ಸೋಮವಾರ, ಮಾರ್ಚ್ 27, 2023
21 °C

ಈ ಆಟಕ್ಕೆ ಬೇಕು 4979 ಮಂದಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಈ ಆಟಕ್ಕೆ ಬೇಕು 4979 ಮಂದಿ!

ಡಾಡ್ಜ್ ಬಾಲ್ ಆಟ ಉತ್ತರ ಅಮೆರಿಕದಲ್ಲಿ ಜನಪ್ರಿಯವಾಗಿರುವ ಒಂದು ಕ್ರೀಡೆ. 15 ಸೆಂ. ಮೀ. ವ್ಯಾಸವಿರುವ ಸ್ಪಂಜಿನಂತೆ ಮೃದುವಾಗಿರುವ ಫೋಮ್ ಚೆಂಡುಗಳನ್ನು ಎರಡೂ ತಂಡಗಳ ಆಟಗಾರರು ಎಸೆಯುತ್ತಾರೆ. ಎದುರಾಳಿಗಳು ಅದನ್ನು ಕ್ಯಾಚ್ ಹಿಡಿದು ಕೈಯಲ್ಲಿ ಹತ್ತು ಸೆಕೆಂಡಿಗಿಂತ ಹೆಚ್ಚು ಹೊತ್ತು ಇರಿಸಿಕೊಳ್ಳಬಾರದು. ಮತ್ತೆ ಚೆಂಡನ್ನು ಚೆಂಡಿನಿಂದಲೇ ಹೊಡೆಯಬೇಕು. ಹತ್ತು ಸೆಕೆಂಡ್ ದಾಟಿದರೆ ಆ ಚೆಂಡು ಎಸೆಯಲು ಅನರ್ಹವಾಗುತ್ತದೆ.

ವಿಶ್ವದಾಖಲೆಗಾಗಿಯೇ ಈ ಆಟವನ್ನು ಕೆನಡಾದ ಕೆನೆಡಿಯನ್ ವಿಶ್ವವಿದ್ಯಾನಿಲಯ ಮತ್ತು ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ನಡೆಸಿದರು.



4979 ಮಂದಿ ಆಟಗಾರರು. 1250 ಚೆಂಡುಗಳು. ಹೆಚ್ಚಾಗಿ ಈ ಆಟ ನಲುವತ್ತು ನಿಮಿಷಗಳ ಅವಧಿಯದ್ದು. ಆದರೆ ಆಟಗಾರರ ಸಂಖ್ಯೆ ಹೆಚ್ಚಿದ್ದುದರಿಂದ ಒಂದು ತಾಸಿಗಿಂತಲೂ ಹೆಚ್ಚು ಹೊತ್ತು ನಡೆಯಿತು. ಇದನ್ನು ವೀಕ್ಷಿಸಲು ಸಾವಿರಾರು ಪ್ರೇಕ್ಷಕರು ಆಗಮಿಸಿ ಆಟಗಾರರಲ್ಲಿ ಉತ್ಸಾಹ ತುಂಬಿದ್ದರು.

ಪ್ರತಿಯೊಂದು ಸೆಕೆಂಡು ಕೂಡ ಉಸಿರನ್ನು ಬಿಗಿ ಹಿಡಿದು ನೋಡುವಂತಿತ್ತು. ಕೆಂಪುಚೆಂಡುಗಳು ಮಿಂಚಿನ ವೇಗದಲ್ಲಿ ಎರಡೂ ಕಡೆಗಳಿಂದ ವಿನಿಮಯವಾಗುತ್ತಿದ್ದವು. ಚೆಂಡಿಗೆ ಚೆಂಡು ಹೊಡೆದಾಗ ಒಂದು ಚೆಂಡು ಕೆಳಗೆ ಬೀಳುತ್ತಿತ್ತು. ಕೆಳಗೆ ಬಿದ್ದ ಚೆಂಡನ್ನು ಮತ್ತೆ ಪ್ರಯೋಗಿಸುವಂತಿಲ್ಲ.

ಅಂತಿಮವಾಗಿ ಉಳಿದ ಚೆಂಡುಗಳೆಲ್ಲವೂ ಒಂದು ಪಕ್ಷವನ್ನು ಸೇರಿದ ಬಳಿಕ ಆಟ ಮುಕ್ತಾಯವಾಗುವುದು ಪದ್ಧತಿ. ಸಾವಿರಾರು ಚೆಂಡುಗಳಿದ್ದರೂ ಬೇಕಾದದ್ದು ಕೆಲವೇ ನಿಮಿಷಗಳು. ಆದರೂ ರೋಚಕವಾಗಿತ್ತು. ಇದನ್ನು ಗಿನ್ನಿಸ್ ದಾಖಲೆಯ ಅಧಿಕಾರಿಗಳು ಸ್ವತಃ ಸ್ಥಳದಲ್ಲಿದ್ದು ವೀಕ್ಷಿಸಿ ಪ್ರಮಾಣಪತ್ರ ನೀಡಿದರು.

-ಆರ್‌.ಕೆ. ಶಾಸ್ತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.