7

ನಾವು ನಾವಾಗಿ ಇರುವುದೇ ನಿಜವಾದ ಭಾರತೀಯತೆ

Published:
Updated:
ನಾವು ನಾವಾಗಿ ಇರುವುದೇ ನಿಜವಾದ ಭಾರತೀಯತೆ

ಬಹುಭಾಷಿಕ ಭಾರತದಾದ್ಯಂತ ಹಿಂದಿ ಬಳಕೆಯನ್ನು ಹೆಚ್ಚಿಸುವ ಕುರಿತಂತೆ ಸಂಸತ್ತಿನ ಹಿಂದಿ ರಾಜಭಾಷಾ ಸಮಿತಿ ನೀಡಿದ್ದ 117 ಶಿಫಾರಸುಗಳಲ್ಲಿ ಬಹುತೇಕ ಶಿಫಾರಸುಗಳನ್ನು ರಾಷ್ಟ್ರಪತಿಗಳು ಒಪ್ಪಿ ಅಂಕಿತ ಹಾಕುವುದರೊಂದಿಗೆ ಹಿಂದಿ ಹೇರಿಕೆಯ ಕುರಿತ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.ಅಂಚೆ, ಬ್ಯಾಂಕು, ರೈಲು, ಪಿಂಚಣಿ, ತೆರಿಗೆ, ವಿಮಾನ ಸೇವೆ, ರಸ್ತೆ... ಹೀಗೆ ಜನಸಾಮಾನ್ಯರು ಬಳಸುವ ನೂರಾರು ನಾಗರಿಕ ಸೇವೆಗಳನ್ನು ಕಲ್ಪಿಸುವ ಕೇಂದ್ರ ಸರ್ಕಾರ ಅವುಗಳನ್ನು ಆಯಾ ರಾಜ್ಯದಲ್ಲಿ ಅಲ್ಲಿನ ಜನರ ಭಾಷೆಯಲ್ಲೇ ಕಲ್ಪಿಸಬೇಕು ಅನ್ನುವುದು ಒಂದು ಸಹಜವಾದ ಮತ್ತು ನ್ಯಾಯಯುತವಾದ ನಿರೀಕ್ಷೆ.ಹೀಗಿದ್ದರೂ ಇಲ್ಲೆಲ್ಲಾ ಹಂತಹಂತವಾಗಿ ಹಿಂದಿಗೆ ಹೆಚ್ಚಿನ ಆದ್ಯತೆ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಲಾಗಾಯ್ತಿನಿಂದಲೂ ಮಾಡಿಕೊಂಡು ಬರುತ್ತಿದೆ. ಇದಕ್ಕೆ ಸಂವಿಧಾನದ ವಿಧಿ 343-351ರ ಶ್ರೀರಕ್ಷೆಯೂ ಇದೆ. ಇಂತಹ ತಾರತಮ್ಯದ ನೀತಿಯ ಪರಿಣಾಮವಾಗಿ ಅರವತ್ತು ವರ್ಷಗಳಲ್ಲಿ ಹಿಂದಿ ಭಾಷೆಯ ವ್ಯಾಪ್ತಿ, ಅದರ ಮಾರುಕಟ್ಟೆಯ ಸಾಧ್ಯತೆ, ಹಿಂದಿಯೇತರ ನುಡಿಗಳ ಮೇಲಿನ  ಸಾಂಸ್ಕೃತಿಕ ದಬ್ಬಾಳಿಕೆ, ಒಕ್ಕೂಟದ ದಿಕ್ಕುದೆಸೆ ನಿಯಂತ್ರಿಸಬಲ್ಲ ರಾಜಕೀಯ ಬಲ, ಹೀಗೆ ಎಲ್ಲವೂ ತೀವ್ರಗತಿಯಲ್ಲಿ ಹೆಚ್ಚಿವೆ.ಜನಸಂಖ್ಯೆ, ಗಾತ್ರ, ಇತಿಹಾಸ, ಸಾಹಿತ್ಯ ಶ್ರೀಮಂತಿಕೆ, ಸಂಸ್ಕೃತಿ, ಆರ್ಥಿಕತೆ ಮುಂತಾದ ಪರಿಮಾಣಗಳಲ್ಲಿ  ಯಾವುದೇ ಯುರೋಪಿನ ದೇಶಗಳಿಗೆ ಹೋಲಿಸಬಹುದಾದ ಕನ್ನಡ, ತಮಿಳು, ತೆಲುಗು, ಮರಾಠಿ, ಗುಜರಾತಿ, ಮಲಯಾಳದಂತಹ ಅಸ್ಮಿತೆಗಳು ಇಂದು ಒಂದು ಪ್ರಾದೇಶಿಕ ಗುರುತಿಗೆ ಸೀಮಿತವಾಗಿ ಭಾರತದ ಆಚೆ ಯಾರಿಗೂ ಅಷ್ಟಾಗಿ ಗುರುತು ಪರಿಚಯವಿರದ ಸಂಗತಿಗಳಾಗಿ ಉಳಿದಿವೆ.ಇದಕ್ಕೆ ಮುಖ್ಯ ಕಾರಣ ಭಾರತವೆಂದರೆ ಹಿಂದಿ ಮತ್ತು ಹಿಂದಿಯೊಂದೇ ಅನ್ನುವಂತೆ ಬಿಂಬಿಸುವ, ಭಾಷಾ ವೈವಿಧ್ಯವನ್ನು  ಒಗ್ಗಟ್ಟಿಗಿರುವ ಒಂದು ತೊಡಕಂತೆ ಕಾಣುತ್ತ ಅದನ್ನು ಮರೆಮಾಚಬೇಕು ಅನ್ನುವ ಒಂದು ಪ್ರಜ್ಞಾಪೂರ್ವಕ ಪ್ರಯತ್ನ. ಈ ಪ್ರಯತ್ನಕ್ಕೆ ದೊಡ್ಡ ಮಟ್ಟದಲ್ಲಿ ಬಲ ತುಂಬುವ ಕೆಲಸವನ್ನು ಬಾಲಿವುಡ್ ಹೆಸರಿನ ಹಿಂದಿ ಚಿತ್ರರಂಗ ಮಾಡಿಕೊಂಡು ಬಂದಿದೆ.ಜೊತೆಗೆ ಅದಕ್ಕೆ ಪೂರಕವಾದ ವಾತಾವರಣ ಸೃಷ್ಟಿಸಲು ಕಲಿಕೆಯಲ್ಲಿ ತ್ರಿಭಾಷಾ ಸೂತ್ರ ಮತ್ತು ದೂರದರ್ಶನ, ಆಕಾಶವಾಣಿಯಂತಹ ಸರ್ಕಾರಿ ಮಾಧ್ಯಮಗಳ ಮೂಲಕ ಹಿಂದಿ ಪ್ರಚಾರದಂತಹ ಕೆಲಸಗಳನ್ನು ಕೇಂದ್ರವೂ ವ್ಯವಸ್ಥಿತವಾಗಿ ಮಾಡಿದೆ. ಈ ಕೈಮಿಲಾಯಿಸುವಿಕೆ ಈಗ ಹಳಿಗೆ ಬಿದ್ದ ರೈಲಿನಂತೆ ವೇಗ ಪಡೆದುಕೊಳ್ಳುತ್ತ, ದಾರಿಗೆ ಅಡ್ಡ ಸಿಕ್ಕಿದ್ದೆಲ್ಲವನ್ನೂ  ಅಪ್ಪಚ್ಚಿ ಮಾಡುತ್ತ, ಭಾರತದ ಸಾಂಸ್ಕೃತಿಕ ಚಹರೆಯನ್ನು ಹಿಂದಿಯ ಸುತ್ತ ಹೊಸದಾಗಿ ಕಟ್ಟುವ ಒಂದು ಸಾಂಸ್ಕೃತಿಕ ದಬ್ಬಾಳಿಕೆಯ ಸ್ವರೂಪದಲ್ಲಿ ಹೊರ ಹೊಮ್ಮುತ್ತಿದೆ.ರಸ್ಸಿಫಿಕೇಶನ್ ಹೆಸರಲ್ಲಿ ಸೋವಿಯತ್ ಒಕ್ಕೂಟದಲ್ಲಿ ರಷ್ಯಾ ಏನೇನು ಮಾಡಿತೋ ಅದಕ್ಕೂ ಇದಕ್ಕೂ ಹೋಲಿಕೆಗಳಿರುವುದು ಕಾಕತಾಳೀಯವಲ್ಲ. ಎಷ್ಟೆಂದರೂ ನಮ್ಮ ಸಮಾಜವಾದಿ ಪ್ರಜಾಪ್ರಭುತ್ವಕ್ಕೆ ಸ್ವಾತಂತ್ರ್ಯ ಬಂದ ಹೊಸತಿನಲ್ಲಿ ಸ್ಫೂೂರ್ತಿಯಾಗಿದ್ದು ಇದೇ ಸೋವಿಯತ್ ರಷ್ಯಾದ ಒಕ್ಕೂಟವಲ್ಲವೇ?ಸ್ವಾತಂತ್ರ್ಯ ಬರುವ ಹೊತ್ತಿನಲ್ಲೇ ಭಾಷಾವಾರು ಪ್ರಾಂತ್ಯಗಳಿಗಾಗಿ ನಡೆದ ಹೋರಾಟಗಳು, ಭಾಷಾ ವೈವಿಧ್ಯವನ್ನು ಒಂದು ತೊಂದರೆಯಂತೆ ನೋಡುವ ಮನಸ್ಥಿತಿಯನ್ನು ದೆಹಲಿಯಲ್ಲಿ ಬಿತ್ತಿದ್ದವು. ಇದಕ್ಕೆ ಪರಿಹಾರವಾಗಿ ಹಿಂದಿಯನ್ನು ಎಲ್ಲೆಡೆ ಹರಡಿ, ಜನರನ್ನು ಒಪ್ಪಿಸುವುದೇ ದಾರಿ ಅನ್ನುವ ಚಿಂತನೆ ಬಲಗೊಳ್ಳುತ್ತಿದ್ದಂತೆಯೇ ಹಿಂದಿ ಚಿತ್ರರಂಗಕ್ಕೆ ಎಲ್ಲಿಲ್ಲದ ಮಹತ್ವವನ್ನು ಕೇಂದ್ರ ಸರ್ಕಾರ ನೀಡಿತು.ಕೇಂದ್ರದ ಅಡಿಯಲ್ಲಿ ಇರುವ ಆಕಾಶವಾಣಿ, ಎಂಬತ್ತರ ದಶಕದಲ್ಲಿ ಬಂದ ದೂರದರ್ಶನ ಮುಂತಾದವುಗಳನ್ನು ಹಿಂದಿ ಹರಡಲು ವ್ಯಾಪಕವಾಗಿ ಬಳಸಿಕೊಳ್ಳಲಾಯಿತು. ಹಿಂದಿಯೇತರ ನಾಡುಗಳಲ್ಲಿ ಇದಕ್ಕೆ ಬೇಕಿದ್ದ ಸಾಫ್ಟ್ ಲ್ಯಾಂಡಿಂಗ್ ಒದಗಿಸಿದ್ದು ಬಾಲಿವುಡ್ ಚಿತ್ರಗಳು.ರಾಮಾಯಣ, ಮಹಾಭಾರತದಂತಹ ಜನರನ್ನು ಹಿಡಿದಿಡುವ ಪುರಾಣದ ಕತೆಗಳನ್ನು ಹಿಂದಿಯಲ್ಲಿ ಪ್ರಸಾರ ಮಾಡಿದ್ದು, ವಾರ್ತಾ ಪ್ರಸಾರ, ಕ್ರಿಕೆಟ್ ಕಾಮೆಂಟರಿಯನ್ನು ಹಿಂದಿಯಲ್ಲೇ ಮೂಡಿಸಿದ್ದು, ಹೀಗೆ ಕಿವಿ, ಕಣ್ಣುಗಳನ್ನು ಆವರಿಸುತ್ತ, ಹಿಂದಿಯೇತರರಿಗೆ ಹಿಂದಿಯನ್ನು ಒಪ್ಪಿಸುವ ಕೆಲಸ ನಿರಂತರವಾಗಿ ಸಾಗಿತು. ಆ ಹೊತ್ತಿನಲ್ಲಿ ಡಬ್ಬಿಂಗ್ ಮೂಲಕ ಇವು ಕನ್ನಡದಲ್ಲೇ ಸಾಧ್ಯವಾಗಲಿ ಅನ್ನುವ ಹೋರಾಟಕ್ಕೆ ಇಳಿದಿದ್ದರೆ ಒಂದಿಷ್ಟು ಮಟ್ಟಿಗೆ ಹಿಂದಿಯ ಹರಡುವಿಕೆಗೆ ಅಂಕೆ ಹಾಕಿ ಕನ್ನಡದ ಹರಡುವಿಕೆಯನ್ನು ಹೆಚ್ಚಿಸಿಕೊಳ್ಳಬಹುದಿತ್ತು, ಆದರೆ ಅಂತಹ ದೂರದೃಷ್ಟಿ ನಮ್ಮಲ್ಲಿ ಕಾಣಲಿಲ್ಲ.ಜಾಗತೀಕರಣಕ್ಕೆ ಭಾರತ ತೆರೆದುಕೊಂಡ ನಂತರ ಬಂದ ಖಾಸಗಿ ಬಂಡವಾಳದ ಅಲೆ ಹಿಂದಿಯೇತರ ನುಡಿಗಳಿಗೆ ಒಂದಿಷ್ಟು ತಲೆ ಎತ್ತುವ ಅವಕಾಶಗಳನ್ನು ನೀಡಿದ್ದು ಎಷ್ಟು ಸತ್ಯವೋ, ಆಗಲೇ ತಳವೂರಿದ್ದ ಹಿಂದಿಗೆ ತನ್ನ ಕಬಂಧ ಬಾಹುಗಳನ್ನು ಇನ್ನಷ್ಟು ವ್ಯಾಪಕವಾಗಿ ಚಾಚಿಕೊಳ್ಳಲು ನೆರವಾಯಿತು ಅನ್ನುವುದೂ ಅಷ್ಟೇ ಸತ್ಯ.ಖಾಸಗಿ ಬಂಡವಾಳದಾರರು ಎಂದಿಗೂ ‘ಎಕಾನಮಿಸ್ ಆಫ್ ಸ್ಕೇಲ್’ ಅನ್ನುವ ಚೌಕಟ್ಟಿನಲ್ಲೇ ತಮ್ಮ ಹೂಡಿಕೆಯನ್ನು ನೋಡುವುದರಿಂದ ಕೇಂದ್ರ ಸರ್ಕಾರದ ಆಶ್ರಯ ಮತ್ತು ಆದ್ಯತೆಯನ್ನು ಪಡೆದಿರುವ, ಮಾರುಕಟ್ಟೆಯಲ್ಲೂ ದೊಡ್ಡ ವ್ಯಾಪ್ತಿ ಪಡೆದಿರುವ ಹಿಂದಿಯ ಹಿಂದೆ ತಮ್ಮ ಹೆಚ್ಚಿನ ಹೂಡಿಕೆ ಮಾಡಿದ್ದಾರೆ.  ಇದರ ಪರಿಣಾಮವಾಗಿ ಖಾಸಗಿ ನೆಲೆಯ ಬಹುತೇಕ ಸಂಸ್ಥೆಗಳು, ಅವುಗಳ ಉತ್ಪನ್ನಗಳು, ಜಾಹೀರಾತುಗಳು ಹಿಂದಿಯಲ್ಲೇ ಮೂಡುವ ಬೆಳವಣಿಗೆಯನ್ನು ಹಿಂದಿಯೇತರ ನುಡಿಗಳ ಜನರು ಮೂಕಪ್ರೇಕ್ಷಕರಂತೆ ನೋಡಬೇಕಾದ ಸ್ಥಿತಿ ಬಂದಿತು.ಒಂದು ಗಟ್ಟಿಯಾದ ಚಿತ್ರರಂಗ ಹೊಂದಿರುವ ದಕ್ಷಿಣ ಭಾರತದ ಭಾಷೆಗಳೇ ಹಿಂದಿಯ ಸಾಂಸ್ಕೃತಿಕ ಯಜಮಾನಿಕೆಯ ಧೋರಣೆಗೆ ಕಿಂಚಿತ್ ಆದರೂ ಪ್ರತಿರೋಧ ತೋರಿಸುವ ಪ್ರಯತ್ನದಲ್ಲಿ ಯಶಸ್ಸು ಪಡೆದಿವೆ. ಆದರೆ ಉತ್ತರ ಭಾರತದ ಹಿಂದಿಯೇತರ ನುಡಿಗಳ ವಿಷಯದಲ್ಲಿ ಇದೇ ಮಾತನ್ನು ಹೇಳುವಂತಿಲ್ಲ.   

ಸಮುದ್ರದಲ್ಲಿ ದೊಡ್ಡ ಮೀನು ಚಿಕ್ಕ ಮೀನನ್ನು ನುಂಗುವಂತೆ ಹಿಂದಿ ಭಾಷೆ ಉತ್ತರದ ಅನೇಕ ಚಿಕ್ಕಪುಟ್ಟ ಭಾಷೆಗಳಿಗೆ ಈಗಾಗಲೇ ಗಂಡಾಂತರ ತಂದಿದೆ. ಮಗಧಿ, ಅವಧಿ, ಭೋಜಪುರಿ, ರಾಜಸ್ತಾನಿ, ಬುಂದೇಲ್ವಿ, ಹರಿಯಾಣ್ವಿ ಹೀಗೆ ಉತ್ತರ ಭಾರತದ ಅನೇಕ ಪ್ರತ್ಯೇಕ ಭಾಷೆಗಳನ್ನು ಹಿಂದಿಯ ಒಳನುಡಿಗಳು ಎಂಬಂತೆ ಬಿಂಬಿಸಿ ಅವುಗಳನ್ನು ಹಿಂದಿಯ ಕೊಡೆಯ ಕೆಳಗೆ ತಂದು ಹಿಂದಿ ಭಾಷಿಕರ ಸಂಖ್ಯೆಯನ್ನು ದೊಡ್ಡದಾಗಿಸಿ ತೋರಿಸುವ ಕೆಲಸ ವ್ಯವಸ್ಥಿತವಾಗಿ ನಡೆದಿದೆ. ಅದಕ್ಕೆ ಭೋಜಪುರಿ, ರಾಜಸ್ತಾನಿ ತರದ ಭಾಷೆಗಳಿಂದ ಪ್ರತಿರೋಧವಿದ್ದರೂ ಹಿಂದಿಯ ಯಜಮಾನಿಕೆಯನ್ನು ತಳ್ಳಿ ಹಾಕಿ ತಮ್ಮ ಗುರುತು ಕಂಡುಕೊಳ್ಳಲು ಅವು ಏದುಸಿರು ಬಿಡುತ್ತಿವೆ.

ಇದರ ಜೊತೆಯಲ್ಲಿ ಹಿಂದಿಯನ್ನು ರಾಷ್ಟ್ರೀಯತೆಗೆ ತಳಕು ಹಾಕಿಕೊಂಡೇ ನೋಡುವ ಸಿದ್ಧಾಂತ ರಾಜಕೀಯದ ಮುನ್ನೆಲೆಗೆ ಬರುತ್ತಿದ್ದಂತೆಯೇ ಭಾರತವನ್ನು ಹಿಂದಿಗೆ ಒಗ್ಗಿಸುವ ಕೆಲಸ ಇನ್ನಷ್ಟು ಆಕ್ರಮಣಕಾರಿ ಸ್ವರೂಪ ಪಡೆದುಕೊಳ್ಳುತ್ತಿದೆ. ಇಂತಹದೊಂದು ತಾರತಮ್ಯದ ವ್ಯವಸ್ಥೆಯ ಅತೀ ದೊಡ್ಡ ಫಲಾನುಭವಿಯೆಂದರೆ ಬಾಲಿವುಡ್. ಒಂದು ಕಾಲದಲ್ಲಿ ತಮಿಳು, ತೆಲುಗು, ಕನ್ನಡ ಉದ್ಯಮಗಳ ಹೋಲಿಕೆಯಲ್ಲಿ ತುಂಬಾ ದೊಡ್ಡ ಮಟ್ಟದಲ್ಲೇನೂ ಇದ್ದಿರದ ಬಾಲಿವುಡ್ ಈಗ ದೇಶದ ಇತರೆಲ್ಲ ಭಾಷಿಕ ಚಿತ್ರೋದ್ಯಮಕ್ಕಿಂತ ಹತ್ತಾರು ಪಟ್ಟು ಆರ್ಥಿಕವಾಗಿ ಬಲಶಾಲಿಯಾಗಿದೆ.

ಅದರ ಬೆನ್ನಲ್ಲೇ ಬಾಲಿವುಡ್ ಪ್ರತಿಪಾದಿಸುವ ಸಾಂಸ್ಕೃತಿಕ ಮೌಲ್ಯಗಳು, ಹಬ್ಬ ಹರಿದಿನಗಳು, ಮದುವೆ ಆಚರಣೆಯ ಶೈಲಿಗಳು, ದಿರಿಸುಗಳು, ಊಟ-ತಿಂಡಿಗಳು ಇತರೆಲ್ಲ ವೈವಿಧ್ಯದ ಮೇಲೆ ಸವಾರಿ ಮಾಡುತ್ತ ಸಾಂಸ್ಕೃತಿಕ ದಬ್ಬಾಳಿಕೆಯ (ಕಲ್ಚರಲ್ ಹೆಜಿಮನಿ) ರೂಪದಲ್ಲಿ ದೇಶದ ಒಳಗೂ ಹೊರಗೂ ಭಾರತವನ್ನು ಪ್ರತಿನಿಧಿಸುವ ಏಕೈಕ ಸಾಂಸ್ಕೃತಿಕ ಅಭಿವ್ಯಕ್ತಿ ಎಂಬಂತೆ ಬಿಂಬಿತವಾಗುತ್ತಿದೆ.ಇದರ ಫಲವಾಗಿಯೇ ಅಮಿತಾಭ್  ಬಚ್ಚನ್ ತರಹದ ಹಿಂದಿ ಭಾಷೆಯ ಕಲಾವಿದರು ಭಾರತೀಯ ಕಲಾವಿದರೆಂದು ಕರೆಸಿಕೊಂಡರೆ ಎನ್.ಟಿ.ಆರ್, ರಾಜಕುಮಾರ್ ತರಹದ ಅದ್ವಿತೀಯ ನಟರು ತೆಲುಗು, ಕನ್ನಡ ನಟರು ಇಲ್ಲವೇ ಪ್ರಾದೇಶಿಕ ನಟರು ಎಂದು ಕರೆಸಿಕೊಳ್ಳುತ್ತಾರೆ.ದೇಶದ ಒಳಗೂ, ಹೊರಗೂ (ಉದಾ: IIFA, ಆಸ್ಕರ್ ) ನಡೆಯುವ ಚಿತ್ರೋತ್ಸವಗಳಲ್ಲಿ ಹಿಂದಿ ಚಿತ್ರಗಳು ಮತ್ತು ನಟರು ಭಾರತದ ಪ್ರತಿನಿಧಿಗಳು ಎಂಬಂತೆ ಬಿಂಬಿತರಾದರೆ, ಸದಾ ಅವಗಣನೆಗೆ ಒಳಗಾಗುವ ಅಡೂರು ಗೋಪಾಲಕೃಷ್ಣನ್, ಗಿರೀಶ್ ಕಾಸರವಳ್ಳಿ ತರಹದ ಪ್ರತಿಭಾವಂತರು ಆಗಾಗ ಇದನ್ನು ಪ್ರತಿಭಟಿಸುತ್ತ ಹಿಂದಿಯ ಓಟಕ್ಕೆ ತೊಡರುಗಾಲಿನಂತೆ ಸುದ್ದಿಯಾಗುತ್ತಾರೆ.

ಮೊನ್ನೆ ಅಣ್ಣಾವ್ರ ಹುಟ್ಟು ಹಬ್ಬದ ದಿನ ಗೂಗಲ್ ಸಂಸ್ಥೆ ಅವರಿಗೆ ಗೌರವ ಸಲ್ಲಿಸಿ ಒಂದಿಡೀ ದಿನ ಭಾರತದಲ್ಲಿ ಗೂಗಲ್ ಮುಖಪುಟದಲ್ಲಿ ಅಣ್ಣಾವ್ರ ಚಿತ್ರವಿದ್ದ ಡೂಡಲ್ ಪ್ರದರ್ಶಿಸಿತು. ಆಗ ‘ಒಬ್ಬ ಪ್ರಾದೇಶಿಕ ನಟನಿಗೆ ಇಂತಹ ಗೌರವ ಯಾಕೆ’ ಅನ್ನುವರ್ಥದ ಹಲವಾರು ಸಂದೇಶಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿದ್ದದ್ದು ಭಾರತ ತನ್ನ ನೆಲದಲ್ಲೇ ತನ್ನೊಡಲಲ್ಲಿರುವ ವೈವಿಧ್ಯವನ್ನು ಪರಿಚಯಿಸುವಲ್ಲಿ ಹೇಗೆ ಸೋತಿದೆ ಅನ್ನುವುದಕ್ಕೆ ಸಾಕ್ಷಿಯಾಯಿತು.ಇಂತಹ ಸಾಂಸ್ಕೃತಿಕ ದಾಳಿಯ ಪರಿಣಾಮವಾಗಿಯೇ ಬೆಂಗಳೂರು, ಮುಂಬೈ, ಹೈದರಾಬಾದಿನಂತಹ ಹಿಂದಿಯೇತರ ಊರುಗಳಲ್ಲಿ ಹಂತ ಹಂತವಾಗಿ ಅಲ್ಲಿನ ಸ್ಥಳೀಯ ಸಂಸ್ಕೃತಿ, ಭಾಷೆಯ ಜಾಗವನ್ನು ಹಿಂದಿ ಆಕ್ರಮಿಸುತ್ತಿರುವ ಬೆಳವಣಿಗೆ ನಡೆಯುತ್ತಿದೆ.ನಡೆ, ನುಡಿ, ಮಾತು, ಊಟ ಹೀಗೆ ಯಾವುದರಲ್ಲೂ ಬೆಂಗಳೂರಿಗೂ ಲಖನೌ ಇಲ್ಲವೇ ದೆಹಲಿಗೂ ಯಾವುದೇ ವ್ಯತ್ಯಾಸವಿಲ್ಲ ಅನ್ನುವಂತಹ ಬೆಳವಣಿಗೆ ನಮ್ಮನ್ನು ಸಂಕಟಕ್ಕೀಡು ಮಾಡಬೇಕೇ ಹೊರತು ಇಲ್ಲದ ಒಗ್ಗಟ್ಟಿನ ಭ್ರಮೆಯಲ್ಲಿ ತೇಲಿಸಬಾರದು. ಆಲೂರು ವೆಂಕಟರಾಯರು ‘ಕರ್ನಾಟಕದಿಂದ ಭಾರತ’ ಎಂದರು. ಆಳವಾಗಿ ಯೋಚಿಸಿದರೆ ನಾವು ನಾವಾಗಿ ಉಳಿಯುವುದೇ ನಿಜವಾದ ಭಾರತೀಯತೆ.

ನಮ್ಮದಲ್ಲದ ಇನ್ನೊಂದು ಗುರುತನ್ನು ಹೊದ್ದುಕೊಂಡು ಹೊರಡುವುದು ಸಾವಿರಾರು ವರ್ಷಗಳ ಅವಧಿಯಲ್ಲಿ ನಮಗೆ ನಾವಾರೆನ್ನುವ ಸಾಂಸ್ಕೃತಿಕ ಗುರುತು ಕೊಟ್ಟ ಕನ್ನಡದ ಪೂರ್ವಜರಿಗೆ ಮಾಡುವ ದ್ರೋಹವಾದೀತು. ತಮಿಳರಂತೆ ಕನ್ನಡಿಗರು ಈ ಭಾಷಾ ತಾರತಮ್ಯದ ವಿರುದ್ಧ ದನಿ ಎತ್ತುತ್ತಿದ್ದಾರೆ, ಅದು ಇನ್ನಷ್ಟು ಹೆಚ್ಚಬೇಕು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry