ಟಿಪ್ಪು ಕನ್ನಡಪ್ರೇಮಿ, ವಿಶ್ವಮಾನವ

7

ಟಿಪ್ಪು ಕನ್ನಡಪ್ರೇಮಿ, ವಿಶ್ವಮಾನವ

Published:
Updated:
ಟಿಪ್ಪು ಕನ್ನಡಪ್ರೇಮಿ, ವಿಶ್ವಮಾನವ

* ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಒಬ್ಬ ರಾಜನ ಜಯಂತಿ ಆಚರಣೆ ಎಷ್ಟು ಸರಿ? ಟಿಪ್ಪು ಜಯಂತಿಯಿಂದ ಜನರಿಗೆ ಏನು ಸಂದೇಶ ನೀಡಬಹುದು?

ಟಿಪ್ಪು ಕೇವಲ ಮುಸಲ್ಮಾನ ದೊರೆ ಅಲ್ಲ. ಬ್ರಿಟಿಷರ ವಿರುದ್ಧ ಹೋರಾಡಿ, ಅವರನ್ನು ಎರಡು ಬಾರಿ ಮಣಿಸಿದ ಕನ್ನಡ ನಾಡಿನ ಗಂಡುಗಲಿ. ಶೌರ್ಯ ಹಾಗೂ ಧರ್ಮ ಸಹಿಷ್ಣುತೆಯ ಸಂಕೇತ. ದುಡಿಯುವ ರೈತಾಪಿ ಸಮುದಾಯದ ಹಿತಚಿಂತಕನಾಗಿದ್ದ. ಮೈಸೂರು ರಾಜ್ಯ ಮಾತ್ರವಲ್ಲ, ಇಡೀ ದೇಶವನ್ನು ಬ್ರಿಟಿಷರಿಂದ ರಕ್ಷಿಸಬೇಕು, ಅದಕ್ಕಾಗಿ ಎಲ್ಲಾ ರಾಜರನ್ನು ಒಗ್ಗೂಡಿಸಬೇಕು ಎಂಬ ಮಹತ್ವಾಕಾಂಕ್ಷೆ ಹೊಂದಿದ್ದ. ಅಂಥ ವ್ಯಕ್ತಿಯ ಜಯಂತಿ ಆಚರಿಸಿದರೆ ತಪ್ಪೇನು? ರಾಜರು ಸೇರಿದಂತೆ ಐತಿಹಾಸಿಕ ಮಹತ್ವವುಳ್ಳ ವ್ಯಕ್ತಿಗಳನ್ನು ನೆನಪಿಸಿಕೊಳ್ಳಬಾರದೇ? ವಿಶ್ವೇಶ್ವರಯ್ಯ ಅವರನ್ನು ನೆನಪಿಸಿಕೊಳ್ಳುತ್ತೇವೆ. ಅಶೋಕ ಚಕ್ರವರ್ತಿ, ಶಿವಾಜಿ ಮಹಾರಾಜನ ಕೊಡುಗೆಯನ್ನು ಸ್ಮರಿಸುತ್ತೇವೆ. 

ಟಿಪ್ಪು ಜಯಂತಿಗೇಕೆ ಜಾತಿ, ಧರ್ಮದ ಹಂಗು? ಒಳ್ಳೆಯ ಕೆಲಸವನ್ನು ಯಾರೇ ಮಾಡಿದ್ದರೂ ಸ್ಮರಿಸಬೇಕು. ದೇಶವನ್ನು ಪ್ರೀತಿಸಲು ಹಾಗೂ ದೇಶಕ್ಕೆ ಸೇವೆ ಸಲ್ಲಿಸಲು ಟಿಪ್ಪು ಸ್ಮರಣೆ ಯುವಕರಿಗೆ ಪ್ರೇರಣೆ ನೀಡುವಂಥದ್ದು.

 

* ದೇಶ ಹಾಗೂ ರಾಜ್ಯಕ್ಕೆ ಟಿಪ್ಪು ಕೊಡುಗೆ ಏನು?

ದೇಶದ ಹಿತಕ್ಕಾಗಿ ತನ್ನ ನೆತ್ತರು ಕೊಟ್ಟವ ಟಿಪ್ಪು. ರಾಜ್ಯದ ರಕ್ಷಣೆಗಾಗಿ ಕರುಳ ಕುಡಿಗಳನ್ನೇ ಒತ್ತೆಯಾಳುಗಳನ್ನಾಗಿ ಇಟ್ಟಿದ್ದ. ಆತನಷ್ಟು ಪ್ರಬಲ ವಿರೋಧಿಯನ್ನು ಬ್ರಿಟಿಷರು ತಮ್ಮ ಆಳ್ವಿಕೆಯಲ್ಲಿ ಮತ್ತೆ ಕಾಣಲೇ ಇಲ್ಲ. ಹಾಗೆಯೇ, ಆಧುನಿಕ ಕರ್ನಾಟಕದ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದ ರಾಜರಲ್ಲಿ ಆತ ಅಗ್ರಗಣ್ಯ. ನೌಕಾಪಡೆ ಆರಂಭಿಸುವ ಮೊದಲ ಆಲೋಚನೆ ಹೊಳೆದಿದ್ದು ಟಿಪ್ಪುವಿಗೆ. ರಾಕೆಟ್‌ ಯೋಜನೆ ಟಿಪ್ಪುವಿನದ್ದು. ವಿಜ್ಞಾನಿ ಹಾಗೂ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್‌ ಕಲಾಂ ಕೂಡ ಈ ವಿಚಾರವನ್ನು ಶ್ಲಾಘಿಸಿದ್ದರು. ಬ್ರಿಟಿಷರು ರಾಕೆಟ್‌ ಯೋಜನೆಯ ಅಸ್ತ್ರವನ್ನು ನೆಪೋಲಿಯನ್‌ ವಿರುದ್ಧ ಪ್ರಯೋಗಿಸಿ ಯಶಸ್ವಿಯಾದರು. ಕನ್ನಂಬಾಡಿ ಅಣೆಕಟ್ಟು ಕಟ್ಟುವ ಯೋಜನೆಯನ್ನು ಮೊದಲು ಪ್ರಸ್ತಾಪಿಸಿದ್ದೇ ಟಿಪ್ಪು. ಶೃಂಗೇರಿ ಸಂಸ್ಥಾನಕ್ಕೆ 30 ಪತ್ರಗಳನ್ನು ಬರೆದದ್ದು ಕನ್ನಡದಲ್ಲಿಯೆ. ಪ್ರಗತಿಪರ ಚಿಂತನೆಗಳಿಗೆ ತನ್ನನ್ನು ಒಡ್ಡಿಕೊಂಡಿದ್ದ ಆತ ವಿಶ್ವಮಾನವ. 

 

* ಕೊಡವರು, ಕ್ರೈಸ್ತರನ್ನು ಮತಾಂತರ ಮಾಡಿದ್ದು ಹಾಗೂ ಹತ್ಯೆ ನಡೆಸಿದ್ದು ನಿಜವೇ?

ಬ್ರಿಟಿಷರೊಂದಿಗೆ ಸೇರಿ ತನ್ನ ವಿರುದ್ಧವೇ ಸಂಚು ರೂಪಿಸಿದವರು ಹಾಗೂ ದೇಶದ್ರೋಹಿಗಳ ವಿರುದ್ಧ ಟಿಪ್ಪು ಕಠೋರವಾಗಿ ವರ್ತಿಸಿದ್ದು ನಿಜ. ಇದೇ ಕಾರಣಕ್ಕಾಗಿ ಕೆಲ ಕೊಡವರನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ. ತನ್ನನ್ನು ವಂಚಿಸಿದ ಕೇರಳದ ನಾಯರ್‌ಗಳು, ಮಂಗಳೂರಿನ ಕ್ರೈಸ್ತರನ್ನೂ ಆತ ಬಿಡಲಿಲ್ಲ. ಜೈಲಿಗೆ ಅಟ್ಟುತ್ತಿದ್ದ ಅಥವಾ ಮತಾಂತರ ಶಿಕ್ಷೆಗೆ ಒಳಪಡಿಸುತ್ತಿದ್ದ. ಇದು ಆತನ ರಾಜಕೀಯ ನಡೆಯಾಗಿತ್ತೇ ಹೊರತು ಧರ್ಮಪ್ರೇರಿತವಾಗಿರಲಿಲ್ಲ. ಕೊಡವರ ಬಗ್ಗೆ ಆತ ಜನಾಂಗೀಯ ದ್ವೇಷ ಹೊಂದಿರಲಿಲ್ಲ. ಬದಲಾಗಿ ದೇಶ ರಕ್ಷಣೆಯ ತುಡಿತ ಆತನಲ್ಲಿತ್ತು.

 

* ಟಿಪ್ಪು ಸ್ವಾತಂತ್ರ್ಯ ಹೋರಾಟಗಾರ ಎನ್ನುತ್ತಾರೆ. ಅದು ಹೇಗೆ?

ಬ್ರಿಟಿಷರೊಂದಿಗೆ ಟಿಪ್ಪು ನಡೆಸಿದ ಸುದೀರ್ಘ ಹೋರಾಟ ಕೇವಲ ತನ್ನ ರಾಜ್ಯವನ್ನು ಉಳಿಸಿಕೊಳ್ಳುವುದಕ್ಕಷ್ಟೇ ಸೀಮಿತ ಆಗಿರಲಿಲ್ಲ. ಬದಲಿಗೆ ಅವರನ್ನು ಸೋಲಿಸಿ ಈ ದೇಶದಿಂದ ಹೊರಗಟ್ಟುವುದಾಗಿತ್ತು. ಇದು ಕೂಡ ಸ್ವಾತಂತ್ರ್ಯ ಹೋರಾಟದ ಭಾಗ.  ರಾಷ್ಟ್ರೀಯ ಪರಿಕಲ್ಪನೆ ಇಟ್ಟುಕೊಂಡು ಸಾಮ್ರಾಜ್ಯಶಾಹಿ ವಿಸ್ತರಣೆ ವಿರುದ್ಧ ಹೋರಾಡಿದ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಉದ್ದೇಶವೂ ಇದೇ ಆಗಿತ್ತು.

 

* ಕೋಮುವಾದಿ ಹಾಗೂ ಜಾತ್ಯತೀತ ಶಕ್ತಿಗಳ ನಡುವಣ ಘರ್ಷಣೆಗೆ ಕಾರಣವಾಗಿರುವ ಟಿಪ್ಪು ಜಯಂತಿ ರಾಜಕೀಯ ಪ್ರೇರಿತ ಕಾರ್ಯಕ್ರಮವೇ?

ಟಿಪ್ಪು ಜಯಂತಿ ಆಚರಣೆ ತಪ್ಪಲ್ಲ. ಆದರೆ, ಈ ಸಂಬಂಧ ಉದ್ಭವಿಸಿರುವ ಸಂಘರ್ಷ, ವಾದ ವಿವಾದ, ಆರೋಪಗಳನ್ನು ಗಮನಿಸಿದರೆ ಟಿಪ್ಪು ಈಗ ರಾಜಕೀಯ ದಾಳವಾಗಿದ್ದಾನೆ ಅಷ್ಟೆ. ವಾಸ್ತವಾಂಶ ಮರೆಯಾಗಿ ಪಕ್ಷಗಳು ಹಾಗೂ ಸರ್ಕಾರದ ನೀತಿ ವಿಜೃಂಭಿಸುತ್ತಿರುವಂತಿದೆ.

 

* ಟಿಪ್ಪು ಹಿಂದೂ ವಿರೋಧಿ ಆಗಿದ್ದನೇ?

ಖಂಡಿತ ಇಲ್ಲ, ಬದಲಾಗಿ ಆತ ಹಿಂದೂ ಧರ್ಮದ ಅಭಿಮಾನಿ. ‘ಯಂಗ್ ಇಂಡಿಯಾ’ ಪತ್ರಿಕೆಯಲ್ಲಿ ‘ಹಿಂದೂ-ಮುಸ್ಲಿಂ ಏಕತೆಯ ಪ್ರತೀಕ ಟಿಪ್ಪು’ ಎಂದು ಗಾಂಧೀಜಿ ಶ್ಲಾಘಿಸಿದ್ದಾರೆ. ಪ್ರಸಿದ್ಧ ಇತಿಹಾಸಕಾರ ಬಿ.ಎ.ಸಲಟೋರ್‌, ‘ಹಿಂದೂ ಧರ್ಮದ ರಕ್ಷಕ ಟಿಪ್ಪು’ ಎಂದು ಬರೆದಿದ್ದಾರೆ. 156 ದೇಗುಲಗಳಿಗೆ ವಾರ್ಷಿಕ ದೇಣಿಗೆ ನೀಡುತ್ತಿದ್ದ. ಶೃಂಗೇರಿ ಸ್ವಾಮೀಜಿಯನ್ನು ‘ಜಗದ್ಗುರು’ ಎಂದು ಕರೆಯುತ್ತಿದ್ದ. ತನ್ನ ಆಸ್ಥಾನದಲ್ಲಿ ಪ್ರಮುಖ ಸ್ಥಾನಗಳಲ್ಲಿ ಹಿಂದೂ ಅಧಿಕಾರಿಗಳನ್ನೇ ನೇಮಿಸಿಕೊಂಡಿದ್ದ. ಕಂದಾಯ ಮಂತ್ರಿಯಾಗಿ ಪೂರ್ಣಯ್ಯ, ಹಣಕಾಸು ಮಂತ್ರಿಯಾಗಿ ಕೃಷ್ಣರಾವ್‌, ಪೊಲೀಸ್‌ ಮಂತ್ರಿಯಾಗಿ ಶಾಮರಾವ್‌, ಆಪ್ತ ಸಹಾಯಕನಾಗಿ ಸುಬ್ಬರಾವ್‌ ಇದ್ದರು. ಶ್ರೀರಂಗಪಟ್ಟಣದ ದೇಗುಲವು ಟಿಪ್ಪು ಅರಮನೆಗೆ ಸಮೀಪದಲ್ಲೇ ಇದೆ. ಅಲ್ಲಿನ ದೇಗುಲದ ಗಂಟೆಯ ಸದ್ದು ಮತ್ತು ಮಸೀದಿಯ ಪ್ರಾರ್ಥನೆಯನ್ನು ಸಮಾನ ಗೌರವದಿಂದ ಕೇಳಿಸಿಕೊಳ್ಳುತ್ತಿದ್ದ. ಸಂಪ್ರದಾಯಸ್ಥ ಮುಸಲ್ಮಾನನಾಗಿದ್ದ ಆತ ಎಂದಿಗೂ ತನ್ನ ಭಾವನೆಗಳನ್ನು ಜನರ ಮೇಲೆ ಹೇರಲಿಲ್ಲ. 

 

* ಟಿಪ್ಪು ಜಯಂತಿಗೆ ಬಿಜೆಪಿ ಏಕೆ ಇಷ್ಟೊಂದು ವಿರೋಧ ವ್ಯಕ್ತಪಡಿಸುತ್ತಿದೆ?

ರಾಜಕೀಯ ಕಾರಣಕ್ಕೆ ವಿರೋಧ ವ್ಯಕ್ತಪಡಿಸುತ್ತಿರಬಹುದು. ಪಕ್ಷದ ನೀತಿ, ಸಿದ್ಧಾಂತ ಅದಕ್ಕೆ ಕಾರಣವಾಗಿರಬಹುದು.

 

* ಜಯಂತಿಗೆ ಕಾಂಗ್ರೆಸ್‌ ಪಕ್ಷವೇಕೆ ಆಸಕ್ತಿ ತೋರಿಸುತ್ತಿದೆ?

ಟಿಪ್ಪು ಮೇಲೆ ಇಷ್ಟು ವರ್ಷ ಇಲ್ಲದ ಪ್ರೀತಿ, ಆಸಕ್ತಿ, ಅಭಿಮಾನ ಈ ಪಕ್ಷಕ್ಕೆ ಈಗ ಏಕೆ ಬಂದಿದೆ ಎಂಬುದು ನನಗೆ ಗೊತ್ತಿಲ್ಲ. ಪಕ್ಷ ಅಥವಾ ಸರ್ಕಾರದ ನಿರ್ಧಾರ ಇರಬಹುದು.

 

* ಟಿಪ್ಪು ಕುರಿತು ಇತಿಹಾಸಕಾರರಲ್ಲಿಯೇ ಗೊಂದಲಇದ್ದಂತೆ ಕಾಣುತ್ತಿದೆಯಲ್ಲಾ?

ಟಿಪ್ಪು ಸೆರೆ ಹಿಡಿದಿದ್ದ ಬ್ರಿಟಿಷ್ ಕೈದಿಗಳು, ಬ್ರಿಟಿಷ್ ವಸಾಹತುಶಾಹಿ ಇತಿಹಾಸಕಾರರು ಮತ್ತು ಆತನ ಆಳ್ವಿಕೆ ಬಗ್ಗೆ ಮತ್ಸರ ಹೊಂದಿದ್ದವರು ಬರೆದ ಇತಿಹಾಸದಿಂದ ಏನು ನಿರೀಕ್ಷಿಸಲು ಸಾಧ್ಯ? 1947ರ ಬಳಿಕವೂ ಟಿಪ್ಪುವನ್ನು ನಕಾರಾತ್ಮಕವಾಗಿ ಬಿಂಬಿಸಲಾಗಿದೆ. ಬೇಕಾದವರನ್ನು ಆಕಾಶಕ್ಕೇರಿಸುವ, ಬೇಡವಾದವರನ್ನು ಪಾತಾಳಕ್ಕೆ ತಳ್ಳುವ ಕೆಲಸ ನಡೆದೇ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry