7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

‘ಮಾರ್ಕ್ಸ್‌’ವಾದಿಗಳಿಗೆ ಕಿವಿಮಾತು

Published:
Updated:

ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಪರೀಕ್ಷೆಗಳು ಹತ್ತಿರ ಬರುತ್ತಿವೆ. ಪರೀಕ್ಷೆಗೆ ಹೇಗೆ ತಯಾರಾಗಬೇಕೆಂಬ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ಪತ್ರಿಕೆಗಳು ಹಾಗೂ ಇತರೆ ಮಾಧ್ಯಮಗಳಲ್ಲಿ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವ ಕುರಿತು ಹಾಗೂ ಪರೀಕ್ಷಾ ಆತಂಕವನ್ನು ಯಾವ ರೀತಿ ನಿಭಾಯಿಸಬಹುದೆಂಬ ಬಗ್ಗೆ ವರದಿಗಳು, ಚರ್ಚೆಗಳು ಪ್ರಸಾರವಾಗುತ್ತಿವೆ.ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಟಿಪ್ಸ್‌ಗಳೇನೋ ಸರಿಯಾದುವೇ ಆಗಿವೆ. ವಿದ್ಯಾರ್ಥಿಗಳಿಗೆ ಈ ಕುರಿತಂತೆ ನೀಡುತ್ತಿರುವ ಮಾರ್ಗದರ್ಶನವೂ ಅಗತ್ಯವೇ ಆಗಿದೆ. ಆದರೆ ಇದರ ಜೊತೆ ಇನ್ನೊಂದು ಅಂಶವನ್ನು ನಾವೆಲ್ಲಾ ಮರೆತಿದ್ದೇವೇನೋ ಅನಿಸುತ್ತಿದೆ. ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ, ಆತಂಕ, ತುಮುಲಗಳನ್ನು ಅರ್ಥ ಮಾಡಿಕೊಳ್ಳುವ ಕುರಿತಂತೆ ಪೋಷಕರು, ಶಾಲೆಗಳ ಆಡಳಿತ ಮಂಡಳಿಗಳು ಮತ್ತು ಶಿಕ್ಷಕರಿಗೆ ಒಂದಷ್ಟು ಕಿವಿಮಾತಿನ ಅಗತ್ಯವಿದೆಯೆನಿಸುವುದಿಲ್ಲವೇ?ಹೌದು! ಮಕ್ಕಳು ಅಂಕಗಳ ಯಂತ್ರಗಳಾಗಲು ನಾವೆಲ್ಲಾ ಒತ್ತಾಸೆ ನೀಡುತ್ತಿದ್ದೇವೆ. ಇದರ ಜೊತೆ ತಮ್ಮ ಜಿಲ್ಲೆ, ತಾಲ್ಲೂಕು ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚು ಸಾಧನೆ ಮಾಡಲಿ ಎಂಬ ಅತಿ ಉತ್ಸಾಹದಿಂದ ಮಾಡುವ ಪ್ರಯತ್ನಗಳು ಒಂದೆರಡಲ್ಲ. ಮುಂಜಾನೆ ಸಮಯದಲ್ಲಿ ವಿದ್ಯಾರ್ಥಿಗಳ ಮನೆಮನೆ ಭೇಟಿ ಮಾಡಿ, ಅವರನ್ನು ಓದಲು ಏಳಿಸುವುದು, ವಿದ್ಯಾರ್ಥಿಗಳ–ಪೋಷಕರ ಮೊಬೈಲ್‌ಗಳಿಗೆ ಮಿಸ್ಡ್ ಕಾಲ್ ಕೊಡುವುದು, ಮಕ್ಕಳನ್ನು ಶಾಲೆಯಲ್ಲೇ ರಾತ್ರಿಯಲ್ಲಿ ಇರಿಸಿಕೊಂಡು ಓದಿಸುವುದು ಮಾಡಲಾಗುತ್ತದೆ.ಇನ್ನೂ ಕೆಲವು ಶಾಲೆಗಳಲ್ಲಿ ಬೋಧನೆ, ವಿಶೇಷ ಬೋಧನೆ, ಪರಿಹಾರಾತ್ಮಕ ಬೋಧನೆಗಳ ಹೆಸರಿನಲ್ಲಿ ಮಕ್ಕಳನ್ನು ಬೆಳಿಗ್ಗೆ  ಏಳರಿಂದ ರಾತ್ರಿ ಎಂಟು ಗಂಟೆಯವರೆಗೆ ಶಾಲೆಯಲ್ಲೇ ಉಳಿಸಿಕೊಳ್ಳುತ್ತಾರೆ. ಕೆಲವು ಖಾಸಗಿ ಶಾಲೆಗಳಲ್ಲಿ ಶೇಕಡ 100ರಷ್ಟು ಫಲಿತಾಂಶದ ಹೆಸರಿನಲ್ಲಿ, ಸರಿಯಾಗಿ ಓದಿ, ಪಾಸಾಗಲಾರ ರೆಂಬ ಸಂಶಯಗಳಿಂದ ಕೆಲವು ಮಕ್ಕಳನ್ನು 9ನೇ ತರಗತಿ ಯಲ್ಲೇ ಫೇಲ್ ಮಾಡುತ್ತಾರೆ ಇಲ್ಲವೇ ಪಾಸು ಮಾಡಿ, ಟಿ.ಸಿ. ಕೊಟ್ಟು ಬೇರೆ ಶಾಲೆಗೆ ಕಳಿಸಲಾಗುತ್ತದೆ. ಇಲ್ಲವೇ ಅಂತಹ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಉಳಿಸಿಕೊಂಡು, ಪರೀಕ್ಷೆಗೆ ಮಾತ್ರ ಬಾಹ್ಯ ವಿದ್ಯಾರ್ಥಿಗಳನ್ನಾಗಿ ಮಾಡುತ್ತಾರೆ.ಅತಿ ಹೆಚ್ಚಿನ ಸರಣಿ ಪರೀಕ್ಷೆಗಳನ್ನು ನಡೆಸುವುದರಿಂದ ಹಿಡಿದು ಮಕ್ಕಳಿಗೆ ಆಟವಾಡಲು ಅವಕಾಶವೇ ನೀಡದಿರುವು ದರ ಜೊತೆ ಶಾಲೆ ನಡೆಸುವ ಯಾವುದೇ ರೀತಿಯ ಚಟುವಟಿಕೆಗೆ ಈ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವ ಕಾಶವೇ ನೀಡದಂತಹ ಸ್ಥಿತಿ ಅನೇಕ ಕಡೆಯಿದೆ.  ಪರೀಕ್ಷಾ ಫಲಿತಾಂಶ ಸುಧಾರಣೆಗೆ ಸರಣಿ ಪರೀಕ್ಷೆಗಳು ಉತ್ತಮವಾದರೂ ಇಲಾಖೆಯ ನಿಯಮದಂತೆ ಮೂರು ಸರಣಿ ಪರೀಕ್ಷೆಗಳನ್ನು ನಡೆಸಬೇಕೆಂಬ ಸೂಚನೆಯನ್ನು ಮೀರಿ ಕೆಲವು      ಶಾಲೆಗಳವರು ಹೆಚ್ಚು ಹೆಚ್ಚು ಸರಣಿ ಪರೀಕ್ಷೆಗಳನ್ನು ನಡೆಸುತ್ತಾರೆ.ಕೆಲವು ಶಾಲೆಗಳಂತೂ ಹತ್ತು ಸರಣಿ ಪರೀಕ್ಷೆಗಳನ್ನು ನಡೆಸುತ್ತಿವೆ. ಒಂದು ಸರಣಿ ಪರೀಕ್ಷೆ ನಡೆಸಿದ ನಂತರ ಮೌಲ್ಯಮಾಪನ ಮಾಡಿ, ವಿದ್ಯಾರ್ಥಿಗಳಿಗೆ ಅದರ ಬಗ್ಗೆ ಸರಿ ಯಾದ ಮಾಹಿತಿ ನೀಡಲು ಸಮಯವೇ ಇಲ್ಲದಂತೆ ಪರೀಕ್ಷೆ ಗಳನ್ನು ನಡೆಸುತ್ತಾರೆ. ಈ ಕಾರಣದಿಂದ ವಿದ್ಯಾರ್ಥಿಗಳು ಸರಿ ಯಾದ ಹಿಮ್ಮಾಹಿತಿ ಪಡೆಯದೇ ಪರೀಕ್ಷೆಗಳನ್ನು ಯಾಂತ್ರಿಕವಾಗಿ ಬರೆಯುತ್ತಾ ಹೋಗುತ್ತಾರೆ. ಇದು ಸಾಮಾನ್ಯವಾಗಿ ಪ್ರೇರಣೆ ನೀಡುವುದರ ಬದಲು ಋಣಾತ್ಮಕ ಪರಿಣಾಮವನ್ನೇ ಬೀರುವ ಸಾಧ್ಯತೆ ಇರುತ್ತದೆ.ಶೇ 70ಕ್ಕೂ ಹೆಚ್ಚು ಕುಟುಂಬಗಳಲ್ಲಿ ಮಕ್ಕಳನ್ನು ಮನೆಪಾಠ ಅಥವಾ ಟುಟೋರಿಯಲ್‌ಗಳಿಗೆ ಕಳುಹಿಸಲಾಗುತ್ತದೆ.  ಶಾಲಾ ಬೋಧನೆಯ ಜೊತೆ ಟ್ಯೂಷನ್‌ಗಳಿಗೆ ಅಲೆದಾಟ ಹಾಗೂ ಅಲ್ಲಿಯ ವಿಶೇಷ ಬೋಧನೆಗಳಿಂದ ವಿದ್ಯಾರ್ಥಿಗಳು ಹೈರಾಣಾಗುತ್ತಾರೆ. ಮಕ್ಕಳು ಇಷ್ಟೇ ಅಂಕ ತೆಗೆಯಲಿ ಎಂಬ ಪೋಷಕರ ಮತ್ತು ಶಿಕ್ಷಕರ ನಿರೀಕ್ಷೆಗಳು ಮಕ್ಕಳಲ್ಲಿ ಇನ್ನಷ್ಟು ಒತ್ತಡ ಸೃಷ್ಟಿಸುತ್ತವೆ.ಮೊದಲೇ ಹದಿಹರೆಯದ ವಯಸ್ಸಿಗೆ ಕಾಲಿರಿಸಿ, ದೈಹಿಕ ಮತ್ತು ಮಾನಸಿಕ ತುಮುಲ ಹಾಗೂ ಸಂಘರ್ಷಗಳಲ್ಲಿ ತೊಳಲಾಡುವ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಶಾಲೆ, ಕಾಲೇಜುಗಳಲ್ಲಿ ‘ನೀನು ಎಸ್.ಎಸ್.ಎಲ್.ಸಿ, ನೀನು ಪಿ.ಯು.ಸಿ, ನೀನು ಚಿಕ್ಕವಯಸ್ಸಿನ ವನು ಅಲ್ಲ, ಸ್ವಲ್ಪ ಜವಾಬ್ದಾರಿಯಿಂದ ವರ್ತಿಸಿ, ಯಾವಾಗಲೂ ಒದುತ್ತಿರಬೇಕು...’ ಹೀಗೆ ಟೀಕೆ, ಮೂದಲಿಕೆಗಳು ಆಗಾಗ್ಗೆ ಕೇಳಿಬರುತ್ತವೆ. ಮನೆಯಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನ ವಾಗಿರುವುದಿಲ್ಲ. ಯಾವಾಗಲೂ ಓದು, ಓದು ಎಂಬ ಒತ್ತಡಗಳ ಜೊತೆ ಕೆಲವು ಮನೆಗಳಲ್ಲಿ ತಂದೆ-ತಾಯಿಯರು ಅವರ ಕಚೇರಿ ಕೆಲಸಗಳಿಗೆ ದೀರ್ಘ ರಜೆ ಹಾಕಿ ತಮ್ಮ ಮಕ್ಕಳನ್ನು ಬೆಂಬಲಿಸುವ ನೆಪದಲ್ಲಿ ಬಿಟ್ಟು ಬಿಡದೆ ವಿಪರೀತವೆನಿಸುವಷ್ಟು ಕಣ್ಗಾವಲು ಇರಿಸುತ್ತಾರೆ.ಓದಿನ ನಡುವೆ ತೆಗೆದುಕೊಳ್ಳುವ ಬಿಡುವು, ವಿಶ್ರಾಂತಿ ಹಾಗೂ ಆರೋಗ್ಯಕರ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು ಮಕ್ಕಳಲ್ಲಿ ಶೈಕ್ಷಣಿಕ ಸಾಧನೆಗೆ ಉತ್ತೇಜನ ನೀಡುತ್ತದೆಂಬ ಸರಳ ಅಂಶವನ್ನು ನಾವೆಲ್ಲ ಮರೆತಿದ್ದೇವೆಯೇ ಎಂಬ ಸಂಶಯ ಕಾಡುತ್ತದೆ. ಇದರ ಜೊತೆ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. ಹಂತಗಳಿಗೆ ವಿಪರೀತವೆನಿಸುವಷ್ಟು ಪ್ರಾಮುಖ್ಯ ನೀಡುವುದರ ಬದಲಾಗಿ ಆರಂಭದ ತರಗತಿಗಳಿಂದಲೇ ಶಿಕ್ಷಣದ ಗುಣಮಟ್ಟ ಅಭಿವೃದ್ಧಿಗೆ ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ದೂರಗಾಮಿ ಪರಿಣಾಮಗಳಿಗೆ ಕಾರಣವಾಗುತ್ತದೆ. ಮಕ್ಕಳನ್ನು ಶಾಲೆ ಅಥವಾ ಕಾಲೇಜಿಗೆ ದಾಖಲು ಮಾಡಿದ ಮೇಲೆ ಅಲ್ಲಿ ನೀಡುವ ಬೋಧನೆಯ ಕುರಿತಾಗಿ ಪೋಷಕರು ನಂಬಿಕೆ ಹೊಂದಿರಬೇಕು. ಅದು ಬಿಟ್ಟು ಕಷ್ಟಪಟ್ಟು ಸೀಟು ಗಿಟ್ಟಿಸಿಕೊಂಡ ಶಾಲೆಯ ಬೋಧನೆಯನ್ನು ನೆಚ್ಚಿಕೊಳ್ಳದೆ ಮನೆಪಾಠಕ್ಕೆ ಕಳುಹಿಸುವುದು ಸಮರ್ಥನೀಯವಲ್ಲ. ಇದರ ಜೊತೆ ಎಲ್ಲಾ ರೀತಿಯ ಮನೆಪಾಠ ಹಾಗೂ ಟ್ಯೂಟೋರಿಯಲ್‌ಗಳನ್ನು ನಿಷೇಧಿಸಿ, ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣವನ್ನು ಖಾತ್ರಿಪಡಿಸುವೆಡೆಗೆ ಗಂಭೀರ ಪ್ರಯತ್ನಗಳಾಗಬೇಕು.ಶಾಲಾವಧಿಯ ನಂತರವೂ ವಿಶೇಷ ಬೋಧನೆ, ಪರೀಕ್ಷೆಗಳ ನೆಪಗಳಲ್ಲಿ ಮಕ್ಕಳನ್ನು ಶಾಲೆಗಳಲ್ಲಿ ಉಳಿಸಿಕೊಂಡು, ಅವರಲ್ಲಿ ಅನಗತ್ಯ ಒತ್ತಡ, ಆತಂಕಗಳನ್ನು ಸೃಷ್ಟಿ ಮಾಡುವ ಶಾಲೆ, ಕಾಲೇಜುಗಳಿಗೆ ಅಂಕುಶ ಹಾಕಬೇಕು. ಇದರ ಜೊತೆ ಮಕ್ಕಳಿಗೆ ಓದಲು ವಿಪರೀತ ಒತ್ತಡ ಹೇರಿ, ಅವರಲ್ಲಿ ಖಿನ್ನತೆ, ಆತಂಕಗಳನ್ನುಂಟು ಮಾಡುವ ಕುಟುಂಬಗಳನ್ನೂ ಕಾನೂನು ವ್ಯಾಪ್ತಿಗೆ ತರಬೇಕು. ಮಕ್ಕಳ ವಿದ್ಯಾಭ್ಯಾಸ, ಕಲಿಕೆಗಳಿಗಿರುವಷ್ಟೇ ಪ್ರಾಮುಖ್ಯ ಅವರ ಸಹಜ ಸಂತೋಷ, ಆನಂದಗಳಿಗೂ ಇದೆ ಹಾಗೂ ಅವುಗಳಿಗೆ ಧಕ್ಕೆಯಾಗುವಂತೆ ನಡೆದುಕೊಳ್ಳುವುದೂ ಸಹ ಮಕ್ಕಳ ಹಕ್ಕುಗಳ ಉಲ್ಲಂಘನೆ ಎಂದು ಪರಿಭಾವಿಸಿ, ಅವರ ಮೇಲೆ ನಿಯಮಾನುಸಾರ ಶಿಸ್ತು ಕ್ರಮ, ಮಕ್ಕಳ ಹಕ್ಕುಗಳ ಆಯೋಗ ಅಥವಾ ಇತರೆ ಸಂಸ್ಥೆಗಳಿಂದ ಆಗುವಂತೆ ಮಾಡಬೇಕು.ಇಂಥ ಕ್ರಮಗಳನ್ನು ತೆಗೆದುಕೊಳ್ಳಲು ಸಮಯಾವಕಾಶದ ಅಗತ್ಯವಿದೆ. ತಕ್ಷಣದ ಕ್ರಮವಾಗಿ ಎಲ್ಲಾ ‘ಮಾರ್ಕ್ಸ್‌’ವಾದಿಗಳಿಗೆ ಕಿವಿಮಾತಿನ ಅಗತ್ಯವಿದೆ. ಹತ್ತನೇ ಮತ್ತು ಪಿ.ಯು.ಸಿ. ಹಂತದ ಮಕ್ಕಳನ್ನು ಅವರ ನೆಲೆಯಲ್ಲಿ ಪರಿಗಣಿಸಿ, ಅವರ ಶೈಕ್ಷಣಿಕ ಅಭಿವೃದ್ಧಿ ಅಥವಾ ಗುಣಮಟ್ಟ ಹೆಚ್ಚಳಕ್ಕೆ ಬೆಂಬಲಾತ್ಮಕ ಕ್ರಮಗಳ ಜೊತೆ ಪ್ರೇರಣೆ, ಪ್ರೋತ್ಸಾಹಕ ವಿಧಾನಗಳನ್ನು ಅಳವಡಿಸುವ ಕುರಿತಂತೆ ಶಾಲೆ, ಕಾಲೇಜು ಹಾಗೂ ಕುಟುಂಬಗಳಿಗೆ ಜಾಗೃತಿ, ತಿಳಿವಳಿಕೆಗಳ ಅಗತ್ಯವಿದೆ. ಪ್ರಸ್ತುತ ಪರೀಕ್ಷಾ ಸಮಯದಲ್ಲಿ ಈ ನಿಟ್ಟಿನಲ್ಲಿ ಚಿಂತಿಸಿ, ಅಗತ್ಯವಾದ ಕ್ರಮ ವಹಿಸುವುದರಿಂದ ಮಕ್ಕಳನ್ನು ಖಿನ್ನತೆ, ಆತಂಕ ಹಾಗೂ ಒತ್ತಡಗಳಿಂದ ಪಾರು ಮಾಡಲು ಸಾಧ್ಯವಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry