಸಾಧ್ಯವಾಗದಂತೆ ನೋಡಿಕೊಂಡಿದ್ದಾರೆ.ಜೊತೆಗೆ, ಫೆಡರಲ್ ಕಾನೂನಿನ ಅನ್ವಯ, ಅಧಿಕಾರಿಗಳು ಆಡಳಿತಕ್ಕೆ ಸಂಬಂಧಿಸಿದಂತೆ ಕಳುಹಿಸುವ, ಪಡೆದುಕೊಳ್ಳುವ ಎಲ್ಲ ಪತ್ರಗಳನ್ನು, ಮಿಂಚಂಚೆಗಳನ್ನು ಸರ್ಕಾರಿ ದಾಖಲೆಯಾಗಿ ಸಂರಕ್ಷಿಸಿ ಇಡಬೇಕು. ಅತಿಗೌಪ್ಯವಲ್ಲದ ಮಾಹಿತಿ ಯನ್ನು, ಇತಿಹಾಸಕಾರರು, ತನಿಖಾ ಸಂಸ್ಥೆ, ಪತ್ರಕರ್ತರು ಮತ್ತು ಇತರೆ ಸಾರ್ವಜನಿಕರು ಕೋರಿಕೆಯ ಮೇಲೆ ಪಡೆದುಕೊಳ್ಳಲು ಅನುವು ಮಾಡಿಕೊಡಬೇಕು. ಈ ನಿಯಮವನ್ನು ಹಿಲರಿ ಉಲ್ಲಂಘಿಸಿದ್ದಾರೆ ಎಂದು ರಿಪಬ್ಲಿಕನ್ ಪಕ್ಷ ಆರೋಪಿಸಿತು.ಈ ಆಪಾದನೆ ಹಲವು ಪ್ರಶ್ನೆಗಳನ್ನೂ ಹುಟ್ಟುಹಾಕಿತು. ಈ ಹಿಂದೆ ಹಲವು ಸಂಗತಿಗಳು ಚರ್ಚೆಗೆ ಒಳಗಾಗಿದ್ದವು, ಕ್ಲಿಂಟನ್ ಪ್ರತಿಷ್ಠಾನಕ್ಕೆ ವಂತಿಗೆ ನೀಡಿರುವವರು ಅದಕ್ಕೆ ರಾಜಕೀಯವಾಗಿ ಪ್ರತಿಫಲ ಪಡೆದಿದ್ದಾರೆ. ಹಣಕಾಸು ಸಂಸ್ಥೆಗಳು ಹಿಲರಿ ಅವರಿಂದ ಸಹಾಯ ಪಡೆದಿವೆ ಮತ್ತು ಅದಕ್ಕೆ ಪ್ರತಿಯಾಗಿ ಚುನಾವಣಾ ಪ್ರಚಾರಕ್ಕೆ ದೇಣಿಗೆ ನೀಡಿವೆ ಮತ್ತು ಕತಾರಿನ ಒಬ್ಬ ಉದ್ಯಮಿ 2012ರಲ್ಲಿ ಕ್ಲಿಂಟನ್ ಅವರ ಹುಟ್ಟುಹಬ್ಬಕ್ಕೆ 10 ಲಕ್ಷ ಡಾಲರ್ ಮೊತ್ತವನ್ನು ಉಡುಗೊರೆಯಾಗಿ ನೀಡಿದ್ದರು, ಆಗ ಹಿಲರಿ ವಿದೇಶಾಂಗ ಕಾರ್ಯದರ್ಶಿಯಾಗಿದ್ದರು. ಈ ಎಲ್ಲ ವಿಷಯಗಳಿಗೆ ಸಂಬಂಧಿಸಿದ ಪುರಾವೆಗಳನ್ನು ನಾಶಮಾಡಲು, ಉಳಿದ ಇ-ಮೇಲ್‌ಗಳನ್ನು ಅಳಿಸಲಾಗಿದೆ ಎಂಬ ಆರೋಪ ಹಿಲರಿ ಅವರ ಬೆನ್ನಿಗೆ ಬಿತ್ತು.ಚುನಾವಣಾ ವಿಷಯವಾಗಿ ಮಿಂಚಂಚೆ ಪ್ರಕರಣ ಸದ್ದು ಮಾಡುತ್ತಿರುವಾಗಲೇ, ಅತ್ತ ವಿಕಿಲೀಕ್ಸ್ ಕಳೆದ ಎರಡು ವಾರಗಳಲ್ಲಿ ಹಿಲರಿ ಅಳಿಸಿಹಾಕಿದ್ದಾರೆ ಎನ್ನಲಾಗಿರುವ ಮಿಂಚಂಚೆಗಳಲ್ಲಿ ಕೆಲವನ್ನು ಬಹಿರಂಗಪಡಿಸಿದೆ. ಹಿಲರಿ ಪರ ಪ್ರಚಾರ ತಂಡದ ನೇತೃತ್ವ ವಹಿಸಿರುವ ಜಾನ್ ಪೊಡೆಸ್ಟಾ, ಅವರು ಕಳುಹಿಸಿರುವ ಮಿಂಚಂಚೆಗಳೂ ಲಭ್ಯವಿವೆ, ಅವನ್ನೂ ಬಿಡುಗಡೆ ಮಾಡುತ್ತೇವೆ ಎಂದು ವಿಕಿಲೀಕ್ಸ್ ಹೇಳಿದೆ. ಅಮೆರಿಕದ ತನಿಖಾ ಸಂಸ್ಥೆ FBI (ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್), ಹಿಲರಿ ಅವರ ಖಾಸಗೀ ಮಿಂಚಂಚೆಯಿಂದ ಅತಿ ಗೌಪ್ಯ ಮಾಹಿತಿಯುಳ್ಳ, 81 ಇ-ಮೇಲ್ ರವಾನೆಯಾಗಿದೆ ಎಂಬ ಮಾಹಿತಿಯನ್ನು ಹೊರಗೆಡವಿದೆ. ಜೊತೆಗೆ ಖಾಸಗಿ ಮಿಂಚಂಚೆ ಬಳಸಲು ಹಿಲರಿ ಅನುಮತಿ ಕೋರಿರಲಿಲ್ಲ ಮತ್ತು ಪದವಿ ತೊರೆಯುವಾಗ ಆಡಳಿತಕ್ಕೆ ಸಂಬಂಧಿಸಿದ ಮಿಂಚಂಚೆಗಳನ್ನು ಸರ್ಕಾರದ ಅಧೀನಕ್ಕೆ ಒಪ್ಪಿಸಲಿಲ್ಲ. ಹಿಲರಿ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಾರೆ ಎಂದು ಫೆಡರಲ್ ತನಿಖಾ ಸಂಸ್ಥೆಯ ಮುಖ್ಯಸ್ಥರು ಛೀಮಾರಿ ಹಾಕಿದ್ದಾರೆ. ಆದರೆ ಅಪರಾಧ ಪ್ರಕರಣವನ್ನು ಇನ್ನೂ ದಾಖಲಿಸಿಲ್ಲ. ಇದರ ಬೆನ್ನಲ್ಲೇ ಹಿಲರಿ ಅವರು ಲಿಬಿಯಾಕ್ಕೆ ಸಂಬಂಧಿಸಿದಂತೆ ಇಟ್ಟ ತಪ್ಪು ಹೆಜ್ಜೆಗಳನ್ನು ಪರಿಶೀಲಿಸಲು, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದ್ದಾರೆ. ತನಿಖೆ ಯಾವ ದಿಕ್ಕಿಗೆ ಸಾಗುತ್ತದೆ ಎಂಬುದು ಚುನಾವಣೆಯ ಬಳಿಕ, ಯಾರು ಅಧಿಕಾರ ಹಿಡಿಯಲಿದ್ದಾರೆ ಎಂಬುದರ ಮೇಲೆ ನಿರ್ಧಾರವಾಗುತ್ತದೆ.ಒಟ್ಟಿನಲ್ಲಿ ಚುನಾವಣೆಯ ಮಟ್ಟಿಗಂತೂ ಹಿಲರಿ ಬೇರೆಲ್ಲಾ ವಿಷಯದಲ್ಲಿ ಮುಂದಿದ್ದರೂ, ಮಿಂಚಂಚೆ ಪ್ರಕರಣ ಅವರ ವೇಗಕ್ಕೆ ತಡೆಯೊಡ್ಡಿದೆ. ಇಂದು ಭಯೋತ್ಪಾದನೆ ಹಲವು ಮುಖಗಳಲ್ಲಿ ಪ್ರಕಟಗೊಳ್ಳುತ್ತಿದೆ. ಸಾವಿರಾರು ಮೈಲಿ ಆಚೆ ಕೂತು, ಅಂತರ್ಜಾಲ ಬಳಸಿ, ಮತ್ತೊಂದು ದೇಶದ ಭದ್ರತಾ ವ್ಯವಸ್ಥೆಯನ್ನು ಭೇದಿಸುವ, ಗೌಪ್ಯ ಮಾಹಿತಿ ಕದಿಯುವ ಕೆಲಸವನ್ನು ವೈರಿ ರಾಷ್ಟ್ರಗಳು ಮತ್ತು ಭಯೋತ್ಪಾದನಾ ಸಂಘಟನೆಗಳು ಮಾಡುತ್ತಿವೆ. ಹಾಗಾಗಿ ಸೈಬರ್ ಸೆಕ್ಯುರಿಟಿಗೆ ಎಲ್ಲಿಲ್ಲದ ಮಹತ್ವ ಬಂದಿದೆ.ಅದೇ ಕಾರಣದಿಂದ, ಮತದಾರರೂ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಂತಿದೆ. ಖಾಸಗಿ ಇ-ಮೇಲ್ ಬಳಸಿದ್ದರ ಬಗ್ಗೆ, 30 ಸಾವಿರ ಇ-ಮೇಲ್ ಅಳಿಸಿದ್ದರ ಬಗ್ಗೆ, ಹಿಲರಿ ಕ್ಷಮೆ ಕೋರಿದ್ದರೂ, ಇತ್ತೀಚಿನ ಸಮೀಕ್ಷೆಯ ಪ್ರಕಾರ ಶೇಕಡ 67ರಷ್ಟು ಮತದಾರರು, ‘ಇ-ಮೇಲ್ ಪ್ರಕರಣ, ಮುಂದೆ ಹಿಲರಿ ಅಧ್ಯಕ್ಷರಾಗಿ ಹೇಗೆ ಕಾರ್ಯ ನಿರ್ವಹಿಸಬಹುದು ಎಂಬುದಕ್ಕೆ ಸೂಚನೆಯಂತಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.ಮೂರು ದಶಕಗಳ ರಾಜಕೀಯ ಅನುಭವವಿರುವ, ಹತ್ತಾರು ದೇಶ ಸುತ್ತಿರುವ, ಮಹತ್ವದ ಹುದ್ದೆಗಳನ್ನು ನಿರ್ವಹಿಸಿರುವ ಹಿಲರಿ, ಇ-ಮೇಲ್ ವಿಷಯದಲ್ಲಿ ತಾನು ಮುಗ್ಧೆ, ಇದು ಭದ್ರತಾ ಲೋಪವಾಗುತ್ತದೆ ಎಂಬ ಬಗ್ಗೆ ಮಾಹಿತಿ ಇರಲಿಲ್ಲ ಎಂದರೆ ನಂಬುವುದು ಹೇಗೆ ಎನ್ನುವುದೇ ಬಹುತೇಕರ ಪ್ರಶ್ನೆಯಾಗಿದೆ.

ಪ್ರತಿಕ್ರಿಯಿಸಿ (+)