ಸಾಲು ಸಾಲು ಸಮಸ್ಯೆ– ಕಾಲಮಿತಿಯಲ್ಲಿ ಪರಿಹಾರ

7
ರಸ್ತೆಯಲ್ಲಿ ವ್ಹೀಲಿಂಗ್‌, ಹಂದಿಗಳ ಕಾಟ: ಸಮಸ್ಯೆ ಮುಂದಿಟ್ಟ ಸಾರ್ವಜನಿಕರು

ಸಾಲು ಸಾಲು ಸಮಸ್ಯೆ– ಕಾಲಮಿತಿಯಲ್ಲಿ ಪರಿಹಾರ

Published:
Updated:
ಸಾಲು ಸಾಲು ಸಮಸ್ಯೆ– ಕಾಲಮಿತಿಯಲ್ಲಿ ಪರಿಹಾರ

ಬೆಂಗಳೂರು: ಕೆರೆಗಳಿಗೆ ಕೊಳಚೆ ನೀರು ಸೇರಿ ಜಲಮೂಲ ನಾಶವಾಗುತ್ತಿದೆ ಎಂದು ಒಬ್ಬರು ದೂರಿದರೆ, ಹಂದಿಗಳ ಕಾಟ ವಿಪರೀತವಾಗಿದೆ ಎಂದು ಮತ್ತೊಬ್ಬರು ಅಳಲು ತೋಡಿಕೊಂಡರು. ಗಡವ ಮಂಗನನ್ನು ಹೇಗಾದರೂ ಓಡಿಸಿ ಎಂದು  ಹಿರಿಯ ನಾಗರಿಕರೊಬ್ಬರು ಅಲವತ್ತುಕೊಂಡರು.

ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳ ಕುಂದು ಕೊರತೆಗಳಿಗೆ ಪರಿಹಾರ ಕಂಡುಕೊಳ್ಳಲು ‘ಪ್ರಜಾವಾಣಿ’ ಮತ್ತು ‘ಡೆಕ್ಕನ್‌ ಹೆರಾಲ್ಡ್‌’ ಪತ್ರಿಕೆಗಳ ಆಶ್ರಯದಲ್ಲಿ ಜಯನಗರದ ನ್ಯಾಷನಲ್‌ ಕಾಲೇಜಿನ ಡಾ. ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ಶನಿವಾರ ಏರ್ಪಡಿಸಿದ್ದ ‘ಜನಸ್ಪಂದನ–ಸಿಟಿಜನ್ಸ್‌ ಫಾರ್‌ ಚೇಂಜ್‌’ ಕಾರ್ಯಕ್ರಮದಲ್ಲಿ ಜನರು ಪ್ರಸ್ತಾಪಿಸಿದ ಪ್ರಮುಖ ಸಮಸ್ಯೆಗಳಿವು.

ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ ಸ್ಥಳೀಯ ಶಾಸಕ ಆರ್‌. ಅಶೋಕ ಹಾಗೂ ಕ್ಷೇತ್ರದ ಎಂಟು ವಾರ್ಡ್‌ಗಳ ಬಿಬಿಎಂಪಿ ಸದಸ್ಯರು  ಈ ಸಮಸ್ಯೆಗಳನ್ನು ಕಾಲಮಿತಿಯೊಳಗೆ ಬಗೆಹರಿಸಲು ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ವ್ಹೀಲಿಂಗ್‌ಗೆ ಕಡಿವಾಣ ಹಾಕಿ: ‘ನಮ್ಮ ಬಡಾವಣೆಯಲ್ಲಿ ವಿಮಾನ ಇಳಿಯುವಂತಹ ಚೆಂದದ ರಸ್ತೆಯನ್ನು ನಿರ್ಮಿಸಲಾಗಿದೆ. ಹಂಪ್‌ (ರಸ್ತೆ ಉಬ್ಬು) ಇಲ್ಲದ ಕಾರಣ ವ್ಹೀಲಿಂಗ್‌ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ವೈಜ್ಞಾನಿಕವಾಗಿ ಹಂಪ್‌ಗಳನ್ನು ಅಳವಡಿಸಬೇಕು’ ಎಂದು ಪದ್ಮನಾಭನಗರದ ಭಾರತ್‌ ಹೌಸಿಂಗ್‌ ಬಡಾವಣೆಯ ಪದಾಧಿಕಾರಿ ಚಂದ್ರಶೇಖರ್‌ ಕೆ. ಮನವಿ ಮಾಡಿದರು.

‘ಕಾಲೇಜು ವಿದ್ಯಾರ್ಥಿಗಳಲ್ಲಿ ವ್ಹೀಲಿಂಗ್‌ ಪ್ರವೃತ್ತಿ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಈ ವರ್ಷ 13 ಪ್ರಕರಣಗಳನ್ನು ದಾಖಲಿಸಿದ್ದೇವೆ. 18 ವರ್ಷದೊಳಗಿನವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಕಾನೂನಿನಲ್ಲಿ ಅವಕಾಶ ಇಲ್ಲ’ ಎಂದು ಸಂಚಾರ ಪೊಲೀಸರು ಅಸಹಾಯಕತೆ ವ್ಯಕ್ತಪಡಿಸಿದರು.

ಆರ್‌. ಅಶೋಕ ಪ್ರತಿಕ್ರಿಯಿಸಿ, ‘ಯುವಕರು ವ್ಹೀಲಿಂಗ್‌ ನಡೆಸಿ ಬೇರೆಯವರಿಗೆ ತೊಂದರೆ ಕೊಡುತ್ತಿದ್ದಾರೆ. ಪೊಲೀಸರು ದಂಡ ವಿಧಿಸಿ ಬಿಡುತ್ತಿದ್ದಾರೆ. ಈ ಜನ್ಮದಲ್ಲಿ ವಾಹನ ಚಲಾಯಿಸಲು ಅವರಿಗೆ ಮತ್ತೆ ಅವಕಾಶ ಸಿಗಬಾರದು. ಅಂತಹ ಕ್ರಮ ಕೈಗೊಳ್ಳಬೇಕು’ ಎಂದರು.

ವ್ಹೀಲಿಂಗ್‌ ನಡೆಸುತ್ತಿರುವುದು ಕಂಡು ಬಂದರೆ 103ಕ್ಕೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದು ಪೊಲೀಸರು ವಿನಂತಿಸಿದರು.

‘ಇಸ್ರೊ ಬಡಾವಣೆಯ ಕೆರೆಗೆ ಕೊಳಚೆ ನೀರು ಸೇರುತ್ತಿದೆ. ಆಸುಪಾಸಿನಲ್ಲಿ ಹಂದಿಗಳ ಕಾಟ ಜಾಸ್ತಿಯಾಗಿದೆ’ ಎಂದು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ದಿಲೀಪ್‌ ಗಮನ ಸೆಳೆದರು.

‘ಬಿಬಿಎಂಪಿ ವ್ಯಾಪ್ತಿಯಲ್ಲಿ ಹಂದಿ ಸಾಕಲು ಅವಕಾಶ ಇಲ್ಲ. ಅವುಗಳನ್ನು ವಶಪಡಿಸಿಕೊಳ್ಳಿ’ ಎಂದು ಶಾಸಕರು ಸೂಚಿಸಿದರು. ಗೌಡನಪಾಳ್ಯ ಕೆರೆಯ ಹತ್ತಿರವೂ ಈ ಸಮಸ್ಯೆ ಇದೆ ಎಂದು ಕಲಾವತಿ ದೂರಿದರು.

ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿ ಉತ್ತರಿಸಿ, ‘ನಗರದಲ್ಲಿ ಹಂದಿಗಳನ್ನು ಹಿಡಿಯಲು ಟೆಂಡರ್ ಕರೆದಿದ್ದೇವೆ. ಆದರೆ, ಅವುಗಳನ್ನು ಹರಾಜು ಹಾಕುವಂತಿಲ್ಲ’ ಎಂದರು.

‘ಹರಾಜು ಏಕೆ ಹಾಕುತ್ತೀರಿ. ಅದನ್ನು ಹಳ್ಳಿಯ ಜನರಿಗೆ ಕೊಡಿ. ಅವರು ತಿಂದು ಮುಗಿಸುತ್ತಾರೆ’ ಎಂದು ಅಶೋಕ  ಹೇಳಿದಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿತು.

ಬನಶಂಕರಿ ಎರಡನೇ ಹಂತದಲ್ಲಿ ಕೋತಿಗಳ ಕಾಟ ಹೆಚ್ಚಾಗಿದ್ದು, ಅವುಗಳನ್ನು ಹಿಡಿಯಬೇಕು ಎಂದು ಸ್ಥಳೀಯ ನಿವಾಸಿ ವಾಸುದೇವ್‌ ಒತ್ತಾಯಿಸಿದರು.

ಪಾಲಿಕೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉತ್ತರಿಸಿ, ‘ಹಕ್ಕಿಗಳ ರಕ್ಷಣೆ ಮಾಡುವುದು, ಹಾವು ಹಾಗೂ ಮಂಗಗಳನ್ನು ಹಿಡಿಯುವುದು ಪಾಲಿಕೆಯ ವನ್ಯಜೀವಿ ವಿಭಾಗದವರು. ಅವರ ಸಂಪರ್ಕ ಸಂಖ್ಯೆ ಕೊಡುತ್ತೇನೆ’ ಎಂದರು.

‘ಅವರಿಗೆ ಹತ್ತಾರು ಬಾರಿ ಹೇಳಿದ್ದೇನೆ. ಗಡವ ಮಂಗನನ್ನು ಊರಿನ ಹೊರಗೆ ಬಿಟ್ಟರೆ ಸಮಸ್ಯೆ ಪರಿಹಾರ ಆಗುತ್ತದೆ ಎಂದು ಅವರು ಹೇಳಿದ್ದಾರೆ. ಅದನ್ನು ಓಡಿಸುವುದು ಹೇಗೆ’ ಎಂದು ವಾಸುದೇವ್ ಪ್ರಶ್ನಿಸಿದರು.

ಮೆಟ್ರೊ ಸಮಸ್ಯೆ ಅಲ್ಲವೇ: ಜಯನಗರ ಸಮನ್ವಯ ವೇದಿಕೆಯ ಪದಾಧಿಕಾರಿಗಳು ಪ್ರಶ್ನೆ ಕೇಳಲು ಮುಂದಾದರು. ಆಗ ಅಶೋಕ, ‘ನಿಮ್ಮದು ಮೆಟ್ರೊ ಸಮಸ್ಯೆ ಅಲ್ಲವೇ. ಈ ಸಮಸ್ಯೆ ಇರುವ ಜಾಗ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಆದರೂ, ಇಲ್ಲಿ ಹೇಳಿ. ಪಕ್ಕದ ಕ್ಷೇತ್ರದ ಶಾಸಕರ ಗಮನಕ್ಕೆ ತರುತ್ತೇನೆ’ ಎಂದು ಭರವಸೆ ನೀಡಿದರು. ಆಗ ಸಮಿತಿಯ  ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ, ‘ಅದಲ್ಲ. ಲಕ್ಷ್ಮಣ ರಾವ್‌ ಉದ್ಯಾನದಲ್ಲಿ ಮೆಟ್ರೊ ಕಾಮಗಾರಿ  ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ಮೊರೆ ಹೋಗಿದ್ದೇವೆ’ ಎಂದರು.

‘ಜಯನಗರ ಭಾಗದಲ್ಲಿ ಮೆಟ್ರೊ ಮೊದಲನೇ ಹಂತದ ಕಾಮಗಾರಿ ಪೂರ್ಣಗೊಂಡು ಮೂರು ವರ್ಷಗಳು ಕಳೆದವು. ಆದರೆ, ವಾಣಿಜ್ಯ ಸಂಚಾರ ಇನ್ನೂ ಆರಂಭವಾಗಿಲ್ಲ. ಇದಕ್ಕೆ ಇನ್ನೆಷ್ಟು ಸಮಯ ಬೇಕು’ ಎಂದು ಜಯನಗರ ಏಳನೇ ಬಡಾವಣೆಯ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

ಕೆ.ಮಹದೇವ ರಾವ್‌ ಚವ್ಹಾಣ್‌ ಪ್ರಶ್ನಿಸಿದರು.

ಬೆಂಗಳೂರು ಮೆಟ್ರೊ ರೈಲು ನಿಗಮದ ಮುಖ್ಯ ಎಂಜಿನಿಯರ್‌ ಶ್ರೀನಿವಾಸ್‌ ಉತ್ತರಿಸಿ, ‘ಈ ಮಾರ್ಗದಲ್ಲಿ ಎರಡು ತಿಂಗಳಿಂದ ಪ್ರಾಯೋಗಿಕ ಸಂಚಾರ ನಡೆಯುತ್ತಿದೆ. ವಾಣಿಜ್ಯ ಸಂಚಾರಕ್ಕೆ ರೈಲ್ವೆ ಸುರಕ್ಷತಾ ಆಯುಕ್ತರ ಅನುಮತಿ ಅಗತ್ಯ. ಈ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದು ತಿಂಗಳು ಬೇಕು’ ಎಂದರು.

‘ಚಿಕ್ಕಲಸಂದ್ರ ವಾರ್ಡ್‌ನ ಭುವನೇಶ್ವರಿ ನಗರದಲ್ಲಿ  ಪಾದಚಾರಿ ಮಾರ್ಗಗಳಲ್ಲಿರುವ ಮೂರು ವಿದ್ಯುತ್‌ ಪರಿವರ್ತಕಗಳನ್ನು ತೆರವುಗೊಳಿಸಬೇಕು’ ಎಂದು ಸ್ಥಳೀಯ ನಿವಾಸಿ ಎಚ್‌.ಕೆ.ಸುರೇಶ್‌ ಒತ್ತಾಯಿಸಿದರು.

‘ಇವುಗಳನ್ನು  ಸ್ಥಳಾಂತರಿಸಲು  ಉದ್ಯಾನ ಅಥವಾ ಖಾಲಿ ಜಾಗಗಳನ್ನು ಗುರುತಿಸುತ್ತಿದ್ದೇವೆ’ ಎಂದು ಬೆಸ್ಕಾಂನ ದಕ್ಷಿಣ ವಲಯದ ಕಾರ್ಯನಿರ್ವಾಹಕ ಎಂಜಿನಿಯರ್‌ ಕೃಷ್ಣ ತಿಳಿಸಿದರು.‘ಮನೆ ಹತ್ತಿರ ಸಿ.ಸಿ.ಟಿ.ವಿ. ಕ್ಯಾಮೆರಾ ಹಾಕಿಸಿ’

‘ಇತ್ತೀಚಿನ ದಿನಗಳಲ್ಲಿ ಕಳವು ಪ್ರಕರಣಗಳು ಹೆಚ್ಚುತ್ತಿವೆ. ಕಳ್ಳರ ಪತ್ತೆ ಹಚ್ಚಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದೇವೆ. ನಾಗರಿಕರು ಮನೆಯ ಹತ್ತಿರ ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಹಾಕಿಸಬೇಕು’ ಎಂದು ಡಿಸಿಪಿ ಎಸ್‌.ಡಿ. ಶರಣಪ್ಪ ವಿನಂತಿದರು.

‘ಮನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳು ಇರುತ್ತವೆ. ಸಿ.ಸಿ.ಟಿ.ವಿ. ಕ್ಯಾಮೆರಾಗಳನ್ನು ಹಾಕಿಸಲು ಗರಿಷ್ಠ ₹1 ಲಕ್ಷ ಸಾಕು. ಕ್ಯಾಮೆರಾ ಇದ್ದರೆ ಕಳ್ಳರಲ್ಲೂ ಭಯ ಮೂಡುತ್ತದೆ’ ಎಂದರು.‘ಕ್ಷೇತ್ರದ ಕಾಮಗಾರಿ ಮಾಹಿತಿ ವೆಬ್‌ಸೈಟ್‌ನಲ್ಲಿ’

‘ಕ್ಷೇತ್ರದ ಎಲ್ಲ ಕಾಮಗಾರಿಗಳ ಮಾಹಿತಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ’ ಎಂದು  ಆರ್‌. ಅಶೋಕ ತಿಳಿಸಿದರು.

‘ಪ್ರತಿ ವಾರ್ಡ್‌ನಲ್ಲಿ ತಲಾ ಮೂರು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಮಾಡಲಾಗಿದೆ.  ಇನ್ನಷ್ಟು ಘಟಕ ಸ್ಥಾಪಿಸಲು ಸಿದ್ಧ’ ಎಂದು ಭರವಸೆ ನೀಡಿದರು.

‘ಕರಿಸಂದ್ರ ಹಾಗೂ ಬನಶಂಕರಿಯಲ್ಲಿ ₹1.5 ಕೋಟಿ ವೆಚ್ಚದಲ್ಲಿ ಹೊಸ ಚಿತಾಗಾರಗಳನ್ನು ನಿರ್ಮಿಸುತ್ತೇವೆ.  ಇದಕ್ಕೆ ಶಾಸಕರ ನಿಧಿಯಿಂದಲೂ ಅನುದಾನ ನೀಡುತ್ತೇನೆ’ ಎಂದು ತಿಳಿಸಿದರು.

‘ರೋಗಿಗಳ ಅನುಕೂಲಕ್ಕಾಗಿ ಕ್ಷೇತ್ರದ ವಿವಿಧೆಡೆ ಡಯಾಲಿಸಿಸ್‌ ಕೇಂದ್ರಗಳನ್ನು ಆರಂಭಿಸಿದ್ದೇವೆ. ಇಲ್ಲಿ ಪ್ರತಿ ಡಯಾಲಿಸಿಸ್‌ಗೆ ಕೇವಲ ₹50  ಶುಲ್ಕ ವಿಧಿಸಲಾಗುತ್ತಿದೆ. ಕೆಲವು ಕೇಂದ್ರಗಳಲ್ಲಿ ಬಡವರಿಗೆ ಉಚಿತ ಸೇವೆ ಇದೆ’ ಎಂದು ಮಾಹಿತಿ ನೀಡಿದರು.‘ಪುಟ್ಟಣ್ಣ ಕಣಗಾಲ್‌ ಚಿತ್ರಮಂದಿರ ಉದ್ಘಾಟನೆಗೊಳ್ಳಲಿ’

‘ಜಯನಗರದ ನವೀಕೃತ ಪುಟ್ಟಣ್ಣ ಕಣಗಾಲ್‌ ಚಿತ್ರಮಂದಿರವನ್ನು ಉದ್ಘಾಟಿಸಬೇಕು.  ಲಕ್ಷ್ಮಣ ರಾವ್‌ ಉದ್ಯಾನದಲ್ಲಿ ಸ್ಥಾಪಿಸಿರುವ ಘನತ್ಯಾಜ್ಯ ಸಂಸ್ಕರಣಾ ಘಟಕ ದುರ್ನಾತ ಬೀರುತ್ತಿದೆ. ಈ ಸಮಸ್ಯೆಗೆ ಪರಿಹಾರ ಸೂಚಿಸಿ’ ಎಂದು ಸಮನ್ವಯ ವೇದಿಕೆಯ ಪದಾಧಿಕಾರಿಯೊಬ್ಬರು ಒತ್ತಾಯಿಸಿದರು.

‘ಚಿತ್ರಮಂದಿರವನ್ನು ಬಿಡಿಎ ₹52 ಕೋಟಿ ವೆಚ್ಚದಲ್ಲಿ ನಿರ್ಮಿಸಿದೆ. 15 ವರ್ಷದವರೆಗೆ ಬಿಡಿಎ ನಿರ್ವಹಣೆ ಮಾಡಲಿದೆ. ಅದಕ್ಕೆ ಬಾಡಿಗೆ ನಿಗದಿ ಮಾಡುವ ವಿಷಯದಲ್ಲಿ ಗೊಂದಲ ಇರುವುದರಿಂದ ಉದ್ಘಾಟನೆ ವಿಳಂಬವಾಗುತ್ತಿದೆ’ ಎಂದು ಪಾಲಿಕೆಯ ಜಂಟಿ ಆಯುಕ್ತ ಡಾ.ವಿಶ್ವನಾಥ್‌ ಉತ್ತರಿಸಿದರು.

ಫಟಾಫಟ್‌ ಪ್ರಶ್ನೆ– ಪಟಪಟನೆ ಉತ್ತರ

* ಎನ್‌.ಎಸ್‌.ಹೊಳ್ಳ: ಗಣೇಶ ಮಂದಿರ ವಾರ್ಡ್‌ನಲ್ಲಿ (165ನೇ ವಾರ್ಡ್‌) ರಾಜಕಾಲುವೆಯ ಕಾಮಗಾರಿ ಶೇ 80ರಷ್ಟು ಪೂರ್ಣಗೊಂಡಿದೆ. ಬಾಕಿ ಕಾಮಗಾರಿಯನ್ನು ಮುಗಿಸಬೇಕು. ಬಡಾವಣೆಯಲ್ಲಿರುವ ಉದ್ಯಾನದಲ್ಲಿ ಆಸನ ಅಳವಡಿಸಬೇಕು.

ಲಕ್ಷ್ಮಿ ಉಮೇಶ್‌, ಪಾಲಿಕೆ ಸದಸ್ಯೆ: ನಿಗದಿತ ಅವಧಿಯಲ್ಲಿ ರಾಜಕಾಲುವೆ ಕಾಮಗಾರಿ ಪೂರ್ಣಗೊಳಿಸುತ್ತೇವೆ. 15 ದಿನಗಳಲ್ಲಿ ಉದ್ಯಾನದಲ್ಲಿ ಬೆಂಚ್‌ಗಳನ್ನು ಹಾಕಿಸುತ್ತೇನೆ.

* ಪ್ರಶಾಂತ್‌: ಕಿತ್ತೂರು ರಾಣಿ ಚೆನ್ನಮ್ಮ ವೃತ್ತದ ಬಳಿ  ಪ್ರಯಾಣಿಕರ ತಂಗುದಾಣ ನಿರ್ಮಿಸಬೇಕು.

ಲಕ್ಷ್ಮಿ ಉಮೇಶ್‌: ಶೀಘ್ರದಲ್ಲೇ ಬಸ್‌ ತಂಗುದಾಣ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ.

* ಎಸ್‌.ನವೀನ್‌: ಕರಿಸಂದ್ರದಲ್ಲಿ ಬೆಂಗಳೂರು ಒನ್‌ ಕೇಂದ್ರ ಸ್ಥಾಪಿಸಿ.

ಡಾ.ವಿಶ್ವನಾಥ್‌, ಜಂಟಿ ಆಯುಕ್ತ,: ಜಾಗವನ್ನು ಗುರುತಿಸಿ ಕೇಂದ್ರ ನಿರ್ಮಿಸಲು ಕ್ರಮ ಕೈಗೊಳ್ಳುತ್ತೇನೆ.* ಸಂತೋಷ್‌ ಗುರುರಾಜ್‌: ಗಣೇಶ ಮಂದಿರ ವಾರ್ಡ್‌ನ 24 ನೇ ಮುಖ್ಯರಸ್ತೆಯಲ್ಲಿ ಬೀದಿಬದಿ ವ್ಯಾಪಾರಿಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು.

ಡಾ.ವಿಶ್ವನಾಥ್‌: ಬೀದಿ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸುವ ಕುರಿತು ಆಯುಕ್ತರ ಮಟ್ಟದಲ್ಲಿ ಸಭೆ ನಡೆದಿದೆ. ಕೋರ್ಟ್‌ ಸೂಚನೆ ಪ್ರಕಾರ ಅವರಿಗೆ ಗುರುತಿನ ಚೀಟಿ ನೀಡುತ್ತೇವೆ. ಇದಕ್ಕೆ ಸ್ವಲ್ಪ ಸಮಯ ಬೇಕು.* ವಿ.ನಾರಾಯಣ ರೆಡ್ಡಿ: ಕುಮಾರಸ್ವಾಮಿ ಬಡಾವಣೆಯಲ್ಲಿ ಸಮುದಾಯ ಭವನ ಹಾಗೂ ಯೋಗ ಭವನ ನಿರ್ಮಿಸಿಕೊಡಬೇಕು.

ಎಲ್‌. ಶ್ರೀನಿವಾಸ್‌, ಪಾಲಿಕೆ ಸದಸ್ಯ: ಕಾಲಭೈರವೇಶ್ವರ ದೇವಸ್ಥಾನದ ಬಳಿ ₹25 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಟೆಂಡರ್‌ ಕರೆಯಲಾಗಿದೆ. ಯೋಗ ಭವನ ನಿರ್ಮಾಣಕ್ಕೆ ಜಾಗದ ಕೊರತೆ ಇದೆ.

* ವರದರಾಜ್‌: ಯಡಿಯೂರು ವಾರ್ಡ್‌ನಲ್ಲಿ ಇ–ತ್ಯಾಜ್ಯ ಹಾಗೂ ಗಾಜುಗಳನ್ನು ಸಂಗ್ರಹಿಸಲು ಕಸದ ಕಂಟೇನರ್‌ ಇಡಬೇಕು. ಇದರಿಂದ ಇ–ತ್ಯಾಜ್ಯ ವಿಂಗಡಣೆ ಸುಲಭವಾಗಲಿದೆ.

ಡಾ.ವಿಶ್ವನಾಥ್‌: ಸಾಹಸ್‌ ಸಂಸ್ಥೆಯ ಸಹಯೋಗದಲ್ಲಿ ಬಿಟಿಎಂ ಬಡಾವಣೆಯಲ್ಲಿ ಇ–ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದೆ. ಪದ್ಮನಾಭನಗರ ಕ್ಷೇತ್ರದಲ್ಲೂ ಇ–ತ್ಯಾಜ್ಯ ಸಂಗ್ರಹಕ್ಕೆ ಕ್ರಮ ಕೈಗೊಳ್ಳುತ್ತೇನೆ.

* ಎಚ್‌.ವಿ.ಶ್ರೀನಿವಾಸ ಮೂರ್ತಿ: ಕದಿರೇನಹಳ್ಳಿ ಪೆಟ್ರೋಲ್‌ ಬಂಕ್‌ನಿಂದ ಉತ್ತರಹಳ್ಳಿ ವೃತ್ತದವರೆಗಿನ ರಸ್ತೆಯಲ್ಲಿ ವಾಹನ ನಿಲುಗಡೆ ಮಾಡಲಾಗುತ್ತಿದೆ.  ಅಲ್ಲದೇ, ಪ್ರಾರ್ಥನಾ ಶಾಲೆ ಎದುರು ಕೂಡಾ ವಾಹನ ನಿಲುಗಡೆ ಮಾಡಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಆರ್‌. ಅಶೋಕ: ಸಂಚಾರ ಪೊಲೀಸರು ಹಾಗೂ ಪಾಲಿಕೆ ಸದಸ್ಯರು ಪ್ರಾರ್ಥನಾ ಶಾಲೆಯ ಆಡಳಿತ ಮಂಡಳಿ ಜತೆ ಮಾತನಾಡಿ ಸಮಸ್ಯೆಯನ್ನು ಬಗೆಹರಿಸಬೇಕು. ನಿಷೇಧಿತ ಪ್ರದೇಶದಲ್ಲಿ ವಾಹನ ನಿಲ್ಲಿಸುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.

* ಕಿಶೋರ್‌: ಕುಮಾರಸ್ವಾಮಿ ಬಡಾವಣೆಯಲ್ಲಿ ಬೀದಿ ದೀಪಗಳ ವ್ಯವಸ್ಥೆ ಸರಿ ಇಲ್ಲ. ರಾತ್ರಿ ವೇಳೆ ಮಹಿಳೆಯರು ಓಡಾಡಲು ತೊಂದರೆ ಉಂಟಾಗುತ್ತಿದೆ.

ರಾಮಾಂಜನೇಯ, ಕಾರ್ಯನಿರ್ವಾಹಕ ಎಂಜಿನಿಯರ್‌ (ಎಲೆಕ್ಟ್ರಿಕಲ್‌):  ನಗರದಲ್ಲಿ ಬೀದಿ ದೀಪಗಳ ಅಳವಡಿಕೆಗೆ ₹1 ಕೋಟಿ ಬಿಡುಗಡೆ ಮಾಡಲಾಗಿದೆ. ಶೀಘ್ರದಲ್ಲೇ ಎಲ್‌ಇಡಿ ದೀಪಗಳನ್ನು ಅಳವಡಿಸುತ್ತೇವೆ.

* ಬಿ.ಎಸ್‌.ವಿಶ್ವನಾಥ್‌: ಚಿಕ್ಕಲಸಂದ್ರದ ಕೆಇಬಿ ರಸ್ತೆಯ ನಿಷೇಧಿತ ಪ್ರದೇಶದಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ಸಾಯಿ ಗೋಲ್ಡ್‌ ಪ್ಯಾಲೇಸ್‌ ಬಳಿ ಏಕಮುಖ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಜನರಿಗೆ ಯಾವುದೇ ಅನುಕೂಲವಾಗುತ್ತಿಲ್ಲ.

ಸಂಚಾರ ಪೊಲೀಸ್‌ ಅಧಿಕಾರಿ: ಏಕಮುಖ ಸಂಚಾರದಿಂದ ಜನರಿಗೆ ಅನುಕೂಲವಾಗಿದೆ. ನಿಷೇಧಿತ ಪ್ರದೇಶದಲ್ಲಿ ನಿಲ್ಲಿಸಿದ ವಾಹನಗಳನ್ನು ಟೋಯಿಂಗ್‌ ಮಾಡಲಾಗುತ್ತಿದೆ.

* ಎಚ್‌.ಶ್ರೀನಿವಾಸ್‌: ಹೊಸಕೆರೆಹಳ್ಳಿ ಬಸ್‌ ನಿಲ್ದಾಣದ ಬಳಿ ರಸ್ತೆ ಕಿರಿದಾಗಿದೆ. ರಸ್ತೆಯ ಎರಡೂ ಬದಿಗಳಲ್ಲಿ ಬೀದಿ ವ್ಯಾಪಾರಿಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಸಂಚಾರ ಪೊಲೀಸ್‌ ಅಧಿಕಾರಿ: ಬೀದಿ ಬದಿಯ ಅಂಗಡಿಗಳನ್ನು ತೆರವುಗೊಳಿಸುತ್ತೇವೆ. ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಬಿಬಿಎಂಪಿ ಅಧಿಕಾರಿಗಳ ಜತೆ ಚರ್ಚಿಸುತ್ತೇವೆ.

* ಶ್ರೀಧರ್‌: ಚಿಕ್ಕಲಸಂದ್ರ ವಾರ್ಡ್‌ನ ಗಂಗಮ್ಮ ದೇವಾಲಯದ ಬಳಿ ಅರಣ್ಯ ಇಲಾಖೆಗೆ ಸೇರಿದ ಕಟ್ಟಡವನ್ನು ಬಾಡಿಗೆಗೆ ನೀಡಲಾಗಿದೆ. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ. ಕಟ್ಟಡದಲ್ಲಿರುವವರನ್ನು ಹೊರಗೆ ಹಾಕಿ, ಅಲ್ಲಿ ಅಂಗನವಾಡಿ ಆರಂಭಿಸಬೇಕು.

ಆಂಜನಪ್ಪ, ಎಇಇ, ಪದ್ಮನಾಭನಗರ: ಕಟ್ಟಡದಲ್ಲಿ ಇರುವವರನ್ನು ಖಾಲಿ ಮಾಡಿಸುತ್ತೇವೆ.

* ಜಯನಗರದ 7ನೇ ಬ್ಲಾಕ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ: ಲಕ್ಷ್ಮಣರಾವ್‌ ‘ಇ’ ಉದ್ಯಾನಕ್ಕೆ ನಿಘಂಟು ತಜ್ಞ ಜಿ.ವೆಂಕಟಸುಬ್ಬಯ್ಯ ಹೆಸರನ್ನು ಇಡಬೇಕು. ಬಡಾವಣೆಯಲ್ಲಿ ತೆಂಗಿನ ಮರಗಳು ಹೆಚ್ಚಾಗಿದ್ದು, ಅದರ ಗರಿಗಳು ಬೀಳುವ ಅಪಾಯವಿದೆ. ಹೀಗಾಗಿ ಗರಿಗಳನ್ನು ತೆಗೆಸಬೇಕು.

ಆರ್‌.ಅಶೋಕ್‌: ಅವರ ಹೆಸರು ಇಡಲು ಕ್ರಮ ಕೈಗೊಳ್ಳುತ್ತೇನೆ. ತೆಂಗಿನ ಗರಿಗಳನ್ನು ತೆಗೆಸಲು ಬಿಬಿಎಂಪಿ ಆಯುಕ್ತರು ವಿಶೇಷ ಆದೇಶ ಹೊರಡಿಸಿದ್ದಾರೆ. ಪ್ರತಿ ವಾರ್ಡ್‌ಗೆ ₹1 ಲಕ್ಷ ನೀಡಲಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry