ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯ ಮತ್ತೊಬ್ಬ ಮುಖ್ಯಮಂತ್ರಿ ಆಕಾಂಕ್ಷಿ ಬಿಎಲ್ ಸಂತೋಷ್

Last Updated 29 ಏಪ್ರಿಲ್ 2017, 6:46 IST
ಅಕ್ಷರ ಗಾತ್ರ

ಬೆಂಗಳೂರು: ಸಂತೋಷ್ ಜೀ ಎಂದೇ ಪರಿವಾರದ ಮಂದಿಯಲ್ಲಿ ಚಿರಪರಿಚಿತರಾದ ಬಿ.ಎಲ್. ಸಂತೋಷ್ ಮುಂದಿನ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯೇ?

ಇಂತಹದೊಂದು ಪ್ರಶ್ನೆಗೆ ಉತ್ತರ ಸುಲಭವಲ್ಲ. ರಾಜ್ಯ ಬಿಜೆಪಿಯಲ್ಲಿ ನಡೆಯುತ್ತಿರುವ ಕಚ್ಚಾಟದಲ್ಲಿ ಕೇಂದ್ರ ಬಿಂದುವಿನ ಜಾಗಕ್ಕೆ ಸಂತೋಷ್ ಬಂದು ನಿಂತಿದ್ದಾರೆ. ಅವರ ಪರ-ವಿರೋಧದ ಎರಡೂ ಗುಂಪುಗಳು ಈ ಸರಳ ಸಂಘ ಪ್ರಚಾರಕನ ಹೆಸರಿನ ಸುತ್ತ ಗಿರಕಿ ಹೊಡೆಯುತ್ತಿದೆ. ಕಳೆದ ಒಂದು ದಶಕದಿಂದ ತೆರೆಮರೆಯಲ್ಲಿ ಬಿಜೆಪಿಯ ದೊಡ್ಡಾಟ, ಸಣ್ಣಾಟಗಳ ಸೂತ್ರಧಾರಿಯಂತಿದ್ದ ಸಂತೋಷ್ ಜಿ ಈಗ ಪ್ರಧಾನ ಪಾತ್ರಧಾರಿಯಾಗಿ ಬಣ್ಣ ಹಚ್ಚಲು ಮಾನಸಿಕವಾಗಿ ಸಜ್ಜುಗೊಂಡಿದ್ದು, ನಾಯಕನ ಪಾತ್ರ ವಹಿಸಲು ಪ್ರಸಾದನ ಕೊಠಡಿಗೆ ಬಂದು ಕುಳಿತಿದ್ದಾರೆ. ಪರದೆ ಸರಿಸಿದರೆ ಇನ್ನೇನು ಬಂದೇ ಬಿಡುವ 2018ರ ಚುನಾವಣೆಯ ಹೊತ್ತಿಗೆ ತಾಲೀಮು ಮುಗಿಸಲಿರುವ ಅವರು ರಾಜಕೀಯ ಬೃಹನ್ನಾಟಕದ ಪ್ರಧಾನ ಭೂಮಿಕೆಗೆ ಅವತರಿಸಲಿದ್ದಾರೆ ಎಂಬ ಪಿಸುಮಾತುಗಳು ಬಿಜೆಪಿ ಮತ್ತು ಪರಿವಾರದ ಒಳಮನೆಯಲ್ಲಿ ಪುಟಿಯಲಾರಂಭಿಸಿವೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಜೋಡಿ ಪಕ್ಷದ ಪೂರ್ಣ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡ ಮೇಲೆ, ಬಿಜೆಪಿಯ ಹಣೆ ಬರೆಹವೇ ಬದಲಾಗಿದೆ. ಜಯದ ಮೇಲೆ ಜಯ ಪಡೆಯುತ್ತಾ ವಿಜಯ ದುಂದುಬಿ ಮೊಳಗುತ್ತಿದೆ. ಪಂಜಾಬ್, ಗೋವಾದ ಹಿನ್ನಡೆಯ ಬಳಿಕವೂ ಬಿಜೆಪಿಯ ನಾಯಕರ ಆತ್ಮಸ್ಥೈರ್ಯ ಉಡುಗಿಲ್ಲ. ಭಾರತವನ್ನು ಗೆದ್ದೇಗೆಲ್ಲುವೆವು ಎಂಬ ಉಮೇದು ಇನ್ನೂ ಪ್ರಖರವಾಗಿಯೇ ಇದೆ.

ಮೋದಿ ಅವರು ದೇಶದ ಚುಕ್ಕಾಣಿ ಹಿಡಿದ ಮೇಲೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. ಹಳೆಯ ತಲೆಮಾರಿನ ನಾಯಕರಿಗೆ ಮುಖ್ಯಮಂತ್ರಿ ಪಟ್ಟವನ್ನು ಮೋದಿ-ಷಾ ಜೋಡಿ ನೀಡಲಿಲ್ಲ. ಡಾರ್ಕ್ ಹಾರ್ಸ್ ಗಳನ್ನು ತಂದು ಮುಖ್ಯಮಂತ್ರಿ ಗಾದಿಗೆ ಕೂರಿಸುವ ಪರಿಪಾಠ ಆರಂಭವಾಗಿದೆ. ಹರ್ಯಾಣದಲ್ಲಿ ಮನೋಹರ ಲಾಲ್ ಖಟ್ಟರ್, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡಣವೀಸ್, ಉತ್ತರ ಪ್ರದೇಶದಲ್ಲಿ ಆದಿತ್ಯನಾಥ ಯೋಗಿ,  ಉತ್ತರಾಖಂಡ್ ನಲ್ಲಿ ತ್ರಿವೇಂದ್ರ ಸಿಂಗ್ ರಾವತ್ ಹೀಗೆ ಎಲ್ಲರೂ ದಿಢೀರ್  ಆ ಹುದ್ದೆಗೆ ನಿಯೋಜನೆಗೊಂಡವರು. ಕರ್ನಾಟಕದಲ್ಲಿ ಮಾತ್ರ ಸದ್ಯಕ್ಕೆ ಪರಿಸ್ಥಿತಿ ಬೇರೆಯೇ ಇದೆ.

ಕರ್ನಾಟಕದ ಪರಿಸ್ಥಿತಿ ಈ ಮೇಲಿನ ರಾಜ್ಯಗಳಷ್ಟು ಸರಳವಲ್ಲ. ಬಿಜೆಪಿ ತೊರೆದು ನಾಯಕರನ್ನೆಲ್ಲಾ ಹಿಗ್ಗಾ ಮುಗ್ಗಾ ಬೈದಾಡಿ ಕೆಜೆಪಿ ಕಟ್ಟಿದ ಯಡಿಯೂರಪ್ಪ ಅಲ್ಲಿ ಕೈಸುಟ್ಟುಕೊಂಡ ಮೇಲೆ ಮಾತೃಪಕ್ಷಕ್ಕೆ ಮರಳಿದರು. ಕೆಲವೇ ದಿನಗಳಲ್ಲಿ ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯ ಎಂದು ಬಿಂಬಿಸಿಕೊಳ್ಳುವಲ್ಲಿ ಯಶಸ್ವಿಯೂ ಆದರು. 2016ರ ಏಪ್ರಿಲ್ ನಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವೂ ಆದರು. ಬಿಜೆಪಿಗೆ ಭೀಮಬಲ ಬಂದಿತು ಎಂದು ಕೆಲವು ಮಾಧ್ಯಮಗಳು ಬಣ್ಣಿಸಿದವು. ಅಧಿಕಾರ ಸ್ವೀಕರಿಸಿದ ದಿನ ಯಡಿಯೂರಪ್ಪ ಅವರು, “ಹಿಂದಿನ ಎಲ್ಲ ತಪ್ಪುಗಳನ್ನು ಮರೆತು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಸಂಘಟಿಸುವೆ. ನಾವೆಲ್ಲಾ ಒಂದೆ ತಾಯಿಯ ಮಕ್ಕಳಿದ್ದಂತೆ’’ ಎಂಬ ಭಾವನಾತ್ಮಕ ಮಾತುಗಳನ್ನೂ ಆಡಿದರು.

ಆದರೆ, ಆ ಮಾತು ಕೃತಿಗೆ ಇಳಿಯಲಿಲ್ಲ. “ಯಡಿಯೂರಪ್ಪ ತಮ್ಮ ವ್ಯಕ್ತಿತ್ವ ದೋಷದಂತಿರುವ ಸರ್ವಾಧಿಕಾರಿ ಧೋರಣೆ ಮುಂದುವರಿಸುತ್ತಿದ್ದಾರೆ, ಶೋಭಾ ಕರಂದ್ಲಾಜೆ ಹೊರತು ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಪಕ್ಷಕ್ಕಾಗಿ ದುಡಿದವರನ್ನು ತುಳಿಯುತ್ತಿದ್ದಾರೆ’’ ಎಂಬ ಅಪಸ್ವರ ಎದ್ದಿತು. ಕೆ.ಎಸ್. ಈಶ್ವರಪ್ಪ ಅವರಂತೂ ರಾಯಣ್ಣ ಬ್ರಿಗೇಡ್ ಸಂಘಟಿಸಿ, ಯಡಿಯೂರಪ್ಪಗೆ ಚುರುಕು ಮುಟ್ಟಿಸಿದರು. ಏತನ್ಮಧ್ಯೆ, ಅಮಿತ್ ಷಾ ಸಂಧಾನವನ್ನೂ ನಡೆಸಿ, ಸಮಾಧಾನ ಪಡಿಸುವ ಯತ್ನ ಮಾಡಿದರು. ಅಷ್ಟರಲ್ಲಿ ನಂಜನಗೂಡು, ಗುಂಡ್ಲುಪೇಟೆಯ ಉಪಚುನಾವಣೆ ಬಂದಿತು. ಬಿಜೆಪಿ ಅಭ್ಯರ್ಥಿಗಳು ಸೋತೂ ಬಿಟ್ಟರು.

ಯಡಿಯೂರಪ್ಪ ನಡೆಯ ವಿರುದ್ಧ ಪಕ್ಷದಲ್ಲಿ ಎದ್ದಿದ್ದ ಅಪಸ್ವರ, ಆಕ್ರೋಶ, ಅಸಮಾಧಾನ ಮತ್ತೆ ಭುಗಿಲೆದ್ದಿತು. ಬಿಜೆಪಿಯ ನಿಷ್ಠಾವಂತರು ಎಂದು ಹೇಳಿಕೊಂಡು ಕೆಲವು ಶಾಸಕರು ಬೆಂಗಳೂರಿನಲ್ಲಿ ಸಮಾವೇಶ ನಡೆಸಿದರು. ಯಡಿಯೂರಪ್ಪ ಮತ್ತು ಅವರ ಗುಂಪಿನ ನಡವಳಿಗಳ ಬಗ್ಗೆ ಟೀಕಾ ಪ್ರಹಾರ ನಡೆಸಿದರು. ಇದಿಷ್ಟು ಸದ್ಯದ ವಿದ್ಯಮಾನ.

ಮುಂಚೂಣಿಗೆ ಬಂದ ಸಂತೋಷ್: ಸಂಘಟನೆ ಉಳಿಸಿ ಹೆಸರಿನಲ್ಲಿ ನಡೆಸುವ ಸಭೆ ಅಥವಾ ಸಮಾವೇಶಕ್ಕೆ ಬಿಜೆಪಿ ಕಾರ್ಯಕರ್ತರು ಹೋಗಬಾರದು ಎಂದು ಯಡಿಯೂರಪ್ಪ ಅವರು ತಮ್ಮ ನಿಷ್ಠಾವಂತ ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್ ಮೂಲಕ ಫರ್ಮಾನು ಹೊರಡಿಸಿದ್ದರು. ಅಲ್ಲದೆ, ತಮ್ಮ ಮತ್ತೊಬ್ಬ ಅತ್ಯಾಪ್ತ ಬಿ.ಜೆ. ಪುಟ್ಟಸ್ವಾಮಿ ಮೂಲಕ ಈಶ್ವರಪ್ಪ ಮತ್ತು ಬಿಜೆಪಿ ನಿಷ್ಠರೆಂದು ಹೇಳಿಕೊಂಡವರನ್ನು ಬೈಯಿಸಿದ್ದರು. ಇದು ನಿಷ್ಠಾವಂತರೆಂದು ಹೇಳಿಕೊಂಡವರಲ್ಲಿ ಕಿಚ್ಚು ಹೆಚ್ಚಿಸಿತು. ಸಮಾವೇಶವೂ ದೊಡ್ಡ ಮಟ್ಟದಲ್ಲಿಯೇ ನಡೆಯಿತು.

ಅತ್ತ ಸಮಾವೇಶ ನಡೆಯುತ್ತಿದ್ದ ಡಾಲರ್ಸ್ ಕಾಲನಿಯ ಮನೆಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಯಡಿಯೂರಪ್ಪ, ಈಶ್ವರಪ್ಪನವರು ರಾಯಣ್ಣ ಬ್ರಿಗೇಡ್ ಮಾಡಲಿ ಅಥವಾ ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಲಿ. ಈಶ್ವರಪ್ಪ ವಿರೋಧ ಪಕ್ಷದ ನಾಯಕರಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಅಷ್ಟಕ್ಕೆ ಸುಮ್ಮನಾಗದ ಅವರು, ಈಶ್ವರಪ್ಪನವರ ಹಿಂದೆ ಕೆಲಸ ಮಾಡುತ್ತಿರುವ ಬ್ರೈನ್ ಯಾರೆಂದು ಗೊತ್ತಿದೆ. ಈಶ್ವರಪ್ಪ ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದು, ಅವರ ಹಿಂದೆ ನಮ್ಮ ಕೆಲವು ನಾಯಕರ ಬೆಂಬಲವಿದೆ. ಸಂಘಟನೆ ಉಳಿಸಿ ಸಮಾವೇಶದಲ್ಲಿ ಸಂತೋಷ್ ಶಿಷ್ಯರೇ ಇದ್ದಾರೆ. ಅವರ ಕುಮ್ಮಕ್ಕಿನಿಂದಲೇ ಇದೆಲ್ಲವೂ ಆಗುತ್ತಿದೆ ಎಂದು ಬಹಿರಂಗವಾಗಿ ಟೀಕೆ ಮಾಡಿದ್ದರು.

ಯಡಿಯೂರಪ್ಪ ಬೆಂಬಲಿಗರು ನೇರವಾಗಿ ಸಂತೋಷ್ ಮೇಲೆ ಮುಗಿಬಿದ್ದಿದ್ದಾರೆ. ಯಡಿಯೂರಪ್ಪ ಶಿಷ್ಯ, ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಂ.ಪಿ. ರೇಣುಕಾಚಾರ್ಯ, ಸಂತೋಷ್ ಅವರು ಆರೆಸ್ಸೆಸ್ ದುರ್ಬಳಕೆ ಮಾಡಿಕೊಳುತ್ತಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.

“ಸಂತೋಷ್ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿದ್ದು, ಅದಕ್ಕಾಗಿ ಬಿಜೆಪಿಯ ಕೆಲವರನ್ನು ಎತ್ತಿಕಟ್ಟುತ್ತಿದ್ದಾರೆ. ಯಡಿಯೂರಪ್ಪ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ, ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಟೀಕಿಸಿ, ಅವರನ್ನು ಮುಖ್ಯಮಂತ್ರಿಯಾಗದಂತೆ ತಡೆಯಲು ಯತ್ನಿಸುತ್ತಿದ್ದಾರೆ’’ ಎಂದು ಯಡಿಯೂರಪ್ಪ ಶಿಷ್ಯರು ಹೇಳಿಕೊಂಡು ಓಡಾಡುತ್ತಿದ್ದಾರೆ.

ಬಿಜೆಪಿ ವಲಯದಲ್ಲಿಯೂ ಈ ವದಂತಿ ದಟ್ಟವಾಗಿ ಹಬ್ಬಿದೆ. ಯಡಿಯೂರಪ್ಪ ಎಲ್ಲರನ್ನೂ ಸಂಭಾಳಿಸಿಕೊಂಡು ಹೋಗುವ ನಾಯಕನಲ್ಲ ಎಂದು ಬಿಂಬಿಸುವುದು, ಅವರ ವಿರೋಧಿ ಅಲೆ ಪಕ್ಷದಲ್ಲಿ ಪ್ರಬಲವಾಗುವಂತೆ ನೋಡಿಕೊಳ್ಳುವುದು, ಡಿಸೆಂಬರ್ ಹೊತ್ತಿಗೆ ಯಡಿಯೂರಪ್ಪ ಅವರನ್ನು ಬದಲಿಸಿ ಸಂತೋಷ್ ಅವರನ್ನು ಕರೆತರುವುದು ಈ ಎಲ್ಲ ಚಟುವಟಿಕೆಗಳ ಹಿಂದಿರುವ ಆಶಯ ಎಂಬ ಚರ್ಚೆ ದಿನೇ ದಿನೇ ಪ್ರಖರವಾಗುತ್ತಿದೆ.

ಈ ಬೆಳವಣಿಗೆಗಳ ಮಧ್ಯೆ, ಸಂತೋಷ್ ಅವರ ಬೆಂಬಲಿಗರಲ್ಲಿ ಒಬ್ಬರಾದ, ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಅವರು ಏಪ್ರಿಲ್ 13ರಂದು ಸಂತೋಷ್ ಪರ ಟ್ವೀಟ್ ಮಾಡಿದ್ದಾರೆ. “ಕರ್ನಾಟಕದಲ್ಲಿ ಪಕ್ಷವನ್ನು ಪುನರ್ ಸಂಘಟಿಸುವ ಕಾರ್ಯತಂತ್ರವನ್ನು ರೂಪಿಸಲು ಸಂತೋಷ್ ಅವರನ್ನು ಮತ್ತೆ ರಾಜ್ಯದ ಸಂಘಟನೆಗೆ  ಕರೆತರಲು ಇದು ನಿರ್ಣಾಯಕ ಕಾಲಘಟ್ಟ. ಪಕ್ಷದ ನೇತಾರರು ಈ ಬಗ್ಗೆ ಗಮನ ಹರಿಸಬೇಕು’’ ಎಂದು ತಮ್ಮ ಟ್ವೀಟ್ ಅನ್ನು ಅಮಿತ್ ಷಾ, ನರೇಂದ್ರ ಮೋದಿ ಅವರ ಟ್ವೀಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT