ಸಿಂಧುಗೆ ಸಿಹಿ, ಸೈನಾಗೆ ಕಹಿ

7

ಸಿಂಧುಗೆ ಸಿಹಿ, ಸೈನಾಗೆ ಕಹಿ

Published:
Updated:
ಸಿಂಧುಗೆ ಸಿಹಿ, ಸೈನಾಗೆ ಕಹಿ

ನವದೆಹಲಿ: ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಭಾರತದ ಪಿ.ವಿ. ಸಿಂಧು ಅವರು ಅನುಭವಿ ಆಟಗಾರ್ತಿ ಸೈನಾ ನೆಹ್ವಾಲ್ ಎದುರು ಗೆದ್ದು ನಾಲ್ಕರ ಹಂತಕ್ಕೆ ಪ್ರವೇಶಿಸಿದರು.

ಇಂಡಿಯಾ ಓಪನ್ ಸೂಪರ್ ಸರಣಿಯಲ್ಲಿ ಶುಕ್ರವಾರ ನಡೆದ  ಎಂಟರ ಘಟ್ಟದ ಪಂದ್ಯದಲ್ಲಿ ಸಿಂಧು 21–16, 22–20ರಿಂದ ಸೈನಾ ಅವರನ್ನು ಮಣಿಸಿದರು.

ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಸಿಂಧು ಈ ಟೂರ್ನಿಯ ನಾಲ್ಕರ ಘಟ್ಟದಲ್ಲಿ ಕೊರಿಯಾದ ಸಂಗ್ ಜಿ ಯುನ್ ವಿರುದ್ಧ ಅಡಲಿದ್ದಾರೆ.

ರೋಚಕ ಪಂದ್ಯ: ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಸೈನಾ  ಮತ್ತು  ಸಿಂಧು ಅವರ ನಡುವಣ ಪಂದ್ಯವು ತೀವ್ರ ರೋಚಕವಾಗಿತ್ತು.

ಮೊದಲ ಗೇಮ್‌ನ ಆರಂಭಿಕ ಹಂತದಿಂದಲೂ ಇವರಿಬ್ಬರೂ ಸಮ ಬಲದ ಹೋರಾಟ ನಡೆಸಿದರು. ಆದರೆ ಹತ್ತು ಪಾಯಿಂಟ್‌ಗಳನ್ನು ದಾಟಿದ ನಂತರ ಸಿಂಧು ತಮ್ಮ ಅಮೋಘವಾದ ಸ್ಮ್ಯಾಷ್‌ಗಳ ಮೂಲಕ ಮುನ್ನಡೆ ಸಾಧಿಸಿದರು.  ನೆಟ್‌ ಬಳಿ ನಿಖರವಾದ ಡ್ರಾಪ್‌ಗಳನ್ನು ಹಾಕಿದ ಸಿಂಧು ಅವರಿಗೆ ಪ್ರತ್ಯುತ್ತರ ನೀಡುವಲ್ಲಿ ಸೈನಾ ಎಡವಿದರು.  

ಆದರೆ ಎರಡನೇ ಗೇಮ್‌ನಲ್ಲಿ ಅವರು ಸುಲಭವಾಗಿ ಸೋಲೊಪ್ಪಿ ಕೊಳ್ಳಲಿಲ್ಲ. ತಮ್ಮ ನೈಜ ಆಟವನ್ನು ಆಡಿದ ಸೈನಾ ಅಮೋಘವಾದ ರಿಟರ್ನ್ಸ್‌ ಮತ್ತು ಸರ್ವ್‌ಗಳ ಮೂಲಕ ಎದುರಾಳಿ ಆಟಗಾರ್ತಿಗೆ ಸವಾಲೊಡ್ಡಿದರು. ಇದರಿಂದಾಗಿ ಸಿಂಧು ಸಾಕಷ್ಟು ಬೆವರು ಹರಿಸಬೇಕಾಯಿತು. ಬಿಸಿಯೇರಿದ್ದ  ಹೋರಾಟದಲ್ಲಿ ಇಬ್ಬರೂ ಆಟಗಾರ್ತಿ ಯರು ಶಕ್ತಿಮೀರಿ ಆಡಿದರು. ಟೈಬ್ರೇಕರ್‌ನಲ್ಲಿ ಸಿಂಧು ಎರಡು ಅಂಕಗಳ ಮುನ್ನಡೆ ಸಾಧಿಸಿದರು.

ರಿಯೊ ಒಲಿಂಪಿಕ್ಸ್‌ ಸಂದರ್ಭದಲ್ಲಿ ಗಾಯಗೊಂಡಿದ್ದ ಸೈನಾ ಅವರು ದೀರ್ಘ ವಿಶ್ರಾಂತಿಯ ನಂತರ ಹೋದ ನವೆಂಬರ್‌ನಲ್ಲಿ ಕಣಕ್ಕಿಳಿದಿದ್ದರು. ನಂತರ ಅವರು ಮೂರು ಟೂರ್ನಿಗಳಲ್ಲಿ ಆಡಿದ್ದರು.  2014ರಲ್ಲಿ ಸೈಯದ್ ಮೋದಿ ಅಂತರರಾಷ್ಟ್ರೀಯ ಟೂರ್ನಿ ಯಲ್ಲಿ ಇಬ್ಬರೂ ಆಟಗಾರ್ತಿಯರು ಮುಖಾಮುಖಿಯಾಗಿದ್ದರು. ಆಗ ಸೈನಾ ಗೆದ್ದಿದ್ದರು.

ಇಂಡಿಯನ್ ಬ್ಯಾಡ್ಮಿಂಟನ್ ಲೀಗ್ (ಐಬಿಎಲ್) ಟೂರ್ನಿಯಲ್ಲಿ ಯೂ ಅವರು ಮುಖಾಮುಖಿಯಾಗಿದ್ದರು. ಅದರಲ್ಲೂ ಸೈನಾ ಅವರೇ ಜಯಿಸಿದ್ದರು. ಆದರೆ ಈ ಬಾರಿ ಸಿಂಧು ಮೇಲುಗೈ ಸಾಧಿಸಿದರು.

ರಚಾನಕ್‌ಗೆ ಆಘಾತ: ಹಾಲಿ ಚಾಂಪಿಯನ್‌ ರಚಾನಕ್ ಇಂಟನಾನ್ ಅವರು ಕ್ವಾರ್ಟರ್‌ಫೈನಲ್‌ನಲ್ಲಿ ಆಘಾತ ಅನುಭವಿಸಿದರು.

ಕೊರಿಯಾದ ಆಟಗಾರ್ತಿ ಸಂಗ್ ಜಿ ಯೂನ್ 21–16, 22–20ರಿಂದ ಥಾಯ್ಲೆಂಡ್‌ನ ರಚಾನಕ್ ಅವರನ್ನು ಸೋಲಿಸಿದರು. ಎರಡನೇ ಶ್ರೇಯಾಂಕದ ಸಂಗ್ ಜೀ ಅವರು ಚುರುಕಿನ ಆಟದ ಮೂಲಕ ಜಯ ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಜಪಾನಿನ ಅಕಾನೆ ಯಾಮಾಗುಚಿ ಅವರು 21–13, 11–21, 21–8 ರಿಂದ ತಮ್ಮದೇ ದೇಶದವರಾದ ನೊಜೊಮಿ ಒಕುಹರಾ ವಿರುದ್ಧ ಗೆದ್ದರು. 

ವಿಕ್ಟರ್‌ಗೆ ಜಯ: ಪುರುಷರ ಸಿಂಗಲ್ಸ್‌ನಲ್ಲಿ ಡೆನ್ಮಾರ್ಕ್‌ನ  ವಿಕ್ಟರ್ ಅಕ್ಸೆಲ್ಸನ್ 19–21, 21–14, 21–16ರಿಂದ ಚೈನಿಸ್ ತೈಪೆಯ ಜು ವೀ ವಾಂಗ್ ಅವರನ್ನು ಸೋಲಿಸಿ ಸೆಮಿಫೈನಲ್‌ ಪ್ರವೇಶಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry