ಗುರುವಾರ , ಆಗಸ್ಟ್ 18, 2022
25 °C

ದೇಶದ ಶಿಕ್ಷಣದ ಸ್ಥಿತಿಗತಿ ಸುತ್ತ...

ಡಾ. ಎಚ್.ಬಿ.ಚಂದ್ರಶೇಖರ್ Updated:

ಅಕ್ಷರ ಗಾತ್ರ : | |

ಮತ್ತೊಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಂತಿಮಗೊಳಿಸುವತ್ತ ಪ್ರಯತ್ನಗಳು ಸಾಗುತ್ತಿವೆ.  ಮೂರು ತಿಂಗಳೊಳಗೆ ಈ ನೀತಿಯನ್ನು ಪೂರ್ಣಗೊಳಿಸಲಾಗುವುದೆಂದು  ಕೇಂದ್ರ  ಮಾನವ ಸಂಪನ್ಮೂಲ ಅಭಿವೃದ್ಧಿ  ಸಚಿವರು ತಿಳಿಸಿರುವುದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಗ್ರಾಮ ಪಂಚಾಯ್ತಿಯಿಂದ ಹಿಡಿದು ರಾಷ್ಟ್ರ ಮಟ್ಟದವರೆಗೆ ಚರ್ಚೆ ನಡೆಸಿ, ವಿವಿಧ ಭಾಗೀದಾರರ ಅಭಿಪ್ರಾಯ ಪಡೆದು, ಕರಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಿ, ಸಾರ್ವಜನಿಕರ ಚರ್ಚೆಗೆ ಅವಕಾಶ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ದೇಶದ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯ ಹಾಗೂ ಪ್ರಸ್ತುತ ಇರುವ ಶೈಕ್ಷಣಿಕ ಗುಣಮಟ್ಟದ ಸ್ಥೂಲ ಚಿತ್ರಣವನ್ನು ಗಮನಿಸುವುದು ಅಗತ್ಯವೆನಿಸುತ್ತದೆ.

2009–10ರಲ್ಲಿ ದೇಶದಲ್ಲಿ 12.99 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2014–15ರ  ವೇಳೆಗೆ 14.09 ಲಕ್ಷಕ್ಕೆ ಏರಿಕೆಯಾದವು. ಅಂದರೆ ಒಟ್ಟು 1.10  ಲಕ್ಷದಷ್ಟು ಹೊಸ ಶಾಲೆಗಳು ಸೇರ್ಪಡೆಯಾಗಿವೆ. ಶಾಲೆಗಳ ಸಂಖ್ಯೆಯ ಏರಿಕೆಯಲ್ಲಿ ಸರ್ಕಾರಿ ಶಾಲೆಗಳಿಗಿಂತಲೂ ಗಮನಾರ್ಹ ಹೆಚ್ಚಳವು ಅನುದಾನರಹಿತ ಶಾಲೆಗಳಲ್ಲಿ ಆಗಿರುವುದನ್ನು ಗಮನಿಸಬಹುದಾಗಿದೆ.

2009–10ರಲ್ಲಿ  10.46 ಲಕ್ಷ ಇದ್ದ ಸರ್ಕಾರಿ ಶಾಲೆಗಳು 2014–15ರ ವೇಳೆಗೆ 10.80 ಲಕ್ಷದಷ್ಟಾದವು. ಆದರೆ ಇದೇ ಅವಧಿಯಲ್ಲಿ 1.82 ಲಕ್ಷದಷ್ಟು ಇದ್ದ ಅನುದಾನರಹಿತ ಶಾಲೆಗಳು ತಮ್ಮ ಸಂಖ್ಯೆಯನ್ನು 79 ಸಾವಿರದಷ್ಟು  ಹೆಚ್ಚಿಸಿಕೊಂಡು 2.61 ಲಕ್ಷದಷ್ಟಾಗಿರುವುದು ಗಮನಾರ್ಹ.  71 ಸಾವಿರದಷ್ಟಿದ್ದ ಅನುದಾನಿತ ಶಾಲೆಗಳ ಸಂಖ್ಯೆ ಇದೇ ಅವಧಿಯಲ್ಲಿ 4,300ರಷ್ಟು  ಕಡಿಮೆಯಾಗಿದೆ.  ದೇಶದಲ್ಲಿ ರುವ ಒಟ್ಟು ಶಾಲೆಗಳ ಪೈಕಿ ಶೇ 76ರಷ್ಟು ಶಾಲೆಗಳು ಸರ್ಕಾರಿ ವ್ಯವಸ್ಥೆಯಡಿ ಇವೆ.  ಈ ಪೈಕಿ ಶೇ 85ರಷ್ಟು ಶಾಲೆಗಳು ಗ್ರಾಮೀಣ ಭಾಗದಲ್ಲಿ, ಉಳಿದ ಶಾಲೆಗಳು ನಗರ ಪ್ರದೇಶದಲ್ಲಿವೆ.ಇನ್ನು ಮಕ್ಕಳ ಸಂಖ್ಯೆಯನ್ನು ಗಮನಿಸೋಣ. 2009–10ರಲ್ಲಿ 1ರಿಂದ 8ನೇ ತರಗತಿವರೆಗೆ ಓದುತ್ತಿದ್ದ ಮಕ್ಕಳ ಸಂಖ್ಯೆ 18.77 ಕೋಟಿ ಇದ್ದದ್ದು, 2014–15ರ ವೇಳೆಗೆ 19.24 ಕೋಟಿಯಷ್ಟಾಗಿದೆ. ಅಂದರೆ ಒಟ್ಟು 47 ಲಕ್ಷ ಹೊಸ ಮಕ್ಕಳು  ಸೇರ್ಪಡೆಯಾಗಿ ದ್ದಾರೆ. ಈ ಅವಧಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ 13.06 ಕೋಟಿ ಯಿದ್ದ ಮಕ್ಕಳ ಸಂಖ್ಯೆಯು 11.89 ಕೋಟಿಗೆ ಕುಸಿದಿದೆ. 

ಇದೇ ಅವಧಿಯಲ್ಲಿ ಅನುದಾನರಹಿತ ಶಾಲೆಗಳಲ್ಲಿ 4.02 ಕೋಟಿ ಯಷ್ಟಿದ್ದ ಮಕ್ಕಳ ಸಂಖ್ಯೆ 5.77 ಕೋಟಿಗೆ ಏರಿದೆ. ಅಂದರೆ ಅನುದಾನರಹಿತ ಶಾಲೆಗಳ ಮಕ್ಕಳ ಸಂಖ್ಯೆಯಲ್ಲಿ 1.75 ಕೋಟಿ ಯಷ್ಟು ಹೆಚ್ಚಳವಾಗಿದೆ. ಅನುದಾನಿತ ಶಾಲೆಗಳ ಸಂಖ್ಯೆಯಲ್ಲಿ ಕುಸಿತ ಆದ ರೀತಿಯಲ್ಲಿಯೇ, 1.69 ಕೋಟಿಯಷ್ಟಿದ್ದ ಮಕ್ಕಳ ಸಂಖ್ಯೆ 1.58 ಕೋಟಿಗೆ ಇಳಿದಿದೆ. ಒಟ್ಟು ಶಿಕ್ಷಕರ ಸಂಖ್ಯೆಯು ಸುಮಾರು 60 ಲಕ್ಷದಷ್ಟಿದೆ.2009–10ರಿಂದ 2014–15 ರವರೆಗೆ ಶಾಲೆಗಳ ಮತ್ತು ಮಕ್ಕಳ ಸಂಖ್ಯೆಯಲ್ಲಿ ಆಗಿರುವ ಬದಲಾವಣೆಗಳನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿಭಿನ್ನ ರೀತಿಯ ಚಿತ್ರಣವನ್ನು ಗಮನಿಸಬಹುದು. ದೇಶದ ಒಟ್ಟು ಸರ್ಕಾರಿ ಶಾಲೆಗಳ ಸಂಖ್ಯೆ ಯಲ್ಲಿ ಹೆಚ್ಚಳವಾಗಿದ್ದರೆ, ಮಕ್ಕಳ ಸಂಖ್ಯೆಯಲ್ಲಿ ಕುಸಿತವಾಗಿದೆ.ಇದರಿಂದ  ಕಂಡು ಬರುವುದೇನೆಂದರೆ, ಸರ್ಕಾರಿ ಶಾಲೆಗಳ ಹರವು ಜಾಸ್ತಿ ಇದ್ದು, ಮಕ್ಕಳ ಸಂಖ್ಯೆಯಲ್ಲಿ ತೀವ್ರ ಕುಸಿತವಾಗಿದೆ. ಸಾಮಾಜಿಕ ನ್ಯಾಯ ಹಾಗೂ ಶಿಕ್ಷಣದ ಸಾರ್ವತ್ರೀಕರಣದ ಸದುದ್ದೇಶದಿಂದ ಸರ್ಕಾರವು ಗ್ರಾಮೀಣ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ತೆರೆದ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಯು ಸ್ಥಿರವಾಗಿದೆ ಅಥವಾ ಅಲ್ಪ ಪ್ರಮಾಣದ ಕುಸಿತ ಕಾಣುತ್ತಿದೆ. ನಗರ ಪ್ರದೇಶಗಳಲ್ಲಿ ಹೆಚ್ಚಾಗಿ ವ್ಯಾಪಾರಿ ಉದ್ದೇಶದಿಂದ ನಡೆಯುವ ಅನುದಾನರಹಿತ  ಶಾಲೆಗಳ ಸಂಖ್ಯೆ ಹಾಗೂ ಆ ಶಾಲೆಗಳಲ್ಲಿನ ಮಕ್ಕಳ ಸಂಖ್ಯೆಯ ಅಗಾಧ ಹೆಚ್ಚಳ ಕಣ್ಣಿಗೆ ರಾಚುವಂತಿದೆ.

ಇಂಗ್ಲಿಷ್ ಮಾಧ್ಯಮದ ಮೋಹವೋ ಅಥವಾ ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಬೇಕೆಂಬ ಪೋಷಕರ ಮಹತ್ವಾಕಾಂಕ್ಷೆಯ ಕಾರಣಗಳಿಂದಲೋ ಈ ಬೆಳವಣಿಗೆಯಾಗುತ್ತಿದೆ. ಇದರ ಜೊತೆ ಆರ್.ಟಿ.ಇ. ಕಾಯ್ದೆಯಡಿ ಸರ್ಕಾರಿ ಶಾಲೆಗಳಿಗೆ ದಾಖಲಾಗಬೇಕಿದ್ದ ಮಕ್ಕಳು ಖಾಸಗಿ ಶಾಲೆಗಳತ್ತ ಮುಖ ಮಾಡುತ್ತಿರುವುದು ಹಾಗೂ ಈ ಕಾರಣದಿಂದ ಸರ್ಕಾರಿ ಶಾಲೆಗಳು ಮಕ್ಕಳಿಲ್ಲದೆ ಬಡವಾಗುತ್ತಿರುವುದು ನೋವಿನ ಸಂಗತಿ. ಈ ರೀತಿ ಮಕ್ಕಳ ಸಂಖ್ಯೆಯಲ್ಲಿ ಬಡವಾದ ಸರ್ಕಾರಿ ಶಾಲೆಗಳು ಗ್ರಾಮೀಣ ಭಾಗದಲ್ಲಿಯೇ ಜಾಸ್ತಿ.ಸರ್ಕಾರಿ ಶಾಲೆಗಳ ಸಂಖ್ಯೆಯಲ್ಲಿ ಕುಸಿತ ಇದೇ ಗತಿಯಲ್ಲಿ ಕಂಡುಬಂದರೆ ಮುಂದಿನ ಐದು ವರ್ಷಗಳಲ್ಲಿ ಸರಿಸುಮಾರು 2 ರಿಂದ 3 ಕೋಟಿ ಮಕ್ಕಳು ಸರ್ಕಾರಿ ಶಾಲೆಗಳಿಂದ ದೂರ ಸರಿಯಬಹುದೆಂದು ಅಂದಾಜಿಸಬಹುದು. ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಯ ಹೆಚ್ಚಳಕ್ಕೆ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳದಿದ್ದಲ್ಲಿ ಹತ್ತು ವರ್ಷಗಳಲ್ಲಿ ಸರ್ಕಾರಿ ಶಾಲೆ ಮತ್ತು ಸರ್ಕಾರಿ ಶಾಲೆಗಳ ಮಕ್ಕಳ ಸಂಖ್ಯೆಯಲ್ಲಿ ತೀವ್ರ ಕುಸಿತ ಆಗಲಿದೆ.ಆರ್.ಟಿ.ಇ. ಪ್ರಕಾರ ಏಕೋಪಾಧ್ಯಾಯ ಶಾಲೆಯು ಅಸ್ತಿತ್ವದಲ್ಲಿರುವ ಹಾಗೆಯೇ ಇಲ್ಲ. ಆದರೆ ಅಧಿಕೃತ ಅಂಕಿ ಅಂಶಗಳ ಪ್ರಕಾರ ದೇಶದ ಶೇ 10ಕ್ಕಿಂತ ಅಧಿಕ ಕಿರಿಯ ಪ್ರಾಥಮಿಕ  ಶಾಲೆಗಳು ಏಕೋಪಾಧ್ಯಾಯ ಶಾಲೆಗಳಾಗಿವೆ. ಇಷ್ಟು ಅಗಾಧ ಸಂಖ್ಯೆಯ ಏಕೋಪಾಧ್ಯಾಯ ಶಾಲೆಗಳಲ್ಲಿ ಯಾವ ರೀತಿಯ ಗುಣಮಟ್ಟದ ಶಿಕ್ಷಣ ಒದಗಿಸಬಹುದು?ಆರ್.ಟಿ.ಇ. ಕಾಯ್ದೆಯಂತೆ ಕಿರಿಯ ಪ್ರಾಥಮಿಕ ಶಾಲಾ ಹಂತದಲ್ಲಿ ಶಿಕ್ಷಕ–ವಿದ್ಯಾರ್ಥಿ ಅನುಪಾತವು 1:30 ಹಾಗೂ ಹಿರಿಯ ಪ್ರಾಥಮಿಕ ಶಾಲಾ ಹಂತಕ್ಕೆ 1:35 ಇರಬೇಕು. ಶಿಕ್ಷಕರು ತರಬೇತಿ ಹೊಂದಿದವರಾಗಿರಬೇಕು. ಆದರೆ ಅನೇಕ ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿ-ಶಿಕ್ಷಕರ ಅನುಪಾತವು 1:50 ಹಾಗೂ ಅದಕ್ಕಿಂತ ಹೆಚ್ಚಿರುವುದನ್ನು ಗಮನಿಸಬಹುದು. ಇದರ ಜೊತೆ ತರಬೇತಿ ಇಲ್ಲದ ಅನೇಕರು ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿ ರುವುದನ್ನು ಅನುದಾನರಹಿತ ಶಾಲೆಗಳಲ್ಲಿ ಕಾಣಬಹುದು.ಶಾಲೆಗಳ ಗುಣಮಟ್ಟದ ಕುರಿತು ಮಾತನಾಡುವಾಗ ಪ್ರತಿ ಶಾಲೆಯಲ್ಲಿ ನಿಗದಿತ ಪ್ರಮಾಣದಲ್ಲಿ ಗುಣಮಟ್ಟದ ಶಿಕ್ಷಕರಿರಬೇಕು. ಗುಣಮಟ್ಟದ ಶಿಕ್ಷಕರ ಮಾತಿರಲಿ ಶಿಕ್ಷಕರೇ ಇಲ್ಲದಿದ್ದಲ್ಲಿ ಗುಣಾತ್ಮಕ ಶಿಕ್ಷಣದ ಕುರಿತು ಮಾತನಾಡುವುದು ವ್ಯರ್ಥ.ದೇಶದ ಸರ್ಕಾರಿ ಶಾಲೆಗಳ ಶಿಕ್ಷಕರ ಪ್ರಮಾಣದಲ್ಲಿ ಗಣನೀಯ ಕುಸಿತವಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಅನುದಾನರಹಿತ ಶಾಲೆಗಳಲ್ಲಿ ಶಿಕ್ಷಕರ ಶೇಕಡಾವಾರು ಪ್ರಮಾಣದಲ್ಲಿ ಏರಿಕೆಯಾಗಿದೆ. ಇದನ್ನು ಗಮನಿಸಿದರೆ, ಸರ್ಕಾರಿ ಶಾಲೆಗಳಲ್ಲಿ ಖಾಲಿಯಾಗುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡದೇ ಇರುವುದು ಇದಕ್ಕೆ ಕಾರಣ ಎನ್ನಬಹುದು.

ಇತ್ತೀಚೆಗೆ ಲೋಕಸಭೆಯಲ್ಲಿ ಸರ್ಕಾರ ನೀಡಿದ ಉತ್ತರದಲ್ಲಿ, ದೇಶದ ಸರ್ಕಾರಿ ಶಾಲೆಗಳಲ್ಲಿ 10 ಲಕ್ಷಕ್ಕೂ ಅಧಿಕ ಶಿಕ್ಷಕರ (9 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ 1 ಲಕ್ಷ ಪ್ರೌಢಶಾಲಾ ಶಿಕ್ಷಕರು) ಕೊರತೆಯಿದೆ ಎಂದು ತಿಳಿಸಿದೆ. ಇದು ಆಘಾತಕಾರಿ. ಜಾರ್ಖಂಡ್, ಉತ್ತರ ಪ್ರದೇಶ, ಬಿಹಾರ ರಾಜ್ಯಗಳ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಖಾಲಿ ಹುದ್ದೆಗಳು  ಹೆಚ್ಚಿವೆ.ಸರ್ಕಾರಿ ಶಾಲೆಗಳಿಗೆ ಅಗತ್ಯವಾದ ಸಂಪನ್ಮೂಲ, ಸೌಕರ್ಯ ಹಾಗೂ ಇನ್ನಿತರೆ ಗುಣಮಟ್ಟದ ಉಪಕ್ರಮಗಳನ್ನು ಪೂರೈಸಲು ಒದಗಿಸುತ್ತಿರುವ ಅನುದಾನವು ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ. ಸರ್ವ ಶಿಕ್ಷಣ ಅಭಿಯಾನದ ಶೇ 70ರಷ್ಟು ಹಣ ಶಿಕ್ಷಕರ ವೇತನಕ್ಕೆ ಹೋಗುತ್ತಿದೆ.

ಶಾಲೆಗಳ ಸಬಲೀಕರಣ ಹಾಗೂ ಗುಣಾತ್ಮಕ ಶಿಕ್ಷಣಕ್ಕೆ ಅಗತ್ಯವಾದ ಅಂಶಗಳ ಪೂರೈಕೆಗೆ ಉಳಿದ ಅನುದಾನ ಸಾಲುತ್ತಿಲ್ಲ. ಈ ಅಂಶಗಳನ್ನು ಗಮನಿಸಿದಲ್ಲಿ ಸರ್ಕಾರಿ ಶಾಲೆಗಳನ್ನು ಸುಭದ್ರಗೊಳಿಸಿ, ಭವಿಷ್ಯದ ಪೀಳಿಗೆಗೆ ಉಳಿಸಲು ಕಣ್ಗಾವಲಿನಂತೆ ಇರಬೇಕಾಗಿದ್ದ ಆರ್.ಟಿ.ಇ. ಕಾಯ್ದೆ, ಅನುಷ್ಠಾನದಲ್ಲಿ ತನ್ನ ಶಕ್ತಿ ತೋರಿಲ್ಲವೆಂದೇ ಹೇಳಬೇಕಾಗುತ್ತದೆ.ಖಾಸಗಿ ಶಾಲೆಗಳ ಬೆಳವಣಿಗೆಗೆ ಕಡಿವಾಣ, ಸರ್ಕಾರಿ ಶಾಲೆಗಳಿಗೆ ವಿನಿಯೋಗಿಸುವ ಹಣದ ಹೂಡಿಕೆಯಲ್ಲಿ ಗಮನಾರ್ಹ ಹೆಚ್ಚಳ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ನೆರವು– ಪೋಷಣೆಗಳಿಂದ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸುವತ್ತ ಗಂಭೀರವಾಗಿ ಚಿಂತಿಸಬೇಕಿದೆ. ಈ ನಿಟ್ಟಿನಲ್ಲಿ ಅಂತಿಮಗೊಳ್ಳಲಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ನಿರ್ದಿಷ್ಟ ಹಾಗೂ ಕಾಲಮಿತಿ ಕಾರ್ಯತಂತ್ರಗಳನ್ನು ರೂಪಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.