ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷಕ್ಕೆ ₹ 3,700 ಕೋಟಿಯಷ್ಟು ನಷ್ಟ !

ಬೆಂಗಳೂರು ಸಂಚಾರ ದಟ್ಟಣೆ ಸಮಸ್ಯೆ: ಬಿಡಿಎ ವಿಶ್ಲೇಷಣೆ * 500 ವಲಯದ ಸಂಚಾರ ಮಾದರಿ ಅಭಿವೃದ್ಧಿ
Last Updated 22 ಜನವರಿ 2017, 20:05 IST
ಅಕ್ಷರ ಗಾತ್ರ
ಬೆಂಗಳೂರು: ನಗರದಲ್ಲಿ ಸಂಚಾರ ದಟ್ಟಣೆ ಸಮಸ್ಯೆಯಿಂದಾಗಿ ವರ್ಷಕ್ಕೆ ₹ 3,700 ಕೋಟಿಯಷ್ಟು ನಷ್ಟ ಉಂಟಾಗುತ್ತಿದೆ. ಸಂಚಾರ ದಟ್ಟಣೆ ಅವಧಿಯಲ್ಲಿ 2.8 ಲಕ್ಷ ಲೀಟರ್‌ನಷ್ಟು ಇಂಧನ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ 50 ಕೋಟಿ ಲೀಟರ್‌ಗಳಷ್ಟು ಇಂಧನವನ್ನು ಕಳೆದುಕೊಳ್ಳಬೇಕಾಗಿದೆ!
 
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು ಪರಿಷ್ಕೃತ ನಗರ ಮಹಾಯೋಜನೆ 2031 ನ್ನು ಸಿದ್ಧಪಡಿಸಲು ನಡೆಸಿರುವ ಅಧ್ಯಯನದ ವರದಿಯಲ್ಲಿ ಈ ಅಂಶಗಳಿವೆ.
ಸಂಚಾರ ದಟ್ಟಣೆ ಅವಧಿಯಲ್ಲಿ ವ್ಯರ್ಥವಾಗುವ ಇಂಧನದಿಂದ ವರ್ಷಕ್ಕೆ ₹ 1,350 ಕೋಟಿಗಳಷ್ಟು ನಷ್ಟ ಉಂಟಾಗುತ್ತಿದೆ. ಈ ಸಮಸ್ಯೆಯಿಂದ ಜನರ ಮೇಲಾಗುತ್ತಿರುವ ದುಷ್ಪರಿಣಾಮ ಖಾಸಗಿ ವಾಹನಗಳ ಬಳಕೆ ಮತ್ತಷ್ಟು ಹೆಚ್ಚಲು ಕಾರಣವಾಗುತ್ತಿದೆ. ಇದು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತಿದೆ ಎಂದು ವಿಶ್ಲೇಷಿಸಿದೆ.
 
ಸಂಚಾರ ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುವ ಸಲುವಾಗಿ ಹಾಗೂ ಭವಿಷ್ಯದಲ್ಲಿ ಸೂಕ್ತ ಸಂಚಾರ ಮಾದರಿಯನ್ನು ಅಳವಡಿಸಿಕೊಳ್ಳುವ ಸಲುವಾಗಿ ಮೊದಲ ಬಾರಿಗೆ 500 ವಲಯಗಳನ್ನು ಒಳಗೊಂಡ ಸಂಚಾರ ಮಾದರಿಯನ್ನು ಅಭಿವೃದ್ಧಿಪಡಿಸಿದೆ.
 
ಪರಿಷ್ಕೃತ ಮಹಾಯೋಜನೆ ರೂಪಿಸುವ ಸಲುವಾಗಿ ವಿವಿಧ ಮೂಲಗಳಿಂದ ದತ್ತಾಂಶವನ್ನು ಕಲೆಹಾಕಿ, ಸಂಚಾರ ಮಾದರಿಗಳನ್ನು ರೂಪಿಸಲಾಗಿದೆ.  ವಿವಿಧ ಸಮೀಕ್ಷೆಗಳ ದತ್ತಾಂಶಗಳನ್ನಲ್ಲದೇ ಬಿ–ಟ್ರ್ಯಾಕ್‌ ಯೋಜನೆ ಅಡಿ  50 ಕಡೆ ಸ್ಥಾಪಿಸಿದ್ದ ಸಿ.ಸಿ.ಟಿ.ವಿ ಕ್ಯಾಮೆರಾಗಳ ಮೂಲಕವೂ ಮಾಹಿತಿಯನ್ನೂ ಅಧ್ಯಯನಕ್ಕೆ ಬಳಸಲಾಗಿದೆ. ಇತರ ಮೂಲಗಳಿಂದ ಸಂಗ್ರಹಿಸಿದ ಮಾಹಿತಿಗಳನ್ನೂ ವಿಸ್ತೃತ ವಿಶ್ಲೇಷಣೆ ನಡೆಸಲಾಗಿದೆ ಎಂದು ಬಿಡಿಎ ಹೇಳಿಕೊಂಡಿದೆ.
 
ಅತ್ಯಾಧುನಿಕ ಸಂಚಾರ ಮಾದರಿ ವಿಶ್ಲೇಷಣೆ ತಂತ್ರಜ್ಞಾನ (ಕ್ಯೂಬ್‌ ವೋಯೆಜರ್‌) ಬಳಸಿ ಭವಿಷ್ಯದ ಸಂಚಾರ ಮಾದರಿಯನ್ನು ರೂಪಿಸಲಾಗಿದೆ. 15 ಸಾವಿರ ಕಿ.ಮೀ.ಗೂ ರಸ್ತೆ ಸಂಪರ್ಕ ಜಾಲದ ವಿಸ್ತೃತ ವಿವರಗಳನ್ನು ಕಲೆಹಾಕುವ ಮೂಲಕ ಪರಿಷ್ಕೃತ ಮಹಾ ಯೊಜನೆಯ  ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್‌) ತಂಡ  ಸಂಚಾರ ಮಾದರಿಗಳನ್ನು ಸಿದ್ಧಪಡಿಸಿದೆ. ಬಸ್‌ಗಳು ಸಂಚರಿಸುವ 2,300  ಮಾರ್ಗಗಳಿಗೆ ಸಂಕೇತಗಳನ್ನು ಅಳವಡಿಸಿ ಮಾಹಿತಿ ಕಲೆಹಾಕಲಾಗಿದೆ. ಬಿಬಿಎಂಪಿಯ ಎಲ್ಲಾ ವಾರ್ಡ್‌ಗಳು ಹಾಗೂ ಬಿಡಿಎ ವ್ಯಾಪ್ತಿಯ ಎಲ್ಲಾ ಗ್ರಾಮಗಳನ್ನು ಈ ಅಧ್ಯಯನಕ್ಕೆ ಪರಿಗಣಿಸಲಾಗಿದೆ.
 
ಬೆಂಗಳೂರು ಮಹಾನಗರದ ವ್ಯಾಪ್ತಿಯನ್ನೂ ಪರಿಗಣಿಸುವ ಮೂಲಕ ಭವಿಷ್ಯದ ಸಂಚಾರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಲಾಗಿದೆ ಎಂದು ಬಿಡಿಎ ಹೇಳಿಕೊಂಡಿದೆ.  
 
**
60 ಕೋಟಿ ತಾಸು ಕಾಲಹರಣ
ಸಂಚಾರ ದಟ್ಟಣೆಯಲ್ಲಿ ಸಿಲುಕಿಕೊಳ್ಳುವ ಅಷ್ಟೂ ಜನರು ಒಂದು ವರ್ಷದಲ್ಲಿ  ಎಷ್ಟು ಕಾಲಹರಣ ಮಾಡುತ್ತಾರೆ ಎಂಬುದನ್ನೂ ಬಿಡಿಎ ಲೆಕ್ಕ ಹಾಕಿದೆ. ಒಂದು ವರ್ಷದಲ್ಲಿ ನಗರದ ಜನರು ಒಟ್ಟು 60 ಕೋಟಿ ತಾಸುಗಳನ್ನು ರಸ್ತೆಯಲ್ಲೇ ಕಳೆಯುತ್ತಾರೆ. ಈ ರೀತಿ ಮಾನವ ಶ್ರಮ ವ್ಯರ್ಥವಾಗುವುದರಿಂದ ವರ್ಷಕ್ಕೆ ಸುಮಾರು ₹ 2,350 ಕೋಟಿ ನಷ್ಟ ಉಂಟಾಗುತ್ತಿದೆ ಎಂಬುದು ಬಿಡಿಎ ಲೆಕ್ಕಾಚಾರ.
 
**
ಅಧ್ಯಯನಕ್ಕೆ ಬಳಸಿರುವ ಅಂಶಗಳು
* ಸಾಮಾಜಿಕ, ಆರ್ಥಿಕ ಸಮೀಕ್ಷೆಯ (10,130 ನಮೂನೆ ಬಳಕೆ) ವಿವರಗಳು
* 45 ಕಡೆಗಳಲ್ಲಿ  ದಿನದಲ್ಲಿ  ಯಾವ ಬಗೆಯ ವಾಹನಗಳು ಎಷ್ಟು ಸಂಖ್ಯೆಯಲ್ಲಿ ಸಂಚರಿಸುತ್ತವೆ ಎಂಬ ಕುರಿತು ನಡೆಸಿದ ಸಮೀಕ್ಷೆಯ ದತ್ತಾಂಶ
* 13 ಕಡೆಗಳಲ್ಲಿ ನಡೆಸಿರುವ ವಾಹನ ಸಂಚಾರ ಆರಂಭ ಹಾಗೂ ಗುರಿ ತಲುಪುವ ಅವಧಿಯ ಕುರಿತ ಸಮೀಕ್ಷೆ (ಒ.ಡಿ ಸರ್ವೇ)
* 375 ಕಿ.ಮೀ ಉದ್ದವನ್ನು ಪರಿಗಣಿಸಿ ವೇಗ ಹಾಗೂ ವಿಳಂಬ ಕುರಿತ ಸಮೀಕ್ಷೆ ನಡೆಸಲಾಗಿದೆ.
* 375 ಕಿ.ಮೀ ಉದ್ದದ ರಸ್ತೆ ಜಾಲವನ್ನು ಪರಿಗಣಿಸಲಾಗಿದೆ
* 14 ಜಂಕ್ಷನ್‌ಗಳಲ್ಲಿ ವಾಹನ ದಟ್ಟಣೆ ಪರಿಸ್ಥಿತಿಯಲ್ಲಿ ಅಧ್ಯಯನ ನಡೆಸಲಾಗಿದೆ
* ಸರಕು ಸಾಗಣೆ,  ನಗರ ಸಂಚಾರಕ್ಕೆ ಸಂಬಂಧಿಸಿದ ಸಮೀಕ್ಷೆಗಳನ್ನು 8 ಕಡೆ ನಡೆಸಲಾಗಿದೆ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT