ಸೋಮವಾರ, ಜೂಲೈ 6, 2020
23 °C
ನ್ಯಾಷನಲ್‌ ಕಾಲೇಜು ನಿಲ್ದಾಣದಿಂದ ಯಲಚೇನಹಳ್ಳಿವರೆಗೆ ಪ್ರಾಯೋಗಿಕ ಸಂಚಾರ ಆರಂಭ

ಜಯನಗರಕ್ಕೆ ಬಂತು ಮೆಟ್ರೊ ರೈಲು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಯನಗರಕ್ಕೆ ಬಂತು ಮೆಟ್ರೊ ರೈಲು!

ಬೆಂಗಳೂರು: ಬಸವನಗುಡಿ ನ್ಯಾಷನಲ್‌ ಕಾಲೇಜು ನಿಲ್ದಾಣದಿಂದ ಯಲಚೇನಹಳ್ಳಿಯತ್ತ ಭಾನುವಾರ ಪ್ರಯೋಗಾರ್ಥ ಮೆಟ್ರೊ ರೈಲು ಸಂಚಾರ ಆರಂಭವಾದಾಗ ಆ ಭಾಗದ ಜನ ಪುಳಕಿತರಾಗಿ ವೀಕ್ಷಿಸಿದರು. ‘ನಮ್ಮ ಭಾಗಕ್ಕೂ ಮೆಟ್ರೊ ಬಂತು’ ಎಂಬ ಖುಷಿ ಅನುಭವಿಸಿದರು.

 

ಪಕ್ಕದ ಲಾಲ್‌ಬಾಗ್‌ ಸಸ್ಯಕಾಶಿಯಿಂದ ಬೀಸುತ್ತಿದ್ದ ತಂಪಾದ ಗಾಳಿ, ಸೌತ್‌ ಎಂಡ್‌ ಸರ್ಕಲ್‌ನ ‘ಅಂಬರ ಚುಂಬನ’ ಗಡಿಯಾರ ಮೊಳಗಿಸುತ್ತಿದ್ದ ಸದ್ದು ಸಹ ಮೆಟ್ರೊ ರೈಲಿಗೆ ಸ್ವಾಗತ ಕೋರುತ್ತಿದ್ದವು. 

 

ಸಂಚಾರ ದಟ್ಟಣೆಯ ಕಿರಿಕಿರಿಯಿಂದ ಮುಕ್ತಿ ದೊರೆಯುವ ದಿನಗಳು ದೂರವಿಲ್ಲ ಎಂಬ ನೆಮ್ಮದಿಯ ಭಾವ ಅಲ್ಲಿನ ಜನರಲ್ಲಿ ವ್ಯಕ್ತವಾಗುತ್ತಿತ್ತು.  

 

‘ನಮ್ಮ ಮೆಟ್ರೊ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲು. ಈ ಸಾಧನೆಗಾಗಿ ಬಹಳ ದಿನಗಳಿಂದ ನಾವು ಕಾತರರಾಗಿದ್ದೆವು’ ಎಂದು  ಮೆಟ್ರೊ ರೈಲು ನಿಗಮದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್‌ ಸಿಂಗ್‌ ಖರೋಲಾ ಸಂತಸ ಹಂಚಿಕೊಂಡರು.

 

‘ಚಿಕ್ಕಪೇಟೆ, ಮೆಜೆಸ್ಟಿಕ್‌ ಭಾಗದಲ್ಲಿ ಸುರಂಗ ಕೊರೆಯುವ ವೇಳೆ ಸಾಕಷ್ಟು ತೊಂದರೆಗಳನ್ನು ಎದುರಿಸಿದ್ದೇವೆ. ಎಂಜಿನಿಯರ್‌ಗಳು, ಗುತ್ತಿಗೆದಾರರು, ಕಾರ್ಮಿಕರ ಅವಿರತ ಶ್ರಮದಿಂದಾಗಿ ನಮ್ಮ ಮೆಟ್ರೊ ಮೊದಲ ಹಂತದ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದಿದೆ’ ಎಂದು ಹೇಳಿದರು.

 

‘ಸಂಪಿಗೆ ರಸ್ತೆ– ನ್ಯಾಷನಲ್‌ ಕಾಲೇಜು ನಿಲ್ದಾಣ ನಡುವಿನ ಸುರಂಗ ಮಾರ್ಗ ನಿರ್ಮಿಸಲು ಸಾಕಷ್ಟು ತೊಂದರೆ ಉಂಟಾಗಿತ್ತು. ಅದೇ  ರೀತಿಯಲ್ಲಿ ಸುರಂಗದಿಂದ ಮೆಟ್ರೊ ರೈಲನ್ನು ನ್ಯಾಷನಲ್ ಕಾಲೇಜು ನಿಲ್ದಾಣಕ್ಕೆ ಕೊಂಡೊಯ್ಯಲು ಎಂಜಿನಿಯರ್‌ಗಳು ಸಾಕಷ್ಟು ಕಷ್ಟಪಟ್ಟಿದ್ದಾರೆ. ಸುರಂಗ ಮಾರ್ಗದಲ್ಲಿ ವಿದ್ಯುತ್‌ ಬಳಸಿ ಮೆಟ್ರೊ ರೈಲು ಓಡಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಲೋಕೋಮೋಟಿವ್‌ ಯಂತ್ರದ ಸಹಾಯದಿಂದ ರೈಲನ್ನು ನ್ಯಾಷನಲ್‌ ಕಾಲೇಜು ನಿಲ್ದಾಣದವರೆಗೆ ತಂದಿದ್ದೇವೆ’ ಎಂದರು.

 

‘ರೈಲಿನ ಬೋಗಿಗಳನ್ನು ಒಯ್ಯಲು ಸಾಮಾನ್ಯವಾಗಿ ಡೀಸೆಲ್‌ ಆಧಾರಿತ ಲೋಕೋಮೋಟಿವ್‌ ಯಂತ್ರವನ್ನು ಬಳಸಲಾಗುತ್ತದೆ. ಆದರೆ, ಇದು ಹೊಗೆಯನ್ನು ಉಗುಳುವುದರಿಂದ ಬ್ಯಾಟರಿಚಾಲಿತ ಲೋಕೋಮೋಟಿವ್‌ ಯಂತ್ರವನ್ನು ಬಳಸಿದ್ದೇವೆ. ಪ್ರತಿ ನಾಲ್ಕು ನಿಲ್ದಾಣಗಳಲ್ಲಿ ಈ ಯಂತ್ರವನ್ನು ಚಾರ್ಜ್‌ ಮಾಡಿದ ಬಳಿಕ ಉಪಯೋಗಿಸಬೇಕಿತ್ತು’ ಎಂದು ವಿವರಿಸಿದರು.

 

‘ಸದ್ಯ ಒಂದು ಹಳಿಯಲ್ಲಿ ಮಾತ್ರ ಮೆಟ್ರೊ ರೈಲಿನ ಪ್ರಾಯೋಗಿಕ ಸಂಚಾರ ಆರಂಭಗೊಂಡಿದೆ. ಡಿಸೆಂಬರ್‌ 31ರೊಳಗೆ ಮತ್ತೊಂದು ಹಳಿಯ ಮೇಲೆ ರೈಲು ಪ್ರಾಯೋಗಿಕ ಸಂಚಾರ ಆರಂಭಿಸಲಿದೆ. ಗಂಟೆಗೆ 33 ಕಿ.ಮೀ. ವೇಗದಲ್ಲಿ ರೈಲು ಸಂಚರಿಸಲಿದೆ’ ಎಂದು ತಿಳಿಸಿದರು.

 

ಕೇಬಲ್‌, ಸಿಗ್ನಲ್‌ ಅಳವಡಿಕೆ: ‘ಸಂಪಿಗೆ ರಸ್ತೆಯಿಂದ ನ್ಯಾಷನಲ್‌ ಕಾಲೇಜು ನಿಲ್ದಾಣದವರೆಗಿನ ಸುರಂಗ ಮಾರ್ಗದಲ್ಲಿ ಈಗಾಗಲೇ ಹಳಿ ಅಳವಡಿಸಲಾಗಿದೆ. ಕೇಬಲ್‌, ವೆಂಟಿಲೇಷನ್‌ ಮತ್ತು ಸಿಗ್ನಲ್‌ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ’ ಎಂದು ಹೇಳಿದರು.

 

ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಮಾತನಾಡಿ, ‘ನವೆಂಬರ್‌ನಿಂದ ಉತ್ತರ– ದಕ್ಷಿಣ ಕಾರಿಡಾರ್‌ನಲ್ಲಿ ನಮ್ಮ ಮೆಟ್ರೊ ರೈಲು ಸಂಚಾರ ನಡೆಸಲಿದೆ ಎಂದು ಹೇಳಿದ್ದೆ. ಈ ಸಂಬಂಧ ಅಧಿಕಾರಿಗಳಿಗೂ ಸೂಚನೆ ನೀಡಿದ್ದೆ. ಹೀಗಾಗಿ ಮೆಟ್ರೊ ನಿಗಮದ ಅಧಿಕಾರಿಗಳು ಹಾಗೂ ಕಾರ್ಮಿಕರು ಹಗಲು ರಾತ್ರಿ ಶ್ರಮಪಟ್ಟು ಕೆಲಸ ಮಾಡಿದ್ದಾರೆ. ಅವರಿಗೆ ಅಭಿನಂದನೆಗಳು’ ಎಂದು ಹೇಳಿದರು.

 

‘ಪೀಣ್ಯದಿಂದ ಯಲಚೇನಹಳ್ಳಿವರೆಗೆ ರೈಲು ಸಂಚಾರ ಆರಂಭಗೊಂಡರೆ ಈ ಮಾರ್ಗದಲ್ಲಿ ವಾಹನದಟ್ಟಣೆ ಕಡಿಮೆಯಾಗಲಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಪರಿಶೀಲನೆ ನಡೆಸಿ ಪ್ರಮಾಣಪತ್ರ ನೀಡಲಿದ್ದಾರೆ. ಮಾರ್ಚ್‌–ಏಪ್ರಿಲ್‌ ವೇಳೆಗೆ ಈ ಮಾರ್ಗವು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ’ ಎಂದರು.

 

‘ಎರಡನೇ ಹಂತದಲ್ಲಿ ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಾಣಕ್ಕೆ ಸಿದ್ಧತೆಗಳು ನಡೆದಿವೆ. ಸಿಲ್ಕ್‌ಬೋರ್ಡ್‌ ಜಂಕ್ಷನ್‌ನಿಂದ ಕೆ.ಆರ್‌.ಪುರದವರೆಗೆ ಮೆಟ್ರೊ ರೈಲು ಮಾರ್ಗ ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದರು.

 

**

ತಡೆಯಾಜ್ಞೆ ತೆರವು ಬಳಿಕ ಕಾಮಗಾರಿ

‘ಉಕ್ಕಿನ ಸೇತುವೆ ನಿರ್ಮಾಣಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ನೀಡಿರುವ ತಡೆಯಾಜ್ಞೆ ತೆರವುಗೊಂಡ ಬಳಿಕ ಕಾಮಗಾರಿಗೆ ಚಾಲನೆ ನೀಡಲಾಗುವುದು’ ಎಂದು ಜಾರ್ಜ್‌ ತಿಳಿಸಿದರು.


 


‘ಈ ಯೋಜನೆ ಜನರಿಗೋಸ್ಕರ ಮಾಡಿರುವಂತಹದ್ದು. ಯಾವುದೇ ಕಾರಣಕ್ಕೂ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಇದೇ 25ರಂದು ನ್ಯಾಯಮಂಡಳಿಯಲ್ಲಿ ವಿಚಾರಣೆ ನಡೆಯಲಿದೆ. ಬಿಡಿಎ ಅಧಿಕಾರಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ’ ಎಂದರು.


 


‘ಬಸವೇಶ್ವರ ವೃತ್ತದಿಂದ ಹೆಬ್ಬಾಳದವರೆಗೆ ಉಂಟಾಗುತ್ತಿರುವ ಸಂಚಾರ ದಟ್ಟಣೆಯಿಂದ ಹೆಚ್ಚು ಮಾಲಿನ್ಯ ಉಂಟಾಗುತ್ತಿದೆ. ಯೋಜನೆಗೆ 800 ಮರಗಳು ಬಲಿಯಾಗಲಿವೆ ಎಂದು ಆರೋಪ ಮಾಡುತ್ತಿದ್ದಾರೆ. ಆದರೆ, ಇದಕ್ಕೆ ಬದಲಾಗಿ 80 ಸಾವಿರ ಗಿಡಗಳನ್ನು ನೆಡಲಾಗುವುದು’ ಎಂದು ಹೇಳಿದರು.


 

**

ಹೆಚ್ಚಿನ ಸಮಯ ಕೊಡಿ...

‘ನವೆಂಬರ್‌ನೊಳಗೆ ಮೆಟ್ರೊ ರೈಲಿನ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸುವಂತೆ ಗಡುವು ನೀಡಲಾಗಿತ್ತು. ಇದರಿಂದ ಅಧಿಕಾರಿಗಳು, ಕಾರ್ಮಿಕರು ಒತ್ತಡದಲ್ಲಿ ಕೆಲಸ ಮಾಡಿದ್ದಾರೆ. ನಿಗದಿತ ಅವಧಿಗಿಂತ ಸ್ವಲ್ಪ ಹೆಚ್ಚಿನ ಕಾಲಾವಕಾಶ ಕೊಡಿ. ಎಲ್ಲ ಕೆಲಸಗಳನ್ನು ಮುಗಿಸಿಕೊಡುತ್ತೇವೆ’ ಎಂದು ಖರೋಲಾ ಅವರು ಸಚಿವರನ್ನು ಕೋರಿದರು. 


 


ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜಾರ್ಜ್‌ ಅವರು, ‘ಸುರಕ್ಷತೆ ಹಾಗೂ ಭದ್ರತೆ ವಿಷಯಗಳಲ್ಲಿ ರಾಜಿ ಮಾಡಿಕೊಳ್ಳಬಾರದು. ನಿಮ್ಮ ಕೆಲಸವನ್ನು ಮುಂದುವರೆಸಿ’ ಎಂದು ಸೂಚಿಸಿದರು.


 

**

2018ರೊಳಗೆ ಕಾಮಗಾರಿ ಪೂರ್ಣ


‘ಎರಡನೇ ಹಂತದಲ್ಲಿ ನಾಯಂಡಹಳ್ಳಿಯಿಂದ ಕೆಂಗೇರಿವರೆಗೆ ನಿರ್ಮಿಸುತ್ತಿರುವ ಮೆಟ್ರೊ ರೈಲು ಮಾರ್ಗದ ಕಾಮಗಾರಿ 2018ರೊಳಗೆ ಪೂರ್ಣಗೊಳ್ಳಲಿದೆ. ಬೈಯಪ್ಪನಹಳ್ಳಿಯಿಂದ ವೈಟ್‌ಫೀಲ್ಡ್‌ವರೆಗಿನ ಮೆಟ್ರೊ ರೈಲು ಮಾರ್ಗ ಕಾಮಗಾರಿ 2020ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ’ ಎಂದು ಖರೋಲಾ ಹೇಳಿದರು.


 

**

ಮೆಟ್ರೊ ನಿಲ್ದಾಣಗಳಲ್ಲಿ ಸಂಚಾರಿ ಎಟಿಎಂ


‘ನಗರದ ಎಲ್ಲ ಮೆಟ್ರೊ ನಿಲ್ದಾಣಗಳಲ್ಲಿ ಸಂಚಾರಿ ಎಟಿಎಂಗಳ ಸ್ಥಾಪನೆಗೆ ಅನುಮತಿ ನೀಡಲಾಗಿದೆ’ ಎಂದು ಜಾರ್ಜ್‌ ಹೇಳಿದರು. ‘ಸಂಚಾರಿ ಎಟಿಎಂಗಳನ್ನು ಸ್ಥಾಪಿಸಲು ಅನುಮತಿ ನೀಡುವಂತೆ ಹಲವು ಬ್ಯಾಂಕ್‌ಗಳು ಮನವಿ ಮಾಡಿದ್ದವು. ಗ್ರಾಹಕರಿಗೆ ಅನುಕೂಲ ಕಲ್ಪಿಸಲು ಅನುಮತಿ ನೀಡಲಾಗಿದೆ’ ಎಂದರು.


 


**


ಮೆಜೆಸ್ಟಿಕ್‌ನಿಂದ ಯಲಚೇನಹಳ್ಳಿ ಮಾರ್ಗದ ಮೆಟ್ರೊ ರೈಲಿಗಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದೇವೆ. ಮೆಟ್ರೊದಲ್ಲಿ ಜಯನಗರದಿಂದ ಮೆಜೆಸ್ಟಿಕ್‌ಗೆ 10 ನಿಮಿಷದಲ್ಲಿ ಸಂಚರಿಸಬಹುದು.

-ಬಿ.ಎನ್. ವಿಜಯಕುಮಾರ್, ಶಾಸಕ

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.