ಶನಿವಾರ, ಫೆಬ್ರವರಿ 22, 2020
19 °C
ಅಮೆರಿಕ ಮತ್ತು ಜಗತ್ತಿಗೆ ಹೊಸ ದಿಕ್ಕು ತೋರುವ ಭರವಸೆ

ಅಮೆರಿಕ ಮೊದಲು: ಟ್ರಂಪ್‌ ನೀತಿ

ಪಿಟಿಐ Updated:

ಅಕ್ಷರ ಗಾತ್ರ : | |

ಅಮೆರಿಕ ಮೊದಲು: ಟ್ರಂಪ್‌ ನೀತಿ

ವಾಷಿಂಗ್ಟನ್‌: ‘ಇಂದಿನಿಂದ (ಜನವರಿ 20) ಅಮೆರಿಕ ಮೊದಲು, ಅಮೆರಿಕ ಮೊದಲು ಎಂಬುದೇ ನಮ್ಮ ನೀತಿ. ಇಂದಿನಿಂದ ನಾವು ತೆಗೆದುಕೊಳ್ಳುವ ಪ್ರತಿ ನಿರ್ಧಾರವೂ ಅಮೆರಿಕದ ಕೆಲಸಗಾರರು ಮತ್ತು ಅವರ ಕುಟುಂಬಕ್ಕೆ ಪ್ರಯೋಜನ ಉಂಟುಮಾಡುವಂಥದ್ದಾಗಿರುತ್ತದೆ’ ಎಂದು ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದ ನಂತರ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಎಂಟು ಲಕ್ಷಕ್ಕೂ ಹೆಚ್ಚು ಜನರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಟ್ರಂಪ್‌, ‘ಅಧಿಕಾರವನ್ನು ವಾಷಿಂಗ್ಟನ್‌ ಡಿ.ಸಿಯಿಂದ ದೇಶದ ಇತರ ಭಾಗಗಳ ಜನರ ಕೈಗೆ ಮರಳಿಸುತ್ತಿದ್ದೇವೆ’ ಎಂದು ಹೇಳಿದರು.

‘ಈ ದಿನವನ್ನು ಜನರೇ ಅಮೆರಿಕದ ಆಡಳಿತಗಾರರಾಗಿರುವ ದಿನ ಎಂದು ಮುಂದೆ ನೆನಪಿಸಿಕೊಳ್ಳಲಾಗುತ್ತದೆ’ ಎಂದು ಟ್ರಂಪ್‌ ಹೇಳಿದರು.

ತಮ್ಮ ಅಧ್ಯಕ್ಷತೆಯು ಅಮೆರಿಕಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೆ ಹೊಸ ದಿಕ್ಕೊಂದನ್ನು ತೋರಲಿದೆ ಎಂದರು.

ತಮ್ಮ ಚುನಾವಣಾ ಪ್ರಚಾರ ಭಾಷಣಗಳನ್ನೇ ನೆನಪಿಸುವಂತೆ ಮಾತನಾಡಿದ ಅವರು, ಬಹಳ ದೀರ್ಘ ಕಾಲ ವಾಷಿಂಗ್ಟನ್‌ ಡಿ.ಸಿಯ ಜನರು ಸರ್ಕಾರದ ಫಲವನ್ನು ಉಂಡಿದ್ದಾರೆ. ಉಳಿದ ಜನರು ಅದರ ವೆಚ್ಚವನ್ನು ಭರಿಸಿದ್ದಾರೆ. ವಾಷಿಂಗ್ಟನ್‌ ಸಮೃದ್ಧವಾಯಿತು. ಆದರೆ ಸಂಪತ್ತಿನಲ್ಲಿ ಇತರ ಜನರಿಗೆ ಪಾಲು ದೊರೆಯಲಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ರಾಜಕಾರಣಿಗಳು ಶ್ರೀಮಂತರಾದರು. ಆದರೆ ಉದ್ಯೋಗಗಳು ಹೊರ ದೇಶಗಳ ಪಾಲಾದವು. ಕಾರ್ಖಾನೆಗಳು ಮುಚ್ಚಿದವು. ಸಂಸ್ಥೆಗಳು ತಮ್ಮನ್ನು ರಕ್ಷಿಸಿಕೊಂಡವೇ ಹೊರತು ಜನರನ್ನು ರಕ್ಷಿಸಲಿಲ್ಲ. ಸಂಕಷ್ಟದಲ್ಲಿರುವ ದೇಶದ ಜನರಿಗೆ ಸಂಭ್ರಮಪಡಲು ಏನೇನೂ ಇಲ್ಲ ಎಂದು ಟ್ರಂಪ್‌ ಹೇಳಿದರು.

‘ಬೇರೆ ದೇಶಗಳ ಸೇನೆಗಳಿಗೆ ನೆರವು ನೀಡುತ್ತಿರುವ ನಾವು ನಮ್ಮ ಸೇನೆ ಬಲಗುಂದಲು ಅವಕಾಶ ನೀಡಿದ್ದೇವೆ. ಬೇರೆ ದೇಶಗಳ ಗಡಿಗಳನ್ನು ರಕ್ಷಿಸುವ ನಾವು ನಮ್ಮ ಗಡಿಗಳನ್ನು ರಕ್ಷಿಸಲು ನಿರಾಕರಿಸಿದ್ದೇವೆ. ವಿದೇಶಗಳಿಗಾಗಿ ಕೋಟ್ಯಂತರ ಡಾಲರ್‌ಗಳನ್ನು ವೆಚ್ಚ ಮಾಡಿದ್ದೇವೆ. ಆದರೆ ನಮ್ಮ ಮೂಲಸೌಕರ್ಯ ಕುಸಿದು ಹೋಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತರ ದೇಶಗಳನ್ನು ಶಕ್ತಿಯುತ ಮತ್ತು ಶ್ರೀಮಂತವಾಗುವಂತೆ ಅಮೆರಿಕ ಮಾಡಿದೆ. ಆದರೆ ಈ ಪ್ರಕ್ರಿಯೆಯಲ್ಲಿ ಅಮೆರಿಕದ ಆತ್ಮವಿಶ್ವಾಸ ಮರೆಯಾಗಿ ಹೋಗಿದೆ. ಕಾರ್ಖಾನೆಗಳು ಈ ದೇಶ ಬಿಟ್ಟು ಹೋಗಿವೆ. ಲಕ್ಷಾಂತರ ಕಾರ್ಮಿಕರನ್ನು ಕೈಬಿಡಲಾಗಿದೆ ಎಂದು ಟ್ರಂಪ್‌ ಹೇಳಿದರು.

‘ಆದರೆ ಇವೆಲ್ಲವೂ ಭೂತಕಾಲದ ವಿಚಾರಗಳು. ಇನ್ನು ಮುಂದೆ ನಾವು ಭವಿಷ್ಯದ ಬಗ್ಗೆ ಮಾತ್ರ ಯೋಚಿಸಲಿದ್ದೇವೆ. ವ್ಯಾಪಾರ, ತೆರಿಗೆ, ವಲಸೆ, ವಿದೇಶಾಂಗ ನೀತಿ ಮುಂತಾದ ಎಲ್ಲ ನಿರ್ಧಾರಗಳಲ್ಲಿಯೂ ಅಮೆರಿಕದ ಕೆಲಸಗಾರರು ಮತ್ತು ಕುಟುಂಬಗಳಿಗೆ ಪ್ರಯೋಜನವಾಗುವ ನಿರ್ಧಾರಗಳನ್ನು ಮಾತ್ರ ತೆಗೆದುಕೊಳ್ಳಲಾಗುವುದು’ ಎಂದು ಟ್ರಂಪ್‌ ಭರವಸೆ ನೀಡಿದರು.

‘ನಾವು ಅಮೆರಿಕವನ್ನು ಮತ್ತೆ ಶಕ್ತಿಶಾಲಿ ಮಾಡುತ್ತೇವೆ. ನಾವು ಅಮೆರಿಕವನ್ನು ಮತ್ತೆ ಶ್ರೀಮಂತ ಮಾಡುತ್ತೇವೆ... ಹೆಮ್ಮೆ ಪಡುವಂತೆ ಮಾಡುತ್ತೇವೆ... ಹೌದು, ನಾವೆಲ್ಲರೂ ಜತೆಯಾಗಿ ಅಮೆರಿಕವನ್ನು ಮತ್ತೆ ಶ್ರೇಷ್ಠವಾಗಿಸಲಿದ್ದೇವೆ’ ಎಂದು ಟ್ರಂಪ್‌ ತಮ್ಮ 16 ನಿಮಿಷಗಳ ಮಾತು ಮುಗಿಸಿದರು.
*
ಶ್ವೇತ ಭವನ ಪ್ರವೇಶಕ್ಕೂ ಮುನ್ನ

* ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಬರಾಕ್ ಒಬಾಮ ಮತ್ತು ಮಿಷೆಲ್‌ ಒಬಾಮರನ್ನು ಭೇಟಿ ಮಾಡಿದ ಡೊನಾಲ್ಡ್ ಟ್ರಂಪ್ ದಂಪತಿ
* ಶ್ವೇತಭವನದ ಮೆಟ್ಟಿಲುಗಳ ಮೇಲಿನ ವೇದಿಕೆಯಲ್ಲಿ ಡೊನಾಲ್ಡ್‌ ಮತ್ತು ಮೆಲಾನಿಯಾ ಟ್ರಂಪ್‌ ಅವರಿಗೆ ಶುಭ ಕೋರಿದ ಒಬಾಮ ದಂಪತಿ
* ಮಿಷೆಲ್‌ ಅವರಿಗೆ ದುಬಾರಿ ‘ಟಿಫಾನಿ ಆಭರಣ’ ಉಡುಗೊರೆಯಾಗಿ ನೀಡಿದ ಮೆಲಾನಿಯಾ
* ಉಡುಗೊರೆಯನ್ನು ಸಹಾಯಕರಿಗೆ ಹಸ್ತಾಂತರಿಸಲು ವೇದಿಕೆಯಿಂದ ಸ್ವತಃ ತಾವೇ ಇಳಿದು ಹೋದ ಒಬಾಮ

* ವೇದಿಕೆ ಮೇಲೆ ಒಟ್ಟಾಗಿ ನಿಂತು ಚಿತ್ರ ತೆಗೆಸಿಕೊಂಡ ಒಬಾಮ, ಮಿಷೆಲ್, ಮೆಲಾನಿಯಾ ಮತ್ತು ಟ್ರಂಪ್
* ಶ್ವೇತಭವನದಲ್ಲಿ ಕುಳಿತು ಚಹಾ ಹೀರಿದ ಒಬಾಮ, ಮಿಷೆಲ್, ಮೆಲಾನಿಯಾ ಮತ್ತು ಟ್ರಂಪ್
* ಹೊಸ ಅಧ್ಯಕ್ಷರಿಗೆ ಬರೆದ ಪತ್ರವನ್ನು ಸಂಪ್ರದಾಯದಂತೆ ಗೃಹ ಕಚೇರಿಯ ‘ರೆಸಲ್ಯೂಟ್‌’ ಮೇಜಿನ ಮೇಲೆ ಇರಿಸಿದ ಒಬಾಮ
* ಅಮೆರಿಕನ್ನರಿಗೆ ಧನ್ಯವಾದ ಹೇಳಿದ ಒಬಾಮ

* ನೂತನ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಮೈಕ್‌ ಪೆನ್ಸ್
* ‘ಅಬ್ರಾಹಂ ಲಿಂಕನ್‌ ಬೈಬಲ್‌’ ಮೇಲೆ ಕೈಇರಿಸಿ ಪ್ರಮಾಣ ವಚನ ಸ್ವೀಕರಿಸಿದ ಡೊನಾಲ್ಡ್ ಟ್ರಂಪ್
* ಪ್ರಮಾಣ ವಚನ ಭೋದಿಸಿದ ಅಮೆರಿಕದ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್
* ಪ್ರಮಾಣ ವಚನ ಸ್ವೀಕಾರಕ್ಕೆ ಸಾಕ್ಷಿಯಾದ ಜನರ ಸಂಖ್ಯೆ 8 ಲಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)