7

ಪಿನ್ನವೇಲದ ಆನೆಮನೆ!

Published:
Updated:
ಪಿನ್ನವೇಲದ ಆನೆಮನೆ!

ಜನರು ಕಾಯುತ್ತಲೇ ಇದ್ದರು, ಎಲ್ಲೆಲ್ಲೂ ನಿರೀಕ್ಷೆ–ಕುತೂಹಲ ತುಂಬಿದ ಮುಖಗಳು. ಬಾಗಿಲು ತೆರೆದದ್ದೇ ತಡ ದುಡು ದುಡು ಓಡುತ್ತಾ, ಒಂದನ್ನೊಂದು ದೂಕುತ್ತಾ ಬಂದೇಬಿಟ್ಟವು ಹತ್ತಾರು ಕಂದಮ್ಮಗಳು. ಗದರಿಸುತ್ತಿದ್ದ ಮೇಲ್ವಿಚಾರಕರ ಕಡೆ ಯಾರಿಗೂ ಗಮನವೇ ಇಲ್ಲ. ಆಗಷ್ಟೇ ಎದ್ದಿದ್ದಕ್ಕೋ ಅಥವಾ ಆಟವಾಡಿ ಬಂದಿದ್ದಕ್ಕೋ ಏನೋ ಸಿಕ್ಕಾಪಟ್ಟೆ ಹಸಿವು. ಆಹಾರ ಕಂಡಿದ್ದೇ ತಡ, ಎಲ್ಲಾ ಗುಳುಂ. ಮುದ್ದುಕ್ಕಿಸುವ ಮುಖ, ಗುಂಡನೆ ಮೈ, ಪಿಳಿ ಪಿಳಿ ಕಣ್ಣುಗಳು – ಇವು ಪುಟ್ಟ ಆನೆಮರಿಗಳು! ಅದು ಆನೆಗಳ ಅನಾಥಾಶ್ರಮ!ಮನುಷ್ಯನ ಆಸೆಬುರುಕತನಕ್ಕೆ – ದಂತ, ಬೇಟೆ, ಚರ್ಮ – ನಾನಾ ಕಾರಣಗಳಿಗಾಗಿ ಆನೆಗಳನ್ನು ನಾಶಮಾಡುತ್ತಲೇ ಬಂದಿದ್ದೇವೆ. ಇಂಥ ಸಂದರ್ಭದಲ್ಲಿ ಆನೆಗಳ ಸಂಖ್ಯೆ ಸಹಜವಾಗಿಯೇ ಕ್ಷೀಣಿಸುತ್ತಿದೆ. ಹೀಗಿರುವಾಗ, ‘ಆನೆಗಳ ಅನಾಥಾಶ್ರಮ’ ಎನ್ನುವುದು ಒಂದಿದೆಯೇ ಎಂದು ಅಚ್ಚರಿಯಾಗುವುದು ಸಹಜ.ನಮ್ಮ ನೆರೆಯ ದೇಶ ಶ್ರೀಲಂಕಾದಲ್ಲಿ ‘ಅರಣ್ಯ ಸಂರಕ್ಷಣಾ ಇಲಾಖೆ’ 1975ರಲ್ಲೇ ಸ್ಥಾಪಿಸಿರುವ ‘ಆನೆಗಳ ಅನಾಥಾಶ್ರಮ’ ನಿಜಕ್ಕೂ ವಿಶಿಷ್ಟ ಮತ್ತು ಉದಾತ್ತ ಆಶಯ ಹೊಂದಿದೆ. ರಾಜಧಾನಿ ಕೊಲಂಬೋದಿಂದ ನೂರು ಕಿ.ಮೀ. ದೂರದಲ್ಲಿರುವ ಕೆಗಾಲ ಹೆಸರಿನ ನಗರದ ಸಮೀಪದ ಪಿನ್ನವಾಲ ಹಳ್ಳಿಯಲ್ಲಿದೆ ಈ ಅನಾಥಾಶ್ರಮ.ಸುಸ್ಥಿತಿಯಲ್ಲಿರುವ ರಸ್ತೆಗಳಿಂದಾಗಿ ಸುಮಾರು ಎರಡು ಗಂಟೆಗಳ ಪಯಣ. ಹಸಿರಿನ ತೆಂಗಿನ ತೋಟ, ಜುಳು ಜುಳು ಹರಿವ ಮಹಾ ಒಯಾ ನದಿ ತೀರದಲ್ಲಿದೆ, ಇಪ್ಪತೈದು ಎಕರೆ ವ್ಯಾಪ್ತಿಯ ಆನೆಗಳ ಬಿಡಾರ! ಮರಿ, ಕಿರಿ, ಆನೆಗಳೆಲ್ಲ ಇಲ್ಲಿ ವಾಸ್ತವ್ಯ ಹೂಡಿವೆ.ಆನೆಗಳು ಸಹಜೀವನ ನಡೆಸುವ, ಹಿಂಡಿನಲ್ಲಿರುವ ದೈತ್ಯ ಪ್ರಾಣಿಗಳು. ಸಾಧಾರಣವಾಗಿ ಮರಿಯಾನೆಗಳು ತಾಯಿಯೊಡನೆ ನಿಕಟ ಬಾಂಧವ್ಯ ಹೊಂದಿರುತ್ತದೆ ಮತ್ತು ಒಟ್ಟಿಗೇ ಇರುತ್ತವೆ. ಆದರೆ ಬೇಸಿಗೆಯಲ್ಲಿ ನೀರನ್ನು ಅರಸುತ್ತಾ ಕಾಡಿನಲ್ಲಿ ಅಲೆವಾಗ ಪುಟ್ಟ ಮರಿ, ಗುಂಡಿ–ಕಂದಕಗಳಲ್ಲಿ ಬಿದ್ದು ಒಂಟಿಯಾಗುವ ಸಾಧ್ಯತೆ ಇದೆ.ಕೆಲವು ಬಾರಿ ತಾಯಿ ಸಾವಿಗೀಡಾದಾಗ ಮರಿ ಅನಾಥವಾಗಬಹುದು. ಕೆಲವೊಮ್ಮೆ ಮರಿಗೆ ಪೆಟ್ಟಾಗಿ ಚಲಿಸಲು ಆಗದೇ ಏಕಾಂಗಿಯಾಗಬಹುದು. ಹೀಗೆ ಕಾಡಿನಲ್ಲಿ ದಿಕ್ಕು ತಪ್ಪಿ ಅಲೆದಾಡುತ್ತಿದ್ದ ಐದು ಆನೆಮರಿಗಳ ಸಂರಕ್ಷಣೆ–ಆರೈಕೆಗಾಗಿ ಆರಂಭಗೊಂಡ ಈ ಆಶ್ರಮದಲ್ಲಿ ಈಗ ಮೂರು ತಲೆಮಾರಿಗೆ ಸೇರಿದ ತೊಂಬತ್ತಕ್ಕೂ ಹೆಚ್ಚು ಆನೆಗಳಿವೆ. ಒಳ್ಳೆಯ ಆರೈಕೆಯಲ್ಲಿ ಬೆಳೆದ ಮರಿಗಳು ಪ್ರಾಯಪ್ರಬುದ್ಧವಾಗಿ ಕಾಡಿನ ಸಹಜ ವಾತಾವರಣದಲ್ಲಿ ವಂಶಾಭಿವೃದ್ಧಿಯನ್ನು ಮಾಡುತ್ತಿವೆ.ಈ ಆಶ್ರಮದಲ್ಲಿ ಜನಿಸಿದ ಪ್ರಥಮ ಮರಿ ಸುಕುಮಾಲಿ (1984ರಲ್ಲಿ). ಅಲ್ಲಿಂದೀಚೆಗೆ ಈವರೆಗೆ ಸಮಾ, ರಾಣಿ, ಕುಮಾರಿ, ಚರಕ, ಹರಿತ, ಅಸೇಲಾ – ಹೀಗೆ ತೊಂಬತ್ತು ಆನೆಮರಿಗಳು ಇಲ್ಲಿಯೇ ಹುಟ್ಟಿವೆ. ಇಲ್ಲಿ ಮರಿಗಳ ಜೊತೆ ಗರ್ಭಿಣಿ ಮತ್ತು ಬಾಣಂತಿಯರಿಗೆ ವಿಶೇಷ ಆರೈಕೆ ಜೋರಾಗಿಯೇ ನಡೆಯುತ್ತದೆ. ಗಾಯಗೊಂಡ, ಮುದಿಯಾದ, ಒಟ್ಟಿನಲ್ಲಿ ಕಾಡಿನಲ್ಲಿ ಸ್ವತಂತ್ರವಾಗಿ ಬದುಕು ಸಾಗಿಸಲಾರದ ಎಲ್ಲ ಆನೆಗಳಿಗೂ ಆಶ್ರಯತಾಣ ಇದಾಗಿರುವುದರಿಂದ ಗಜಪಡೆಯ ಸಂಖ್ಯೆ ಏರುತ್ತಿದೆ.ಸುಮಾರು ನಲವತ್ತು ಮಾವುತರು ಈ ಆನೆಗಳ ಉಸ್ತುವಾರಿಯ ಹೊಣೆ ಹೊತ್ತಿದ್ದಾರೆ. ಸಹಜೀವನ ನಡೆಸುವ ಆನೆಗಳಿಗೆ ಇಲ್ಲಿಯೂ ಗುಂಪಾಗಿ ಮುಕ್ತವಾಗಿ ಕಾಡಿನಲ್ಲಿ ತಿರುಗುವ ಸ್ವಾತಂತ್ರ್ಯ ಕಲ್ಪಿಸಲಾಗಿದೆ. ಯಾವುದೇ ಬಂಧನವಿಲ್ಲದೇ ಸ್ವಚ್ಛಂದವಾಗಿ ಮಣ್ಣು ಎರಚುತ್ತಾ ಘೀಳಿಡುವ ಮರಿಯಾನೆಗಳ ಚಿನ್ನಾಟ ಸೊಗಸು. ದಿನಕ್ಕೆರಡು ಬಾರಿ ನದಿಯಲ್ಲಿ ಸ್ನಾನದ ಕಾರ್ಯಕ್ರಮ.ಬಿಡಾರದಿಂದ ಒಟ್ಟಿಗೇ ನದಿಯತ್ತ ನಡೆದರೂ ಕೆಲವು ಶಿಸ್ತಾಗಿ ಮತ್ತೆ ಕೆಲವು ಗಡಬಡಿಸಿ ಓಡುತ್ತಾ ನೀರಿಗಿಳಿವ ದೃಶ್ಯ ಮನೋಹರ. ಏಷ್ಯಾ ಮೂಲದ ಆನೆಗಳು ಇಲ್ಲಿ ಹೆಚ್ಚಾಗಿವೆ.ಮಾವುತರ ಪ್ರಕಾರ, ಇಲ್ಲಿನ ಮರಿಗಳು ಎಲ್ಲಕ್ಕಿಂತ ಜಾಣ ಮತ್ತು ಚೆಂದವಂತೆ. ತಾಯಿಹೃದಯದ ಅವರ ಬಾಯಿಂದ ಬಂದ ಹೆಮ್ಮೆಯ ಮಾತು ನನಗಂತೂ ನಿಜ ಅನ್ನಿಸಿತು.‘ತಿನ್ನು’ ಎಂದು ಒತ್ತಾಯ ಮಾಡುವ, ‘ನಿಲ್ಲು’ ಎಂದು ಗದರುವ, ‘ಅತ್ತಿತ್ತ ಓಡಬೇಡ’ ಎಂದು ಬೈಯುವ, ಮೈ ಉಜ್ಜಿ ಸ್ನಾನ ಮಾಡಿಸುವ, ಆಗಾಗ್ಗೆ ಕಿವಿ ಹಿಂಡುವ  ಮಾವುತರು ಪಕ್ಕಾ ಅಮ್ಮನೇ! ಮರಿಗಳು ಹಟಮಾಡಿದರೂ, ಮಾತು ಕೇಳುವುದು ಮಾವುತರದ್ದು ಮಾತ್ರ. ‘ತಮ್ಮದು ತಾಯಿ–ಮಕ್ಕಳ ಅನುಬಂಧ’ ಎಂದು ಮಾವುತನೆಂದಾಗ, ಮರಿಯೂ ತಲೆ ಆಚೀಚೆ ಕುಣಿಸಿ ‘ಹೌದು’ ಎನ್ನುತ್ತದೆ. ಮೂಕಪ್ರಾಣಿಯಾದರೇನು, ಪ್ರೀತಿಯ ಭಾಷೆ ಒಂದೇ!ಈ ಆನೆಗಳನ್ನು ಸಾಕುವುದಕ್ಕೆ ಪ್ರೀತಿ, ಸಹನೆ, ಅನುಭವದ ಜೊತೆ ಅಪಾರ ಪ್ರಮಾಣದ ಹಣವೂ ಬೇಕು. ಆದ್ದರಿಂದಲೇ ಇಲ್ಲಿ ಪ್ರವಾಸಿಗರಿಗೆ ಆನೆಗಳನ್ನು ಹತ್ತಿರದಿಂದ ನೋಡುವ, ಬೆರೆಯುವ ಅವಕಾಶ ಕಲ್ಪಿಸಿ ಪ್ರವೇಶ ಧನ ನಿಗದಿಪಡಿಸಲಾಗಿದೆ. ಸಾರ್ಕ್ ದೇಶದವರಿಗೆ 2000 ಸಿಂಹಳ ರೂಪಾಯಿಗಳ ಶುಲ್ಕವಿದೆ.ಬಾಟಲ್ ಫೀಡಿಂಗ್, ಮಣ್ಣಿನಾಟ, ನದಿ ಸ್ನಾನ – ಎಲ್ಲವನ್ನೂ ನೋಡಿ ಆನಂದಿಸಬಹುದು. ಹೆಚ್ಚಿನ ಶುಲ್ಕ ನೀಡಿದಲ್ಲಿ ಆನೆ ಸವಾರಿ ಮಾಡಿ, ಹಣ್ಣು–ಹುಲ್ಲು ತಿನಿಸಿ ಮುದ್ದು ಮಾಡಬಹುದು. ಆನೆಗಳ ಬಗ್ಗೆ ವಿವಿಧ ಮಾಹಿತಿ ಒಳಗೊಂಡ ಮ್ಯೂಸಿಯಂನಲ್ಲಿ ತಿರುಗಾಡಿ ಬರಬಹುದು. ಹೀಗೆ ಸಂಗ್ರಹವಾದ ಸಂಪೂರ್ಣ ಹಣ ಆನೆಗಳ ಸಂರಕ್ಷಣೆಗೆ ಮೀಸಲು.ಆನೆ ಎಂಬ ಪ್ರಾಣಿ ಹೀಗಿತ್ತು ಎಂದು ಚಿತ್ರಗಳಲ್ಲಿ ನೋಡಿ ತಿಳಿಯಬೇಕಾದ ದುಸ್ಥಿತಿಯತ್ತ ನಾವು ದಾಪುಗಾಲು ಹಾಕುತ್ತಿರುವಾಗ ಶ್ರೀಲಂಕಾದ ಪಿನ್ನವೇಲದ ಆನೆಮನೆ ಮನಸ್ಸಿನಲ್ಲೊಂದು ಆಶಾಭಾವನೆ ಮೂಡಿಸುತ್ತದೆ. ಆನೆಗಳ ಊಟ

ಶುದ್ಧ ಶಾಖಾಹಾರಿಗಳಾದ ಆನೆಗಳಿಗೆ (ವಯಸ್ಕ) ದಿನಕ್ಕೆ ಇನ್ನೂರೈವತ್ತು ಕೇಜಿ ಹುಲ್ಲು, ಕಬ್ಬು, ತಾಳೆ, ತೆಂಗಿನಕಾಯಿ, ಹುಣಸೆಹಣ್ಣು ಕೊಡುವುದರ ಜತೆ ಎರಡು ಕೇಜಿ ಅಕ್ಕಿ ತೌಡು ಮತ್ತು ಮುಸುಕಿನ ಜೋಳ ಕೊಡಲಾಗುತ್ತದೆ. ಮರಿಗಳಿಗೆ ಬೆಳಿಗ್ಗೆ ಒಂಬತ್ತು ಗಂಟೆಗೆ ಬಾಟಲ್ ಫೀಡಿಂಗ್. ದೊಡ್ಡ ಬಾಟಲ್‌ಗಳಲ್ಲಿ ಹಾಲು ತುಂಬಿಸಿ ಮಾವುತರು ಮರಿಗಳ ಬಾಯಿಗಿಟ್ಟರೆ ಸಾಕು, ಸೊರ್ ಎಂದು ಕುಡಿವ ಮರಿ, ಥೇಟ್ ನಮ್ಮನೆಯ ಕಂದಮ್ಮ! ಒಂದು ಬಾರಿಗೆ ಹತ್ತು–ಹನ್ನೆರಡು ಬಾಟಲ್ ಹಾಲು ಸ್ವಾಹಾ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry