7

ಕಾಂಗರೂ... ಪ್ರಕೃತಿ ಹರಸಿದ ದ್ವೀಪ

Published:
Updated:
ಕಾಂಗರೂ... ಪ್ರಕೃತಿ ಹರಸಿದ ದ್ವೀಪ

ಆಸ್ಟ್ರೇಲಿಯಾದ ಅಡಿಲೇಡ್‌ನಲ್ಲಿ ನಾವು ತಂಗಿದ್ದ ‘ಕ್ರೌನ್ ಪ್ಲಾಜಾ’ ಹೋಟೆಲ್‌ನಿಂದ ಬೆಳಿಗ್ಗೆ 6.30ಕ್ಕೆ ಬಸ್‌ ಏರಿದೆವು. ನಗರದ ಎರಡು ಮೂರು ಕಡೆ ಪ್ರವಾಸಿಗರನ್ನು ಹತ್ತಿಸಿಕೊಂಡ ಬಸ್‌ ಸುಮಾರು ಎರಡು ಗಂಟೆಗಳ ಪ್ರಯಾಣದ ಬಳಿಕ ಕೇಪ್ ಜೆರ್ವಿಸ್‌ ಎಂಬಲ್ಲಿಗೆ ತಲುಪಿತು. ಅಡಿಲೇಡ್‌ನಿಂದ 110 ಕಿ.ಮೀ.ನಷ್ಟು ದಕ್ಷಿಣಕ್ಕಿರುವ ಕೇಪ್ ಜೆರ್ವಿಸ್‌ನಲ್ಲಿ ಪುಟ್ಟ ಬಂದರು ಇದೆ.ಬಂದರಿನಲ್ಲಿ ನಿಂತಿದ್ದ ಸೀ ಲಿಂಕ್ ಫೆರಿ (ಪುಟ್ಟ ಹಡಗು) ಏರಿದೆವು. 100ಕ್ಕೂ ಹೆಚ್ಚು ಪ್ರವಾಸಿಗರನ್ನು ಹೊತ್ತುಕೊಂಡ ‘ಫೆರಿ’ ಕಾಂಗರೂ ದ್ವೀಪದೆಡೆಗೆ ಪ್ರಯಾಣ ಆರಂಭಿಸಿತು.ನೀಲ ಸಾಗರದಲ್ಲಿ ಬಿಳಿಯ ನೊರೆ ಎಬ್ಬಿಸುತ್ತಾ ಒಂದು ಗಂಟೆಯಲ್ಲಿ ಕಾಂಗರೂ ದ್ವೀಪದ ಪೆನೆಶಾ ತಲುಪಿತು. ಕೇಪ್ ಜೆರ್ವಿಸ್‌ನಿಂದ ಪೆನೆಶಾ ತಲುಪಲು 10 ನಾಟಿಕಲ್ ಮೈಲು (18.5 ಕಿ.ಮೀ.) ಕ್ರಮಿಸಬೇಕು.ಫೆರಿಯಲ್ಲಿ ಬಂದಿಳಿದ ಪ್ರವಾಸಿಗರನ್ನು ದ್ವೀಪದಲ್ಲಿ ಸುತ್ತಾಡಿಸಲು ಟ್ರಾವೆಲ್ ಏಜೆನ್ಸಿಗಳ ಬಸ್ಸು–ಕಾರುಗಳು ಕಾಯುತ್ತಿದ್ದವು. ‘ಕಾಂಗರೂ ಐಲ್ಯಾಂಡ್‌ ಒಡಿಸ್ಸೀಸ್‌ ಟೂರ್ಸ್‌’ ಏಜೆನ್ಸಿಯ ಡ್ರೈವರ್ ಕಮ್ ಗೈಡ್ ಆಗಿದ್ದ ವಿಕಿ ನಮ್ಮನ್ನು ಸ್ವಾಗತಿಸಿ ದ್ವೀಪದ ಕಿರು ಪರಿಚಯ ಮಾಡಿಕೊಟ್ಟರು. ಲ್ಯಾಂಡ್ ಕ್ರೂಸರ್ ಕಾರಿನಲ್ಲಿ ಬೆಳಿಗ್ಗೆ10.30 ರ ಸುಮಾರಿಗೆ ದ್ವೀಪದಲ್ಲಿ ನಮ್ಮ ಪಯಣ ಆರಂಭವಾಯಿತು. ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರನ್ನು ಐಷಾರಾಮಿ ಕಾರುಗಳು ಮತ್ತು ಬಸ್ಸುಗಳಲ್ಲಿ ಮಾತ್ರ ಕರೆದೊಯ್ಯುವರು.ಆಸ್ಟ್ರೇಲಿಯಾ ಖಂಡ ಈ ಭೂಮಿ ಮೇಲಿನ ಅದ್ಭುತಗಳಲ್ಲೊಂದು. ಅದರಲ್ಲೂ ಕಾಂಗರೂ ದ್ವೀಪ ಪ್ರಕೃತಿಯ ಸೊಬಗಿನಿಂದ ಕಂಗೊಳಿಸುತ್ತಿದೆ. ಹೆಸರೇ ಹೇಳುವಂತೆ ಇಲ್ಲಿ ಕಾಂಗರೂಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬ್ರಿಟನ್‌ನ ನಾವಿಕ ಮ್ಯಾಥ್ಯೂ ಫ್ಲಿಂಡರ್ಸ್‌ 1802ರ ಮಾರ್ಚ್‌ 23ರಂದು ಈ ದ್ವೀಪ ಕಂಡುಹಿಡಿದ. ಇಲ್ಲಿ ಭಾರಿ ಸಂಖ್ಯೆಯಲ್ಲಿ ಕಾಂಗರೂಗಳನ್ನು ಕಂಡು ‘ಕಾಂಗರೂ ದ್ವೀಪ’ ಎಂಬ ಹೆಸರು ಇಟ್ಟಿದ್ದಾನೆ.ಮೆಲ್ಬರ್ನ್‌ ಮತ್ತು ಅಡಿಲೇಡ್‌ನ ಮೃಗಾಲಯಗಳಲ್ಲಿ ಕಾಂಗರೂಗಳನ್ನು ನೋಡಿದ್ದ ನಮಗೆ ಇಲ್ಲಿ ಪ್ರಕೃತಿಯ ನಡುವೆ ಸ್ವಚ್ಛಂದವಾಗಿ ವಿಹರಿಸುವ ‘ಕಾಡು ಕಾಂಗರೂ' ಗಳು ಕಂಡವು. ನಾಲ್ಕೈದು ಕಡೆ ಕಾಂಗರೂ ಹಾಗೂ ವಾಲಬಿಗಳು (ವಾಲಬಿಗಳು ಕಾಂಗರೂ ಜಾತಿಗೆ ಸೇರಿರುವ ಪ್ರಾಣಿ) ರಸ್ತೆಬದಿ ಸತ್ತುಬಿದ್ದಿದ್ದವು. ‘ವಾಹನಗಳಡಿ ಸಿಲುಕಿ ಕಾಂಗರೂಗಳು ಸಾಯುವುದು ಇಲ್ಲಿ ಸಾಮಾನ್ಯ’ ಎಂದು ಗೈಡ್ ಹೇಳಿದರು.ಗಂಟೆಗೆ 130 ಕಿ.ಮೀ. ವೇಗದಲ್ಲಿ ಗಾಡಿ ಓಡಿಸುತ್ತಿದ್ದ ವಿಕಿ ಇದ್ದಕ್ಕಿದ್ದಂತೆ ಬ್ರೇಕ್‌ ಹಾಕಿ ಕಾರನ್ನು ನಿಲ್ಲಿಸಿದರು. ರಸ್ತೆಬದಿಯಲ್ಲಿ ‘ಇಕಿಂಡಾ’ ಎಂಬ ಪ್ರಾಣಿ ಕಣ್ಣಿಗೆ ಬಿದ್ದದ್ದು ಅದಕ್ಕೆ ಕಾರಣ. ಮುಳ್ಳುಹಂದಿಯನ್ನು ಹೋಲುವ ಈ ಪ್ರಾಣಿಯ ಫೋಟೋ ಕ್ಲಿಕ್ಕಿಸಿ ಪ್ರಯಾಣ ಮುಂದುವರಿಸಿದೆವು.ಸೀಲ್‌ ಬೇ ಕನ್ಸರ್ವೇಶನ್‌ ಪಾರ್ಕ್‌

ಪೆನೆಶಾದಿಂದ ಪ್ರಕೃತಿಯ ಸೊಬಗು ಸವಿಯುತ್ತಾ ಸುಮಾರು 100 ಕಿ.ಮೀ. ಕ್ರಮಿಸಿ ‘ಸೀಲ್‌ ಬೇ ಕನ್ಸರ್ವೇಶನ್‌ ಪಾರ್ಕ್‌’ ತಲುಪಿದೆವು. ಇಲ್ಲಿನ ಸಮುದ್ರತೀರದಲ್ಲಿ ಆಸ್ಟ್ರೇಲಿಯನ್ ಸೀ ಲಯನ್‌ಗಳು ಇದ್ದವು. ಬೊಜ್ಜು ದೇಹದ ಈ ಸಮುದ್ರಜೀವಿಯನ್ನು ತೀರಾ ಸಮೀಪದಿಂದ ನೋಡಿದೆವು. ಕೆಲವು ನೀರಿನಿಂದ ಮೇಲೆದ್ದು ತೀರದತ್ತ ಬರುತ್ತಿದ್ದರೆ, ಮತ್ತೆ ಕೆಲವು ನಿಧಾನವಾಗಿ ನೀರಿನತ್ತ ಸಾಗುತ್ತಿದ್ದವು.ಮೂರು ದಿನ ಸಮುದ್ರದಲ್ಲಿ ವಿಹರಿಸಿ ಹೊಟ್ಟೆ ತುಂಬಿಸಿಕೊಳ್ಳುವ ಸೀ ಲಯನ್‌ಗಳು ಆ ಬಳಿಕ ದಡಕ್ಕೆ ಬಂದು ಮೂರು ದಿನ ವಿಶ್ರಾಂತಿ ಪಡೆಯುತ್ತವೆ. ಕೆಲವು ಸೀ ಲಯನ್‌ಗಳು ಸಮುದ್ರ ತೀರದಿಂದ ಸುಮಾರು 100 ಮೀ. ನಷ್ಟು ಮೇಲೆ ಬಂದು ಪೊದೆಗಳ ನಡುವೆ ಮಲಗಿದ್ದವು.ಇವು ಮನುಷ್ಯರ ಮೇಲೆ ಆಕ್ರಮಣ ನಡೆಸುವ ಸಾಧ್ಯತೆ ಕಡಿಮೆ. ಆದರೆ ಒಬ್ಬಂಟಿಯಾಗಿ ಕಂಡರೆ ಕೆಲವೊಮ್ಮೆ ಓಡಿಸಿಕೊಂಡು ಬರುತ್ತವೆ. ಇದರಿಂದ ಗುಂಪಾಗಿ ಇರುವಂತೆ ಗೈಡ್ ನಮಗೆ ಸೂಚಿಸಿದರು. ಉದ್ದ ಮೀಸೆಯ ಈ ಜೀವಿ ತೆವಳುತ್ತಾ ಸಾಗುವುದನ್ನು ನೋಡುವಾಗ ಮೈಜುಮ್ಮೆನ್ನುತ್ತದೆ.ಫ್ಲಿಂಡರ್ಸ್‌ ಚೇಸ್ ನ್ಯಾಷನಲ್ ಪಾರ್ಕ್‌

ಕಾಂಗರೂ ದ್ವೀಪದಲ್ಲಿ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಸೆಳೆಯುವ ಮತ್ತೊಂದು ತಾಣ ‘ಫ್ಲಿಂಡರ್ಸ್ ಚೇಸ್ ನ್ಯಾಷನಲ್ ಪಾರ್ಕ್‌’. ಇಲ್ಲಿ ವಿಚಿತ್ರ ಆಕಾರ ಹೊಂದಿರುವ ಹಲವು ದೈತ್ಯ ಕಲ್ಲುಗಳು ಬೆರಗು ಹುಟ್ಟಿಸುತ್ತವೆ.‘ಅಡ್ಮಿರಲ್ಸ್ ಆರ್ಚ್‌’ ಎಂಬ ಸುಂದರ ಕಮಾನು ಇಲ್ಲಿದೆ. ಈ ಕಮಾನಿನ ಮೂಲಕ ನೀಲ ಸಾಗರದತ್ತ ದೃಷ್ಟಿ ಹಾಯಿಸಿದಾಗ ಮನಸ್ಸು ಪುಳಕಗೊಳ್ಳುತ್ತದೆ. ಸಮುದ್ರ ತೀರದಲ್ಲಿದ್ದ ಬಂಡೆಗಳ ಮೇಲೆ ನ್ಯೂಜಿಲೆಂಡ್ ಫರ್ ಸೀಲ್‌ಗಳು ಮಲಗಿದ್ದವು.‘ಅಡ್ಮಿರಲ್ಸ್ ಆರ್ಚ್‌’ನಿಂದ ಕೆಲವು ಕಿ.ಮೀ. ದೂರದಲ್ಲಿ ‘ರಿಮಾರ್ಕೆಬಲ್‌ ರಾಕ್ಸ್’ ಇದೆ. ಹಲವು ಸಾವಿರ ವರ್ಷಗಳಿಂದ ಸಮುದ್ರದ ಅಲೆಗಳು, ಗಾಳಿ, ಬಿಸಿಲು ಮತ್ತು ಮಳೆಯ ಹೊಡೆತಕ್ಕೆ ಸಿಲುಕಿ ಸುಂದರ ರೂಪ ಪಡೆದ ಕಲ್ಲುಗಳು ಇವು. ಹಸಿವಾದಾಗ ಏನಾದರೂ ತಿನ್ನೋಣವೆಂದರೆ ಈ ದ್ವೀಪದಲ್ಲಿ ರಸ್ತೆಬದಿ ಹೋಟೆಲ್ ಅಥವಾ ರೆಸ್ಟೋರೆಂಟ್ ಇಲ್ಲ.ಗೈಡ್‌ಗಳು ಆಹಾರವನ್ನು ವಾಹನದಲ್ಲೇ ತುಂಬಿಸಿಕೊಂಡು ಬರುತ್ತಾರೆ. ನೀಲಗಿರಿ ಮರಗಳ ನಡುವೆ ಹಾಕಿದ್ದ ಟೆಂಟ್‌ನಲ್ಲಿ ಕುಳಿತು ಮಧ್ಯಾಹ್ನದ ಊಟ ಸವಿದೆವು. ಅಲ್ಲಿನ ಮರಗಳಲ್ಲಿ ನಾಲ್ಕೈದು ಕೋಲಾಗಳು ನಿದ್ರಿಸುತ್ತಿದ್ದವು. ಈ ದ್ವೀಪದಲ್ಲಿ ದೊಡ್ಡ ಗಾತ್ರದ ಮರಗಳು ಇಲ್ಲ. ಎಲ್ಲಿ ನೋಡಿದರೂ ಸಾಲು ಸಾಲು ನೀಲಗಿರಿ ಮರಗಳು.ಕಾಂಗರೂ ಜೊತೆ ಕಾಫಿ!

ದ್ವೀಪದ ಸೌಂದರ್ಯವನ್ನು ಸವಿದು ವಾಪಾಸಾಗುವ ವೇಳೆ ಸಂಜೆಯಾಗಿತ್ತು. ‘ಕಾಂಗರೂಗಳ ಜತೆ ಕಾಫಿ ಕುಡಿಯೋಣ’ ಎಂದ ಗೈಡ್ ಕಾರನ್ನು ಮುಖ್ಯರಸ್ತೆಯಿಂದ ಕಚ್ಚಾರಸ್ತೆಯತ್ತ ತಿರುಗಿಸಿದರು. ಒಂದೆರಡು ಕಿ.ಮೀ. ಕ್ರಮಿಸಿದಾಗ ವಿಶಾಲ ಹುಲ್ಲುಗಾವಲು ಕಾಣಿಸಿತು. ಅಲ್ಲಿ 20-30 ಕಾಂಗರೂಗಳು ಹುಲ್ಲು ಮೇಯುತ್ತಿದ್ದವು. ಕೆಲವು ನಮ್ಮನ್ನೇ ದಿಟ್ಟಿಸಿದವು. ಮರಿ ಕಾಂಗರೂಗಳು ಕುಪ್ಪಳಿಸುತ್ತಿದ್ದವು. ಮನುಷ್ಯರು ತೀರಾ ಸನಿಹ ಬಂದರೆ ಕಾಂಗರೂಗಳು ಓಡಿ ಮರೆಯಾಗುತ್ತವೆ. ನಾವು ದೂರದಲ್ಲೇ ನಿಂತೆವು. ಹುಲ್ಲುಗಾವಲಿನಲ್ಲಿ ಕುಳಿತು ಕಾಫಿ ಹೀರಿದೆವು. ಕಾಂಗರೂಗಳ ಜೊತೆಗೆ ಕಾಫಿ ಕುಡಿದ ಆ ಕ್ಷಣವನ್ನು ಮರೆಯಲು ಸಾಧ್ಯವಿಲ್ಲ.ಗದ್ದಲ ಇಲ್ಲ

ಜನಸಂಖ್ಯೆ ಕಡಿಮೆ ಇರುವುದರಿಂದ ಈ ದ್ವೀಪದಲ್ಲಿ ಗದ್ದಲವೂ ಕಡಿಮೆ. ಪೆನೆಶಾ, ಕಿಂಗ್ಸ್‌ಕೋಟ್‌, ಪರ್ದಾನಾ ಮತ್ತು ಅಮೆರಿಕನ್ ರಿವರ್ ಇಲ್ಲಿನ ಪ್ರಮುಖ ಪಟ್ಟಣಗಳು.ದ್ವೀಪದ ಶೇ.90 ರಷ್ಟು ಜನರು ಈ ಪಟ್ಟಣಗಳಲ್ಲಿ ನೆಲೆಸಿದ್ದಾರೆ. ಕಿಂಗ್ಸ್‌ಕೋಟ್‌ನಲ್ಲಿ ಒಂದು ಪೊಲೀಸ್ ಠಾಣೆಯಿದ್ದು, ನಾಲ್ಕು ಪೊಲೀಸರು ಮಾತ್ರ ಇದ್ದಾರೆ. ಇತರ ಪಟ್ಟಣಗಳಲ್ಲಿ ಪೊಲೀಸರೇ ಇಲ್ಲ. ಅಪರಾಧ ಪ್ರಕರಣ ಇಲ್ಲಿ ಇಲ್ಲವೇ ಎನ್ನಬಹುದು.ಇಲ್ಲಿನ ವಿದ್ಯಾರ್ಥಿಗಳು ಪದವಿ ಹಾಗೂ ಉನ್ನತ ಶಿಕ್ಷಣ ಪಡೆಯಲು ಅಡಿಲೇಡ್ ಹಾಗೂ ಆಸ್ಟ್ರೇಲಿಯಾದ ಇತರ ನಗರಗಳಿಗೆ ತೆರಳುವರು. ‘ಶಾಪಿಂಗ್‌ ಮಾಲ್‌, ಪಬ್, ನೈಟ್ ಕ್ಲಬ್‌ಗಳಿಲ್ಲ. ಆದ್ದರಿಂದ ಯುವಜನರು ಇಲ್ಲಿ ನೆಲೆಸಲು ಇಷ್ಟಪಡುವುದಿಲ್ಲ. ಆದರೆ, ಒಮ್ಮೆ ಇಲ್ಲಿನ ಪ್ರಾಕೃತಿಕ ಸೌಂದರ್ಯಕ್ಕೆ ಮಾರುಹೋದವರು ಮತ್ತೆಂದೂ ನಗರದತ್ತ ಮುಖ ಮಾಡುವುದಿಲ್ಲ’ ಎಂದ ವಿಕಿ ಅವರ ಮಾತು ನಿಜವೆನಿಸಿತು.ಅಂಟಾರ್ಕ್ಟಿಕಾ ಮತ್ತು ಈ ದ್ವೀಪದ ಮಧ್ಯೆ ಯಾವುದೇ ಭೂಪ್ರದೇಶ ಇಲ್ಲ. ಇದರಿಂದ ಅಂಟಾರ್ಕ್ಟಿಕಾ ಕಡೆಯಿಂದ  ಬೀಸುವ ತಂಗಾಳಿ ನೇರವಾಗಿ ಕಾಂಗರೂ ದ್ವೀಪದ ದಕ್ಷಿಣ ಭಾಗದ ಕರಾವಳಿಗೆ ಅಪ್ಪಳಿಸುತ್ತದೆ.ಈ ದ್ವೀಪದ ‘ಅತಿದೊಡ್ಡ’ ಪಟ್ಟಣ ಕಿಂಗ್ಸ್‌ಕೋಟ್‌ನಲ್ಲಿ ನಾವು ರಾತ್ರಿ ಕಳೆದೆವು. ಮರುದಿನ ಬೆಳಿಗ್ಗೆ ರೀಜನಲ್ ಎಕ್ಸ್‌ಪ್ರೆಸ್‌ ಏರ್‌ಲೈನ್ಸ್‌ನ ಪುಟ್ಟ  ವಿಮಾನದಲ್ಲಿ ಅಡಿಲೇಡ್‌ಗೆ ಪ್ರಯಾಣಿಸಿದೆವು. ಮಧುರ ನೆನಪುಗಳು ನಮ್ಮ ಜೊತೆಗಿದ್ದವು. ಕಾಂಗರೂ ದ್ವೀಪದ ಸೌಂದರ್ಯವನ್ನು ಪೂರ್ಣ ರೂಪದಲ್ಲಿ ಸವಿಯಲು ಕನಿಷ್ಠ ಎರಡು ದಿನಗಳಾದರೂ ಬೇಕು. ನಮ್ಮದು ಒಂದು ದಿನದ ಭೇಟಿಯಾಗಿದ್ದರಿಂದ ಇಡೀ ದ್ವೀಪ ಸುತ್ತಾಡಲು ಆಗಲಿಲ್ಲ. ದಕ್ಷಿಣ ತೀರದಲ್ಲಿರುವ ಪ್ರಾಕೃತಿಕ ಸೊಬಗನ್ನು ಸವಿಯಲು ಸಾಧ್ಯವಾಯಿತು. ಎಂದಾದರೂ ಅಡಿಲೇಡ್‌ಗೆ ಭೇಟಿ ನೀಡಿದರೆ ಕಾಂಗರೂ ದ್ವೀಪವನ್ನು ನೋಡಿ ಬನ್ನಿ.ಕಾಂಗರೂ ದ್ವೀಪ

ಕಾಂಗರೂ ದ್ವೀಪ ಸೌತ್‌ ಆಸ್ಟ್ರೇಲಿಯಾ ರಾಜ್ಯದ ಕರಾವಳಿಯಲ್ಲಿದೆ. ಆಸ್ಟ್ರೇಲಿಯಾದ ಮೂರನೇ ಅತಿದೊಡ್ಡ ದ್ವೀಪ ಇದು. ಕೇಪ್‌ ಜೆರ್ವಿಸ್‌ನಿಂದ ಫೆರಿ ಮೂಲಕ ಈ ದ್ವೀಪಕ್ಕೆ ಪ್ರಯಾಣಿಸಬಹುದು. ಅಡಿಲೇಡ್‌ನಿಂದ ಇಲ್ಲಿಗೆ ವಿಮಾನ ಇದೆ. 150 ಕಿ.ಮೀ.ನಷ್ಟು ಉದ್ದ ಮತ್ತು  50 ಕಿ.ಮೀ. ಅಗಲವಿರುವ ಈ ದ್ವೀಪದ ಜನಸಂಖ್ಯೆ 4,500.

ಅಡಿಲೇಡ್... ಅಡಿಗಡಿಗೂ ಬೆರಗು

ಆಸ್ಟ್ರೇಲಿಯಾದ ಅಡಿಲೇಡ್ ತನ್ನ ಸಾಂಪ್ರದಾಯಿಕ ಸೊಗಡನ್ನು ಉಳಿಸಿಕೊಂಡು ಆಧುನಿಕತೆಗೆ ಮೈಯೊಡ್ಡಿಕೊಂಡಿರುವ ನಗರ. ಮೆಲ್ಬರ್ನ್‌, ಸಿಡ್ನಿ ನಗರಗಳಲ್ಲಿ ಕಂಡುಬರುವ ವೈಭವ ಸೌತ್ ಆಸ್ಟ್ರೇಲಿಯಾ ರಾಜ್ಯದ ರಾಜಧಾನಿ ಅಡಿಲೇಡ್‌ನಲ್ಲಿ ಕಂಡುಬರದು. ಈ ನಗರದಲ್ಲಿ ಎಲ್ಲವೂ ವಿಶಾಲವಾಗಿದೆ. ಇಕ್ಕಟ್ಟು ಎಂದರೇನು ಎಂಬುದೇ ಇಲ್ಲಿನ ಜನರಿಗೆ ತಿಳಿಯದು.ಗಗನಚುಂಬಿ ಕಟ್ಟಡಗಳು ಇಲ್ಲದೆಯೂ ಒಂದು ನಗರ ಸುಂದರವಾಗಿ ಕಾಣಬಹುದು ಎಂಬುದಕ್ಕೆ ಅಡಿಲೇಡ್‌ ಉತ್ತಮ ಉದಾಹರಣೆ. ಸುಂದರ ಪಾರ್ಕ್‌ಗಳು, ಕ್ರೀಡಾಂಗಣ, ಬೆಟ್ಟ, ರಾಷ್ಟ್ರೀಯ ಉದ್ಯಾನಗಳು, ವೈನರಿಗಳಿಂದ ಈ ನಗರ ಪ್ರಸಿದ್ಧಿ ಪಡೆದಿದೆ.ನಗರದ ಹೊರವಲಯದಲ್ಲಿರುವ ಕ್ಲೀಲ್ಯಾಂಡ್ ವೈಲ್ಡ್‌ಲೈಫ್‌ ಪಾರ್ಕ್‌ನಲ್ಲಿ ಕಾಂಗರೂ, ಕೋಲಾ, ವಾಲಬಿ, ಎಮು, ತಾಸ್ಮೇನಿಯನ್ ಡೆವಿಲ್ ಮತ್ತು ಡಿಂಗೊ ಸೇರಿದಂತೆ ವಿವಿಧ ಪ್ರಾಣಿಗಳನ್ನು ನೋಡಬಹುದು.ಮೆಲ್ಬರ್ನ್‌ನಲ್ಲಿ ಕ್ವೀನ್ ವಿಕ್ಟೋರಿಯಾ ಮಾರ್ಕೆಟ್‌ ಇದ್ದರೆ, ಅಡಿಲೇಡ್‌ನಲ್ಲಿ ಸೆಂಟ್ರಲ್ ಮಾರ್ಕೆಟ್‌ ಇದೆ. 140 ವರ್ಷಗಳ ಇತಿಹಾಸ ಹೊಂದಿರುವ ಈ ಮಾರುಕಟ್ಟೆಯಲ್ಲಿ ಆಸ್ಟ್ರೇಲಿಯಾದ ವಿವಿಧ ಭಾಗಗಳ ಆಹಾರ ಉತ್ಪನ್ನಗಳಲ್ಲದೆ, ಹಣ್ಣುಗಳು, ತರಕಾರಿ, ಮೀನು, ಮಾಂಸ ದೊರೆಯುತ್ತದೆ. ಕಾಂಗರೂ ಮಾಂಸವನ್ನು ಒಣಗಿಸಿ ಪ್ಯಾಕೆಟ್‌ಗಳಲ್ಲಿ ಜೋಡಿಸಿಟ್ಟದ್ದು ನಮ್ಮ ಗಮನ ಸೆಳೆಯಿತು.‘ಇಕೊ ಕ್ಯಾಡಿ’ ಹೆಸರಿನ ಕಂಪೆನಿ ಇಲ್ಲಿ ಇಕೊ ಕ್ಯಾಡಿ ಟೂರ್‌ ನಡೆಸುತ್ತದೆ. ಕ್ಯಾಡಿಯಲ್ಲಿ (ಸೈಕಲ್ ರಿಕ್ಷಾವನ್ನೇ ಹೋಲುತ್ತದೆ) ಕುಳಿತು ಅಡಿಲೇಡ್ ನಗರದಲ್ಲಿ ಸುತ್ತಾಡುವುದು ವಿಶೇಷ ಅನುಭವ ನೀಡುತ್ತದೆ. ಸುಮಾರು ಎರಡು ಗಂಟೆಯ ಈ  ಟೂರ್‌ ಅಡಿಲೇಡ್‌ ನಗರದ ಇತಿಹಾಸವನ್ನು ನಮ್ಮ ಮುಂದೆ ತೆರೆದಿಡುತ್ತದೆ.ಅಡಿಲೇಡ್‌ನಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ ಐದು ಗಂಟೆಯಾಗುತ್ತಿದ್ದಂತೆಯೇ ಶಾಪಿಂಗ್‌ ಮಾಲ್‌ಗಳು, ಸೂಪರ್‌ ಮಾರ್ಕೆಟ್‌ ಮತ್ತು ಅಂಗಡಿಗಳು ಬಾಗಿಲು ಮುಚ್ಚುವುದು ನೋಡಿದಾಗ ನಮಗೆ ಅಚ್ಚರಿಯಾಯಿತು. ಸೋಮವಾರದಿಂದ ಗುರುವಾರದವರೆಗೆ ಇಲ್ಲಿ ಅಂಗಡಿಗಳು ರಾತ್ರಿ 7ಕ್ಕೆ ಬಾಗಿಲು ಮುಚ್ಚುತ್ತವೆ. ಶುಕ್ರವಾರ ಮಾತ್ರ ರಾತ್ರಿ 9 ಗಂಟೆಯವರೆಗೆ ತೆರೆದಿರುತ್ತವೆ.ಶನಿವಾರ ಮತ್ತು ಭಾನುವಾರ ಸಂಜೆ ಐದು ಗಂಟೆಯಾಗುತ್ತಿದ್ದಂತೆಯೇ ಬೀದಿಗಳು ಬರಿದಾಗುತ್ತವೆ. ಆಸ್ಟ್ರೇಲಿಯಾದಲ್ಲಿ ಕಾರ್ಮಿಕ ಕಾನೂನುಗಳು ಬಿಗಿಯಾಗಿರುವುದು ಇದಕ್ಕೆ ಕಾರಣ. ಎಲ್ಲ ಕೆಲಸಗಾರರು ಕುಟುಂಬ ಸದಸ್ಯರು ಮತ್ತು ಗೆಳೆಯರ ಜತೆ ಹೆಚ್ಚಿನ ಸಮಯ ಕಳೆಯಲು ಅನುವು ಮಾಡಿಕೊಡುವುದು ಇದರ ಉದ್ದೇಶ. ಅಡಿಲೇಡ್‌ ಮಾತ್ರವಲ್ಲ, ಆಸ್ಟ್ರೇಲಿಯಾದ ಇತರ ನಗರಗಳಲ್ಲೂ ಇದೇ ರೀತಿಯ ‘ನಿಯಮ’ ಜಾರಿಯಲ್ಲಿದೆ. ಆದರೆ ಪಬ್, ಹೋಟೆಲ್‌, ರೆಸ್ಟೋರೆಂಟ್‌ಗಳು ತಡರಾತ್ರಿಯವರೆಗೂ ತೆರೆದಿರುತ್ತವೆ.ಇಲ್ಲಿನ ‘ಅಡಿಲೇಡ್ ಹಿಲ್‌’ ಬೆಟ್ಟದಲ್ಲಿ ಹ್ಯಾಂಡರ್ಫ್‌ ಎಂಬ ಹೆಸರಿನ ಪುಟ್ಟ ಪಟ್ಟಣವಿದೆ. 1839ರಲ್ಲಿ ಸ್ಥಾಪನೆಯಾದ ಈ ಪಟ್ಟಣದಲ್ಲಿ ಪೋಲೆಂಡ್‌ನಿಂದ ವಲಸೆ ಬಂದವರು ನೆಲೆಸಿದ್ದರು. 19ನೇ ಶತಮಾನದ ಆರಂಭದಲ್ಲಿ ಜರ್ಮನ್ನರು ಇಲ್ಲಿಗೆ ಬಂದರು. ಜರ್ಮನಿಯ ಪ್ರಭಾವ ಈಗಲೂ ಇದ್ದು, ‘ಮಿನಿ ಜರ್ಮನಿ’ ಎನಿಸಿದೆ. ‘ಹ್ಯಾಂಡರ್ಫ್‌ ಇನ್‌’ ಹೆಸರಿನ ರೆಸ್ಟೋರೆಂಟ್‌ಗೆ 150 ವರ್ಷಗಳ ಇತಿಹಾಸವಿದೆ.ಅಡಿಲೇಡ್ ಹಿಲ್ ವೈನರಿಗಳಿಂದಲೂ ಪ್ರಸಿದ್ಧಿ ಪಡೆದಿದೆ. ಇಲ್ಲಿ 50ಕ್ಕೂ ಅಧಿಕ ವೈನ್ ತಯಾರಿಕಾ ಘಟಕಗಳಿವೆ. ಒಂದೂವರೆ ಶತಮಾನದಷ್ಟು ಹಿಂದಿನ ವೈನರಿಗಳು ಇಲ್ಲಿರುವುದು ಅಚ್ಚರಿ  ಉಂಟುಮಾಡುತ್ತದೆ.(ಲೇಖಕರು ‘ಟೂರಿಸಂ ಆಸ್ಟ್ರೇಲಿಯಾ’ ಮತ್ತು ‘ಸೌತ್ ಆಸ್ಟ್ರೇಲಿಯಾ ಟೂರಿಸಂ ಕಮಿಷನ್’ ಆಹ್ವಾನದ ಮೇರೆಗೆ ಕಾಂಗರೂ ದ್ವೀಪ ಹಾಗೂ ಅಡಿಲೇಡ್‌ಗೆ ಭೇಟಿ ನೀಡಿದ್ದರು)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry