ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನಶೀಲತೆ ರಕ್ಷಣೆಗೊಂದು ಕೋಟೆ

Last Updated 25 ಮಾರ್ಚ್ 2017, 5:15 IST
ಅಕ್ಷರ ಗಾತ್ರ

ಹಕ್ಕು ಆಧಾರಿತ ಧೋರಣೆಯ ಮೂಲಕ ಬೌದ್ಧಿಕ ಆಸ್ತಿ ಹಕ್ಕು ಕಾಯ್ದೆಯು ಸೃಜನಶೀಲ ಮತ್ತು ಆವಿಷ್ಕಾರಗಳಿಗೆ ಮನ್ನಣೆ ನೀಡಿ ಅವನ್ನು ರಕ್ಷಿಸುತ್ತದೆ. ಸಾರ್ವತ್ರಿಕವಾಗಿ ಗುರುತಿಸಲಾದ ಬೌದ್ಧಿಕ ಚಟುವಟಿಕೆಗಳ ಉತ್ಪನ್ನಗಳಾದ ಪೇಟೆಂಟ್, ಹಕ್ಕುಸ್ವಾಮ್ಯ ಮತ್ತು ನೆರೆಹೊರೆ ಹಕ್ಕುಗಳು, ಟ್ರೇಡ್‌ಮಾರ್ಕ್, ವಿನ್ಯಾಸಗಳು, ಭೌಗೋಳಿಕ ವೈಶಿಷ್ಟ್ಯದ ಗುರುತುಗಳು, ವ್ಯಾಪಾರ ಗುಟ್ಟುಗಳು, ಗೋಪ್ಯ ಮಾಹಿತಿಗಳು, ಸಸ್ಯ ಪ್ರಭೇದಗಳು ಬೌದ್ಧಿಕ ಆಸ್ತಿ ಹಕ್ಕಿನ ವ್ಯಾಪ್ತಿಯಲ್ಲಿ ಬರುತ್ತವೆ.

‘ನಾವೀನ್ಯ’ದ ಅಗತ್ಯಗಳಿಗೆ ಅನುಗುಣವಾಗಿರುವ ಆವಿಷ್ಕಾರಗಳಿಗೆ- ಉತ್ಪನ್ನ ಅಥವಾ ಪ್ರಕ್ರಿಯೆಗಳಿಗೆ ಹಕ್ಕುಸ್ವಾಮ್ಯ ಕಚೇರಿಯ ಪ್ರಕ್ರಿಯೆಗಳನ್ನು ಪೂರೈಸುವ ಮೂಲಕ ಬೌದ್ಧಿಕ ಹಕ್ಕು ರಕ್ಷಣೆ ಪಡೆಯಬಹುದು. ಅತ್ಯಗತ್ಯವಾದ ವಸ್ತುಗಳು ಮತ್ತು ಸರ್ಕಾರಗಳು ತಮ್ಮ ನೀತಿಯ ಭಾಗವಾಗಿ ಪ್ರತ್ಯೇಕವಾಗಿ ಇರಿಸುವ ಅಂಶಗಳು ಮಾತ್ರ ಇದರ ವ್ಯಾಪ್ತಿಗೆ ಬರುವುದಿಲ್ಲ. ಹಕ್ಕುಸ್ವಾಮ್ಯಕ್ಕೆ ಪ್ರಾದೇಶಿಕ ಸ್ವರೂಪ ಇದೆ. ಹಕ್ಕುಸ್ವಾಮ್ಯವನ್ನು ಯಾವ ಪ್ರದೇಶದಲ್ಲಿ ನೀಡಲಾಗಿದೆಯೋ ಆ ಪ್ರದೇಶಕ್ಕೆ ಅದು ಸೀಮಿತವಾಗಿರುತ್ತದೆ.

ಹಕ್ಕುಸ್ವಾಮ್ಯ ಕಾಯ್ದೆಯ ಸೆಕ್ಷನ್ 3ರ ಪ್ರಕಾರ, ಈಗಾಗಲೇ ಗೊತ್ತಿರುವ ವಿಷಯದ ಬೇರೊಂದು ರೂಪಕ್ಕೆ ಹಕ್ಕುಸ್ವಾಮ್ಯ ಪಡೆದುಕೊಳ್ಳುವುದಕ್ಕೆ ಅವಕಾಶ ಇಲ್ಲ. ಸಸ್ಯಗಳು/ಪ್ರಾಣಿಗಳು, ವೈದ್ಯಕೀಯ ವಿಧಾನಗಳು, ಆವಿಷ್ಕಾರಗಳು, ಕಂಪ್ಯೂಟರ್ ಪ್ರೋಗ್ರಾಂ, ಪಾರಂಪರಿಕ ಜ್ಞಾನ ಮುಂತಾದವು ಈ ವ್ಯಾಪ್ತಿಯಲ್ಲಿ ಬರುತ್ತವೆ. ಹಕ್ಕುಸ್ವಾಮ್ಯ ಪಡೆದುಕೊಂಡವರಿಗೆ ಆ ವಸ್ತು ಅಥವಾ ಪ್ರಕ್ರಿಯೆ ಮೇಲೆ 20 ವರ್ಷಗಳ ಅವಧಿಗೆ ಸ್ವಾಮ್ಯ ಇರುತ್ತದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಬಳಕೆಗೆ ಈ ಹಕ್ಕುಗಳಿಂದ ವಿನಾಯಿತಿಯೂ ಇದೆ.

ಪ್ರಯೋಗದ ಉದ್ದೇಶಕ್ಕೆ, ಹಕ್ಕುಸ್ವಾಮ್ಯ ಕೊನೆಗೊಂಡ ನಂತರ ವಸ್ತುವಿಗೆ ಮಾರುಕಟ್ಟೆ ಸೃಷ್ಟಿಸಲು ಹಕ್ಕುಸ್ವಾಮ್ಯದ ಅವಧಿಯಲ್ಲಿಯೇ ಪರೀಕ್ಷೆಗಳನ್ನು ನಡೆಸಲು, ಮೊದಲ ಮಾರಾಟದ ನಂತರ ಹಕ್ಕುಸ್ವಾಮ್ಯ ಕೊನೆಗೊಂಡರೆ ಪರ್ಯಾಯ ವಸ್ತುಗಳ ಆಮದು, ಸರ್ಕಾರಿ ಉದ್ದೇಶಗಳಿಗೆ ಹಕ್ಕುಸ್ವಾಮ್ಯ ಇರುವ ವಸ್ತು ಅಥವಾ ಪ್ರಕ್ರಿಯೆಯನ್ನು ಬಳಸುವುದಕ್ಕೆ ಅವಕಾಶ ಇದೆ. ಕಡ್ಡಾಯ ಪರವಾನಗಿ ನೀಡುವುದಕ್ಕೂ ಅವಕಾಶ ಇದೆ. ಮೂತ್ರಕೋಶ ಮತ್ತು ಯಕೃತ್ತಿನ ತೀವ್ರ ಅನಾರೋಗ್ಯಕ್ಕೆ ಚಿಕಿತ್ಸೆ ನೀಡಲು ಬಳಸುವ ‘ನೆಕ್ಸ್‌ವರ್’ ಔಷಧವನ್ನು ಬಾಯರ್ ಕಂಪೆನಿಯು ತಿಂಗಳಿಗೆ ₹ 2.80 ಲಕ್ಷ ಮತ್ತು ವರ್ಷಕ್ಕೆ ₹ 33.65 ಲಕ್ಷಕ್ಕೆ ಮಾರಾಟ ಮಾಡುತ್ತಿತ್ತು.  ಆದರೆ ಈ ಔಷಧವನ್ನು ತಿಂಗಳಿಗೆ ₹ 8,880ಕ್ಕೆ ಮಾರಾಟ ಮಾಡಲು ನ್ಯಾಟ್ಕೊ ಕಂಪೆನಿಗೆ 2012ರಲ್ಲಿ ಕಡ್ಡಾಯ ಪರವಾನಗಿ ನೀಡಲಾಗಿತ್ತು.

ವಿಶಿಷ್ಟವಾದ ಟ್ರೇಡ್‌ಮಾರ್ಕ್‌ಗಳಿಗೆ ಹತ್ತು ವರ್ಷಗಳಿಗೆ ರಕ್ಷಣೆ ದೊರೆಯುತ್ತದೆ. ಮುಂದೆ ಹತ್ತು ವರ್ಷಗಳಂತೆ ನವೀಕರಣಕ್ಕೆ ಅವಕಾಶ ಇದೆ. ಇದರಲ್ಲಿ ಟ್ರೇಡ್‌ಮಾರ್ಕ್‌ನ ಮಾಲೀಕರ ಹಿತರಕ್ಷಣೆಯ ಜತೆಗೆ ಗ್ರಾಹಕರ ಹಿತರಕ್ಷಣೆಯೂ ಇದೆ. ಹಾಗೆಯೇ ಒಂದು ಟ್ರೇಡ್‌ಮಾರ್ಕ್‌ನ ಜನಪ್ರಿಯತೆಯಿಂದಾಗಿ ಅದರ ನಕಲು ತಡೆಯಲು ಸಾಧ್ಯವಾಗುತ್ತದೆ.

ಮೈಸೂರು ರೇಷ್ಮೆ, ಇಳಕಲ್‌ ಸೀರೆ, ಚನ್ನಪಟ್ಟಣದ ಬೊಂಬೆ, ಡಾರ್ಜಿಲಿಂಗ್‌ ಚಹಾ, ತಿರುಪತಿ ಲಡ್ಡು ಗುಣಮಟ್ಟ, ಖ್ಯಾತಿ, ವಿಶೇಷ ಲಕ್ಷಣಗಳಿಂದಾಗಿ ಭೌಗೋಳಿಕ ಗುರುತುಗಳನ್ನು ಹೊಂದಿವೆ. 2016ರ ನವೆಂಬರ್‌ವರೆಗೆ ದೇಶದಲ್ಲಿ ಇಂತಹ 282 ಭೌಗೋಳಿಕ ಗುರುತುಗಳ ಹಕ್ಕುಸ್ವಾಮ್ಯ ನೋಂದಣಿಯಾಗಿವೆ. ಅದರಲ್ಲಿ ಕರ್ನಾಟಕದ ಪಾಲು 39. ಹಾಗಿದ್ದರೂ ಈ ಹಕ್ಕುಗಳ ಉಲ್ಲಂಘನೆ ತಡೆಯಲು ಹೆಚ್ಚಿನ ಪ್ರಯತ್ನ ನಡೆದಿಲ್ಲ. ವಿವಿಧ ರೀತಿಯ ಸೀರೆಗಳನ್ನು ಮೈಸೂರು ರೇಷ್ಮೆ ಸೀರೆ ಎಂದೂ, ಬೇರೆ ಬೇರೆ ಕಡೆ ಬೆಳೆಯುವ ಚಹಾವನ್ನು ಡಾರ್ಜಿಲಿಂಗ್‌ ಚಹಾ ಎಂದೂ ಮಾರಾಟ ಮಾಡಲಾಗುತ್ತಿದೆ. ಕರ್ನಾಟಕದಲ್ಲಿ ಭೌಗೋಳಿಕ ಗುರುತಿನ ಹಲವು ಹಕ್ಕುಸ್ವಾಮ್ಯಗಳನ್ನು ನೋಂದಣಿ ಮಾಡಲಾಗಿದ್ದರೂ ಅವುಗಳ ರಕ್ಷಣೆಗೆ ಕೈಗೊಂಡಿರುವ ಕ್ರಮಗಳು ಕಡಿಮೆ. ‘ಅಧಿಕೃತ ಬಳಕೆದಾರರು’ ಎಂದು ಉತ್ಪಾದಕರ ಹೆಸರು ನೋಂದಣಿ ಆಗಿದ್ದರೂ ರಕ್ಷಣೆಗೆ ಗಂಭೀರ ಪ್ರಯತ್ನ ನಡೆದಿಲ್ಲ.

ಆಕೃತಿ, ರಚನೆ, ವಿನ್ಯಾಸ ಅಥವಾ ಆಲಂಕಾರಿಕ ಅಂಶಗಳಿಗೆ ವಿನ್ಯಾಸದ ಕಾನೂನು ರಕ್ಷಣೆ ಒದಗಿಸುತ್ತದೆ. ಕುರ್ಚಿಗಳಿಂದ ಹಿಡಿದು ಸ್ಮಾರ್ಟ್‌ಫೋನ್‌ನಂತಹ ವಸ್ತುಗಳವರೆಗೆ ವಿನ್ಯಾಸದ ಕಾನೂನಿನ ರಕ್ಷಣೆ ಇದೆ. ಒಂದು ವಸ್ತುವಿನಲ್ಲಿರುವ ಸೌಂದರ್ಯ ಮೌಲ್ಯ ಮತ್ತು ಅದರ ಹೊಸತನಕ್ಕೆ ಹತ್ತು ವರ್ಷಗಳವರೆಗೆ ರಕ್ಷಣೆ ಇದೆ. ಮತ್ತೆ ಐದು ವರ್ಷಕ್ಕೆ ವಿಸ್ತರಿಸುವುದಕ್ಕೂ ಅವಕಾಶ ಇದೆ. ಬ್ರಿಟನ್‌ನಲ್ಲಿ ನೋಂದಾಯಿತವಲ್ಲದ ವಿನ್ಯಾಸಗಳಿಗೂ ರಕ್ಷಣೆ ಇದೆ. ಆದರೆ ಭಾರತದಲ್ಲಿ ಆ ಸೌಲಭ್ಯ ಇಲ್ಲ. ವಾಣಿಜ್ಯ ಮೌಲ್ಯ ಇರುವ ಗೋಪ್ಯ ಮಾಹಿತಿಗೆ ಸಾಮಾನ್ಯ ಕಾನೂನುಗಳು ಮತ್ತು ಬಹಿರಂಗಪಡಿಸಬಾರದ ಒಪ್ಪಂದ ಕಾನೂನು (ಎನ್‌ಡಿಎ) ಅಡಿಯಲ್ಲಿ ರಕ್ಷಣೆ ದೊರೆಯುತ್ತದೆ. ಹೊಸ ವಿಧಗಳ ಸಸ್ಯಗಳಿಗೆ ಸಸ್ಯ ವಿಧಗಳು ಮತ್ತು ರೈತರ ಹಕ್ಕುಗಳ ರಕ್ಷಣೆ ಕಾಯ್ದೆ ಅಡಿಯಲ್ಲಿ ರಕ್ಷಣೆ ಇದೆ.

ಒಂದು ಸಸ್ಯ ವಿಧದ ನಾವೀನ್ಯ, ವೈಶಿಷ್ಟ್ಯ, ಏಕರೂಪತೆ ಮತ್ತು ಸ್ಥಿರತೆಗೆ ಮಾನ್ಯತೆ ನೀಡಲು ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳು, ಬೆಂಗಳೂರಿನಲ್ಲಿರುವ ಭಾರತೀಯ ತೋಟಗಾರಿಕಾ ಸಂಸ್ಥೆಗಳಿಗೆ ಈ ಮಾನ್ಯತೆ ಇದೆ. ಸೃಜನಶೀಲತೆಗೆ ಸಂಬಂಧಿಸಿಯೂ ಹಕ್ಕುಸ್ವಾಮ್ಯ ಕಾನೂನು (ಕೃತಿಸ್ವಾಮ್ಯ ಕಾನೂನು 1957) ಇದೆ. ಪುಸ್ತಕಗಳು, ಕಂಪ್ಯೂಟರ್‌ ಪ್ರೋಗ್ರಾಂಗಳಿಗೆ ಇದರ ಅಡಿಯಲ್ಲಿ ರಕ್ಷಣೆ ದೊರೆಯುತ್ತದೆ. ಸಂಗೀತ, ನಾಟಕ, ಕಲಾಕೃತಿ, ಛಾಯಾಚಿತ್ರ ಮುಂತಾದವುಗಳೂ ಇದರಲ್ಲಿ ಸೇರುತ್ತವೆ.

ಕೃತಿಸ್ವಾಮ್ಯದ ರಕ್ಷಣೆಗೆ ಸಂಬಂಧಿಸಿದ  ಕಾನೂನುಗಳ ಪ್ರಕಾರ, ಪುಸ್ತಕವೊಂದರ ಲೇಖಕನಿಗೆ ಆ ಪುಸ್ತಕದ ಸಂಪೂರ್ಣ ಹಕ್ಕು ಇರುತ್ತದೆ. ಕಲಾಕೃತಿಗೆ ಸಂಬಂಧಿಸಿ  ಕಲಾವಿದನಿಗೆ, ಸಂಗೀತಕ್ಕೆ ಸಂಬಂಧಿಸಿ ಸಂಗೀತ ನಿರ್ದೇಶಕನಿಗೆ ಹಕ್ಕುಸ್ವಾಮ್ಯ ದೊರೆಯುತ್ತದೆ. ಆದರೆ ಪತ್ರಿಕೆ, ನಿಯತಕಾಲಿಕ ಮುಂತಾದೆಡೆ ಉದ್ಯೋಗಿಯಾಗಿದ್ದು ಆ ಉದ್ಯೋಗದ ಭಾಗವಾಗಿ ಕೃತಿ ರಚನೆಯಾದರೆ ಅದರ ಹಕ್ಕು ಲೇಖಕನಿಗೆ ಅಥವಾ ಕೃತಿ ರಚಿಸಿದಾತನಿಗೆ ಇರುವುದಿಲ್ಲ. ಬದಲಿಗೆ ಸಂಸ್ಥೆಯ ಮಾಲೀಕನಿಗೆ ಆ ಹಕ್ಕು ದೊರೆಯುತ್ತದೆ. ಯಾವುದಾದರೂ ಒಂದು ಕೆಲಸಕ್ಕೆ ಒಬ್ಬ ವ್ಯಕ್ತಿಯನ್ನು ನೇಮಿಸಿದಾಗ ಅಲ್ಲಿ ಸೃಷ್ಟಿಯಾಗುವ ಕೃತಿಯ ಹಕ್ಕು ವ್ಯಕ್ತಿಯನ್ನು ನೇಮಿಸಿದಾತನಿಗೆ ದೊರೆಯುತ್ತದೆ.

ಉದಾಹರಣೆಗೆ, ಸಮಾರಂಭವೊಂದರ ಛಾಯಾಗ್ರಹಣಕ್ಕೆ ವ್ಯಕ್ತಿಯೊಬ್ಬನನ್ನು ನೇಮಿಸಿದರೆ ಅಲ್ಲಿ ತೆಗೆದ ಚಿತ್ರಗಳ ಹಕ್ಕು ಸಮಾರಂಭದ ಆಯೋಜಕರದ್ದೇ ಹೊರತು ಛಾಯಾಗ್ರಾಹಕನದ್ದಲ್ಲ. ಹಕ್ಕುಸ್ವಾಮ್ಯ ಹೊಂದಿರುವ ವ್ಯಕ್ತಿಗೆ ಹಲವು ಹಕ್ಕುಗಳು ದೊರೆಯುತ್ತವೆ. ಕೃತಿಯ ಮರು ಮುದ್ರಣ ಅಥವಾ ಮರುಸೃಷ್ಟಿ, ಅದರ ಪ್ರತಿಗಳನ್ನು ಹಂಚುವುದು, ಜನರಿಗೆ ಅದರ ಬಗ್ಗೆ ಮಾಹಿತಿ ನೀಡುವುದು, ರೂಪಾಂತರ, ಅನುವಾದ, ಧ್ವನಿಮುದ್ರಣ, ದೃಶ್ಯರೂಪಕ್ಕೆ ಅಳವಡಿಕೆ ಇಂತಹ ಹಕ್ಕುಗಳಾಗಿವೆ.

ಹಕ್ಕುಸ್ವಾಮ್ಯ ಹೊಂದಿದ ವ್ಯಕ್ತಿಯ ಅನುಮತಿ ಇಲ್ಲದೆ ಯಾರಾದರೂ ಮೇಲಿನ ಏನನ್ನಾದರೂ ಮಾಡಿದರೆ ಅದು ಹಕ್ಕುಸ್ವಾಮ್ಯದ ಉಲ್ಲಂಘನೆ. ಆದರೆ ಹಕ್ಕುಸ್ವಾಮ್ಯ ಇರುವ ಕೃತಿಗಳ ಬಳಕೆಗೆ ಕಾಯ್ದೆಯ ಸೆಕ್ಷನ್‌ 52ರಲ್ಲಿ ಅವಕಾಶ ಇದೆ. ಖಾಸಗಿ ಉದ್ದೇಶದ ಬಳಕೆ, ಸಂಶೋಧನೆ, ವಿಮರ್ಶೆ, ಹವ್ಯಾಸಿ ಗುಂಪುಗಳ ಬಳಕೆ, ಅಂಗವಿಕಲ ವ್ಯಕ್ತಿಯೊಬ್ಬರಿಂದ ಅಥವಾ ಅವರಿಗಾಗಿ ರೂಪಾಂತರದಂಥ  ಅವಕಾಶಗಳು. ಹಕ್ಕುಸ್ವಾಮ್ಯದ ಅವಧಿಯು ಅದನ್ನು ಹೊಂದಿರುವವರ ನಿಧನದ ನಂತರ 60 ವರ್ಷಗಳವರೆಗೆ ಇರುತ್ತದೆ. ಚಲನಚಿತ್ರಗಳ ಹಕ್ಕುಸ್ವಾಮ್ಯದ ಅವಧಿಯೂ 60 ವರ್ಷ.

‘ಕಾರ್ಯಕ್ರಮ ನೀಡುವವರು’ ಮತ್ತು ‘ಪ್ರಸಾರ ಸಂಸ್ಥೆ’ಗಳಿಗೂ ಹಕ್ಕುಸ್ವಾಮ್ಯ ಇದೆ.  ಕಾರ್ಯಕ್ರಮ ನೀಡುವವರಲ್ಲಿ ನಟರು, ಗಾಯಕರು, ಸಂಗೀತಗಾರರು, ನರ್ತಕರು, ಹಾವಾಡಿಗರು, ಉಪನ್ಯಾಸಕರು ಮುಂತಾದವರು ಸೇರುತ್ತಾರೆ. ಕಾರ್ಯಕ್ರಮ ನೀಡಿಕೆ ಎಂದರೆ ಒಬ್ಬರು ಅಥವಾ ಹಲವರು ಸೇರಿಕೊಂಡು ದೃಶ್ಯ ಅಥವಾ ಶ್ರವಣ ಮಾಧ್ಯಮದ ಮೂಲಕ ವಿಷಯವನ್ನು ಪ್ರಸ್ತುತಪಡಿಸುವುದು.

ಚಲನಚಿತ್ರವೊಂದರ ನಿರ್ಮಾಪಕರಿಗೆ ಅದರ ಹಕ್ಕುಸ್ವಾಮ್ಯ ಇರುತ್ತದೆ. ಚಲನಚಿತ್ರ ನಿರ್ಮಾಣ ಪ್ರಕ್ರಿಯೆಯಲ್ಲಿ ಭಾಗಿಯಾದ ವ್ಯಕ್ತಿಗಳ ಜತೆ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿ ಬೇರೆ ಒಪ್ಪಂದ ಮಾಡಿಕೊಂಡಿಲ್ಲ ಎಂದಾದರೆ, ಚಲನಚಿತ್ರದಲ್ಲಿ ಬಳಕೆಯಾದ ನಟನೆ, ಸಂಗೀತ ಸೇರಿ ಎಲ್ಲ ಅಂಶಗಳ ಹಕ್ಕುಸ್ವಾಮ್ಯ ನಿರ್ಮಾಪಕರದ್ದೇ ಆಗಿರುತ್ತದೆ.

ಕೃತಿಸ್ವಾಮ್ಯ ರಕ್ಷಣಾ ಕಾಯ್ದೆ ಜಾರಿಗೆ ಬಂದ ವರ್ಷ
ಬ್ರಿಟನ್‌ 1710
ಅಮೆರಿಕ 1790
ಭಾರತ 1847


ಡಿಜಿಟಲ್‌ ಕೋಶ
ಪಾರಂಪರಿಕ ಜ್ಞಾನಕ್ಕೆ ರಕ್ಷಣೆ ಒದಗಿಸುವ ಮಾದರಿಯೊಂದನ್ನು ರೂಪಿಸಲು ವಿಶ್ವ ಬೌದ್ಧಿಕ ಆಸ್ತಿ ಸಂಘಟನೆ (ಡಬ್ಲ್ಯುಐಪಿಒ) ಪರಿಶೀಲನೆ ನಡೆಸುತ್ತಿದೆ.  ‘ಜೈವಿಕ ಕಳ್ಳತನ’ದ ಹಲವು ಪ್ರಕರಣಗಳಲ್ಲಿ (ಬೇವು, ಅರಿಶಿಣ, ಬಾಸ್ಮತಿ ಅಕ್ಕಿ ಇತ್ಯಾದಿ) ಹೋರಾಟ ನಡೆಸಿರುವ ಭಾರತವು ‘ಪಾರಂಪರಿಕ ಜ್ಞಾನ ಡಿಜಿಟಲ್‌ ಕೋಶ’ವನ್ನು (www.tkdl.res.in) ಸ್ಥಾಪಿಸಿದೆ. ಅದರಲ್ಲಿ ಆಯುರ್ವೇದ, ಸಿದ್ಧ, ಯುನಾನಿ ಔಷಧಗಳನ್ನು ದಾಖಲಿಸಲಾಗಿದ್ದು ಅಮೆರಿಕ, ಯುರೋಪ್‌ ಮತ್ತು ಇತರ ರಾಷ್ಟ್ರಗಳ ಹಕ್ಕುಸ್ವಾಮ್ಯ ಕಚೇರಿಗಳಿಗೆ ಅದರ ಬಗ್ಗೆ ಮಾಹಿತಿ ನೀಡಲಾಗಿದೆ. ಇದರಿಂದಾಗಿ ಅಲ್ಲಿ ಕೆಲವು ಹಕ್ಕುಸ್ವಾಮ್ಯ ಅರ್ಜಿಗಳನ್ನು ಹಿಂದಕ್ಕೆ ಪಡೆಯಲಾಗಿದೆ ಅಥವಾ ತಿರಸ್ಕರಿಸಲಾಗಿದೆ.

-ಡಾ. ಟಿ.ರಾಮಕೃಷ್ಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT