ರಾಷ್ಟ್ರೀಯ ಮಕ್ಕಳ ಪುರಸ್ಕಾರ ಪಡೆದ ರೇವತಿ ಎಂ. ನಾಯಕಗೆ ಮುಖ್ಯಮಂತ್ರಿ ಅಭಿನಂದನೆ

7

ರಾಷ್ಟ್ರೀಯ ಮಕ್ಕಳ ಪುರಸ್ಕಾರ ಪಡೆದ ರೇವತಿ ಎಂ. ನಾಯಕಗೆ ಮುಖ್ಯಮಂತ್ರಿ ಅಭಿನಂದನೆ

Published:
Updated:
ರಾಷ್ಟ್ರೀಯ ಮಕ್ಕಳ ಪುರಸ್ಕಾರ ಪಡೆದ ರೇವತಿ ಎಂ. ನಾಯಕಗೆ ಮುಖ್ಯಮಂತ್ರಿ ಅಭಿನಂದನೆ

ಬೆಂಗಳೂರು: ಪ್ಯಾರಾಲಿಂಪಿಯನ್‌ನಲ್ಲಿ ತೋರಿದ ಅಸಾಧಾರಣ ಸಾಧನೆಗಾಗಿ ಸೋಮವಾರ ದೆಹಲಿಯಲ್ಲಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರಿಂದ ರಾಷ್ಟ್ರೀಯ ಮಕ್ಕಳ ಪುರಸ್ಕಾರ ಹಾಗೂ ಚಿನ್ನದ ಪದಕ ಪಡೆದಿರುವ ದಾವಣಗೆರೆಯ ಪ್ಯಾರಾಲಿಂಪಿಯನ್‌ ಈಜುಪಟು ರೇವತಿ ಎಂ. ನಾಯಕ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿನಂದನೆ ತಿಳಿಸಿದ್ದಾರೆ.

‘ಅಸಾಧಾರಣ ಸಾಧನೆ ತೋರಿ ರಾಷ್ಟ್ರಪತಿ ಅವರಿಂದ ಚಿನ್ನದ ಪದಕ ಪಡೆದ ದಾವಣಗೆರೆ ಜಿಲ್ಲೆಯ ಪ್ಯಾರಾಲಿಂಪಿಯನ್‌ ರೇವತಿ ಎಂ. ನಾಯಕಗೆ ಅಭಿನಂದನೆಗಳು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

 

ರೇವತಿ ದಾವಣಗೆರೆಯ ಸಿದ್ಧಗಂಗಾ ಪಿಯು ಕಾಲೇಜು ವಿದ್ಯಾರ್ಥಿನಿ. ತಂದೆ ಹುಚ್ಚವ್ವನಹಳ್ಳಿ ಮಂಜುನಾಥ ಅವರು ಕರ್ನಾಟಕ ರಾಜ್ಯ ರೈತ ಸಂಘ–ಹಸಿರುಸೇನೆ ಬಣದ ಅಧ್ಯಕ್ಷ. ತಾಯಿ ಸುನಂದಾ ಗೃಹಿಣಿ. ರೇವತಿ ಸೇರಿ ಮೂವರೂ ಮಕ್ಕಳು ಕ್ರೀಡಾಪಟುಗಳು ಎನ್ನುವುದು ವಿಶೇಷ.

ರೇವತಿ ಈಜು ಕಲಿತಿದ್ದು ಎಂಟನೇ ವಯಸ್ಸಿನಲ್ಲಿ. ಜಗಳೂರು ತಾಲ್ಲೂಕಿನ ಹುಚ್ಚವ್ವನಹಳ್ಳಿಯ ಗ್ರಾಮದ ಕಾಲುವೆಯೊಂದರಲ್ಲಿ. ಮಗಳಿಗೆ ಉತ್ತಮ ಕ್ರೀಡಾ ಸೌಲಭ್ಯ ಒದಗಿಸಲು ವ್ಯಾಸಂಗವನ್ನು ಹಳ್ಳಿಯಿಂದ ದಾವಣಗೆರೆ ನಗರಕ್ಕೆ ಬದಲಾಯಿಸಿದರು. ತಂದೆಯ ಶ್ರಮ ವ್ಯರ್ಥವಾಗಲಿಲ್ಲ. ಈಜಿನಲ್ಲಿ ಉತ್ತಮ ಪ್ರದರ್ಶನವನ್ನೂ ನೀಡತೊಡಗಿದಳು.

ಎರಡು ವರ್ಷಗಳಿಂದ ಪ್ಯಾರಾಲಿಂಪಿಯನ್‌ ಸ್ಪರ್ಧಿಗಳಿಗಾಗಿ ನಡೆಯುವ ಐವಾಸ್‌ ಈಜು ಕೂಟದಲ್ಲಿ ರೇವತಿ ಪದಕಗಳ ಸಾಧನೆ ದಾಖಲಿಸಿದಳು. ಕಳೆದ ವರ್ಷ ನೆದರ್‌ಲೆಂಡ್‌ನಲ್ಲಿ ಪದಕ. ಕಳೆದ ಜೂನ್‌– ಜುಲೈನಲ್ಲಿ ಚೆಕ್‌ ಗಣರಾಜ್ಯದ ಪ್ರಾಗ್‌ನಲ್ಲಿ ನಡೆದ ಐವಾಸ್‌ ಕೂಟದಲ್ಲಿ (ಎಸ್‌ಬಿ–9 ವಿಭಾಗ) ಈಕೆಗೆ ಒಂದು ಬೆಳ್ಳಿ, ಒಂದು ಕಂಚಿನ ಪದಕ. ಅಮೆರಿಕದ ಪಸಡೇನಾದ ರೋಸ್‌ಬೌಲ್‌ನಲ್ಲಿ 2014ರಲ್ಲಿ ನಡೆದ ಪ್ಯಾರಾಲಿಂಪಿಕ್ಸ್ ಈಜು ಕೂಟದಲ್ಲಿ ಆರನೇ ಸ್ಥಾನವನ್ನೂ ಪಡೆದಿದ್ದಳು.

16 ವರ್ಷದ ರೇವತಿಗೆ ಕಾಲುಗಳ ಉದ್ದ ಒಂದೇ ಸಮನಾಗಿಲ್ಲ. ಆದರೆ ಅದನ್ನು ಈಕೆ ಒಂದು ಸಮಸ್ಯೆ ಎಂದು ಭಾವಿಸಿಯೂ ಇಲ್ಲ. ‘ನನಗೆ ಮುಂದೆ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಬೇಕೆಂಬ ಗುರಿಯಿದೆ’ ಎನ್ನುವ ಮೂಲಕ ದೊಡ್ಡ ಕನಸನ್ನೂ ಹೊಂದಿದ್ದಾಳೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry