ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವ ಕಲಾವಿದರ ಕಲಾಕೃತಿಗಳ ಸೊಬಗು

ಕಲಾಪ
Last Updated 24 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಪ್ರಶಾಂತತೆ’ಯನ್ನು ಕೇಂದ್ರೀಕರಿಸಿದ ಭಾರತದ 6 ಯುವ ಕಲಾವಿದರ ಕಲಾಕೃತಿಗಳ ಪ್ರದರ್ಶನ ನವರತ್ನ ಗ್ಯಾಲರಿಯಲ್ಲಿ ನಡೆಯುತ್ತಿದೆ.
ಕೆ.ಹಿರೇಮಠ್, ಸಿದ್ಧಾರ್ಥ್‌ ಶಿಂಗಡೆ, ಸಚಿನ್ ಸಗಾರೆ, ಸಚಿನ್ ಖಾರತ್‌, ಅಮೊಲ್ ಪವಾರ್‌, ಆಂಡ್ರ್ಯೂ ಪಾಲ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದಾರೆ.

ಈ ಪೈಕಿ ಅನೇಕರ ಕಲಾಕೃತಿಗಳು ದೇಶದ ವಿವಿಧೆಡೆ ಪ್ರದರ್ಶನಗೊಂಡಿವೆ. ಮಿಶ್ರ ಮಾಧ್ಯಮಗಳಿಂದ ರೂಪುಗೊಂಡಿರುವ ಈ ಕಲಾಕೃತಿಗಳು ನೋಡುಗರನ್ನು ಬೆರಗುಗೊಳಿಸುವಂತಿವೆ.

ಹೂವಿನೊಡನೆ ಗ್ರಾಮೀಣ ಮಹಿಳೆಯ ಅಂದ ಮೆರುಗುಗೊಳಿಸಿ, ಮುಖದ ಭಾವನೆಯಿಂದ ಮುಗ್ಧ ಸ್ವಭಾವವನ್ನು ತೋರ್ಪಡಿಸುವ ಚಿತ್ರ ರಸಿಕರ ಮನೆ ಸೆಳೆಯುತ್ತಿದೆ.

ನಿತ್ಯದ ಜೀವನದಲ್ಲಿ ಬರುವ ಜಂಜಾಟವನ್ನು ಎದುರಿಸುವುದಕ್ಕೆ ಎಷ್ಟು ಆತ್ಮಸ್ಥೈರ್ಯ ಬೇಕು, ಅದನ್ನು ಹೇಗೆ ನಿಭಾಯಿಸಬೇಕು. ಮಾನಸಿಕ ಸಮಸ್ಯೆಗೆ ಧ್ಯಾನದ ಮೂಲಕ ಮಾರ್ಗ ಹುಡುಕುವುದು ಮತ್ತು ಅದರಿಂದ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಸಹಾಯವಾಗುತ್ತದೆ ಎಂಬುದನ್ನು ಈ ಚಿತ್ರಗಳು ಸಂದೇಶ ರವಾನಿಸುತ್ತದೆ.

ಹಳ್ಳಿ ಸೊಗಡಿನ ಬಿಂಕ ಬಿನ್ನಾಣ, ಹೊಲ ಗದ್ದೆಗಳ ಕೆಸರಿನ ಬಣ್ಣ, ಕೃಷಿ ಮತ್ತು ಕಾರ್ಮಿಕರ ಕೆಲಸವನ್ನೇ ಆಟ ಎಂಬಂತೆ ಸಿದ್ಧಾರ್ಥ ಶಿಂಗಡೆ ಅವರ ಕಲಾಕೃತಿಗಳು ಪರಿಭಾವಿಸುತ್ತವೆ.

ಸಂಸ್ಕೃತಿಯ ಮೌಲ್ಯವನ್ನು ಕಾಪಾಡುವ ಮಹಿಳೆಯರು, ದುಡಿದು ಜೀವನ ಸಾಗಿಸುವ ಮುಗ್ಧೆಯರನ್ನು ಸಚಿನ್‌ ಸಗಾರೆ ಬಿಂಬಿಸಿದ್ದಾರೆ. ಬಣ್ಣಗಳ ಸಿಂಚನದಿಂದ ಗ್ರಾಮೀಣ ಮಹಿಳೆಯರ ಅಂದ ಹೆಚ್ಚಿಸಿದ್ದಾರೆ. ಬಣ್ಣಕ್ಕೆ ಹೆಚ್ಚು ಒತ್ತು ನೀಡಿರುವ ಇವರು ಪ್ರತಿ ಚಿತ್ರಕ್ಕೂ ಹೆಚ್ಚು ಗಾಢವಾದ ಬಣ್ಣಗಳನ್ನು ಉಪಯೋಗಿಸಿದ್ದಾರೆ.

ಅಮೊಲ್‌ ಪವಾರ್‌ ಅವರ ಕಲಾಕೃತಿಗಳಲ್ಲಿ ಮರಗಿಡಗಳು, ಹೂ, ಎಲೆ,  ಅನೇಕ ಬಗೆಯ ಪ್ರತೀಕಗಳು ಎದ್ದು ಕಾಣುತ್ತವೆ. ಚಿನ್ನದ ಬಣ್ಣದಿಂದ ಸಿಂಗರಿಸಿದಂತೆ ಕಾಣುವ ಕ್ಯಾನ್‌ವಾಸ್ ಹೆಚ್ಚು ಆಕರ್ಷಣೀಯವಾಗಿದೆ. ಫ್ರೇಮ್‌ನಲ್ಲಿರುವ ಕಲಾಕೃತಿಗಳನ್ನು ಗಮನಿಸಿ ನೋಡಿದಾಗ ಮಾತ್ರ ಆಂತರ್ಯ ಅರ್ಥವಾಗುತ್ತದೆ.

ದೇಶ ಸುತ್ತಬೇಕು, ಕೋಶ ಓದಬೇಕು ಎಂಬುದು ಸತ್ಯ. ಉತ್ತರ ಕರ್ನಾಟಕದ ಚಿಕ್ಕ ಹಳ್ಳಿಯಿಂದ ಬಂದಿರುವ ಕೆ.ಹಿರೇಮಠ್‌ ಅವರಿಗೆ ಊರೂರು ಸುತ್ತುವ ಹವ್ಯಾಸ. ಸುತ್ತುವಾಗ ತಮ್ಮ ಕಣ್ಣಿಗೆ ಬಿದ್ದ ದೇಗುಲಗಳು, ಸಾಧುಗಳನ್ನು, ಗೋಪುರಗಳನ್ನು ಕ್ಯಾನ್‌ವಾಸ್‌ ಮೇಲೆ ಹಿಡಿದಿಟ್ಟಿದ್ದಾರೆ. ಹತ್ತಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. 

ಕಲಾವಿದರು:  ಕೆ.ಹಿರೇಮಠ್, ಸಿದ್ಧಾರ್ಥ್‌ ಶಿಂಗಡೆ, ಸಚಿನ್ ಸಗಾರೆ, ಸಚಿನ್ ಖಾರತ್‌, ಅಮೊಲ್ ಪವಾರ್‌, ಆಂಡ್ರ್ಯೂ ಪಾಲ್
ಪ್ರಕಾರ: ಮಿಶ್ರ ಮಾಧ್ಯಮ
ಕಲಾಕೃತಿ ಪರಿಚಯ: ಪ್ರಕೃತಿಯ ಸೊಬಗು ಪ್ರತಿಬಿಂಬಿಸುವ ನೀರಿನ ಬಿಂಬ, ಹಳ್ಳಿಯ ಸೊಬಗು, ಗುಡಿ ಗೋಪುರ, ನದಿ, ಕಲ್ಯಾಣಿ ಕಲರವ.  ಬೀದಿಬದಿ ಸಂತೆಯ ವಹಿವಾಟು ಕೆಲವರ ಕಲಾಕೃತಿಗಳು ಮೈದಳೆದಿವೆ. ಕುದುರೆ, ಬಸವಣ್ಣನ ದೇಹದಲ್ಲಿ ದೇವರನ್ನು ವೈಭವೀಕರಿಸುವ ಚಿತ್ರಗಳೂ ಇಲ್ಲಿವೆ.
ಸ್ಥಳ: ನವರತ್ನ ಗ್ಯಾಲರಿ 9,
ಸಮಯ: ಬೆಳಿಗ್ಗೆ 10ರಿಂದ ಸಂಜೆ 7.
ದಿನಾಂಕ: ನ. 27ರವರೆಗೆ
ಇ–ಮೇಲ್: amulya@pepperpr.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT