ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಉಳಿತಾಯಕ್ಕೆ ಜಾಣ ಹೂಡಿಕೆ

Last Updated 18 ಏಪ್ರಿಲ್ 2017, 19:30 IST
ಅಕ್ಷರ ಗಾತ್ರ

ಪ್ರಸಕ್ತ ಸಾಲಿನ (2017–18) ಬಜೆಟ್‌ ಮಂಡಿಸುವ ಸಂದರ್ಭದಲ್ಲಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಆದಾಯ ತೆರಿಗೆಗೆ ಸಂಬಂಧಿಸಿದ ಹಲವಾರು ದಿಟ್ಟ ಯೋಜನೆಗಳನ್ನು ಪ್ರಕಟಿಸಿದ್ದಾರೆ. ತೆರಿಗೆ ಪಾವತಿದಾರರ ಕೈಯಲ್ಲಿ ಹೆಚ್ಚಿನ ಹಣ ಇರಬೇಕು ಎನ್ನುವುದು ಅವರ ಮುಖ್ಯ  ಆಶಯವಾಗಿತ್ತು.

ಈ ಬಜೆಟ್‌ ಪ್ರಕಾರ ಆದಾಯ ತೆರಿಗೆ ದರಗಳಲ್ಲಿ ಇಳಿಕೆಯಾಗಿವೆ. ₹2.5 ಲಕ್ಷದಿಂದ 5ಲಕ್ಷ ಆದಾಯ ಹೊಂದಿರುವವರ ಆದಾಯ ತೆರಿಗೆಯನ್ನು ಶೇಕಡ 10ರಿಂದ 5ಕ್ಕೆ ಇಳಿಸಲಾಗಿದೆ. ₹5ಲಕ್ಷಕ್ಕಿಂತ ಹೆಚ್ಚು ಆದಾಯ ಹೊಂದಿರುವವರು ಸಹ ಅಲ್ಪ– ಸ್ವಲ್ಪ ಪ್ರಯೋಜನ ಪಡೆಯಲಿದ್ದಾರೆ.

ಇದೇ ರೀತಿ ಮನೆ ಬಾಡಿಗೆ ಭತ್ಯೆ(house rent allowance–HRA) ಕುರಿತು ತಪ್ಪು ಮಾಹಿತಿ ನೀಡಿ ಪ್ರಯೋಜನ ಪಡೆಯುವುದನ್ನು ತಪ್ಪಿಸಲು ಕ್ರಮಕೈಗೊಳ್ಳಲಾಗಿದೆ. ಪ್ರತಿ ತಿಂಗಳೂ  ಮನೆ ಬಾಡಿಗೆಯನ್ನು ₹50 ಸಾವಿರಕ್ಕಿಂತ ಹೆಚ್ಚು ಪಾವತಿಸುವವರಿಗೆ ಶೇಕಡ 5ರಷ್ಟು ಮೂಲ ತೆರಿಗೆಯಲ್ಲಿ ಕಡಿತ (ಟಿಡಿಎಸ್) ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ.

ಮನೆ ಬಾಡಿಗೆ ಮೇಲೆ ಟಿಡಿಎಸ್‌ ಪಡೆಯುವುದರಿಂದ ಆದಾಯ ತೆರಿಗೆ ಇಲಾಖೆಯು ತೆರಿಗೆ  ವಿವರಗಳನ್ನು ಸುಲಭವಾಗಿ ಪತ್ತೆ ಮಾಡಬಹುದಾಗಿದೆ.
‘ಎಚ್‌ಆರ್‌ಎ’ ಪ್ರಯೋಜನ ಪಡೆಯಲು ಮನೆ ಮಾಲೀಕರ ಪ್ಯಾನ್‌ ವಿವರಗಳನ್ನು ದುರುಪಯೋಗಪಡಿಸಿಕೊಳ್ಳುವ ಪ್ರಕರಣಗಳು ವರದಿಯಾದ ನಂತರ ಈ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ.  ತೆರಿಗೆ ಪಾವತಿ   ಮತ್ತು  ತೆರಿಗೆ ಸಂಗ್ರಹದಲ್ಲಿನ ಅಂತರಗಳನ್ನು ಕಡಿಮೆ ಮಾಡುವುದು ಮತ್ತು ತೆರಿಗೆ ತಪ್ಪಿಸುವುದನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಈ ಬಜೆಟ್‌ನಲ್ಲಿ ಹಲವಾರು ಕ್ರಮಗಳನ್ನು ಪ್ರಕಟಿಸಲಾಗಿದೆ.

ವೈಯಕ್ತಿಕ ತೆರಿಗೆ ಯೋಜನೆ–2017
ಈ ಹಣಕಾಸು ವರ್ಷದಲ್ಲಿ ಜಾಣತನದಿಂದ ಹಣ ಹೂಡಿಕೆ ಮಾಡಿದರೆ ತೆರಿಗೆಯಲ್ಲಿ  ಉಳಿತಾಯ ಮಾಡಲು ಸಾಧ್ಯವಾಗಲಿದೆ. ತೆರಿಗೆ ಪಾವತಿಸುವ ಬಹುತೇಕರಿಗೆ ಹಣ ಹೂಡಿಕೆಯೊಂದೇ ಮುಖ್ಯವಾಗಿರುತ್ತದೆ. ಇವುಗಳಲ್ಲಿ ನಿಶ್ಚಿತ ಠೇವಣಿ ಬಹುಮುಖ್ಯವಾಗಿರುತ್ತದೆ.

ಸರಳವಾಗಿ ಮತ್ತು ಸುಲಭವಾಗಿ ನಿಶ್ಚಿತ ಠೇವಣಿಯಲ್ಲಿ ಹಣ ಹೂಡಬಹುದು. ಕೆಲವು ದಾಖಲೆಗಳನ್ನು ಸಲ್ಲಿಸಿದರೆ ಸಾಕು. ನಿಶ್ಚಿತ ಠೇವಣಿಯಲ್ಲಿ ಹಣ ಹೂಡುವುದು ಹೆಚ್ಚು ಸುರಕ್ಷಿತ ಎನ್ನುವ ಅಭಿಪ್ರಾಯವೂ ಇದೆ. 

ಶೇಕಡ 10ರಷ್ಟು ತೆರಿಗೆ ಪಾವತಿಸುವವರು ಮತ್ತು ಹಿರಿಯ ನಾಗರಿಕರಾಗಿದ್ದರೆ ನಿಶ್ಚಿತ ಠೇವಣಿಯಲ್ಲಿ ಹಣ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ದೊರೆಯುವುದಿಲ್ಲ. ಜೀವ ವಿಮೆ ಯೋಜನೆಗಳು ಕಡಿಮೆ ಲಾಭವನ್ನು ತಂದು ಕೊಡುತ್ತವೆ. ಆದರೂ, ಹೂಡಿಕೆದಾರರು ವಿಮೆ ಪಾಲಿಸಿಯ ಅವಧಿ ಮುಗಿಯುವವರೆಗೂ ಹಣ ಹೂಡಿಕೆ ಮಾಡುವುದು ಅನಿವಾರ್ಯವಾಗುತ್ತದೆ.

ತೆರಿಗೆ ಉಳಿತಾಯದ ಉದ್ದೇಶದಿಂದ ಹಣ ಹೂಡಿಕೆ ಮಾಡುವವರು ನೀವಾಗಿದ್ದರೆ ಕೆಲವು ಜನಪ್ರಿಯ ಹೂಡಿಕೆ ಆಯ್ಕೆಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ. ಇದರಿಂದ ತೆರಿಗೆ ಪಾವತಿದಾರರು ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯವಿದೆ.

ಸಾರ್ವಜನಿಕ ಭವಿಷ್ಯ ನಿಧಿ
ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (Public Provident Fund– PPF) ಹೂಡಿಕೆ ಮಾಡುವವರು ದೀರ್ಘಾವಧಿಯಲ್ಲಿ ಹಣ ಪಡೆಯುವ ಉದ್ದೇಶ ಹೊಂದಿರುತ್ತಾರೆ.

ಈ ಯೋಜನೆಯು ಭವಿಷ್ಯದ ದೃಷ್ಟಿಯಿಂದ ಅತ್ಯುತ್ತಮವಾಗಿದೆ. ಆದರೆ, ತಕ್ಷಣಕ್ಕೆ ಹಣ ವಾಪಸ್‌ ದೊರೆಯುವುದಿಲ್ಲ. ಈ ಯೋಜನೆಯ ಅವಧಿಯು ದೀರ್ಘಾವಧಿಯಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರಗಳನ್ನು ಪರಿಷ್ಕರಿಸಲಾಗುತ್ತದೆ.

ಬಹುತೇಕ ಎಲ್ಲ ಬ್ಯಾಂಕ್‌ಗಳು ಗ್ರಾಹಕರಿಗೆ ಈ ಯೋಜನೆಯ ಸೌಲಭ್ಯ ಪಡೆದುಕೊಳ್ಳುವಂತೆ ಉತ್ತೇಜಿಸುತ್ತವೆ. ಸಾರ್ವಜನಿಕ ಭವಿಷ್ಯ ನಿಧಿ ಮೇಲೆ ದೊರೆಯುವ ಬಡ್ಡಿಗೆ ತೆರಿಗೆ ವಿನಾಯ್ತಿಯೂ ಇದೆ.

ಆರೋಗ್ಯ ವಿಮೆ
ಆದಾಯ ತೆರಿಗೆ ಕಾಯ್ದೆ ಸೆಕ್ಷನ್‌ 80ಡಿ ಅಡಿಯಲ್ಲಿ ಪ್ರತಿ ಹಣಕಾಸು ವರ್ಷದಲ್ಲಿ ₹ 25 ಸಾವಿರದವರೆಗೆ ವೈದ್ಯಕೀಯ  ವಿಮೆ ತೆರಿಗೆ ಕಡಿತದ ಪ್ರಯೋಜನ ಪಡೆದುಕೊಳ್ಳಬಹುದು. ಈ ಯೋಜನೆ ವ್ಯಾಪ್ತಿಯಲ್ಲಿ ಪತ್ನಿ ಮತ್ತು ಮಕ್ಕಳನ್ನು ಸಹ ಸೇರಿಸಬಹುದು. ನೀವು ಇಚ್ಛಿಸಿದರೆ ವಿಮೆ ವ್ಯಾಪ್ತಿಗೆ ಪೋಷಕರನ್ನು ಸಹ ಒಳಪಡಿಸಬಹುದು. ಇದರಿಂದ ಹೆಚ್ಚುವರಿಯಾಗಿ ₹30ಸಾವಿರದವರೆಗೆ ತೆರಿಗೆ ಕಡಿತ ಪಡೆಯಬಹುದು.

ರಾಷ್ಟ್ರೀಯ ಉಳಿತಾಯ ಸರ್ಟಿಫಿಕೇಟ್‌ (ಎನ್‌ಎಸ್‌ಸಿ)
ಎನ್‌ಎಸ್‌ಸಿ (National Saving Certificates–NSC) ಸಹ ನಿಶ್ಚಿತ ಠೇವಣಿ ರೀತಿಯಲ್ಲಿ ತೆರಿಗೆ ಉಳಿತಾಯ ಮಾಡಬಹುದು. ನಿಶ್ಚಿತ ಠೇವಣಿಗೆ ಹೋಲಿಸಿದರೆ ಎನ್‌ಎಸ್‌ಸಿಯಿಂದ ಹೆಚ್ಚಿನ ಲಾಭ ದೊರೆಯುವುದಿಲ್ಲ. ಆದರೂ ಎನ್‌ಎಸ್‌ಸಿ ಅತ್ಯಂತ ಸುರಕ್ಷಿತ ಎಂದು ಪರಿಗಣಿಸಲಾಗಿದೆ.

ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡಿದ ಹಣ ಸರ್ಕಾರದ ಉಸ್ತುವಾರಿಯಲ್ಲಿ ಇರುವುದೇ ಇದಕ್ಕೆ ಕಾರಣ. ‘ಎನ್‌ಎಸ್‌ಸಿ’ಯಲ್ಲಿ ಮಾಡುವ ಹೂಡಿಕೆಗಳು ಆದಾಯ ತೆರಿಗೆ ಕಾಯ್ದೆಯ  80ಸಿ ಅಡಿ ಕಡಿತಕ್ಕೆ ಅರ್ಹವಾಗಿರುತ್ತದೆ.

ಅರಿತು ಹೂಡಿಕೆ ಮಾಡಿ
ಹಣ ಹೂಡಿಕೆಯು ಅನೇಕರಿಗೆ ಹಲವು ಬಗೆಯಲ್ಲಿ  ಪ್ರೇರಣೆ ನೀಡುತ್ತದೆ. ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸಲು ಅನೇಕರು ಸಾಕಷ್ಟು ಉತ್ಸಾಹವನ್ನೂ ತೋರುತ್ತಾರೆ. ಆದರೆ, ಕೇವಲ ತೆರಿಗೆ ಉಳಿತಾಯದ ಉದ್ದೇಶದಿಂದ ಸಮರ್ಪಕವಾಗಿ ಮಾಹಿತಿ ಪಡೆಯದೆ ಕಣ್ಣು ಮುಚ್ಚಿಕೊಂಡು ಹಣ ಹೂಡಿಕೆ ಮಾಡುವುದು ಉಚಿತವಲ್ಲ. ಆನ್‌ಲೈನ್‌ ಮೂಲಕ ತೆರಿಗೆ ಉಳಿತಾಯದ ಕುರಿತು ಮಾಹಿತಿ ಪಡೆಯುವುದು ಉತ್ತಮ.  ಅಂತರ್ಜಾಲ ತಾಣಗಳ ಮೂಲಕ ಮಾಹಿತಿ ಪಡೆಯಬಹುದು.

ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ತೆರಿಗೆಯಲ್ಲಿನ ಕಡಿತ ಸೌಲಭ್ಯವನ್ನು ವಿಸ್ತರಿಸುವ ಮೂಲಕ ಹೆಚ್ಚುವರಿಯಾಗಿ ₹12,500 ತೆರಿಗೆ ಪಾವತಿದಾರರಿಗೆ ಉಳಿತಾಯ ಸಾಧ್ಯವಾಗಲಿದೆ.  ಜಾಣತನದಿಂದ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಹೆಚ್ಚು ಹಣ ಉಳಿಸಬಹುದು.

ಇಎಲ್‌ಎಸ್‌ಎಸ್‌ ನಿಧಿ
ಷೇರು ಸಂಬಂಧಿಸಿದ ಉಳಿತಾಯ ನಿಧಿ ಅಥವಾ ಷೇರು ಮ್ಯೂಚುವಲ್‌ ಫಂಡ್‌ಗಳು (equity linked savings scheme–ELSS) ಅತ್ಯುತ್ತಮವಾದ ಅಲ್ಪಾವಧಿ ಉಳಿತಾಯ ಯೋಜನೆಯಾಗಿದೆ. ಮೂರು ವರ್ಷಗಳಲ್ಲಿ ಹೂಡಿಕೆಯ ಪ್ರಯೋಜನ ದೊರೆಯಲಿದೆ. ಹೂಡಿಕೆಯ ಲಾಭವು ಕೂಡ ಶೇ 100ರಷ್ಟು ತೆರಿಗೆ ವಿನಾಯ್ತಿಗೆ ಒಳಪಟ್ಟಿರುತ್ತದೆ.

ಈ ಯೋಜನೆಯಲ್ಲಿ ₹1.50 ಲಕ್ಷದವರೆಗೂ ಹೂಡಿಕೆ ಮಾಡಬಹುದು. ಷೇರು ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ಹೂಡುವುದು ಕೆಲವು ಬಾರಿ ಅಪಾಯಗಳನ್ನು ತಂದೊಡ್ಡಬಹುದು. ಆದರೆ, ಮಾರುಕಟ್ಟೆಯ ಬಗ್ಗೆ ಸಮಗ್ರವಾಗಿ ಅಧ್ಯಯನ ಮಾಡಿ ಹಣ ಹೂಡಿಕೆ ಮಾಡಿದರೆ ನಷ್ಟ ಅನುಭವಿಸುವ ಸಾಧ್ಯತೆಗಳನ್ನು ಕಡಿಮೆ ಮಾಡಿಕೊಳ್ಳಬಹುದು.
–ಅರ್ಚಿತ್‌ ಗುಪ್ತಾ
(‘ಕ್ಲಿಯರ್‌ಟ್ಯಾಕ್ಸ್‌ಡಾಟ್‌ಕಾಂ’ನ ಸಿಇಒ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT