ಇತಿಹಾಸದ ಪುಟ ಸೇರಿದ ಮೈಸೂರು ಬ್ಯಾಂಕ್

7

ಇತಿಹಾಸದ ಪುಟ ಸೇರಿದ ಮೈಸೂರು ಬ್ಯಾಂಕ್

Published:
Updated:
ಇತಿಹಾಸದ ಪುಟ ಸೇರಿದ ಮೈಸೂರು ಬ್ಯಾಂಕ್

ಕನ್ನಡಿಗರಲ್ಲಿ ‘ನಮ್ಮ ಬ್ಯಾಂಕ್’, ‘ಮೈ ಬ್ಯಾಂಕ್’, ‘ಮೈಸೂರು ಬ್ಯಾಂಕ್’ ಎಂದೇ ಜನಜನಿತವಾಗಿದ್ದ,   ನೂರಾ ಮೂರು ವರುಷಗಳಿಗೂ ಹೆಚ್ಚಿನ ಇತಿಹಾಸ ಹೊತ್ತ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು 31ನೇ ಮಾರ್ಚ್ 2017ರಂದು ತನ್ನ ಕೊನೆಯ ದಿನದ ವಹಿವಾಟನ್ನು ನಡೆಸಿ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಲೀನವಾಗಿದೆ.  ನೋಡನೋಡುತ್ತಿದ್ದಂತೆಯೇ ಶತಮಾನದಿಂದ ರಾರಾಜಿಸುತ್ತಿದ್ದ ಮೈಸೂರು ಬ್ಯಾಂಕಿನ ನಾಮಫಲಕಗಳು ಕೆಳಗಿಳಿದವು.  ಮೊಬೈಲ್ ಗುಂಡಿ ಒತ್ತುತ್ತಿದ್ದಂತೆಯೇ ಗುನುಗುನಿಸುತ್ತಿದ್ದ ‘ವೆಲ್‍ಕಂ ಟು ಮೈಸೂರು ಬ್ಯಾಂಕ್’ ಎಂಬ ಸುಶ್ರಾವ್ಯ ಕಾಲರ್ ಟ್ಯೂನ್ ಹಾಡುವುದನ್ನು ನಿಲ್ಲಿಸಿತು.  ಬ್ಯಾಂಕಿನೊಡನೆ ತಮ್ಮನ್ನು ತಾವು ಗುರುತಿಸಿಕೊಂಡಿದ್ದ ಸಿಬ್ಬಂದಿ, ನಿವೃತ್ತ ಉದ್ಯೋಗಿಗಳು, ಗ್ರಾಹಕರು, ಕೊನೆಯ ಬಾರಿಗೆ ತಮ್ಮ ಶಾಖೆ/ಕಚೇರಿಗಳು, ಪ್ರಧಾನ ಕಚೇರಿಯ ಮುಂದೆ ಸಮೂಹ ಛಾಯಾಚಿತ್ರ, ಸೆಲ್ಫೀ ತೆಗೆದುಕೊಂಡರು. ಬ್ಯಾಂಕಿನ ಜತೆಗಿನ ಅನುಭವ ಕುರಿತ ಬರಹ, ಪದ್ಯ, ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದವು.  ಲಕ್ಷಾಂತರ ಗ್ರಾಹಕರು ಮುಂದೇನು? ಎಂದು ಪ್ರಶ್ನಿಸತೊಡಗಿದರು.  ಬ್ಯಾಂಕ್‌ನೊಡನೆ ಭಾವನಾತ್ಮಕ ಸಂಬಂಧ ಹೊಂದಿದ್ದ ಪ್ರತಿಯೊಬ್ಬರಲ್ಲೂ ಕ್ಷಣಕಾಲ ಮೌನ ಆವರಿಸಿತ್ತು.  ಕಣ್ಣುಗಳು ತೇವಗೊಂಡಿದ್ದವು.  ರಾತ್ರಿ ಬೆಳಗಾಗುವುದರೊಳಗೆ ಮೈಸೂರು ಬ್ಯಾಂಕ್ ‘ಎಸ್ ಬಿ ಐ’ ಎಂದು ಕರೆಸಿಕೊಂಡಿತು.  ವ್ಯಾವಹಾರಿಕ ಜಗತ್ತು ಮತ್ತೆ ಎಂದಿನಂತೆ ಬದಲಾವಣೆಯ ಪರ್ವವನ್ನು ದಾಟಿ  ಮುಂದುವರಿಯಲು ಸಜ್ಜಾಗಿದೆ.   

 

 ಏಪ್ರಿಲ್ 1ರಂದು ಸ್ಟೇಟ್ ಬ್ಯಾಂಕ್ ಮೈಸೂರಿನ ಒಂದು ಕೋಟಿಯಷ್ಟು ಗ್ರಾಹಕರು ಭಾರತೀಯ ಸ್ಟೇಟ್ ಬ್ಯಾಂಕಿನ ಗ್ರಾಹಕರಾಗಿ ಪರಿವರ್ತನೆಗೊಂಡರು.  ಸುಮಾರು ₹ 1.35 ಲಕ್ಷ ಕೋಟಿ ವಹಿವಾಟು ಹೊಂದಿದ್ದ ಮೈಸೂರು ಬ್ಯಾಂಕಿನ ಎಲ್ಲಾ ಬಗೆಯ ಠೇವಣಿ ಖಾತೆಗಳು, ಗೃಹ ಸಾಲ, ಆಭರಣ ಸಾಲ, ಕೃಷಿ ಸಾಲ, ವ್ಯಾಪಾರ-ಕೈಗಾರಿಕಾ ಸಾಲ ಸೇರಿದಂತೆ ವಿವಿಧ ಬಗೆಯ ಮುಂಗಡ ಖಾತೆಗಳು, ಎಟಿಎಂಗಳು ಮಾತ್ರವಲ್ಲದೆ ಬ್ಯಾಂಕಿನ 1000ಕ್ಕೂ ಹೆಚ್ಚಿನ ಶಾಖೆ-ಕಚೇರಿಗಳು,  ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಬ್ಯಾಂಕಿನ ಬೆಂಗಳೂರು ಶಾಖೆಯ ಬೃಹತ್‌ ಕಲ್ಲಿನ ಕಟ್ಟಡ, ಐವತ್ತು ವರ್ಷಗಳ ಹಿಂದಿನ ಅತ್ಯಾಕರ್ಷಕ ಬಹುಮಹಡಿಯ ಪ್ರಧಾನ ಕಚೇರಿ, ನಾಡಿನ ವಿವಿಧೆಡೆಗಳಲ್ಲಿ ಹೊಂದಿರುವ ನೂರಾರು ಸ್ವಂತ ಕಟ್ಟಡಗಳು ಮತ್ತು ನಿವೇಶನಗಳು ಹಾಗೂ ಬ್ಯಾಂಕಿನ ಆಸ್ತಿಪಾಸ್ತಿ-ಸಾಲ ನೀಡಿಕೆಗೆ ಸಂಬಂಧಿಸಿದ ಸಂಪೂರ್ಣ ದಸ್ತಾವೇಜುಗಳು, ಕಂಪ್ಯೂಟರೀಕೃತ ದಾಖಲೆಗಳು, ಎಲ್ಲಾ ಹಳೆಯ ಕಡತಗಳು ಅಂದು ಭಾರತೀಯ ಸ್ಟೇಟ್ ಬ್ಯಾಂಕಿನ ಸುಪರ್ದಿಗೆ ಸೇರಿತು. 

 

ಮೈಸೂರು ಬ್ಯಾಂಕಿನ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿರುವ  ಹತ್ತು ಸಾವಿರದಷ್ಟು ಸಿಬ್ಬಂದಿ  ಸಹಾ ಅಂದು ದೇಶದ ಅತಿ ದೊಡ್ಡ ಬ್ಯಾಂಕ್ ಆದ ಎಸ್.ಬಿ.ಐ.ನ ಹಾಜರಾತಿ ಪುಸ್ತಕದಲ್ಲಿ ದಾಖಲಾದರು. ಈ ಪರಿವರ್ತನೆಯ ಪ್ರಕ್ರಿಯೆಗೆ ಭಾವನಾ ತ್ಮಕವಾಗಿ ಸ್ಪಂದಿಸಲು ಹಿಂದೇಟು ಹಾಕುವ ಉದ್ಯೋಗಿಗಳಿಗೆ ಅನುಕೂಲ ವಾಗುವಂತೆ ವಿಶೇಷ ಸ್ವಯಂ ನಿವೃತ್ತಿ ಯೋಜನೆಯೊಂದನ್ನು ಸಹಾ ಘೋಷಿಸಲಾಯಿತು.  

 

ಮೈಸೂರು ಬ್ಯಾಂಕಿನ ಸ್ಥಾಪನೆ 

ಮೈಸೂರು ಬ್ಯಾಂಕ್ ಸ್ಥಾಪನೆಯಾದದ್ದು   103 ವರ್ಷಗಳ ಹಿಂದೆ ದಸರಾ ಮಹೋತ್ಸವದ ಸಂದರ್ಭದಲ್ಲಿ. 2ನೆಯ ಅಕ್ಟೋಬರ್ 1913ರಂದು   ಬೆಂಗಳೂರಿನ ಅವೆನ್ಯೂ ರಸ್ತೆಯ ಸಣ್ಣ ಕಟ್ಟಡವೊಂದರಲ್ಲಿ ಬ್ಯಾಂಕ್‌ ಅಸ್ತಿತ್ವಕ್ಕೆ ಬಂದಿತು. ಬ್ಯಾಂಕಿನ ಸ್ಥಾಪನೆಗೆ ಮೂಲ ಕಾರಣ ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್  ಮತ್ತು ಮೈಸೂರು ಸರ್ಕಾರದ ದಿವಾನಸರ್ ಎಂ. ವಿಶ್ವೇಶ್ವರಯ್ಯನವರ ದಿಟ್ಟ ನಿರ್ಧಾರಗಳು. ಮೈಸೂರು ರಾಜ್ಯ ಸರ್ಕಾರದ ಆಶ್ರಯದಲ್ಲಿ ಬ್ಯಾಂಕೊಂದರ ಸ್ಥಾಪನೆಯ ವಿಷಯ ಮೊದಲು ಮೊಳಕೆಯೊಡೆದದ್ದು 1911ರ ಜೂನ್ 10ರಂದು ನಡೆದ ಮೈಸೂರು ಆರ್ಥಿಕ ಸಮ್ಮೇಳನದ ಪ್ರಥಮ ಅಧಿವೇಶನದಲ್ಲಿ.ರಾಜ್ಯದ ಕೃಷಿ, ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ಉತ್ತೇಜನ ನೀಡುವ  ಉದ್ದೇಶದಿಂದ ಆಯೋಜಿಸಲಾಗಿದ್ದ ಈ ಸಮ್ಮೇಳನವು ಸರ್ಕಾರಿ ಪ್ರಾಯೋಜಿತ ಬ್ಯಾಂಕೊಂದರ ಸ್ಥಾಪನೆಗೆ ಸಂಬಂಧಿಸಿದಂತೆ ಸರ್ ಎಂ.ವಿಶ್ವೇಶ್ವರಯ್ಯನವರ ಅಧ್ಯಕ್ಷತೆಯಲ್ಲಿ ‘ಬ್ಯಾಂಕಿಂಗ್ ಸಮಿತಿ’ಯನ್ನು ರಚಿಸಿತು.

 

ಆ ದಿನಗಳಲ್ಲಿ ದೇಶದ ಆರ್ಥಿಕ ವಾತಾವರಣ ಬ್ಯಾಂಕ್ ಸ್ಥಾಪನೆಗೆ ಪೂರಕವಾಗಿರಲಿಲ್ಲ. ಸ್ವಲ್ಪ ದಿನಗಳ ಹಿಂದಷ್ಟೇ ಬರ್ಮಾದಲ್ಲಿ (ಸದ್ಯದ ಮ್ಯಾನ್ಮಾರ್‌) ಸದೃಢ ಬ್ಯಾಂಕೊಂದು ನೆಲ ಕಚ್ಚಿ ದೇಶದ ಬಹುಭಾಗದ ವ್ಯಾಪಾರಿಗಳಲ್ಲಿ ತಲ್ಲಣ ಉಂಟುಮಾಡಿತ್ತು. ಆದರೆ ಆ ಸಂದರ್ಭದಲ್ಲಿಯೇ ‘ಸ್ವದೇಶೀ ಚಳವಳಿ’ ಸಹಾ ಬಲಗೊಂಡು ಸ್ವದೇಶೀ ಬ್ಯಾಂಕುಗಳ ಕಡೆ ಸಾರ್ವಜನಿಕರಲ್ಲಿ ಒಲವು ಮೂಡಲು ಶುರುವಾಗಿತ್ತು.  ಅಲ್ಲದೇ ಸ್ಥಳೀಯ ಲೇವಾದೇವಿಗಾರರ ಕಿರುಕುಳವೂ ಸಾಕಷ್ಟಿತ್ತು.  1906ರಲ್ಲಿ ಅಂದಿನ ಬರೋಡಾ ಮಹಾರಾಜರ ಕೃಪಾಶ್ರಯದಲ್ಲಿ ಸಾರ್ವಜನಿಕರ ಹೂಡಿಕೆಯೊಂದಿಗೆ ಪ್ರಾರಂಭವಾದ ‘ಬರೋಡಾ ಬ್ಯಾಂಕ್’ ಮೈಸೂರು ಮಹಾರಾಜರ ಸರ್ಕಾರಕ್ಕೆ ಪ್ರೇರಣೆ ನೀಡಿತ್ತು.  ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿದ ಸರ್ ಎಂ. ವಿಶ್ವೇಶ್ವರಯ್ಯನವರ ನೇತೃತ್ವದ ಬ್ಯಾಂಕಿಂಗ್ ಸಮಿತಿ 2ನೇ ಮೇ 1912ರಂದು ನಡೆಸಿದ ತನ್ನ ಸಭೆಯಲ್ಲಿ ರಾಜ್ಯದ ವ್ಯಾಪಾರ, ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರದ ನೆರವಿನಿಂದ ‘ಬ್ಯಾಂಕ್ ಆಫ್ ಮೈಸೂರು’ ಎಂಬ ಹೆಸರಿನ ಬ್ಯಾಂಕಿನ ಸ್ಥಾಪನೆಗೆ ಶಿಫಾರಸು ಮಾಡಿತು.  

 

ಜೂನ್ 1912ರಲ್ಲಿ ನಡೆದ ಮೈಸೂರು ಆರ್ಥಿಕ ಸಮ್ಮೇಳನದಲ್ಲಿ ಈ ಶಿಫಾರಸುಗಳು ಅಂಗೀಕೃತವಾಗಿ, ನಂತರ 31ನೇ ಜನವರಿ 1913ರಂದು ಬ್ಯಾಂಕಿನ ಸ್ಥಾಪನೆಗೆ ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಅವರ ಅಂಕಿತ ದೊರೆಯಿತು.  

 

19ನೇ ಮೇ 1913ರಂದು ಕಂಪೆನಿಯಾಗಿ ನೋಂದಾವ ಣೆಗೊಂಡಿತು.  ಇದಕ್ಕೆ ಸರಿಯಾಗಿ 103 ವರ್ಷಗಳ ನಂತರ ಅಂದರೆ 17ನೇ ಮೇ 2016ರಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ನಿರ್ದೇಶಕ ಮಂಡಳಿಯು ಬ್ಯಾಂಕನ್ನು ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ವಿಲೀನಗೊಳಿಸುವ ನಿರ್ಣಯವನ್ನು ಅಂಗೀಕರಿಸಿತು. ಆರಂಭದ ದಿನಗಳಲ್ಲಿ ಬ್ಯಾಂಕಿನ ಷೇರು ಕೊಳ್ಳಲು ಸಾರ್ವಜನಿಕರು ಮುಗಿಬಿದ್ದ ಕಾರಣ ಕೆಲವೇ ದಿನಗಳಲ್ಲಿ ಷೇರುಗಳು ನಿಗದಿಗಿಂತ ಹೆಚ್ಚಿನ ಬೇಡಿಕೆ ಕಂಡಿದ್ದವು.  

 

ಇಂದು ಬ್ಯಾಂಕಿನ ಬಂಡವಾಳದ ಶೇ 92.33ರಷ್ಟು ಷೇರುಗಳನ್ನು ಭಾರತೀಯ ಸ್ಟೇಟ್ ಬ್ಯಾಂಕು ತನ್ನ ಸುಪರ್ದಿಯಲ್ಲಿರಿಸಿಕೊಂಡಿದ್ದರೆ ಉಳಿದ ಶೇ 7.67 ಭಾಗ ಖಾಸಗಿಯವರದು.  ವಿಲೀನದ ನಂತರ ಹಾಲಿ ಷೇರುದಾರರಿಗೆ ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನ ₹ 10 ಮುಖ ಬೆಲೆಯ 10 ಷೇರುಗಳಿಗೆ ಪ್ರತಿಯಾಗಿ ಭಾರತೀಯ ಸ್ಟೇಟ್ ಬ್ಯಾಂಕಿನ ₹ 1  ಮುಖ ಬೆಲೆಯ 22 ಷೇರುಗಳನ್ನು ನೀಡಲಾಗುವುದೆಂದು   ಘೋಷಿಸಲಾಗಿದೆ.

 

ನಿರಂತರ ಲಾಭ

ತನ್ನ ಪ್ರಾರಂಭಿಕ ವರ್ಷ 1913ರಿಂದ 2016ರವರೆಗಿನ ಎಲ್ಲಾ 103 ವರುಷಗಳೂ ಸತತವಾಗಿ ಲಾಭ ಗಳಿಸಿರುವುದು ಮೈಸೂರು ಬ್ಯಾಂಕಿನ ಪ್ರಮುಖ ಹೆಗ್ಗಳಿಕೆಯಾಗಿದೆ.

 

 ಮೈಸೂರು ಬ್ಯಾಂಕಿನಲ್ಲಿ ಇತರ ಬ್ಯಾಂಕುಗಳ ವಿಲೀನ

ಬೆಳಗಾವಿ ಜಿಲ್ಲೆಯ ರಾಮದುರ್ಗದಲ್ಲಿ ಅಸ್ತಿತ್ವದಲ್ಲಿದ್ದ ‘ರಾಮದುರ್ಗ ಬ್ಯಾಂಕ್ ಲಿಮಿಟೆಡ್’ 10ನೇ ನವೆಂಬರ್ 1963ರಂದು ಹಾಗೂ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ‘ಮಲ್ನಾಡ್ ಬ್ಯಾಂಕ್ ಲಿಮಿಟೆಡ್’ 6ನೇ ಅಕ್ಟೋಬರ್ 1965ರಂದು ಸ್ಟೇಟ್ ಬ್ಯಾಂಕ್ ಆಫ್ ಮೈಸೂರಿನಲ್ಲಿ ವಿಲೀನಗೊಂಡಿದ್ದವು.  

 


 

ಬ್ಯಾಂಕಿನ ಶತಮಾನೋತ್ಸವ 

ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ತನ್ನ ಶಾಖಾ ಜಾಲ ಹೊಂದಿದ್ದ ಮೈಸೂರು ಬ್ಯಾಂಕ್, ತನ್ನ ಮೊದಲ ಹೊರ ರಾಜ್ಯದ ಶಾಖೆಯನ್ನು   70 ವರ್ಷಗಳ ಹಿಂದೆಯೇ ಮದ್ರಾಸ್‌ನಲ್ಲಿ (ಚೆನ್ನೈ) ತೆರೆದಿತ್ತು. 2013ರಲ್ಲಿ ದೇಶಾದ್ಯಂತ ತನ್ನ ಜನ್ಮ ಶತಮಾನೋತ್ಸವವನ್ನು ಬಹಳ ಅದ್ದೂರಿಯಾಗಿ ಆಚರಿಸಿದ ಬ್ಯಾಂಕು, ಈ ಸವಿನೆನೆಪಿನಲ್ಲಿ 5ನೇ ಡಿಸೆಂಬರ್ 2013ರಂದು ಒಂದೇ ದಿನ ದೇಶಾದ್ಯಂತ 100 ಶಾಖೆಗಳನ್ನು ತೆರೆದು ಭಾರತದ ಬ್ಯಾಂಕಿಂಗ್ ಇತಿಹಾಸದಲ್ಲಿ ಮತ್ತೊಂದು ದಾಖಲೆ ಬರೆದಿತ್ತು.ಛಾಪಾ ಕಾಗದ ವಿತರಣೆ

ತೆಲಗಿ ಛಾಪಾ ಕಾಗದದ ಹಗರಣದ ಕಾರಣಕ್ಕೆ ರಾಜ್ಯದಲ್ಲಿ ಛಾಪಾ ಕಾಗದದ ಮಾರಾಟ ನಿಲ್ಲಿಸಿದಾಗ, ಛಾಪಾ ಕಾಗದ ವಿತರಣೆಗೂ  ಬ್ಯಾಂಕ್  ಮುಂದಾಗಿತ್ತು.ಬ್ಯಾಂಕಿನ ಲಾಂಛನಗಳು

ಮೈಸೂರು ಬ್ಯಾಂಕು ರಾಜಾಶ್ರಯದಲ್ಲಿ ಸ್ಥಾಪಿತಗೊಂಡಾಗ ಮೈಸೂರು ಚಾಮುಂಡಿ ಬೆಟ್ಟದಲ್ಲಿರುವ ‘ನಂದಿ’ಯನ್ನು ಬ್ಯಾಂಕು ತನ್ನ ಲಾಂಛನವನ್ನಾಗಿ ರೂಪಿಸಿಕೊಂಡಿತ್ತು.  ಆ ನಂತರ 1960ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಸಮೂಹದ ಎಲ್ಲಾ ಬ್ಯಾಂಕುಗಳಿಗೂ ಅನ್ವಯವಾಗುವಂತೆ ‘ಸ್ಟೇಟ್ ಬ್ಯಾಂಕ್ ಲಾಂಛನ’ ವನ್ನು ಬಳಸಲಾಯಿತು. 2013ರಲ್ಲಿ ಮೈಸೂರು ಬ್ಯಾಂಕು ತನ್ನ ಶತಮಾನೋತ್ಸವ ಸಂದರ್ಭದಲ್ಲಿ ಸ್ಟೇಟ್ ಬ್ಯಾಂಕ್ ಲಾಂಛನವನ್ನೇ ಸ್ವಲ್ಪ ಮಾರ್ಪಾಡಿನೊಂದಿಗೆ ಮರುವಿನ್ಯಾಸಗೊಳಿಸಿತ್ತು. ಈಗ ಎಸ್‌ಬಿಐ ಲಾಂಛನದ ಜತೆ ಗುರುತಿಸಿಕೊಳ್ಳುತ್ತಿದೆ.ಕನ್ನಡ ಬಳಕೆ

ತನ್ನ ದಿನ ನಿತ್ಯದ ವಹಿವಾಟಿನಲ್ಲಿ ಕನ್ನಡ ಭಾಷೆಯ ಬಳಕೆ ಹಾಗೂ ಬೆಳವಣಿಗೆಗೆ ಮೈಸೂರು ಬ್ಯಾಂಕು ಬಹಳ ಹಿಂದಿನಿಂದಲೂ ಪ್ರೋತ್ಸಾಹ ನೀಡುತ್ತ ಬಂದಿದೆ.   ಕಂಪ್ಯೂಟರ್ ಕುರಿತ ಪಾರಿಭಾಷಿಕ ಪದಗಳ ಕಿರುಹೊತ್ತಗೆಯೊಂದನ್ನು ಹೊರತಂದ ಹೆಗ್ಗಳಿಕೆ ಮೈಸೂರು ಬ್ಯಾಂಕಿನದು.  1980ರಲ್ಲಿ ಅಸ್ತಿತ್ವಕ್ಕೆ ಬಂದ ಮೈಸೂರು ಬ್ಯಾಂಕ್ ಕನ್ನಡ ಬಳಗ ಹಲವಾರು ಸಾಹಿತ್ಯಕ, ಸಾಂಸ್ಕೃತಿಕ ಚಟುವಟಿಕೆಗಳ ಬಗ್ಗೆ ನಿರಂತರ ಗಮನ ಹರಿಸಿದೆ.  1983ರಲ್ಲಿ ಕರ್ನಾಟಕಕ್ಕೇ ಪ್ರತ್ಯೇಕ ಸ್ಟೇಟ್ ಬ್ಯಾಂಕ್ ನೇಮಕಾತಿ ಮಂಡಳಿ ರಚಿಸಲು ಆಗ್ರಹಿಸಿ ನಡೆಸಿದ ಹೋರಾಟದಲ್ಲಿ ಕನ್ನಡ ಬಳಗ ಯಶಸ್ವಿಯಾದುದು ಉಲ್ಲೇಖಾರ್ಹ. ಅಲ್ಲದೆ ಬ್ಯಾಂಕಿನ ಅನೇಕ ಉದ್ಯೋಗಿಗಳು ನಾಡಿನ ರಂಗಭೂಮಿ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು   ಅಂತಾರಾಷ್ಟ್ರೀಯ ಮಟ್ಟದಲ್ಲೂ ಮನ್ನಣೆ ಗಳಿಸಿದ್ದಾರೆ. ಉಳಿಯುವ ಮೈಸೂರು ಬ್ಯಾಂಕ್ ಕುರುಹುಗಳು 

ಮೈಸೂರು ಬ್ಯಾಂಕ್ ವೃತ್ತ: ಮೈಸೂರು ಬ್ಯಾಂಕ್ ತನ್ನ ಅಸ್ತಿತ್ವ ಕಳೆದುಕೊಂಡರೂ ಅದರ ಹೆಸರನ್ನು ಅಜರಾಮರವಾಗಿಸುವುದರಲ್ಲಿ ಮೊದಲನೆಯದು ‘ಮೈಸೂರು ಬ್ಯಾಂಕ್ ವೃತ್ತ’.  ಅವಿನ್ಯೂ ರಸ್ತೆಯಲ್ಲಿ ಮೈಸೂರು ಬ್ಯಾಂಕ್ ಪ್ರಧಾನ ಕಛೇರಿಯ ಮುಂಭಾಗದಲ್ಲಿ ಆರು ರಸ್ತೆಗಳು ಕೂಡುವ ಪ್ರಮುಖ ಸ್ಥಳದಲ್ಲಿನ ‘ಮೈಸೂರು ಬ್ಯಾಂಕ್ ವೃತ್ತ’ವು  ಹಕ್ಕೊತ್ತಾಯದ ಭೂಮಿ.  ಮೈಸೂರು ಬ್ಯಾಂಕ್ ಅಳಿದರೂ ಮೈಸೂರು ಬ್ಯಾಂಕ್ ವೃತ್ತವು ಜನಮಾನಸದಲ್ಲಿ ಶಾಶ್ವತವಾಗಿ ಉಳಿಯಲಿದೆ.ಇದುವರೆಗೆ ತಮ್ಮ ಬದುಕನ್ನು ರೂಪಿಸಿದ ಬ್ಯಾಂಕು ತಮ್ಮ ಕಣ್ಣೆದುರೇ ಇತಿಹಾಸದ ಪುಟ ಸೇರಿದ ಬಗ್ಗೆ ಸಿಬ್ಬಂದಿಯಲ್ಲಿ ವಿಷಾದ, ಆತಂಕ ಮತ್ತು ವರ್ಗಾವಣೆಯ ಚಿಂತೆ ಕಾಡುವುದು ಸಹಜ.   ವಾಣಿಜ್ಯ ಲೋಕದಲ್ಲಿ ಭಾವನೆಗಳಿಗೆ ಸ್ಥಾನ ಇರುವುದಿಲ್ಲ.

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿ  ಉದ್ದೇಶಕ್ಕೆ  ಸ್ಥಾಪಿಸಿದ್ದ  ಬ್ಯಾಂಕ್‌  ಈಗ ತನ್ನ ವಿಶಿಷ್ಟ ಸ್ವರೂಪದ ಅಸ್ತಿತ್ವ ಕಳೆದುಕೊಂಡಿದೆ.  ಶುಭ ವಿದಾಯ ಹೇಳದೆ ಬೇರೆ ದಾರಿಯಿಲ್ಲ.

 

‘ಏಕ ವ್ಯಕ್ತಿ ಬ್ಯಾಂಕ್ ಶಾಖೆ’

ದೇಶದ  ಮೊದಲ ‘ಏಕ ವ್ಯಕ್ತಿ ಬ್ಯಾಂಕ್ ಶಾಖೆ’  ಪ್ರಾರಂಭಿಸಿದ ಕೀರ್ತಿ ಮೈಸೂರು ಬ್ಯಾಂಕಿನದು.  2ನೇ ಸೆಪ್ಟೆಂಬರ್ 1965ರಂದು ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಆನಂದಪುರಂನಲ್ಲಿ ಪ್ರಾರಂಭವಾದ ಈ ಶಾಖೆಯನ್ನು ಉದ್ಘಾಟಿಸಿದವರು ರಾಜ್ಯದ ಅಂದಿನ ಮುಖ್ಯಮಂತ್ರಿ ಎಸ್. ನಿಜಲಿಂಗಪ್ಪ ಅವರು. ಗ್ರಾಮೀಣ ಜನರಲ್ಲಿ ಬ್ಯಾಂಕ್ ವಹಿವಾಟಿನ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಪ್ರಾರಂಭವಾದ ಈ ಶಾಖೆಯಲ್ಲಿ ಶಾಖಾ ವ್ಯವಸ್ಥಾಪಕರ ಹೊರತಾಗಿ ಬೇರೆ ಯಾವುದೇ ಸಿಬ್ಬಂದಿಯೂ ಇರುತ್ತಿರಲ್ಲಿಲ್ಲ.  ಶಾಖಾ ವ್ಯವಸ್ಥಾಪಕರೇ ಗುಮಾಸ್ತರ ಕೆಲಸಗಳನ್ನೂ ನಿರ್ವಹಿಸುತ್ತಾ, ಗ್ರಾಮೀಣ ಭಾಗದ ರೈತರಿಗೆ ಸೂಕ್ತ ಸಾಲ ಸೌಲಭ್ಯ, ಸಲಹೆ-ಮಾರ್ಗದರ್ಶನಗಳನ್ನೂ ನೀಡುತ್ತಿದ್ದರು.

 


 

‘ನೆನಪು’ ಮ್ಯೂಸಿಯಂ

ಬ್ಯಾಂಕಿನ ನೆನಪುಗಳನ್ನು ಶಾಶ್ವತವಾಗಿ ಉಳಿಸುವಂತಹ ಒಂದು ಮ್ಯೂಸಿಯಂ ನಿರ್ಮಿಸಬೇಕೆಂಬ ಕಲ್ಪನೆಯನ್ನು ಸಾಕಾರಗಳಿಸಲಾಗಿದೆ.

ಬೆಂಗಳೂರು ಶಾಖೆಯ ಪಾರಂಪರಿಕ ಕಟ್ಟಡದ ಆವರಣದಲ್ಲಿರುವ  ಲಕ್ಷ್ಮೀ ವಿಗ್ರಹದ ಸುತ್ತಲಿನ ಆರು ಕೋಣೆಗಳು ಹಾಗೂ ಮುಂಭಾಗದ ವಿಶಾಲ ಹಜಾರದಲ್ಲಿ, ಮೈಸೂರು ಬ್ಯಾಂಕಿನ ಸಾಧನೆಗಳ ಸಂಗಮ, ಪರಂಪರೆಯ ಅಂಗಣ ‘ನೆನಪು’ ಮ್ಯೂಸಿಯಂ ಜನ್ಮ ತಳೆದಿದೆ.

 


 

25 ವರ್ಷಗಳ ಹಿಂದಿನ ಭವಿಷ್ಯ...

‘ಮುಂದೊಂದು ದಿನ ನಿಮ್ಮ ಬ್ಯಾಂಕ್‌ ಗಾಳಿಯಲ್ಲಿ ಕಣ್ಮರೆಯಾಗಲಿದೆ ’ (Vanishing in thin air..) – 25 ವರ್ಷಗಳ ಹಿಂದೆ  ಬ್ಯಾಂಕ್‌ನ ಹಿರಿಯ ಅಧಿಕಾರಿಯೊಬ್ಬರು  ಆಡಿದ್ದ ಮಾತು ಕೊನೆಗೂ ನಿಜವಾಗಿದೆ.ಭಾರತವು ಜಾಗತೀಕರಣಕ್ಕೆ  ತೆರೆದುಕೊಂಡ ಆರಂಭಿಕ ವರ್ಷಗಳಲ್ಲಿಯೇ  ಇಂತಹದೊಂದು   ಭವಿಷ್ಯ ನುಡಿಯಲಾಗಿತ್ತು. ಮನಮೋಹನ್‌ ಸಿಂಗ್‌ ಅವರು ಹಣಕಾಸು ಸಚಿವರಾಗಿದ್ದಾಗ ಬ್ಯಾಂಕ್‌ನ ಡೆಪ್ಯುಟಿ ಜನರಲ್‌ ಮ್ಯಾನೇಜರ್‌ ಸಿನ್ಹಾ ಅವರನ್ನು ಜಾಗತಿಕ ಬ್ಯಾಂಕಿಂಗ್‌  ವ್ಯವಸ್ಥೆಯ ಅಧ್ಯಯನಕ್ಕೆ ವಿದೇಶಕ್ಕೆ ಕಳಿಸಲಾಗಿತ್ತು. ವಿದೇಶದಿಂದ ಮರಳಿದ ಅವರು, ಬ್ಯಾಂಕ್‌ನ ನಿರ್ದೇಶಕ ಮಂಡಳಿಯಲ್ಲಿ ಮಾತನಾಡುತ್ತ ಈ ಅನಿಸಿಕೆ ವ್ಯಕ್ತಪಡಿಸಿದ್ದರು.‘ವಿಶ್ವದಾದ್ಯಂತ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ   ಭಾರಿ ಬದಲಾವಣೆಗಳಾಗುತ್ತಿವೆ. ಆ ಗಾಳಿ ಮುಂದೊಂದು ದಿನ ನಮ್ಮಲ್ಲೂ ಜೋರಾಗಿ ಬೀಸಬಹುದು.  ಎಸ್‌ಬಿಎಂ  ಕೂಡ ಅಸ್ತಿತ್ವ ಕಳೆದುಕೊಳ್ಳಬಹುದು’ ಎಂದು ಅವರು ಭವಿಷ್ಯ ನುಡಿದಿದ್ದರು.ಉನ್ನತ ಅಧಿಕಾರಿಯ ಈ ಮಾತು ಅರಗಿಸಿಕೊಳ್ಳದ ಬ್ಯಾಂಕ್‌ನ ನೌಕರರು ಇಂತಹ ಹೇಳಿಕೆ ವಾಪಸ್‌ ಪಡೆಯಲು ಪಟ್ಟು ಹಿಡಿದು ಅವರಿಂದ ಕ್ಷಮೆಯಾಚಿಸುವಲ್ಲಿಯೂ ಸಫಲರಾಗಿದ್ದರು.‘ಆಡಳಿತ ಮಂಡಳಿಯಲ್ಲಿ ಇರುವವರೇ  ಹೀಗೆ ಹೇಳಿದರೆ ಹೇಗೆ. ಲಾಭದಾಯಕವಾಗಿ ಮುನ್ನಡೆಯುತ್ತಿರುವ ಬ್ಯಾಂಕ್‌ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳಬೇಕಾದೀತು ಎಂದರೆ ಹೇಗೆ? ಇದು ಯಾವ ಸಂದೇಶ ರವಾನಿಸಲಿದೆ ಎನ್ನುವುದು ಬ್ಯಾಂಕ್‌ ಸಿಬ್ಬಂದಿಯ ಆತಂಕವಾಗಿತ್ತು.‘ಬ್ಯಾಂಕ್‌ನ ಮುಖ್ಯಸ್ಥರಾಗಿದ್ದುಕೊಂಡು ಇಂತಹ ಮಾತು ಹೇಳಲು ನಿಮಗೆ ನಾಚಿಕೆಯಾಗಬೇಕು. ಇದಕ್ಕೆ ನೀವು ಬ್ಯಾಂಕ್‌ ಉದ್ಯೋಗಿಗಳ ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದು ಕ್ಷಮೆಯಾಚಿಸುವಲ್ಲಿ ಸಫಲರಾಗಿದ್ದನ್ನುಎಸ್‌ಬಿಎಂ ಉದ್ಯೋಗಿಗಳ ಸಂಘದ ಮಾಜಿ  ಪ್ರಧಾನ ಕಾರ್ಯದರ್ಶಿ ಎಂ. ಆಂಜನಿ ಅವರು ಬ್ಯಾಂಕ್‌ ವಿಲೀನದ ಮುನ್ನಾದಿನ  ನೆನಪಿಸಿಕೊಂಡಿದ್ದರು. ಸಿನ್ಹಾ ಅವರು ಹೇಳಿದ್ದ ಮಾತು 25 ವರ್ಷಗಳ ನಂತರ ಕೊನೆಗೂ ನಿಜವಾಗುತ್ತಿದೆಯಲ್ಲ ಎಂದೂ ಅವರು ನಿಟ್ಟುಸಿರು  ಬಿಟ್ಟಿದ್ದರು.

ಕೇಶವ ಜಿ. ಝಿಂಗಾಡೆ

 

ವೈಶಿಷ್ಟ್ಯಗಳು

1. ರಾಜ್ಯದ ಪ್ರಥಮ  ಸರ್ಕಾರಿ ಸ್ವಾಮ್ಯದ ಬ್ಯಾಂಕು

2. ರಾಜ್ಯದಲ್ಲಿ ಮೊದಲ ಬಾರಿಗೆ ಬ್ಯಾಂಕಿನಲ್ಲಿ ಚೆಕ್ಕುಗಳ ಬಳಕೆಗೆ ಅವಕಾಶ ಕಲ್ಪಿಸಿದ ಬ್ಯಾಂಕು

3. ರೈತರಿಗೆ ಬೆಳೆ ಸಾಲ ಪರಿಚಯಿಸಿದ ಹೆಗ್ಗಳಿಕೆ

4 . ಬ್ಯಾಂಕಿಂಗ್ ವ್ಯವಹಾರದ ಬಗ್ಗೆ ಅರಿವು ಮೂಡಿಸಲು ಬ್ಯಾಂಕಿನ ಸಿಬ್ಬಂದಿ ಕಲಾವಿದರಿಂದಲೇ ಹರಿಕಥೆ, ಬೀದಿ ನಾಟಕ, ಸೂತ್ರದ ಗೊಂಬೆಯಾಟ ಪ್ರದರ್ಶನ

5. ದೇಶದ ಮೊದಲ ಸಂಪೂರ್ಣ ಗಣಕೀಕೃತ ಬ್ಯಾಂಕ್‌

 

ಮೊದಲ ಅಧ್ಯಕ್ಷ

ಬ್ಯಾಂಕಿನ ಮೊದಲ ಅಧ್ಯಕ್ಷರಾಗಿ ಮಹಾರಾಜರಿಂದ ನೇಮಕವಾದವರು ಮೈಸೂರು ಸರ್ಕಾರದಲ್ಲಿ ದಕ್ಷ ಆಡಳಿತಗಾರರೆಂದು ಗುರುತಿಸಿಕೊಂಡು ನಿವೃತ್ತರಾಗಿದ್ದ  ದಿವಾನ್ ಬಹದ್ದೂರ್ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅವರು. ಇವರು ನಂತರ ನಿರಂತರವಾಗಿ ಷೇರುದಾರರಿಂದ ಆಯ್ಕೆ ಹೊಂದಿ ಸುಮಾರು ಇಪ್ಪತ್ತೈದು ವರ್ಷಗಳ ಕಾಲ ಬ್ಯಾಂಕಿನ ಅಧ್ಯಕ್ಷರಾಗಿ ಮುಂದುವರಿದು ಬ್ಯಾಂಕಿಗೆ ದಕ್ಷ ಆಡಳಿತ ಮತ್ತು ಮಾರ್ಗದರ್ಶನ ನೀಡಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry