ನಿರಂತರ ಜನ ಸೇವೆಯಲ್ಲಿ ತೊಡಗಿ
ಮಂಡ್ಯ: ಅಧಿಕಾರ ಬರುತ್ತೆ ಹೋಗುತ್ತೇ ಆದರೆ, ಜನರ ನಡುವೆ ಇರುವವರು ನಿರಂತರವಾಗಿ ಜನ ಸೇವೆಯಲ್ಲಿ ತೊಡಗುವುದು ಮುಖ್ಯ ಎಂದು ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅಭಿಪ್ರಾಯಪಟ್ಟರು.
ನಗರದ ಗಾಂಧಿ ಭವನದಲ್ಲಿ ಡಾ.ಜೀ.ಶಂ.ಪ. ಸಾಹಿತ್ಯ ವೇದಿಕೆ ವತಿಯಿಂದ ಭಾನುವಾರ ನಡೆದ ‘ಕನ್ನಡ ಹಬ್ಬ’ ಹಾಗೂ ಕನ್ನಡ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹೋರಾಟ ಎಂಬುದು ಗೆಲುವು–ಸೋಲುಗಳಿಗೆ ಸೀಮಿತ ಆಗಬಾರದು. ಹೋರಾಟಗಾರರಿಗೆ ಯಾವಾಗಲು ಉತ್ತಮ ಸೇವೆಯಲ್ಲಿ ತೊಡಗುವು ದಕ್ಕಿಂತ ಬೇರೆ ಕೆಲಸ ಇನ್ನೊಂದಿಲ್ಲ. ಸೋಲು ಯಾವತ್ತೂ ನಮ್ಮನ್ನು ಕುಗ್ಗು ವಂತೆ ಮಾಡಲು ಬಿಡಬಾರದು. ಆಗ ಗೆಲುವು ನಮ್ಮದಾಗುತ್ತದೆ ಎಂದು ಹೇಳಿದರು.
ಸಾಧನೆ ಮಾಡಿದವರನ್ನು ಸ್ಮರಿಸ ಬೇಕು. ಅವರ ಮಾರ್ಗದರ್ಶನ ಹಾಗೂ ಆದರ್ಶ ಎಲ್ಲರಿಗೂ ಬೇಕು. ಅವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸ ಕೊಳ್ಳಬೇಕು. ರಾಜಕೀಯದಲ್ಲಿ ಗೆದ್ದವ ರೆಲ್ಲ ಮುಖಂಡರಲ್ಲ. ಸಾಹಿತ್ಯ, ಕಲೆ ಹಾಗೂ ಇತರೆ ಕ್ಷೇತ್ರದಲ್ಲಿಯೂ ತೊಡಗಿ ಸಿಕೊಂಡವರು ಸಹ ಪ್ರಮುಖರು ಎಂಬುದನ್ನು ಯಾರೂ ಮರೆಯಬಾರದು ಎಂದು ತಿಳಿಸಿದರು.
ಕನ್ನಡ ಉಳಿವಿಗೆ ಹೋರಾಟ ನಿರಂತರ ಎಂಬುದು ಅದೊಂದು ದುರಂತವೇ ಸರಿ. ಕನ್ನಡ ಹಬ್ಬವನ್ನು ಎಲ್ಲರೂ ಆಚರಿಸಬೇಕು. ಸಂಪಾದನೆ ಮುಖ್ಯವಲ್ಲ ಕನ್ನಡಕ್ಕೆ ಕೊಡುಗೆ ನೀಡುವ ಮನೋಭಾವ ಬೆಳೆಸಿಕೊಳ್ಳಬೇಕು. ನೀರಿನ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಲೇ ಇರುವುದು ಸಹಿಸಲು ಸಾಧ್ಯವಾಗದ ವಿಷಯವಾಗಿದೆ. ಭಾಷೆ, ನೆಲ ಹಾಗೂ ಜಲ ಉಳಿವಿಗೆ ಎಲ್ಲರೂ ಕೈ ಜೋಡಿಸಬೇಕು ಎಂದು ಹೇಳಿದರು.
ಸಾಹಿತಿ ಪ್ರೊ.ಎಚ್.ಎಸ್. ಮುದ್ದೇ ಗೌಡ ಮಾತನಾಡಿ, ಸೋಲು ಹಾಗೂ ಗೆಲುವನ್ನು ಸಮಾನಾಗಿ ತೆಗೆದುಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕು. ನೆಲ, ಜಲ ಹಾಗೂ ಭಾಷೆ ರಕ್ಷಣೆಗೆ ಬೀದಿಗಿಳಿದು ಹೋರಾಟ ನಡೆಸಬೇಕು. ಅನ್ಯ ಭಾಷೆಗಳಿಗೆ ಅಳಿವಿನ ಭಯವಿದೆ. ಅಳಿವಿನ ಅಳುಕಿಲ್ಲದ ಭಾಷೆ ಕನ್ನಡ ಎಂದು ಹೇಳಿದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬೂಕಹಳ್ಳಿ ಮಂಜುನಾಥ್, ಕೆ.ಆರ್. ಪೇಟೆ ಅರವಿಂದ್, ಉಮಾಪತಿ, ಕೋಮಲ ಕುಮಾರ್, ಮಹದೇವ ಸ್ವಾಮಿ, ಸೌಭಾಗ್ಯಾ ಶಿವಲಿಂಗು, ಕೆ.ರಾಜೇಂದ್ರ ಹಿರೇಹಳ್ಳಿ, ಎಂ.ಎಸ್. ಕೃಷ್ಣಸ್ವಾಮಿ, ಎಸ್.ಪಿ.ನಾರಾಯಣ ಸ್ವಾಮಿ, ಅಕ್ಮಲ್ ಪಾಷಾ ಅವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ಕವಿಗಳು ಕವಿಗೋಷ್ಠಿ ನಡೆಸಿಕೊಟ್ಟರು. ರಿವರ್‌ವ್ಯಾಲಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಎಂ.ರಾಮೇಗೌಡ, ಸಾಹಿತಿ ಕೃಷ್ಣ ಸ್ವರ್ಣಸಂದ್ರ, ವೇದಿಕೆಯ ಉಪಾಧ್ಯಕ್ಷ ಪೋತೇರ ಮಹದೇವು, ಪ್ರಧಾನ ಕಾರ್ಯದರ್ಶಿ ಚಂದಗಾಲು ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.
ವಿಧಾನಸಭೆ ಚುನಾವಣೆ: ಸ್ಪರ್ಧೆ ಖಚಿತ
ಮಂಡ್ಯ: ಬರುವ 2018ರ ವಿಧಾನಸಭೆ ಚುನಾವಣೆಯಲ್ಲಿ ಜನರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಶಾಸಕ ಎಲ್.ಆರ್. ಶಿವರಾಮೇಗೌಡ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿ, ಜನರಿಗೆ ನಾನು ಏನು ಎಂಬುದು ಗೊತ್ತಿದೆ. ಕಾಂಗ್ರೆಸ್ ಪಕ್ಷದಲ್ಲೇ ಇದ್ದೇನೆ. ಪಕ್ಷದ ಟಿಕೆಟ್ ಸಿಗುವ ವಿಶ್ವಾಸ ಇದೆ. ಕಾಂಗ್ರೆಸ್ ಅವಕಾಶ ಕೊಡದಿದ್ದರೆ. ಜನರ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯುತ್ತೇನೆ ಎಂದರು.
ಕಳೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವರು ಪಕ್ಷದಲ್ಲೇ ಇದ್ದುಕೊಂಡು ನನ್ನ ವಿರುದ್ಧ ಪಿತೂರಿ ಮಾಡಿದರು. ಈ ಬಗ್ಗೆ ಈಗಾಗಲೇ ಹೈಕಮಾಂಡ್‌ಗೆ ದೂರು ಸಲ್ಲಿಸಿದ್ದೇನೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪಕ್ಷದ ನಾಯಕರು ಚುನಾವಣಾ ಸಂದರ್ಭದಲ್ಲಿ ಹೊಂದಾಣಿಕೆ ರಾಜ ಕೀಯ ಮಾಡುತ್ತಿರುವುದರಿಂದ ಪಕ್ಷ ಸೋಲು ಅನುಭವಿಸುತ್ತಿದೆ. ಅಂತಹವರ ವಿರುದ್ಧ ಪಕ್ಷ ಕ್ರಮ ಕೈಗೊಳ್ಳಬೇಕು. ಶಾಸಕ ಎನ್.ಚಲುವರಾಯಸ್ವಾಮಿ ಅವರು ನಾಗಮಂಗಲ ಕ್ಷೇತ್ರಕ್ಕೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸುತ್ತಾರೆ ಎಂಬ ವದಂತಿ ಕೇಳಿದ್ದೇನೆ. ಯಾರು ಯಾವ ಪಕ್ಷದಿಂದಲಾದರೂ ಸ್ಪರ್ಧಿಸಲಿ ನಾನು ಅಭ್ಯರ್ಥಿಯಾಗುವುದು ಖಚಿತ ಎಂದು ತಿಳಿಸಿದರು.
*ಸಂಕಷ್ಟದಲ್ಲಿ ಕನ್ನಡ ಹಬ್ಬವನ್ನು ಆಚರಿಸುತ್ತಿದ್ದೇವೆ. ಕಾವೇರಿ ಮುನಿಸಿಕೊಂಡಿದ್ದಾಳೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ
- ಸಿ.ಎಸ್.ಪುಟ್ಟರಾಜು, ಸಂಸದ
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.