ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಂಪಿಯನ್ ಪಟ್ಟ ಉಳಿಸಿಕೊಂಡ ವಿಜೇಂದರ್

ವೃತ್ತಿಪರ ಬಾಕ್ಸಿಂಗ್‌: ತಾಂಜಾನಿಯಾದ ಫ್ರಾನ್ಸಿಸ್‌ ಚೆಕಾಗೆ ಭಾರಿ ಮುಖಭಂಗ
Last Updated 17 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಶನಿವಾರ ರಾತ್ರಿ ವಿಜೇಂದರ್ ಸಿಂಗ್ ಅವರ ಮಿಂಚಿನ ವೇಗದ ಮುಷ್ಟಿಪ್ರಹಾರಗಳ ಮುಂದೆ ತಾಂಜಾನಿಯಾದ ಫ್ರಾನ್ಸಿಸ್ ಚೆಕಾ ಅವರ ಆಟ ನಡೆಯಲಿಲ್ಲ. 

ತ್ಯಾಗರಾಜ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿಜೇಂದರ್ ಅವರು 39–37, 37–38, 39–37ರಿಂದ ಫ್ರಾನ್ಸಿಸ್ ಅವರನ್ನು ಮಣ್ಣುಮುಕ್ಕಿಸ, ಡಬ್ಲ್ಯುಬಿಒ ಸೂಪರ್ ಮಿಡ್ಲ್‌ವೇಟ್ ಏಷ್ಯಾ ಪೆಸಿಫಿಕ್ ಚಾಂಪಿ ಯನ್ ಪ್ರಶಸ್ತಿಯನ್ನು ಉಳಿಸಿಕೊಂಡರು.

ಹೋದ ಜುಲೈನಲ್ಲಿ ಆಸ್ಟ್ರೇಲಿಯಾದ ಕೆರ್ರಿ ಹೋಪ್ ಅವರನ್ನು ಮಣಿಸಿದ್ದ ವಿಜೇಂದರ್ ಪ್ರಶಸ್ತಿ ಗೆದ್ದಿದ್ದರು.  ಈ ವಿಭಾಗದಲ್ಲಿ ಇದುವರೆಗೆ ಅಜೇಯರಾಗುಳಿದಿರುವ ವಿಜೇಂದರ್ ಅವರಿಗೆ ಇದು ಎಂಟನೆ ಜಯ. ಕೇವಲ ಹತ್ತು ನಿಮಿಷಗಳ ಅವಧಿಯಲ್ಲಿಯೇ ಅವರು  34 ವರ್ಷದ ಫ್ರಾನ್ಸಿಸ್ ಅವರನ್ನು ಸೋಲಿಸಿದರು.

ಹತ್ತು ಸುತ್ತುಗಳಲ್ಲಿ ನಡೆಯಬೇಕಿದ್ದ ಪಂದ್ಯದ ಫಲಿತಾಂಶವು ಮೂರೇ ಸುತ್ತುಗಳಲ್ಲಿ ನಿರ್ಣಯವಾಯಿತು.  ಮಾಜಿ ವಿಶ್ವ ಚಾಂಪಿಯನ್ ಫ್ರಾನ್ಸಿಸ್ ಸೋತು ತಲೆತಗ್ಗಿಸಿದರು.

‘ವಿಜೇಂದರ್  ಅವರು ಒಲಿಂಪಿಕ್ ಪದಕ ಗೆದ್ದಿರುವುದು ದೊಡ್ಡ ಸಾಧನೆಯೇನಲ್ಲ. ಶನಿವಾರ ರಾತ್ರಿ ಅವರನ್ನು ನಿಜವಾದ ಬಾಕ್ಸಿಂಗ್ ಅಂದರೆ ಏನು ಎಂದು ತೋರಿಸುತ್ತೇನೆ. ಭಾರತಕ್ಕೆ ಮುಖಭಂಗ  ಮಾಡುತ್ತೇನೆ’ ಎಂದು ಈಚೆಗೆ ಸವಾಲು ಹಾಕಿದ್ದರು.

ಆದರೆ, ವಿಜೇಂದರ್ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.  ಬಾಕ್ಸಿಂಗ್‌ ರಿಂಗ್‌ನಲ್ಲಿ  ಫ್ರಾನ್ಸಿಸ್‌ಗೆ ಸೋಲುಣಿಸುವ ಮೂಲಕ ಪ್ರತ್ಯುತ್ತರ ನೀಡಿದರು.  ಯೋಗಗುರು ಬಾಬಾ ರಾಮದೇವ್,  ಒಲಿಂಪಿಯನ್ ಕುಸ್ತಿಪಟು ಸುಶೀಲ್‌ ಕುಮಾರ್ ಅವರು ವಿಜೇಂದರ್ ಬಳಿ  ಹೋಗಿ ಅಭಿನಂದಿಸಿದರು.

ಮೂರು ಸುತ್ತುಗಳ ಸೆಣಸಾಟ
ಫ್ರಾನ್ಸಿಸ್ ಆರಂಭಿಕ ಸುತ್ತಿನಲ್ಲಿ ಚುರುಕಾದ ಪಾದಚಲನೆ ಮತ್ತು  ಹಾವಭಾವಗಳ ಮೂಲಕ ವಿಜೇಂದರ್ ಅವರ ಏಕಾಗ್ರತೆಯನ್ನು ಭಂಗಗೊಳಿಸುವ ಯತ್ನ ಮಾಡಿದರು.

ಇದರಿಂದ ವಿಚಲಿತರಾಗದ ಭಾರತದ ಬಾಕ್ಸರ್ ತಾಳ್ಮೆಯಿಂದ ಆಡಿದರು.  ಫ್ರಾನ್ಸಿಸ್‌ ಪಂಚ್‌ಗಳನ್ನು ಬ್ಲಾಕ್ ಮಾಡಿದರು. ಅವಕಾಶ ಸಿಕ್ಕಾಗ ಎದುರಾಳಿಯ ಮುಖ , ದವಡೆ ಮತ್ತು ಹೊಟ್ಟೆಗೆ ಪಂಚ್ ಮಾಡಿ ಅಂಕಗಳನ್ನು ಗಳಿಸಿ ಮೇಲುಗೈ ಸಾಧಿಸಿದರು.

ಎರಡನೇ ಸುತ್ತಿನಲ್ಲಿ ಬ್ಯಾಕ್‌ ಫುಟ್‌ನಲ್ಲಿ ಆಡಲು ಆರಂಭಿಸಿದ ಫ್ರಾನ್ಸಿಸ್‌ ಮೇಲೆ ಬಿರುಸಾದ ಪಂಚ್‌ಗಳ ಮಳೆಗರೆದ ವಿಜೇಂದರ್ ವಿಜೃಂಭಿಸಿದರು. ಈ ರೋಚಕ ಸುತ್ತಿನಲ್ಲಿ ಫ್ರಾನ್ಸಿಸ್ ಒಂದು ಅಂಕದಿಂದ ಗೆಲುವು ಸಾಧಿಸಿದರು.

ಆದರೆ ಮೂರನೇ ಸುತ್ತಿನಲ್ಲಿ ತಿರುಗೇಟು ನೀಡಿದ ಹರಿಯಾಣದ ಬಾಕ್ಸಿಂಗ್‌ಪಟುವಿನ ಮುಷ್ಟಿಪ್ರಹಾರ ಗಳಿಗೆ ಫ್ರಾನ್ಸಿಸ್‌ ತಮ್ಮ ದೇಹದ ಸಮತೋಲನ ಕಾಪಾಡಿಕೊಳ್ಳಲು ಪರದಾಡಿದರು.  ಇದರ ಲಾಭ ಪಡೆದ ವಿಜೇಂದರ್ ಮುನ್ನುಗ್ಗಿ ಪಂಚ್‌ಗಳನ್ನು ಪ್ರಯೋಗಿಸಿದರು. ಬಸವಳಿದ ಫ್ರಾನ್ಸಿಸ್ ಹಿಮ್ಮೆಟ್ಟಿದರು. ವಿಜೇಂದರ್ ವಿಜಯದ ಸಂಭ್ರಮ ಆಚರಿಸಿದರು.

ಒಲಿಂಪಿಯನ್ ಬಾಕ್ಸರ್‌ ಮೇರಿ ಕೋಮ್, ಕುಸ್ತಿಪಟು ಯೋಗೇಶ್ವರ್ ದತ್, ಸಚಿವ ಕಿರಣ್ ರಿಜಿಜು ಮತ್ತಿತರರು ಪಂದ್ಯ ವೀಕ್ಷಿಸಿದರು.

ರಾಜೇಶಕುಮಾರ್‌ಗೆ ಜಯ
61 ಕೆಜಿ ವಿಭಾಗದ ಬೌಟ್‌ನಲ್ಲಿ ಭಾರತದ ರಾಜೇಶ್‌ಕುಮಾರ್ 39–37, 37–38, 39–37ರಿಂದ ಉಗಾಂಡಾದ ಮುಬಾರಕಾ ಸೆಗುಯಾ ಅವರನ್ನು ಮಣಿಸಿದರು. 67 ಕೆಜಿ ವಿಭಾಗದಲ್ಲಿ ದೀಪಕ್ ತನ್ವರ್ ಅವರು ಇಂಡೋನೆಷ್ಯಾದ ಸುತ್ರಿಯೊನೊ ಬಾರಾ ಬಾಯ್ಸ್‌ ಅವರನ್ನು ನಾಕೌಟ್‌ನಲ್ಲಿ ಸೋಲಿಸಿದರು.  95 ಕೆಜಿ ವಿಭಾಗದಲ್ಲಿ ಧರ್ಮೇಂದ್ರ ಗ್ರೆವಾಲ್ ಉಗಾಂಡಾದ ಅಬಾಸಿ ಕೊಬೆ ವಿರುದ್ಧ ಜಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT