ಗುರುವಾರ , ಡಿಸೆಂಬರ್ 5, 2019
19 °C
ವ್ಯಕ್ತಿ ಸ್ಮರಣೆ

ಮಾನವೀಯ ಗುಣದ ವಿಜ್ಞಾನಿ ಮೆನನ್‌

Published:
Updated:
ಮಾನವೀಯ ಗುಣದ ವಿಜ್ಞಾನಿ  ಮೆನನ್‌

-ಪ್ರೊ. ಯು.ಆರ್‌.ರಾವ್‌

 

*

ಮಾಂಬಿಲ್ಲಿಕಾಲತ್ತಿಲ್‌ ಗೋವಿಂದ ಕುಮಾರ್‌ ಮೆನನ್‌ ಅಥವಾ ಎಂ.ಜಿ.ಕೆ.ಮೆನನ್‌ ದೇಶ ಕಂಡ ಅತ್ಯಂತ ಮಹತ್ವದ, ಅಪರೂಪದ ವಿಜ್ಞಾನಿ. ಅವರು ಹುಟ್ಟಿದ್ದು ಮಂಗಳೂರಿನಲ್ಲಿ (1928)  ಎಂಬ ಸಂಗತಿ ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆ.  ಮೆನನ್‌ ಕೆಜಿಎಫ್‌ನ ಚಿನ್ನದ ಗಣಿಯ ಆಳದಲ್ಲಿ  ಕಾಸ್ಮಿಕ್‌ ಕಿರಣಗಳ ಕುರಿತು ಸಂಶೋಧನೆ ನಡೆಸಿದ್ದರು. ಇವಿಷ್ಟು ಕರ್ನಾಟಕದ ಜತೆಗಿನ ಅವರ ನಂಟು.

 

1971ರಲ್ಲಿ ಬಾಹ್ಯಾಕಾಶ ವಿಜ್ಞಾನಿ ವಿಕ್ರಂ ಸಾರಾಭಾಯಿ ನಿಧನರಾದರು. ಮತ್ತೊಬ್ಬ ಹಿರಿಯ ವಿಜ್ಞಾನಿ ಸತೀಶ್‌ ಧವನ್‌ ಅವರು ಆ ಸಂದರ್ಭದಲ್ಲಿ ಕ್ಯಾಲಿಫೋರ್ನಿಯಾಗೆ ಅತಿಥಿ ಉಪನ್ಯಾಸಕರಾಗಿ ಹೋಗಿದ್ದರು. ಹೀಗಾಗಿ, ಇಸ್ರೊ ಅಧ್ಯಕ್ಷ ಹುದ್ದೆಗೆ ಏರಬೇಕಾಗಿದ್ದ   ಧವನ್‌ ಅವರ ಬದಲಿಗೆ ಮೆನನ್‌ ಅವರೇ ಹಂಗಾಮಿಯಾಗಿ ಆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಯಿತು. ಇದರಿಂದ ಇಸ್ರೊದ ಮೊದಲ ಅಧಿಕೃತ ಅಧ್ಯಕ್ಷ ಮೆನನ್‌ ಅವರೆ. ಇದಕ್ಕೆ ಮುನ್ನ ಬಾಹ್ಯಾಕಾಶ ವಿಜ್ಞಾನವು ಪರಮಾಣು ಇಲಾಖೆಯ ಜೊತೆಗೆ ಸೇರಿಕೊಂಡಿತ್ತು. ಹೋಮಿ ಭಾಭಾ ನಿರ್ದೇಶನದ ಮೇರೆಗೆ ಬಾಹ್ಯಾಕಾಶ ವಿಜ್ಞಾನ ಪ್ರತ್ಯೇಕ ಅಸ್ತಿತ್ವ ಪಡೆಯಿತು.   

 

ಮೆನನ್‌ ಅವರ ಪರಿಚಯ ನನಗೆ ಆಗಿದ್ದು ಇದೇ ಸಂದರ್ಭದಲ್ಲಿ. ಆಗ ‘ಆರ್ಯಭಟ’ ಉಪಗ್ರಹದ ತಯಾರಿಕೆಯಲ್ಲಿ ನಾನು ತೊಡಗಿದ್ದೆ.  ಉಪಗ್ರಹದ ನಿರ್ಮಾಣ ಮತ್ತು ಅದರ ಉಡಾವಣೆಗೆ ಸಂಬಂಧಿಸಿದಂತೆ ಚರ್ಚೆಗೆ ಮೆನನ್‌ ಬಳಿ ಆಗಾಗ್ಗೆ ಹೋಗಿ ಬರಬೇಕಾಗುತ್ತಿತ್ತು. ಚೊಚ್ಚಲ ಉಪಗ್ರಹದ ಉಡಾವಣೆಗಾಗಿ ರಷ್ಯಾ  ಜೊತೆ ಒಪ್ಪಂದ  ಆಗಿದ್ದು  ಕೂಡ ಮೆನನ್‌ ಅಧ್ಯಕ್ಷರಾಗಿದ್ದಾಗಲೆ. ಭಾರತದ ಜೊತೆ ಸ್ನೇಹ ಹೊಂದಿದ್ದ ಸೋವಿಯತ್‌ ರಷ್ಯಾ ‘ಆರ್ಯಭಟ’ ಉಡಾವಣೆಗೆ ಮುಂದಾಯಿತು. ಉಚಿತವಾಗಿ ಉಡಾವಣೆ ಮಾಡಿಕೊಡುವುದಾಗಿಯೂ ಹೇಳಿತು. ನಾವು ಉಡಾವಣೆಗಾಗಿ ಅಮೆರಿಕದತ್ತ ಹೋಗಬಹುದು ಎಂಬ ಕಾರಣಕ್ಕೆ ರಷ್ಯಾ ಉಚಿತ ಉಡಾವಣೆಗೆ ಪ್ರಸ್ತಾವ ಮುಂದಿಟ್ಟಿತ್ತು. ಅದು ಅಮೆರಿಕ ಮತ್ತು ಸೋವಿಯತ್‌ ರಷ್ಯಾದ ಶೀತಲ ಸಮರದ ಕಾಲ.

 

‘ಆರ್ಯಭಟ’ ಉಪಗ್ರಹ ತಯಾರಿಕೆಗೆ ಪೂರ್ವಭಾವಿ ಕೆಲಸ ನಡೆಯುತ್ತಿದ್ದಾಗ ಒಂದು ದಿನ ಮೆನನ್‌ ಅವರು ಬಂದು ‘ತಯಾರಿ ಹೇಗೆ ನಡೆಯುತ್ತಿದೆ’ ಎಂದು ಪ್ರಶ್ನಿಸಿದರು. ‘ಅತ್ಯುತ್ತಮವಾಗಿ ನಡೆಯುತ್ತಿದೆ ಸರ್‌’ ಎಂದೆ. ‘ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಭೇಟಿ ಮಾಡಿ ಬರುತ್ತೇನೆ’ ಎಂದರು. ಆ ಬಳಿಕ ಒಂದು ದಿನ ಬಂದು ‘ಶ್ರೀಮತಿ ಇಂದಿರಾ ಗಾಂಧಿ ನಿಮ್ಮ ಜೊತೆ ಮಾತನಾಡಲು ಬಯಸಿದ್ದಾರೆ’ ಎಂದರು. ಇಂದಿರಾ ಗಾಂಧಿ ಅವರ ಬಳಿ ಹೋದಾಗ ‘ಉಪಗ್ರಹಗಳ ನಿರ್ಮಾಣ ಮತ್ತು ರಷ್ಯಾಗೆ ಸಾಗಣೆ ಸೇರಿ ಎಷ್ಟು ಖರ್ಚು ವೆಚ್ಚವಾಗುತ್ತದೆ’ ಎಂದು ಪ್ರಶ್ನಿಸಿದರು. ‘₹ 3 ಕೋಟಿ ಬೇಕಾಗುತ್ತದೆ’ಎಂದು ಹೇಳಿದೆ. ‘ವೆರಿ ನೈಸ್‌’ ಎಂದ ಇಂದಿರಾ ಗಾಂಧಿ, ರಷ್ಯಾ ಜೊತೆ ಒಪ್ಪಂದಕ್ಕೆ ಒಪ್ಪಿಗೆ ಸೂಚಿಸಿದರು. ಇದರಿಂದ ಮೆನನ್‌ ಅಚ್ಚರಿಗೊಂಡಿದ್ದು ಮಾತ್ರವಲ್ಲದೆ, ಸಂತಸವನ್ನೂ ಪಟ್ಟಿದ್ದರು.

 

ಹೊಸ ಉಪಗ್ರಹ ಕೇಂದ್ರವನ್ನು ಎಲ್ಲಿ ಸ್ಥಾಪಿಸಬಹುದು ಎಂದು ಮೆನನ್‌ ನನ್ನಲ್ಲಿ ಕೇಳಿದ್ದರು. ಸಹಜವಾಗಿ ಅಹಮದಾಬಾದ್‌ ಅಥವಾ  ಹೈದರಾಬಾದ್‌ ಎಂದು ಸೂಚಿಸಿದ್ದೆ. ಏಕೆಂದರೆ ಅಲ್ಲಿ, ಭೌತ ವಿಜ್ಞಾನ ಸಂಶೋಧನಾ ಸಂಸ್ಥೆಗಳು ಇದ್ದವು. ‘ಬೆಂಗಳೂರು ನೋಡಿಕೊಂಡು ಬನ್ನಿ’ ಎಂದರು. ಅಲ್ಲಿಯವರೆಗೆ ನಾನು ಬೆಂಗಳೂರಿಗೆ ಹೆಚ್ಚಿಗೆ ಬಂದಿರಲಿಲ್ಲ. ಬೆಂಗಳೂರಿಗೆ ಬಂದು ಆಗಿನ ಮುಖ್ಯಮಂತ್ರಿ ದೇವರಾಜ ಅರಸು, ಮುಖ್ಯ ಕಾರ್ಯದರ್ಶಿ ಮತ್ತು ಇತರ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಿದೆ. ಪೀಣ್ಯದಲ್ಲಿ ಷೆಡ್‌ಗಳನ್ನು ನೀಡಿದರು. ಅಲ್ಲೇ ಉಪಗ್ರಹಗಳ ನಿರ್ಮಾಣ ಆರಂಭಗೊಂಡಿತು. ಬಾಹ್ಯಾಕಾಶ ವಿಜ್ಞಾನಕ್ಕೆ ಸಂಬಂಧಿಸಿದ ಯಾವುದೇ ವಿಷಯವಾಗಿದ್ದರೂ ಸರಿ ಸಾರಾಭಾಯಿ ಮತ್ತು ಮೆನನ್‌ ಮಧ್ಯೆ ನಾನು ಕೊಂಡಿಯಾಗಿ ಕೆಲಸ ಮಾಡುತ್ತಿದ್ದೆ. ಪರಸ್ಪರರು ಸೂಕ್ಷ್ಮ ಎನಿಸಿದ ಯಾವುದೇ ವಿಷಯ ತಿಳಿದುಕೊಳ್ಳಲು ನನ್ನ ಮೂಲಕವೇ ವ್ಯವಹರಿಸುತ್ತಿದ್ದರು ಎಂಬುದು ಇನ್ನೂ ನನ್ನ ಮನಃಪಟಲದಲ್ಲಿ ಇದೆ.

 

ಅತ್ಯಂತ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಮೆನನ್‌ ಅವರು ವಿಜ್ಞಾನ ಕ್ಷೇತ್ರದಲ್ಲಿ ದೇಶಕ್ಕೆ ನೀಡಿದ ಕೊಡುಗೆ ಅಪಾರ. 

 

ಯು.ಕೆ.ಯ ಬ್ರಿಸ್ಟಲ್‌ ವಿಶ್ವವಿದ್ಯಾಲಯದಲ್ಲಿ ಅತ್ಯಂತ ಸಣ್ಣ ವಯಸ್ಸಿನಲ್ಲಿ, ಅಂದರೆ 25ನೇ ವಯಸ್ಸಿನಲ್ಲೇ ಪಿಎಚ್‌.ಡಿ (1953) ಮಾಡಿದ್ದರು. ನೊಬೆಲ್‌ ಪುರಸ್ಕೃತ ವಿಜ್ಞಾನಿ ಸಿ.ಎಫ್‌.ಪಾವೆಲ್‌ ಅವರ ಜೊತೆ ಕೆಲಸ ಮಾಡಿ ಭಾರತದ ಟಾಟಾ ಫಂಡಮೆಂಟಲ್‌ ರಿಸರ್ಚ್‌ ಸಂಸ್ಥೆಯಲ್ಲಿ ಪ್ರೊಫೆಸರ್‌ ಆಗಿ (1955) ಸೇರಿಕೊಂಡರು. ಬಲೂನ್‌ಗಳನ್ನು ಬಳಸಿ ಕಾಸ್ಮಿಕ್‌ ಕಿರಣಗಳು ಮತ್ತು ಕಣಗಳ ಕುರಿತು ಸಂಶೋಧನೆಗಳನ್ನು ನಡೆಸಿದ್ದರು.

 

ಟಾಟಾ ಫಂಡಮೆಂಟಲ್‌ ರಿಸರ್ಚ್‌ ಅಧ್ಯಕ್ಷ ಹೋಮಿ ಭಾಭಾ ನಿಧನರಾದ ಬಳಿಕ ಅದರ ನಿರ್ದೇಶಕರಾದರು. ಆಗಷ್ಟೇ ಸ್ಥಾಪನೆಗೊಂಡ ಎಲೆಕ್ಟ್ರಾನಿಕ್‌ ಕಮಿಷನ್‌ಗೂ ಮುಖ್ಯಸ್ಥರಾದರು. ಈ ಮೂಲಕ ಕಂಪ್ಯೂಟರನ್ನು  ಭಾರತಕ್ಕೆ ತರಿಸಲು ನಾಂದಿ ಹಾಡಿದ್ದೂ ಮೆನನ್‌ ಅವರೆ.

 

ಇಸ್ರೊದಲ್ಲಿ ಮೂರು ತಿಂಗಳು ಕೆಲಸ ಮಾಡಿದ್ದರೂ ಅವರು ಬಿಟ್ಟು ಹೋದ ಪರಂಪರೆ ಈಗಲೂ ಸಂಸ್ಥೆಯಲ್ಲಿ ಜೀವಂತ ಇದೆ. ಅದೇನೆಂದರೆ ತಂಡ ಸ್ಫೂರ್ತಿಯಿಂದ ಕೆಲಸ ಮಾಡುವುದು. ಯಾವುದೇ  ಮಹತ್ವದ ಸಭೆ ಇದ್ದರೂ, ಅದರಲ್ಲಿ ಎಷ್ಟು ದೊಡ್ಡ ವಿಜ್ಞಾನಿಗಳು ಇದ್ದರೂ ಸರಿ, ಅತ್ಯಂತ ಕಿರಿಯ ವಿಜ್ಞಾನಿ ಅಥವಾ ತಂತ್ರಜ್ಞರು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ಹೇಳಿಕೊಳ್ಳಬಹುದಾಗಿತ್ತು. ಸ್ವತಃ ಇಸ್ರೊ ಅಧ್ಯಕ್ಷರೇ ಹೇಳಿದ ವಿಷಯ ಸರಿ ಇಲ್ಲ ಎಂದು ಅನಿಸಿದರೆ ‘ಸರಿ ಇಲ್ಲ’ ಎಂದು ಹೇಳುವ ಸ್ವಾತಂತ್ರ್ಯ ನೀಡಿದ್ದರು. ಅಷ್ಟೇ ಅಲ್ಲ, ಯಾವುದೇ ಯೋಜನೆ ವಿಫಲ ಆದರೆ ಅದರ ಜವಾಬ್ದಾರಿಯನ್ನು ಸ್ವತಃ ಅಧ್ಯಕ್ಷರೇ ಹೊರುವ ಮತ್ತು  ಯಶಸ್ಸಿನ ಕೀರ್ತಿಯನ್ನು ಇಡೀ ತಂಡಕ್ಕೆ ನೀಡುವ ಪರಿಪಾಠ ಇವರಿಂದಲೇ ಆರಂಭಗೊಂಡಿತು. ಇಸ್ರೊದಲ್ಲಿ ಈಗಲೂ ಅದನ್ನು ಕಾಣಬಹುದು.

 

1978ರಲ್ಲಿ ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ, ಸಿಎಸ್‌ಐಆರ್‌ನ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಪರಿಸರ ಇಲಾಖೆ ಕಾರ್ಯದರ್ಶಿಯಾಗಿ ಕೇರಳದ ‘ಸೈಲೆಂಟ್‌ ವ್ಯಾಲಿ’ಯನ್ನು ಉಳಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ಯೋಜನಾ  ಆಯೋಗದಲ್ಲಿ ಸದಸ್ಯರಾಗಿದ್ದರು. ರಾಜೀವ್‌ ಗಾಂಧಿ ಪ್ರಧಾನಿ ಆಗಿದ್ದಾಗ ಅವರಿಗೆ ಮೂರು ವರ್ಷಗಳ ಕಾಲ ವೈಜ್ಞಾನಿಕ ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದರು. ವಿ.ಪಿ.ಸಿಂಗ್‌ ಪ್ರಧಾನಿ ಆಗಿದ್ದಾಗ ಅವರ ಸರ್ಕಾರದಲ್ಲಿ ವಿಜ್ಞಾನ ಖಾತೆಯ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 1990ರಿಂದ 1996ರವರೆಗೆ  ರಾಜ್ಯಸಭೆ ಸದಸ್ಯರಾಗಿದ್ದರು. ಭಾರತೀಯ ವಿಜ್ಞಾನ ಅಕಾಡೆಮಿ ಮತ್ತು ಬ್ರಿಟನ್‌ ರಾಯಲ್‌ ಸೊಸೈಟಿಯ ಫೆಲೋ ಆಗಿದ್ದರು.

 

ಕಳೆದ ಎರಡು ವರ್ಷಗಳಲ್ಲಿ ಅವರನ್ನು ಭೇಟಿ ಆಗಲು ಸಾಧ್ಯವಾಗಿರಲಿಲ್ಲ. ಗುಜರಾತಿ ಮಹಿಳೆಯನ್ನು ವಿವಾಹವಾಗಿದ್ದರು. ಮೆನನ್ ಅವರಿಗೆ ಸಂಗೀತ ಆಲಿಸುವುದೆಂದರೆ ತುಂಬಾ ಸಂತಸದ ವಿಷಯವಾಗಿತ್ತು. ಯುವ ವಿಜ್ಞಾನಿಗಳನ್ನು ಬೆಳೆಸುವ ವಿಶಾಲ ಹೃದಯ ಅವರದಾಗಿತ್ತು. ಭಾರತದ ವಿಜ್ಞಾನ ಮತ್ತು ತಂತ್ರಜ್ಞಾನ, ರಕ್ಷಣೆ, ಎಲೆಕ್ಟ್ರಾನಿಕ್ಸ್‌  ಕ್ಷೇತ್ರದ ಬೆಳವಣಿಗೆಯ ಅಡಿಪಾಯ ಹಾಕಿದವರಲ್ಲಿ ಇವರೂ ಒಬ್ಬರು. ಉತ್ಕೃಷ್ಟ ಮಾನವೀಯ ಗುಣ ಹೊಂದಿದ್ದ ವಿಜ್ಞಾನಿ.
ಪ್ರತಿಕ್ರಿಯಿಸಿ (+)