7

ಹಳೆ ಮದ್ಯ; ಹೊಸ ಸವಾಲು

Published:
Updated:
ಹಳೆ ಮದ್ಯ; ಹೊಸ ಸವಾಲು

ನೋಟು ರದ್ದತಿಯ ಹೊಡೆತದಿಂದ  ಚೇತರಿಸಿಕೊಳ್ಳುವ ಮೊದಲೇ, ಹೆದ್ದಾರಿಗುಂಟ ಮದ್ಯ ಮಾರಾಟ  ನಿಷೇಧಿಸಿದ ಸುಪ್ರೀಂ ಕೋರ್ಟ್ ಆದೇಶ ಮದ್ಯದ ಉದ್ಯಮಕ್ಕೆ ಮತ್ತೊಂದು ಬಲವಾದ ಪೆಟ್ಟು ನೀಡಿದೆ. ಈಗಾಗಲೇ ಹಲವು ಸಮಸ್ಯೆಗಳಿಂದ  ತತ್ತರಿಸಿರುವ ಮದ್ಯದ ಉದ್ಯಮದ ಎದುರು ಕೋರ್ಟ್‌ ಆದೇಶವು   ಹೊಸ ಸವಾಲುಗಳನ್ನು ಹುಟ್ಟು ಹಾಕಿದೆ.ಹೆದ್ದಾರಿಗಳ ಬದಿಯಿಂದ ಜನವಸತಿ ಪ್ರದೇಶಗಳಿಗೆ ಮದ್ಯದಂಗಡಿ ಸ್ಥಳಾಂತರ ಮಾಡುವುದು ಅವುಗಳ ಮಾಲೀಕರಿಗೆ ಹೊಸ ತಲೆನೋವು ತಂದಿದೆ. ಮದ್ಯದಂಗಡಿಗಳೇನೂ ಔಷಧದ ಅಂಗಡಿಗಳಲ್ಲ. ಹೀಗಾಗಿ ನಾಗರಿಕರು, ಅದರಲ್ಲೂ ಮಹಿಳೆಯರು, ಸ್ತ್ರೀ ಸಂಘಟನೆಗಳು ಸುಮ್ಮನೆ ಕೂರುವುದಿಲ್ಲ. 

ಜನವಸತಿ ಪ್ರದೇಶಗಳಲ್ಲಿರುವ ಮದ್ಯದ ಅಂಗಡಿಗಳನ್ನು ಮುಚ್ಚಿಸಲು ಮಹಿಳೆಯರು ಹೋರಾಡುತ್ತಿರುವಾಗ ಹೊಸ ಅಂಗಡಿ ತೆರೆಯಲು ಮುಂದಾದರೆ ತೀವ್ರ ಪ್ರತಿರೋಧ ಎದುರಿಸಬೇಕಾಗುತ್ತದೆ. 

ನಗರಗಳಲ್ಲಿ ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳಿಗೆ ಹೊಸ ಜಾಗ ಹುಡುಕುವುದು ಮತ್ತೊಂದು ರೀತಿಯ ಕಷ್ಟ. ಮೂರು ತಿಂಗಳಿನಿಂದ ಹುಡುಕುತ್ತಿದ್ದರೂ ಒಂದು ಜಾಗವೂ ಸಿಗುತ್ತಿಲ್ಲ, ಒಂದು ವೇಳೆ ಸಿಕ್ಕರೂ ದುಬಾರಿ ಬಾಡಿಗೆ ತೆರಬೇಕಾಗುತ್ತದೆ ಎನ್ನುವುದು ಮದ್ಯದಂಗಡಿ ಮಾಲೀಕರ ಅಳಲು.ಜನವಸತಿ ಪ್ರದೇಶ, ಶಾಲೆ, ಕಾಲೇಜು, ಧಾರ್ಮಿಕ ಕೇಂದ್ರಗಳು ಮತ್ತು ಸರ್ಕಾರಿ ಕಚೇರಿಗಳಿಂದ 100 ಮೀಟರ್‌ ಸುತ್ತಮುತ್ತ ಮದ್ಯದಂಗಡಿ ತೆರೆಯುವಂತಿಲ್ಲ. ಒಂದು ವೇಳೆ ಹೆದ್ದಾರಿ ಬದಿಯಿಂದ ಸ್ಥಳಾಂತರಿಸಿದರೂ ಮೊದಲಿದ್ದ ವ್ಯಾಪಾರ ಮತ್ತೆ ಕುದುರುತ್ತದೆ ಎಂಬ ವಿಶ್ವಾಸ ಬಾರ್‌ ಮತ್ತು ರೆಸ್ಟೊರೆಂಟ್‌ ಮಾಲೀಕರಿಗೆ ಇಲ್ಲ.ಮಾರಾಟವೂ ಇಳಿಮುಖ!: ಹಣಕಾಸು ವರ್ಷದ  ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್‌ನಿಂದ ಜೂನ್‌ವರೆಗೆ) ಮದ್ಯ ಮಾರಾಟ ಶೇ 8–10ರಷ್ಟು  ಕುಸಿತ ಕಾಣಲಿದೆ, ಎರಡನೇ ತ್ರೈಮಾಸಿಕದ (ಜುಲೈ–ಸೆಪ್ಟೆಂಬರ್) ಮಧ್ಯ ಭಾಗದಿಂದ ಮದ್ಯ ಮಾರಾಟ ಸಹಜ ಸ್ಥಿತಿಗೆ ಮರಳಬಹುದು ಎಂದು ಮದ್ಯ ತಯಾರಿಕಾ ವಲಯ ಅಂದಾಜಿಸಿದೆ. ಸುಪ್ರೀಂ ಕೋರ್ಟ್‌ ಆದೇಶ ಹೊರಬಿದ್ದ ನಂತರ ಮದ್ಯ ತಯಾರಿಕಾ ಕಂಪೆನಿಗಳ ಷೇರುಗಳು ಕುಸಿತ ಕಾಣಲು ಆರಂಭಿಸಿವೆ. ಮುಂದಿನ ಕೆಲವು ದಿನಗಳವರೆಗೆ ಹೊಸ ಬ್ರ್ಯಾಂಡ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸುವುದಿಲ್ಲ ಎಂದೂ ಪ್ರಮುಖ ಕಂಪೆನಿಗಳು ಘೋಷಿಸಿವೆ.ದೇಶದ 60,000 ಮದ್ಯದಂಗಡಿಗಳಿಗೆ ವಿವಿಧ ಬ್ರ್ಯಾಂಡ್‌ನ ಮದ್ಯ ಸರಬರಾಜು ಮಾಡುತ್ತಿರುವ ಯುನೈಟೆಡ್‌ ಸ್ಪಿರಿಟ್ಸ್‌ ಲಿಮಿಟೆಡ್‌ (ಯುಎಸ್‌ಎಲ್‌) ಮಾರಾಟವು ಈ ಬೆಳವಣಿಗೆಯ ನಂತರ ಶೇ 40ರಷ್ಟು ಕುಸಿದಿದೆ ಎಂದು ಸಂಸ್ಥೆಯ ಅಧಿಕಾರಿಗಳು ಹೇಳಿದ್ದಾರೆ.‘ಕಾರ್ಖಾನೆಗಳಿಂದ ಮದ್ಯ ಸರಬರಾಜು, ಬಾರ್‌, ರೆಸ್ಟೊರೆಂಟ್‌, ಪಬ್‌ ಸೇರಿದಂತೆ ಈ ಉದ್ಯಮದಲ್ಲಿ ಕೆಲಸ ಮಾಡಿದವರಿಗೆ ಬೇರೆ ಕೆಲಸ ಗೊತ್ತಿಲ್ಲ. ಉದ್ಯೋಗ ಇಲ್ಲವೆಂದರೆ ಒಂದೋ ಭಿಕ್ಷೆ ಬೇಡಬೇಕು ಇಲ್ಲ ದರೋಡೆಗೆ ಇಳಿಯಬೇಕು’ ಎನ್ನುತ್ತಾರೆ ಲಿಕ್ಕರ್‌ ಲೋಡ್‌, ಅನ್‌ಲೋಡ್‌ ಸಂಘದ ಅಧ್ಯಕ್ಷ ತಿಮ್ಮೇಗೌಡ.ಸಾವಿರಾರು ನಿರುದ್ಯೋಗ: ಪ್ರವಾಸೋದ್ಯಮದ ಮೇಲೆ ಕೋರ್ಟ್ ಆದೇಶ ತೀವ್ರ ದುಷ್ಪರಿಣಾಮ ಬೀರಲಿದ್ದು ಸಾವಿರಾರು ಮಂದಿ ನಿರುದ್ಯೋಗಿಗಳಾಗಲಿದ್ದಾರೆ. ಹೋಟೆಲ್‌, ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರಗಳಿಂದ ಹರಿದು ಬರುವ ಆದಾಯ ಕುಂಠಿತವಾಗಲಿದೆ.‘ಇದು ಕೇವಲ ಉದ್ಯಮಕ್ಕೆ ಮಾತ್ರವಲ್ಲ  ಸರ್ಕಾರದ  ಆದಾಯಕ್ಕೂ ಕುತ್ತು ತರಲಿದೆ’ ಎಂದು  ಫೆಡರೇಷನ್‌ ಆಫ್‌ ವೈನ್‌ ಮರ್ಚಂಟ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ಎಸ್‌. ಗುರುಸ್ವಾಮಿ ಹೇಳುತ್ತಾರೆ.‘ಬೆಂಗಳೂರು, ಮೈಸೂರು, ಮಂಗಳೂರು, ಹುಬ್ಬಳ್ಳಿ–ಧಾರವಾಡ, ಬೆಳಗಾವಿ, ಕಲಬುರ್ಗಿ, ಬೀದರ್‌ನ ಹೆದ್ದಾರಿಗಳಲ್ಲಿ ಮದ್ಯ ಸರಬರಾಜು ಮಾಡುವ ತಾರಾ ಹೋಟೆಲ್‌ಗಳು, ಪಬ್‌, ಬಾರ್‌ ಅಂಡ್‌ ರೆಸ್ಟೊರೆಂಟ್‌ಗಳ ವಹಿವಾಟು ಈಗಾಗಲೇ ಕುಸಿಯತೊಡಗಿದೆ’ ಎಂದು  ಅಸೋಸಿಯೇಷನ್‌ ಗೌರವಾಧ್ಯಕ್ಷ ಮೋಹನ್‌ ಶೇಟ್‌ ಆತಂಕ ವ್ಯಕ್ತಪಡಿಸುತ್ತಾರೆ.‘₹ 5 ಲಕ್ಷದಿಂದ 8 ಲಕ್ಷ ನೀಡಿ ಲೈಸೆನ್ಸ್‌ ಪಡೆದಿರುತ್ತೇವೆ. ಇದಕ್ಕಾಗಿ ಬ್ಯಾಂಕ್‌ಗಳಲ್ಲಿ ಸಾಲ ಮಾಡಿರುತ್ತೇವೆ. ಈಗ ಆ ಸಾಲವನ್ನು ಹೇಗೆ ತೀರಿಸುವುದು ಎಂಬ ಚಿಂತೆ ಕಾಡುತ್ತಿದೆ’ ಎಂದು ಅಸೋಸಿಯೇಶನ್‌ ಪ್ರಧಾನ ಕಾರ್ಯದರ್ಶಿ ಉಡುಪಿಯ ಗೋವಿಂದರಾಜ್‌ ಹೆಗ್ಡೆ ಹೇಳುತ್ತಾರೆ.‘ಕುಡಿದು ವಾಹನ ಚಾಲನೆ ಮಾಡುವುದೇ ಅಪಘಾತಗಳಿಗೆ ಕಾರಣ ಎಂದು ತೀರ್ಮಾನಿಸಿ ಹೆದ್ದಾರಿ ಬದಿಯ ಮದ್ಯದ ಅಂಗಡಿ ಮುಚ್ಚಿಸುವುದು ‘ಎತ್ತಿಗೆ ಜ್ವರ ಬಂದರೆ ಕೋಣಕ್ಕೆ ಬರೆ ಹಾಕಿದಂತೆ’ ಎಂದು ಬಾರ್‌ ಮಾಲೀಕ ಗಿರಿರಾಜು ಗಿರಿ ಹೇಳುತ್ತಾರೆ. ಗುಜರಾತ್‌ನಲ್ಲಿ ಮದ್ಯ ಮಾರಾಟದ ಮೇಲೆ ನಿಷೇಧವಿದೆ. ಅಲ್ಲಿಯೂ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ.  ಅತಿ ವೇಗದ ಚಾಲನೆ, ರಸ್ತೆಗಳ ಕಳಪೆ ಗುಣಮಟ್ಟ ಮುಂತಾದ ಕಾರಣಗಳನ್ನೂ ಕೋರ್ಟ್‌ ಪರಿಗಣಿಸಬೇಕು ಎನ್ನುವುದು ಅವರ ವಾದ.‘ಸಣ್ಣಪುಟ್ಟ ನಗರ, ಪಟ್ಟಣಗಳಲ್ಲಿ  ಹೆದ್ದಾರಿಯಿಂದ ಅರ್ಧ ಕಿ.ಮೀ ದೂರ  ಬಾರ್‌ಗಳನ್ನು ಸ್ಥಳಾಂತರಿಸಿದರೆ ಹೊಲ, ಗದ್ದೆಗಳಲ್ಲಿ ಅಂಗಡಿ ತೆರೆಯಬೇಕಾಗುತ್ತದೆ’  ಎಂದು ಗಿರಿರಾಜು ಅಸಮಾಧಾನ ತೋಡಿಕೊಂಡಿದ್ದಾರೆ.‘ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತೆ ಸಂಚಾರ ನಿಯಮ ಬಿಗಿಗೊಳಿಸಬೇಕು. ಅದನ್ನು ಬಿಟ್ಟು ಮದ್ಯ ಮಾರಾಟ ನಿಷೇಧ ಮಾಡುವುದು ಎಷ್ಟು ಸರಿ? ಇದು ‘ನೆಗಡಿ ಬಂದರೆ ಮೂಗು ಕೊಯ್ದಂತೆ’ ಎಂದು ಎಫ್‌ಕೆಸಿಸಿಐ ಮಾಜಿ ಅಧ್ಯಕ್ಷ ಕೆ.ಎಂ. ಶ್ರೀನಿವಾಸ್‌ ಹೇಳುತ್ತಾರೆ. ಕೋರ್ಟ್ ಆದೇಶ ಜಾರಿ ನಂತರವೂ ರಸ್ತೆ ಅಪಘಾತ ನಡೆಯುವುದಿಲ್ಲ ಎನ್ನಲು  ಏನು ಖಾತ್ರಿ ಇದೆ ಎನ್ನುವುದು ಅವರ ಪ್ರಶ್ನೆ. ‘ಮದ್ಯಪ್ರಿಯರಿಗೆ ಹೆದ್ದಾರಿ ಅಂಗಡಿಗಳೇ ಆಗಬೇಕು ಎಂದೇನೂ ಇಲ್ಲ. ಮದ್ಯದ ಅಂಗಡಿ ಎಲ್ಲಿಯೇ ಇದ್ದರೂ ಹುಡುಕಿಕೊಂಡು ಹೋಗುತ್ತಾರೆ. ಅಂಥವರನ್ನು ಕೋರ್ಟ್‌ ಹೇಗೆ ನಿಯಂತ್ರಿಸುತ್ತದೆ’ ಎಂದು ಪ್ರಶ್ನಿಸುತ್ತಾರೆ  ಶ್ರೀನಿವಾಸ್‌. ಕೋರ್ಟ್‌ ಆದೇಶದಿಂದ ನುಣುಚಿಕೊಳ್ಳಲು ಈಗಾಗಲೇ ಕೆಲವು ರಾಜ್ಯಗಳು ಪ್ರಮುಖ ರಾಜ್ಯ ಹೆದ್ದಾರಿಗಳನ್ನು ಜಿಲ್ಲಾ ರಸ್ತೆಗಳನ್ನಾಗಿ  ಪರಿವರ್ತಿಸಲು ಡಿನೋಟಿಫೈ  ತಂತ್ರಕ್ಕೆ ಮೊರೆ ಹೋಗಿವೆ. ಅದನ್ನು ನಮ್ಮ ರಾಜ್ಯವೂ ಅನುಸರಿಸಬೇಕು. ಆಗ  ಸಮಸ್ಯೆ ಬಗೆಹರಿಯುತ್ತದೆ ಎನ್ನುವುದು ಮದ್ಯ ಮಾರಾಟ ವರ್ತಕರ ಸಲಹೆ.ಮಾನವೀಯ ನೆಲೆಯ ಉತ್ತರ: ‘ಕೆಲವು ವರ್ತಕರ ಹಿತರಕ್ಷಣೆಗೆ ನಾಗರಿಕರ ಜೀವ ಬಲಿ ಕೊಡುವುದು ಎಷ್ಟು ಸರಿ’ ಎಂದು  ಕೆಲವು ಸ್ವಯಂ ಸೇವಾ ಸಂಸ್ಥೆಗಳು ಪ್ರಶ್ನಿಸುತ್ತಿವೆ. ಅದಕ್ಕೂ ಬಾರ್‌ ಮಾಲೀಕರ ಬಳಿ ಸಿದ್ಧ ಉತ್ತರವಿದೆ.‘ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿ ಆದಾಯ, ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದೇವೆ. ಬ್ಯಾಂಕ್‌ನಲ್ಲಿ ಸಾಲ ಮಾಡಿ ಲಕ್ಷಾಂತರ ರೂಪಾಯಿಯನ್ನು ಈ ಉದ್ಯಮದಲ್ಲಿ ಹೂಡಿದ್ದೇವೆ. ಆದರೆ, ಸುಪ್ರೀಂ ಕೋರ್ಟ್‌ ನೀಡಿರುವ ಭಾವನಾತ್ಮಕ ತೀರ್ಪಿನಿಂದ ನಾವು ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಲಿದ್ದೇವೆ. ನಮ್ಮನ್ನು ನಂಬಿರುವ ಕುಟುಂಬಗಳು ಬೀದಿಗೆ ಬೀಳಲಿವೆ.ಸಾಲ ಮರುಪಾವತಿಸಲಾಗದೆ ನೇಣಿಗೆ ಕೊರಳು ಒಡ್ಡುವುದೊಂದೇ ನಮ್ಮ ಮುಂದಿರುವ ದಾರಿ. ಮದ್ಯ ಎಲ್ಲರಿಗೂ ಬೇಕು. ಆದರೆ, ಮದ್ಯ ಮಾರಾಟಗಾರರ ಬೆಂಬಲಕ್ಕೆ ಯಾರೊಬ್ಬರೂ ನಿಲ್ಲುವುದಿಲ್ಲ. ನಮ್ಮ ಸಮಸ್ಯೆಯನ್ನೂ ಮಾನವೀಯ ನೆಲೆಯಲ್ಲಿ ನೋಡಿ. ಅನ್ಯರ ಜೀವಗಳನ್ನು ಬಲಿ ಪಡೆಯುವಷ್ಟು ಕಟುಕರು ನಾವಲ್ಲ. ಕುಡಿದು ವಾಹನ ಓಡಿಸುವವರು ಮಕ್ಕಳಲ್ಲ. ಎಲ್ಲವನ್ನೂ ತಿಳಿದವರು.ಕುಡಿತವೊಂದೇ ರಸ್ತೆ ಅಪಘಾತಗಳಿಗೆ ಕಾರಣವಲ್ಲ ಎಂಬ ವಾಸ್ತವ ಎಲ್ಲರಿಗೂ ಗೊತ್ತು. ಆದರೆ, ಯಾರೂ ಬಹಿರಂಗವಾಗಿ ಹೇಳಲು ಮುಂದೆ ಬರುತ್ತಿಲ್ಲ. ಜಲ್ಲಿಕಟ್ಟು ನಿಷೇಧಿಸಿದಾಗ ತಮಿಳುನಾಡು ಜನರು ಸುಪ್ರೀಂ ಕೋರ್ಟ್‌ ಆದೇಶದ ವಿರುದ್ಧ ಬೀದಿಗೆ ಇಳಿಯಲಿಲ್ಲವೇ? ಆ ಹಕ್ಕು ನಮಗೂ ಇಲ್ಲವೇ’ ಎಂಬ ಪ್ರಶ್ನೆಯನ್ನು ಮುಂದಿಟ್ಟವರು ಫೆಡರೇಷನ್‌ ಆಫ್‌ ವೈನ್‌ ಮರ್ಚಂಟ್ಸ್‌ ಅಸೋಸಿಯೇಶನ್‌ ಕೋಶಾಧಿಕಾರಿ ಹುಬ್ಬಳ್ಳಿಯ ಟಿ.ಎಂ. ಮೆಹರ್‌ವಾಡೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry