ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂರಕ್ಷಣೆಯ ದಾರಿ- ಜವಾಬ್ದಾರಿ

ಹಕ್ಕುಸ್ವಾಮ್ಯ: ಪ್ರತಿಪಾದನೆ ಹೇಗೆ?
Last Updated 25 ಮಾರ್ಚ್ 2017, 5:15 IST
ಅಕ್ಷರ ಗಾತ್ರ

ಸೃಜನಶೀಲ ಕೃತಿಗಳ ಹಕ್ಕುಸ್ವಾಮ್ಯ ಕುರಿತಂತೆ ನಮ್ಮಲ್ಲಿ ಎರಡು ಬಗೆಯ ಧೋರಣೆಗಳಿವೆ. ಮೊದಲನೆಯದು, ಕಾಪಿರೈಟ್‌ ಬಗ್ಗೆ ತಿಳಿವಳಿಕೆಯ ಕೊರತೆ ಹಾಗೂ ನಿರ್ಲಕ್ಷ್ಯ. ಎರಡನೆಯದು, ತಿಳಿವಳಿಕೆ ಇದ್ದೂ ಜಾಣಮರೆವನ್ನು ಪ್ರದರ್ಶಿಸುವುದು. ತಮ್ಮ ಕೃತಿಗಳ ಹಕ್ಕುಗಳ ಬಗ್ಗೆ ವಿಪರೀತ ಮುತುವರ್ಜಿ ವಹಿಸುವ ಈ ಗುಂಪು, ಇತರರ ಸೃಜನಶೀಲತೆಗೆ ಕನ್ನಹಾಕಲು ಹಿಂಜರಿಯುವುದಿಲ್ಲ. ‘ವ್ಯಾಕರಣದ ನಿಯಮಗಳು ಗೊತ್ತಿರಬೇಕು; ನಂತರ ಅವುಗಳನ್ನು ಮುರಿಯಬೇಕು’ ಎನ್ನುವ ಸಾಹಿತ್ಯರಚನೆಯ ಜನಪ್ರಿಯ ನಂಬಿಕೆ ಕಾಪಿರೈಟ್‌ ಚೋರರಿಗೆ ಪ್ರಿಯವಾದುದು.

ಕಾಪಿರೈಟ್‌ ಸಮಸ್ಯೆ ಪದೇಪದೇ ತಲೆದೋರುವುದು ಚಿತ್ರೋದ್ಯಮದಲ್ಲಿ. ಕೋಟ್ಯಂತರ ರೂಪಾಯಿ ವಹಿವಾಟು ನಡೆಯುವುದರಿಂದ ಚಿತ್ರೋದ್ಯಮದಲ್ಲಿ ಹಕ್ಕುಸ್ವಾಮ್ಯಕ್ಕೆ ಮಹತ್ವದ ಪಾತ್ರವಿದೆ. ತಮಾಷೆ ನೋಡಿ: ನಕಲಿ ಡಿ.ವಿ.ಡಿ.ಗಳ ದಂಧೆ, ಅಂತರ್ಜಾಲದಲ್ಲಿ ಸಿನಿಮಾ ಸೋರಿಕೆಯ ಬಗ್ಗೆ ಚಿತ್ರೋದ್ಯಮ ಕಿಡಿಕಾರುತ್ತದೆ. ಪೈರಸಿಯನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸುತ್ತದೆ. ಹೀಗೆ ಹಕ್ಕುಸ್ವಾಮ್ಯದ ಬಗ್ಗೆ ಮಾತನಾಡುವ ಸಿನಿಮಾ ಮಂದಿಯೇ ಕೃತಿಚೌರ್ಯ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ. ರಮೇಶ್‌ ಅರವಿಂದ್‌ ಅಭಿನಯದ ‘ಪುಷ್ಪಕ ವಿಮಾನ’ ಚಿತ್ರತಂಡ ಕಥೆ ಕದ್ದ ಆರೋಪಕ್ಕೆ ಒಳಗಾಗಿರುವುದು ಇತ್ತೀಚಿನ ಸುದ್ದಿ. ‘ಮಿರಾಕಲ್‌ ಇನ್‌ ಸೆಲ್‌ ನಂ. 7’ ಕೊರಿಯನ್ ಚಿತ್ರದ ಕಥೆಯನ್ನು ರೀಮೇಕ್‌ ಹಕ್ಕು ಪಡೆಯದೆ ಕನ್ನಡದಲ್ಲಿ ನಿರ್ಮಿಸಲಾಗಿದೆ ಎಂದು ‘ಕ್ರೋಸ್‌ ಪಿಕ್ಚರ್ಸ್‌ ಇಂಡಿಯಾ’ ಸಂಸ್ಥೆ ಮುಂಬೈ ಹೈಕೋರ್ಟ್‌ನಲ್ಲಿ ಪ್ರಕರಣ ಹೂಡಿದೆ. ‘ಕಿರಿಕ್‌ ಪಾರ್ಟಿ’ ಚಿತ್ರದಲ್ಲಿ ತಮ್ಮ ಗೀತೆಯೊಂದನ್ನು ಅನುಮತಿಯಿಲ್ಲದೆ ಬಳಸಿಕೊಳ್ಳಲಾಗಿದೆ ಎಂದು ‘ಲಹರಿ ಮ್ಯೂಸಿಕ್‌’ ಸಂಸ್ಥೆ ಹೂಡಿರುವ ದಾವೆ ನ್ಯಾಯಾಲಯದಲ್ಲಿದೆ.

ಚಿತ್ರೋದ್ಯಮಕ್ಕೆ ಸಂಬಂಧಿಸಿದ ಕಾಪಿರೈಟ್‌ ಉಲ್ಲಂಘನೆಯ ಬಹುತೇಕ ಪ್ರಕರಣಗಳು ಹಾಡುಗಳಿಗೆ ಸಂಬಂಧಿಸಿರುತ್ತವೆ. ಎಫ್‌.ಎಂ. ರೇಡಿಯೊ ಹಾಗೂ ಕಿರುತೆರೆ ವಾಹಿನಿಗಳು ಸಿನಿಮಾಗೀತೆಗಳನ್ನು ಪ್ರತಿನಿತ್ಯ ಪ್ರಸಾರಮಾಡುತ್ತವೆ. ಅದಕ್ಕೆ ರಾಯಧನ ದೊರೆಯುವುದು ತೀರಾ ಅಪರೂಪ. ‘ನಮ್ಮ ಹಾಡುಗಳನ್ನು ಬಳಸಿಕೊಂಡು ದುಡ್ಡು ಮಾಡುತ್ತಿದ್ದೀರಿ. ಕಾಯ್ದೆ ಪ್ರಕಾರ ನಮಗೆ ಸಲ್ಲಬೇಕಾದ ಸಂಭಾವನೆ ಕೊಡಿ ಎಂದು ಟೀವಿಯವರನ್ನು ಗೋಗರೆದು ಕೇಳಿಕೊಂಡರೂ ಉಪಯೋಗವಾಗುತ್ತಿಲ್ಲ’ ಎನ್ನುತ್ತಾರೆ ‘ಲಹರಿ’ ಸಂಸ್ಥೆಯ ವೇಲು. (ಇದಕ್ಕೆ ಅಪವಾದವೆಂದರೆ ಆಕಾಶವಾಣಿ ಹಾಗೂ ದೂರದರ್ಶನ. ಆಕಾಶವಾಣಿಯಲ್ಲಂತೂ ಪ್ರಸಾರಗೊಳ್ಳುವ ಗೀತೆಗಳ ಕವಿಗಳಿಗೂ ಸಂಭಾವನೆ ಕೊಡುವ ಪರಿಪಾಠವಿದೆ).

‘ಕಾಪಿರೈಟ್‌ ಕುರಿತಂತೆ ನಮ್ಮಲ್ಲಿ ಅಜ್ಞಾನ ಇದೆ’ ಎನ್ನುವ ವೇಲು, ‘ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೇ ಕಾಯ್ದೆಯ ಕುರಿತು ಸ್ಪಷ್ಟ ತಿಳಿವಳಿಕೆಯಿಲ್ಲ’ ಎನ್ನುತ್ತಾರೆ. ಚಲನಚಿತ್ರ ಗೀತೆಗಳ ಧ್ವನಿಮುದ್ರಿಕೆಗಳನ್ನು ಹೊರತರುವ ಸಂಸ್ಥೆಗಳು ಕಾಪಿರೈಟ್ ಬಗ್ಗೆ ತೀರಾ ಎಚ್ಚರದಿಂದ ಇರಲು ಕಾರಣವಿದೆ. ಇತ್ತೀಚಿನ ವರ್ಷಗಳಲ್ಲಿ ಧ್ವನಿಮುದ್ರಿಕೆಗಳಿಂದ ಅವರಿಗೆ ಕಾಸು ಹುಟ್ಟುತ್ತಿಲ್ಲ. ಬೇರೆ ಬೇರೆ ವೇದಿಕೆಗಳಲ್ಲಿ ಹಾಡುಗಳು ಪ್ರಸಾರವಾಗುವ ಮೂಲಕ ದೊರೆಯುವ ರಾಯಧನವೇ ಅವರ ಪ್ರಮುಖ ಆದಾಯಮೂಲ. ‘ಎರಡು ದಶಕಗಳ ಹಿಂದೆ ದಕ್ಷಿಣ ಭಾರತದಲ್ಲಿ ಸುಮಾರು 145 ಆಡಿಯೊ ಕಂಪೆನಿಗಳಿದ್ದವು. ಈಗ ಅವುಗಳ ಸಂಖ್ಯೆ 15ರಷ್ಟಿದೆ. ಚಲನಚಿತ್ರ ಸಂಗೀತಕ್ಕೆ ಮಾರುಕಟ್ಟೆ ಇಲ್ಲದಿರುವುದೇ ಇದಕ್ಕೆ ಕಾರಣ. ಇನ್ನು ಕಾಪಿರೈಟ್‌ ಹಕ್ಕುಗಳೂ ಉಲ್ಲಂಘನೆಯಾದರೆ ನಮ್ಮ ಗತಿಯೇನು’ ಎನ್ನುವುದು ವೇಲು ಅವರ ಪ್ರಶ್ನೆ.



ಯುವ ಸಂಗೀತ ನಿರ್ದೇಶಕ ಅನೂಪ್‌ ಸೀಳಿನ್‌ ಕೂಡ ಕಾಪಿರೈಟ್‌ ಕಾಯ್ದೆ ಕಡ್ಡಾಯವಾಗಿ ಪಾಲನೆಯಾಗಬೇಕು ಎನ್ನುತ್ತಾರೆ. ‘ಭಾರತೀಯ ಸಂಗೀತಕ್ಷೇತ್ರ ಒಂದು ಮಾಫಿಯಾ ತೆಕ್ಕೆಗೆ ಸಿಲುಕಿದೆ’ ಎನ್ನುವ ಅವರು, ‘ಕಾಪಿರೈಟ್‌ ಹಕ್ಕುಗಳ ದುರುಪಯೋಗದಿಂದಾಗಿ ಅನೇಕ ಸಂಗೀತ ಸಂಯೋಜಕರು ತಮ್ಮ ಕೊನೆಗಾಲವನ್ನು ನೆಮ್ಮದಿಯಿಂದ ಕಳೆಯಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ. ತಾವು ಸಂಯೋಜಿಸಿದ ಗೀತೆಗಳ ಹಕ್ಕುಗಳನ್ನು ಕಾಪಾಡಿಕೊಳ್ಳುವ ಉದ್ದೇಶದಿಂದ ಈಚಿನ ದಿನಗಳಲ್ಲಿ ಸಂಗೀತ ಸಂಯೋಜಕರು ಆಡಿಯೊ ಸಂಸ್ಥೆಗಳನ್ನೂ ಸ್ಥಾಪಿಸುತ್ತಿರುವ ಕುರಿತು ಅವರು ಗಮನಸೆಳೆಯುತ್ತಾರೆ.

1952ರ ಕಾಪಿರೈಟ್‌ ಕಾಯ್ದೆಗೆ ಇತ್ತೀಚೆಗೆ ತಿದ್ದುಪಡಿ ಆದುದು 2012ರಲ್ಲಿ. ಇದು  ಹಾಡುಗಳ ಹಕ್ಕುಗಳನ್ನು ಹೊಂದಿರುವ ಸಂಸ್ಥೆಗಳ ಜೊತೆಗೆ, ಸಂಗೀತ ಸಂಯೋಜಕರು, ಗೀತರಚನೆಕಾರರ ಹಕ್ಕುಗಳನ್ನೂ ಎತ್ತಿಹಿಡಿದಿದೆ. ಬಾನುಲಿ, ಕಿರುತೆರೆ ವಾಹಿನಿಗಳಲ್ಲಿ ಪ್ರಸಾರವಾಗುವ ಗೀತೆಗಳಿಗೆ ದೊರೆಯುವ ರಾಯಧನದಲ್ಲಿ ಅರ್ಧ ಭಾಗ ಆಡಿಯೊ ಕಂಪೆನಿಗಳಿಗೆ ದೊರೆಯಲಿದೆ. ಉಳಿದ ಅರ್ಧ ಸಂಗೀತ ಸಂಯೋಜಕ ಹಾಗೂ ಗೀತರಚನೆಕಾರರಿಗೆ ಸಮನಾಗಿ ಹಂಚಿಕೆಯಾಗಲಿದೆ. ಇದಕ್ಕೆ ಮುನ್ನ ಗೀತೆಗಳ ಪ್ರಸಾರದಿಂದ ದೊರಕುವ ಸಂಪೂರ್ಣ ರಾಯಧನ ಆಡಿಯೊ ಸಂಸ್ಥೆಗಳಿಗೆ ಸಂದಾಯವಾಗುತ್ತಿತ್ತು.
‘ಇಳಯರಾಜ ಅವರು ತಮ್ಮ ಗೀತೆಗಳ ಹಕ್ಕುಗಳ ಕುರಿತು ಎತ್ತಿರುವ ಧ್ವನಿ ಪ್ರಾಮಾಣಿಕವಾದುದು’ ಎನ್ನುವುದು ಅನೂಪ್‌ ಅನಿಸಿಕೆ. ‘ಈ ಪ್ರಕರಣ ಹುಟ್ಟುಹಾಕಿರುವ ಚರ್ಚೆ ಕಾಪಿರೈಟ್‌ ಕುರಿತ ಅರಿವಿಗೆ ಕಾರಣವಾಗಲಿ’ ಎನ್ನುವುದು ವೇಲು ಅವರ ಆಶಯ.

ಹಕ್ಕುಸ್ವಾಮ್ಯ ಕಾಯ್ದೆಯ ಅರಿವಿದ್ದೂ ಅದನ್ನು ನಿರ್ಲಕ್ಷಿಸುವವರಿದ್ದಾರೆ. ಏಕೆಂದರೆ, ಬಹುತೇಕ ಸಂದರ್ಭಗಳಲ್ಲಿ ಇಂಥ ಪ್ರಕರಣಗಳಲ್ಲಿ ಶಿಕ್ಷೆಯಾಗಿರುವುದು ಕಡಿಮೆ. ರಾಜಿ ಸಂಧಾನದಲ್ಲಿಯೋ, ‘ಹೋದರೆ ಹೋಗಲಿ’ ಎನ್ನುವ ಉದಾಸೀನ ಧೋರಣೆಯಿಂದಲೋ ಪ್ರಕರಣಗಳು ಕೊನೆಗಾಣುತ್ತವೆ. ಸಾಹಿತ್ಯಕೃತಿಯೊಂದನ್ನು ಅನುಮತಿ ಪಡೆಯದೆ ಸಿನಿಮಾ ಮಾಡಲಾಗಿದೆ ಎನ್ನುವ ಪ್ರಕರಣವೊಂದರಲ್ಲಿ, ‘ಇದರಿಂದ ನಿಮಗೇನು ತೊಂದರೆ’ ಎಂದು ನ್ಯಾಯಾಧೀಶರೊಬ್ಬರು ಪ್ರಶ್ನಿಸಿದ್ದರು. ಸಿನಿಮಾ ಆಗುವ ಮೂಲಕ ನಿಮ್ಮ ಕೃತಿಗೆ ಜನಪ್ರಿಯತೆ ದೊರಕಿತಲ್ಲವೇ ಎನ್ನುವ ಭಾವನೆ ಅವರಿಗಿದ್ದಂತಿತ್ತು. ‘ಅತ್ಯುತ್ತಮ ಸಿನಿಮಾ’ ರಾಷ್ಟ್ರಪ್ರಶಸ್ತಿ ಪುರಸ್ಕೃತ ‘ಬ್ಯಾರಿ’ ಚಿತ್ರನಿರ್ಮಾತೃಗಳು, ತಮ್ಮ ‘ಚಂದ್ರಗಿರಿಯ ತೀರದಲ್ಲಿ’ ಕಾದಂಬರಿಯ ಕಥೆಯನ್ನು ಅನುಮತಿ ಪಡೆಯದೆ ಬಳಸಿದ್ದಾರೆ ಎಂದು ಕಾದಂಬರಿಗಾರ್ತಿ ಸಾರಾ ಅಬೂಬಕ್ಕರ್‌ ನ್ಯಾಯಾಲಯದಲ್ಲಿ ದಾವೆ ಹೂಡಿ ವರ್ಷಗಳೇ ಕಳೆದಿವೆ. ಇಂಥ ವಿಳಂಬವೂ ಹಲವರನ್ನು ಕಾನೂನು ಕ್ರಮ ಕೈಗೊಳ್ಳಲು ನಿರುತ್ಸಾಹಿಗಳನ್ನಾಗಿಸುತ್ತದೆ.

ಸಾಹಿತ್ಯ ಕ್ಷೇತ್ರದಲ್ಲಂತೂ ಕೃತಿಚೌರ್ಯ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿರುವ ವಿದ್ಯಮಾನ. ಕೆಲವು ವರ್ಷಗಳ ಹಿಂದೆ ನಡೆದ ಅಧ್ಯಯನವೊಂದು ಭಾರತದ ಪುಸ್ತಕೋದ್ಯಮದಲ್ಲಿ ಶೇ 15ರಿಂದ 24ರಷ್ಟು ನಕಲಿ ಪುಸ್ತಕಗಳಿವೆ ಎಂದು ಅಂದಾಜು ಮಾಡಿತ್ತು. ಮೂರು ವರ್ಷಗಳ ಹಿಂದೆ ತುಮಕೂರು ವಿಶ್ವವಿದ್ಯಾಲಯದ ಕೆಲವು ಪ್ರಕಟಣೆಗಳ ಕುರಿತು ಕೃತಿಚೌರ್ಯದ ಆರೋಪ ವರದಿಯಾಗಿತ್ತು.     ಕೆ.ಸಣ್ಣಹೊನ್ನಯ್ಯ ಎನ್ನುವವರು ತಮ್ಮ ‘ಆಸಾದಿ’ ಖಂಡಕಾವ್ಯದ ಕೆಲವು ಭಾಗಗಳನ್ನು ಯಥಾವತ್ತು ಬಳಸಿಕೊಂಡಿದ್ದಾರೆ ಎಂದು ಕವಿ ವಡ್ಡಗೆರೆ ನಾಗರಾಜಯ್ಯ ದೂರಿದ್ದರು. ಇದೇ ಸಣ್ಣಹೊನ್ನಯ್ಯನವರ ‘ತುಮಕೂರು ಜಿಲ್ಲೆಯ ಶಕ್ತಿದೇವತೆಗಳು: ಒಂದು ಅಧ್ಯಯನ’ ಕೃತಿ ತಮ್ಮ ಸಂಶೋಧನಾ ಪ್ರಬಂಧದ ಯಥಾವತ್ತು ನಕಲು ಎಂದು ಡಾ. ಓ.ನಾಗರಾಜು ಆಪಾದಿಸಿದ್ದರು. ಈ ಸಂಬಂಧ ತುಮಕೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿರುವ ದೂರು ಕಡತಗಳ ನಡುವೆಯೆಲ್ಲೋ ತಲೆಮರೆಸಿಕೊಂಡಂತಿದೆ. ‘ವಿಶ್ವವಿದ್ಯಾಲಯ ಕ್ರಮ ಕೈಗೊಳ್ಳದೆ ಹೋದರೆ ಕಾನೂನುಬದ್ಧ ಹೋರಾಟ ನಡೆಸುವೆ’ ಎಂದು ನಾಗರಾಜಯ್ಯ ಹೇಳುತ್ತಾರೆ.

ಅರಿವಿಲ್ಲದೆಯೋ ಹಣದ ಅಗತ್ಯದಿಂದಲೋ ಕೆಲವು ಲೇಖಕರು ಸಂಪೂರ್ಣ ಹಕ್ಕುಗಳನ್ನು ಬಿಟ್ಟುಕೊಟ್ಟು ಪರಿತಪಿಸುವುದಿದೆ. ಈ ನಿಟ್ಟಿನಲ್ಲಿ ‘ಮೈಸೂರ ಮಲ್ಲಿಗೆ’ಯ ಕೆ.ಎಸ್‌.ನರಸಿಂಹಸ್ವಾಮಿ ಅವರನ್ನು ನೆನಪಿಸಿಕೊಳ್ಳಬಹುದು. 1942–43ರ ಸುಮಾರಿಗೆ ‘ಮೈಸೂರ ಮಲ್ಲಿಗೆ’ಯ ಹಕ್ಕುಗಳನ್ನು ‘ಆನಂದ್‌ ಬ್ರದರ್ಸ್‌’ ಸಂಸ್ಥೆಗೆ ಬರೆದುಕೊಟ್ಟ ಕವಿ, ನಂತರ ಆ ಹಕ್ಕುಗಳನ್ನು ಮರಳಿ ಪಡೆಯಲು 60 ವರ್ಷಗಳು ಬೇಕಾದವು. ವೃದ್ಧಾಪ್ಯದಲ್ಲಿ ನರಸಿಂಹಸ್ವಾಮಿಗಳು ಆಸ್ಪತ್ರೆಯಲ್ಲಿದ್ದಾಗ ಕೃತಿಯ ಹಕ್ಕುಸ್ವಾಮ್ಯದ ಪತ್ರ ಅವರಿಗೆ ತಲುಪಿತು. ಆಗ ಅವರು– ‘ಮಗಳು ಮನೆಗೆ ಹಿಂತಿರುಗಿದ್ದಾಳೆ. ಅವಳನ್ನು ಜೋಪಾನವಾಗಿ ಇರಿಸಿಕೊ’ ಎಂದು ತಮ್ಮ ಪತ್ನಿಗೆ ಹೇಳಿದ ಮಾತನ್ನು ಕೆಎಸ್‌ನ ಅವರಿಗೆ ನಿಕಟವರ್ತಿಯಾಗಿದ್ದ ಲೇಖಕ ಎಂ.ವಿ. ವೆಂಕಟೇಶ ಮೂರ್ತಿ ನೆನಪಿಸಿಕೊಳ್ಳುತ್ತಾರೆ. (ಈಗಲೂ ‘ಮೈಸೂರ ಮಲ್ಲಿಗೆ’ ಹಕ್ಕುಸ್ವಾಮ್ಯ ಕವಿಯ ಕುಟುಂಬಕ್ಕೆ ಸೇರಿದ್ದರೆ, ಪ್ರಕಾಶನದ ಹಕ್ಕುಗಳು ಪ್ರಕಾಶಕ ಸಂಸ್ಥೆಯ ಬಳಿಯೇ ಉಳಿದುಕೊಂಡಿವೆ). ಕೆಎಸ್‌ನ ಮಾತ್ರವೇನು, ಕನ್ನಡದ ಬಹುತೇಕ ಹಿರಿಯ ಲೇಖಕರು ಹೀಗೆ ಸಾಕಷ್ಟು ಕಾಲ ‘ಹಕ್ಕು’ಗಳನ್ನು ಬಿಟ್ಟುಕೊಟ್ಟು ಪರಿತಪಿಸಿದವರೇ ಆಗಿದ್ದಾರೆ.

ತಂತ್ರಜ್ಞಾನ ಕ್ಷೇತ್ರದಲ್ಲೂ ಬೌದ್ಧಿಕ ಕಳ್ಳತನದ ಪ್ರಕರಣಗಳಿವೆ. ತಂತ್ರಾಂಶ, ವಿನ್ಯಾಸಕ್ಕೆ ಸಂಬಂಧಿಸಿದಂತೆ ಹಕ್ಕುಸ್ವಾಮ್ಯಕ್ಕೆ ಒಳಪಟ್ಟ 7 ಸಂಗತಿಗಳನ್ನು ‘ಸ್ಯಾಮ್‌ಸಂಗ್‌’ ಸಂಸ್ಥೆ ನಕಲು ಮಾಡಿದೆ ಎಂದು ‘ಆ್ಯಪಲ್‌’ ಕಂಪೆನಿ ಆಪಾದಿಸಿತ್ತು. ಈ ಪ್ರಕರಣದಲ್ಲಿ ಸುಮಾರು 5,500 ಕೋಟಿ ರೂಪಾಯಿ ಪರಿಹಾರವನ್ನು ‘ಆ್ಯಪಲ್‌’ಗೆ ಕಟ್ಟಿಕೊಡುವಂತೆ ‘ಸ್ಯಾಮ್‌ಸಂಗ್‌’ಗೆ ಅಮೆರಿಕದ ನ್ಯಾಯಾಲಯ ಆದೇಶಿಸಿತ್ತು. ಹೀಗೆ ತನ್ನ ಹಕ್ಕುಗಳ ಬಗ್ಗೆ ಜಾಗರೂಕವಾಗಿರುವ ‘ಆ್ಯಪಲ್‌’ ಕಂಪೆನಿಯೂ ಕಾಪಿರೈಟ್‌ ಉಲ್ಲಂಘನೆ ಆರೋಪಕ್ಕೆ ತುತ್ತಾಗಿದೆ. 1992ರಲ್ಲಿ ತಾನು ವಿನ್ಯಾಸಪಡಿಸಿದ್ದ ವಿನ್ಯಾಸವನ್ನು ಕದ್ದು ಐಫೋನ್‌, ಐಪ್ಯಾಡ್‌ಗಳಲ್ಲಿ ಬಳಸಿದೆ ಎಂದು ಫ್ಲಾರಿಡಾದ ಉದ್ಯಮಿಯೊಬ್ಬರು ಕಳೆದ ವರ್ಷ ದಾವೆ ಹೂಡಿದ್ದಾರೆ.

ಕಾಪಿರೈಟ್‌ ಬಗ್ಗೆ ಉದಾರವಾದ ಮನೋಧರ್ಮಗಳೂ ಇವೆ. ‘ಕ್ರಿಯೇಟಿವ್‌ ಕಾಮನ್ಸ್‌’ ಹೆಸರಿನಲ್ಲಿ ಅಂತರ್ಜಾಲದಲ್ಲಿ ಸಾಕಷ್ಟು ಕೃತಿಗಳೂ ತಂತ್ರಾಂಶಗಳೂ ಉಚಿತವಾಗಿ ಲಭ್ಯ. ಪತ್ರಕರ್ತರೂ ಲೇಖಕರೂ ಆಗಿದ್ದ ಗಾಂಧೀಜಿ ತಮ್ಮ ಕೃತಿಗಳಿಗೆ ಕಾಪಿರೈಟ್‌ ಬಯಸಿರಲಿಲ್ಲ ಎನ್ನುವುದನ್ನೂ ಇಲ್ಲಿ ನೆನಪಿಸಿಕೊಳ್ಳಬೇಕು. ತಮ್ಮ ಎಲ್ಲ ನಡೆಗಳೂ ಸತ್ಯಾಗ್ರಹದ ಉದ್ದೇಶಕ್ಕೆ ಪೂರಕವಾಗಿರಬೇಕು ಎಂದು ಭಾವಿಸಿದ್ದ ಅವರು, ಮಾಲೀಕತ್ವದ ರೀತಿಯ ಹಕ್ಕುಸ್ವಾಮ್ಯದ ಬಗ್ಗೆ ಒಲವು ಹೊಂದಿರಲಿಲ್ಲ. ಗಾಂಧಿ ಸಾವಿಗೀಡಾಗಿ 60 ವರ್ಷ ತುಂಬಿದ ಸಂದರ್ಭದಲ್ಲಿ ‘ಸ್ವತಃ ಗಾಂಧೀಜಿ ತಮ್ಮ ಕೃತಿಗಳಿಗೆ ಕಾಪಿರೈಟ್‌ ಬಯಸಿರಲಿಲ್ಲ. ಇಷ್ಟು ಕಾಲ ಆ ಹಕ್ಕುಗಳನ್ನು ನಾವು ಇಟ್ಟುಕೊಂಡಿದ್ದೆವಷ್ಟೆ’ ಎಂದು ಗಾಂಧೀಜಿ ಕೃತಿಗಳ ಹಕ್ಕುಸ್ವಾಮ್ಯ ಹೊಂದಿದ್ದ ‘ನವಜೀವನ ಟ್ರಸ್ಟ್‌’ ಹೇಳಿತ್ತು. ಆದರೆ, ರವೀಂದ್ರನಾಥ ಟ್ಯಾಗೋರರ ಕೃತಿಗಳ ಹಕ್ಕುಸ್ವಾಮ್ಯ ಬಿಟ್ಟುಕೊಡಲು ‘ವಿಶ್ವಭಾರತಿ’ ಸಂಸ್ಥೆ ಕೊಂಚ ಜಿಗುಟುತನ ತೋರಿಸಿತ್ತು. 1991ರಲ್ಲಿ ಟ್ಯಾಗೋರರ ಕೃತಿಗಳ ಕಾಪಿರೈಟ್‌ ಅವಧಿ ಮುಗಿದರೂ ಮತ್ತೂ ಹತ್ತು ವರ್ಷ ಹಕ್ಕುಸ್ವಾಮ್ಯ ನೀಡುವಂತೆ ಸಂಸ್ಥೆ ಬಯಸಿತು. ಅದರ ಮೇರೆಗೆ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆ ತಂದು ಕಾಪಿರೈಟ್‌ ಕೊನೆಗೊಳ್ಳುವ ಅವಧಿಯನ್ನು ಕೃತಿಕಾರನ ನಿಧನದ 50 ವರ್ಷಗಳ ಬದಲಿಗೆ 60 ವರ್ಷಕ್ಕೆ ವಿಸ್ತರಿಸಲಾಯಿತು.

ಹಕ್ಕುಸ್ವಾಮ್ಯ ಕೃತಿಕಾರರ ಹಕ್ಕುಗಳನ್ನು ರಕ್ಷಿಸಿದರೂ ಕೆಲವೊಮ್ಮೆ ಸೃಜನಶೀಲ ಕೃತಿಗಳನ್ನು ಸಹೃದಯರಿಂದ ದೂರವಾಗಿಸುವುದೂ ಇದೆ. ಕನ್ನಡದ ಕೆಲವು ಮುಖ್ಯ ಲೇಖಕರ ಕೃತಿಗಳು ಓದುಗರಿಗೆ ಸುಲಭ ಲಭ್ಯವಿಲ್ಲದೆ ಇರುವಲ್ಲಿ ಆ ಕೃತಿಗಳ ಲೇಖಕರ ವಾರಸುದಾರರ ಪಾತ್ರವೂ ಇದೆ. ಸಾರ್ವಜನಿಕ ಹಿತದ ದೃಷ್ಟಿಯಿಂದ ಕೃತಿಸ್ವಾಮ್ಯದ ಬಗ್ಗೆ ಉದಾರಭಾವ ಹೊಂದದೆ ಹೋದಲ್ಲಿ ಅದು ಕೃತಿಕಾರನಿಗೆ ಮಾಡುವ ಅಪಚಾರವೂ ಹೌದು.
ಇಳಯರಾಜ ಅವರು ತಮ್ಮ ಸೃಜನಶೀಲ ಕೃತಿಗಳ ಕುರಿತು ಪ್ರತಿಪಾದಿಸಿರುವ ಹಕ್ಕುಸ್ವಾಮ್ಯ ಹುಟ್ಟುಹಾಕಿರುವ ಚರ್ಚೆಯು, ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು ಕಾರಣವಾಗಬೇಕಿದೆ. ಈ ಚರ್ಚೆಯ ಸಂದರ್ಭದಲ್ಲಿ ನಾವು ಮರೆಯಬಾರದ ಸಂಗತಿಯೊಂದಿದೆ. ಅದೆಂದರೆ:  ಕೃತಿಗೆ ಸಂಬಂಧಿಸಿದ ಸೃಜನಶೀಲ ಹಕ್ಕುಗಳನ್ನು ಕಾಯ್ದೆಯ ಮೂಲಕ ಪಡೆಯುವ ಕೃತಿಕಾರ ಅಥವಾ ಕೃತಿಯ ವಾರಸುದಾರ, ತನ್ನ ಸೃಜನಶೀಲ ಕೃತಿಗಳು ಸಹೃದಯನಿಗೆ ತಲುಪಿಸಬೇಕಾದ ಸಾಂಸ್ಕೃತಿಕ–ನೈತಿಕ ಜವಾಬ್ದಾರಿಯನ್ನೂ ನಿರ್ವಹಿಸುವುದು ಅಗತ್ಯ.

ಎ.ಆರ್‌. ರೆಹಮಾನ್, ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಮುಂತಾದವರು ಲೈವ್‌ ಷೋಗಳ ಮೂಲಕ ದೊಡ್ಡ ಮೊತ್ತ ಸಂಪಾದಿಸುತ್ತಿದ್ದಾರೆ. ಆಡಿಯೊ ಸಂಸ್ಥೆಗಳಿಗೆ, ಸಂಗೀತ ಸಂಯೋಜಕರಿಗೆ ಹಾಗೂ ಗೀತರಚನಕಾರರಿಗೆ ಮಾತ್ರ ಏನೂ ದೊರೆಯುತ್ತಿಲ್ಲ.
ವೇಲು,
‘ಲಹರಿ’ ಆಡಿಯೊ ಸಂಸ್ಥೆ ಮುಖ್ಯಸ್ಥ

‘ಐಪಿಆರ್‌ಎಸ್‌’ (ಇಂಡಿಯನ್ ಪರ್‌ಫಾರ್ಮಿಂಗ್ ರೈಟ್ಸ್ ಸೊಸೈಟಿ) ಪ್ರಾಮಾಣಿಕವಾಗಿ ಕೆಲಸ ಮಾಡುವುದಾದರೆ ಸಂಗೀತ ಸಂಯೋಜಕರಿಗೆ ತೊಂದರೆಯೇ ಇಲ್ಲ. ವ್ಯವಸ್ಥೆಯಲ್ಲಿ ಲೋಪದೋಷಗಳಿವೆ. ಹಾಗಾಗಿ ನಮಗೆ ಹಣ ಬರುವಲ್ಲಿ ಮೋಸವಾಗುತ್ತಿದೆ.
ಅನೂಪ್ ಸೀಳಿನ್
ಚಲನಚಿತ್ರ ಸಂಗೀತ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT