7

ಬ್ರ್ಯಾಂಡ್ ಬಂಧನವಿರದ ಜೆನೆರಿಕ್ ಔಷಧ

Published:
Updated:
ಬ್ರ್ಯಾಂಡ್ ಬಂಧನವಿರದ ಜೆನೆರಿಕ್ ಔಷಧ

ಇನ್ನು ಮುಂದೆ ವೈದ್ಯರು ಜೆನೆರಿಕ್ ಔಷಧಗಳನ್ನೇ ಬರೆಯುವಂತೆ ಕಾನೂನನ್ನು ಬದಲಾಯಿಸುವ ಬಗ್ಗೆ ಪ್ರಧಾನ ಮಂತ್ರಿಗಳು ಈಚೆಗಷ್ಟೆ ಸೂರತ್‌ನಲ್ಲಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಜೆನೆರಿಕ್ ಔಷಧಗಳೆಂದರೆ, ಉದಾಹರಣೆಗೆ ‘ಕ್ರೊಸಿನ್ ಮಾತ್ರೆ’ ಎಂಬುದು ಬ್ರ್ಯಾಂಡ್ ಹೆಸರು; ‘ಪ್ಯಾರಸಿಟಮಾಲ್’ ಎಂಬ ರಾಸಾಯನಿಕ ಅದರಲ್ಲಿರುವ ಔಷಧ. ವೈದ್ಯರು ಮೂಲ ಔಷಧ ರಾಸಾಯನಿಕ ಪ್ಯಾರಸಿಟಮಾಲ್ ಎಂದೇ ಬರೆದರೆ ಆಗ ಅದು ಜನೆರಿಕ್ ಔಷಧ ಬರೆದಂತೆ. ಅದೇ ಕ್ರೊಸಿನ್ ಎಂದು ಬರೆದರೆ ಒಂದು ಕಂಪನಿಯ ಬ್ರ್ಯಾಂಡ್ ಬರೆದಂತೆ.  ನೀರು ನೀರೇ. ಆದರೆ ಬ್ರ್ಯಾಂಡ್‌ಗಳಲ್ಲಿ ಅದೇ ನೀರು ಹತ್ತಾರೂ ಹೆಸರಿನಲ್ಲಿ ಸಿಗುತ್ತದೆ. ‘ನೀರು’ ಕೊಡಿ ಎಂದು ಕೇಳಿದರೆ ಜೆನೆರಿಕ್. ಯಾವುದೋ ಬ್ರ್ಯಾಂಡ್  ಕೇಳಿದರೆ ಜೆನೆರಿಕ್ ಅಲ್ಲ.  ಜೆನೆರಿಕ್ ಔಷಧಕ್ಕೂ ಬ್ರ್ಯಾಂಡ್ ಔಷಧಕ್ಕೂ ಅವುಗಳ ಕೆಲಸದಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಒಂದು ವಾದ – ಜೆನೆರಿಕ್ ಔಷಧಗಳ ಗುಣ ಮಟ್ಟ ಕಡಿಮೆ ಎಂದು. ಇದು ಸರಿಯಾದಲ್ಲಿ, ನಮ್ಮ ಔಷಧ ಗುಣಮಟ್ಟ ನಿಯಂತ್ರಣ ವ್ಯವಸ್ಥೆಯ ವೈಫಲ್ಯವನ್ನು ತೋರಿಸುತ್ತದೆ. ‘ಜಗತ್ತಿನ ಔಷಧಕಾರ್ಖಾನೆ’ ಎಂದು ಈಗ ಭಾರತ ಹೆಸರು ಪಡೆದಿರುವುದು ಹೌದು. ಇಲ್ಲಿ ತಯಾರದ ಮುಕ್ಕಾಲು ಭಾಗ ಔಷಧಗಳು ವಿದೇಶಗಳಿಗೆ ರಫ್ತಾಗುತ್ತಿವೆ. ಗುಣಮಟ್ಟ ದೋಷಾರೋಪ ಮಾರುಕಟ್ಟೆಯ ತಂತ್ರವೇ ಹೊರತು ವಾಸ್ತವವಲ್ಲ. ಬ್ರಾಂಡ್ ಇದ್ದರೆ ಸಾಮಾನ್ಯವಾಗಿ ಬೆಲೆ ಹೆಚ್ಚು. ಹೆಚ್ಚು ಬೆಲೆ ಇಟ್ಟು ಬ್ರ್ಯಾಂಡ್ ಹೆಸರಿನಲ್ಲಿ ವೈದ್ಯರು ಬರೆಯುವಂತೆ ಮಾಡಲು ನಿರಂತರ ಮಾರಾಟ ತಂತ್ರಗಾರಿಕೆಯನ್ನು ಉಪಯೋಗಿಸಬೇಕಾಗುತ್ತದೆ. ಇದನ್ನು ಔಷಧವ್ಯಾಪಾರದಲ್ಲಿ ನೈತಿಕತೆಯ ಮಾರಾಟ ಎನ್ನಬಹುದು. ಡಾಕ್ಟರ್‌ಗಳಿಗೆ ಪ್ರವಾಸದ ಸೌಲಭ್ಯವನ್ನು ಒದಗಿಸುವುದು, ಡಾಕ್ಟರಿಗೆ ಕೊಟ್ಟ ಕಾರಿನ ಇಎಮ್‌ಐ ಕಟ್ಟುವುದು. ತಮ್ಮ ಔಷಧ ಬರೆಯುವುದು ಬಿಟ್ಟಾಗ ಕಂತನ್ನು ಕಟ್ಟುವುದು ಬಿಡುವುದು, ಅಗಾಗ ಪಂಚತಾರ ಹೊಟೆಲ್‌ಗಳಲ್ಲಿ ಸಮಾವೇಶ, ಸಮ್ಮೇಳನದ ಗುಂಡುಪಾರ್ಟಿ – ಇಂಥವುಗಳನ್ನು ಔಷಧಕಂಪನಿಗಳು ‘ಮುಂದುವರಿದ ವೈದ್ಯಕೀಯ ವಿದ್ಯಾಭ್ಯಾಸ (continued medical education) ಎಂಬ ಹೆಸರಿನಲ್ಲಿ ನಡೆಸುತ್ತವೆ. ಕೆಲವು ಕಂಪನಿಗಳು ಕೋರ್ಸ್ ಸರ್ಟಿಫಿಕೇಟ್ ಕೊಡುವ ವ್ಯವಸ್ಥೆಯನ್ನೂ ಮಾಡಿಕೊಂಡಿವೆ. ಇಂತಹ ವ್ಯವಸ್ಥೆಗೆ ಎಲ್ಲರೂ ಬಲಿಯಾಗಿದ್ದಾರೆ ಎಂದು ಸಾರಸಗಟಾಗಿ ಹೇಳಲು ಸಾಧ್ಯವಿಲ್ಲದಿದ್ದರೂ, ಸಾಧುವಲ್ಲದಿದ್ದರೂ, ಬಹುತೇಕ ಇದು ಸರ್ವೇಸಾಮಾನ್ಯವಾಗಿದೆ ಎಂದು ಹೇಳದೆ ವಿಧಿಯಿಲ್ಲ.

ಆದರೆ ಈ ಜೆನೆರಿಕ್ ಔಷಧದ ಪ್ರಮಾಣ ನಮ್ಮ ಒಟ್ಟು ಔಷಧಮಾರಾಟಕ್ಕೆ ಹೋಲಿಸಿದರೆ ಅತ್ಯಲ್ಪ. ಹೆಚ್ಚಿನ ಔಷಧಗಳು ಎರಡು ಅಥವಾ ಹೆಚ್ಚು ಔಷಧಗಳನ್ನು ಒಟ್ಟು ಸೇರಿಸಿ, ಬ್ರ್ಯಾಂಡ್‌ ಇಟ್ಟು ಮಾರಾಟ ಮಾಡುವುದಾಗಿದೆ. ಇವುಗಳನ್ನು ‘ಫಿಕ್ಸ್‌ಡ್ ಡೊಸ್ ಕಾಂಬಿನೇಶನ್’ (FDC) ಎನ್ನುತ್ತಾರೆ. ಇಂತಹ ಔಷಧಗಳು ಜೆನೆರಿಕ್ ಆಗುವುದಿಲ್ಲ. ಹಾಗೆಯೇ ಹೊಸದಾಗಿ ಕಂಡುಹಿಡಿದ ಔಷಧಗಳಿಗೆ 20 ವರ್ಷ ಪೇಟೆಂಟ್‌ನ ರಕ್ಷಾಕವಚವಿರುವುದರಿಂದ ಅಂತಹ ಔಷಧಗಳ ಮೇಲೆ ನಿಯಂತ್ರಣ ಹೇರಲು ಸಾಧ್ಯವಿಲ್ಲ. ನಮ್ಮ ದೇಶದ ಒಟ್ಟು ಔಷಧ ವ್ಯಾಪಾರದ ಸುಮಾರು ಒಂದು ಲಕ್ಷ ಕೋಟಿಯ ವ್ಯಾಪಾರದಲ್ಲಿ ದೊಡ್ಡ ಕಂಪನಿಗಳ ಕೇವಲ 300 ಈ ‘ಎಫ್‌ಡಿಸಿ’ ಔಷಧಗಳ ಪಾಲು ಶೇ.70ರಷ್ಟಿದೆ! ಸರ್ಕಾರ ಸುಮಾರು 6,500 ಇಂತಹ  ‘ಎಫ್‌ಡಿಸಿ’ಗಳಲ್ಲಿ 344  ಕಾಂಬಿನೇಶನ್ ಔಷಧಗಳನ್ನು ಕಳೆದ ವರ್ಷ ನಿಷೇಧಿಸಿತ್ತು. ಆದರೆ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಅವನ್ನು ತೆರುವುಗೊಳಿಸಲಾಯಿತು. ಸರ್ಕಾರ ಸುಮಾರು 900 ಔಷಧಗಳನ್ನು ಅಗತ್ಯ ಔಷಧಗಳೆಂದು ಪಟ್ಟಿ ಮಾಡಿ ಅವುಗಳಲ್ಲಿ ಸುಮಾರು 467 ಔಷಧಗಳ ಬೆಲೆಗಳನ್ನು ನಿಯಂತ್ರಿಸಿದೆ. ಆದರೆ ಈ ನಿಯಂತ್ರಣವನ್ನು ಮಾಡಲು ಅಳವಡಿಸಿದ ನಿಯಮ ಪ್ರಶ್ನಾರ್ಹವಾದುದು. ಕಾರಣ ಅಯಾ ಔಷಧ ಮಾರುಕಟ್ಟೆಯಲ್ಲಿ ಶೇ.1ಕ್ಕೂ ಹೆಚ್ಚಿನ ಪಾಲು ಇರುವ ಕಂಪನಿಗಳ ಬೆಲೆಯ ಸರಾಸರಿಯನ್ನಾಧರಿಸಿ ಬೆಲೆಯನ್ನು ನಿಗದಿಸಲಾಗಿದೆ. ಕೆಲವರ ಪ್ರಕಾರ ಈ ನಿಯಂತ್ರಣಕ್ಕೊಳಪಟ್ಟ ಔಷಧಗಳಲ್ಲೂ ಸುಮಾರು ಶೇ.100 ರಿಂದ ಶೇ.1000ಪಟ್ಟು ಲಾಭ ಈಗಲೂ ಇದೆ. ಕಳೆದ ವರ್ಷ  ಔಷಧಕಂಪೆನಿಗಳ ಒಟ್ಟು ಲಾಭ ಸುಮಾರು 45000 ಕೋಟಿಯಾಗಿತ್ತು!

ವೈದ್ಯರು ಜೆನೆರಿಕ್ ಔಷಧಗಳ ಹೆಸರನ್ನೇ ದಪ್ಪ ಅಕ್ಷರಗಳಲ್ಲಿ ಬರೆಯಬೇಕೆಂದು ಕಳೆದ ವರ್ಷವೇ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ ಅದೇಶ ಹೊರಡಿಸಿತ್ತು. ಆದರೆ ಅದರ ಪಾಲನೆ ಯಶಸ್ವಿಯಾಗಿಲ್ಲ. ಸರ್ಕಾರ ಈಗ ಔಷಧಕಾನೂನನ್ನೇ ಬದಲಾಯಿಸಬೇಕೆನ್ನುವ ಅಲೋಚನೆಯಲ್ಲಿದೆ. ಈ ರೀತಿಯ ಕಾನೂನು ಹೇರಿಕೆಯಲ್ಲಿ ಕೆಲವು ಸಮಸ್ಯೆಗಳಿವೆ. ಅನೇಕ ಸಂದರ್ಭಗಳಲ್ಲಿ ಜೆನೆರಿಕ್ ಔಷಧಗಳಿಗಿಂತ ಎಫ್‌ಡಿಸಿ ಔಷಧಗಳು ಚೆನ್ನಾಗಿ ಕೆಲಸ ಮಾಡಬಲ್ಲವಾಗಿರುತ್ತವೆ. ಕೆಲವು ಕಡೆ ಜೆನೆರಿಕ್ ಔಷಧವೇ ಸಾಕು. ಹಾಗಾಗಿ ಇದನ್ನು ವೈದ್ಯರ ನಿರ್ಧಾರಕ್ಕೇ ಬಿಡಬೇಕಾಗುವುದು.  ಅಲ್ಲದೇ ವಿಟಮಿನ್, ಖನಿಜಮಿಶ್ರಣ, ಟಿಬಿ ಅಂತಹ ವಿಷಯದಲ್ಲಿ ಜೆನೆರಿಕ್ ಸಾಧ್ಯವಿಲ್ಲ. ಹಾಗೆಯೇ ಒಂದು ವೇಳೆ ವೈದ್ಯರು ಬ್ರ್ಯಾಂಡ್ ಬದಲು ಒಂದು ಜೆನೆರಿಕ್ ಔಷಧ ಬರೆದ ಚೀಟಿಯನ್ನು ಔಷಧ ಅಂಗಡಿಗೆ ಕೊಟ್ಟಾಗ ಆತ ಇಪ್ಪತ್ತು ಸಾವಿರದಷ್ಟಿರುವ ಯಾವ ಕಂಪನಿಯ ಆ ಜೆನೆರಿಕ್ ಔಷಧವನ್ನು ಕೊಡುವುದು?  ಯಾರು ಹೆಚ್ಚು ಲಾಭ ಕೊಡುತ್ತಾರೋ ಅದೇ ಕಂಪೆನಿಯ ಜೆನೆರಿಕ್ ಔಷಧವನ್ನು ಆತ ಕೊಟ್ಟಾನು. ಇದರಿಂದ ಔಷಧವ್ಯಾಪಾರಿಗಳಿಗೆ ಔಷಧಗಳನ್ನು ನಿರ್ಧರಿಸುವ ಹೆಚ್ಚಿನ ಅಧಿಕಾರ ಸಿಕ್ಕಂತಾಗುತ್ತದೆ. ಅಲ್ಲದೇ ಯಾರು ಅವನಿಗೆ ಲಾಭದ ಆಮಿಷವನ್ನು ಒಡ್ಡುವರೋ ಅವರಿಗೆ ಅವನು ಸಹಾಯ ಮಾಡುವಂತಾಗಬಹುದು. ಈವರೆಗಿನ ವಿವರಣೆ ಖಾಸಗಿ ಅಸ್ಪತ್ರೆ ಮತ್ತು ಖಾಸಗಿ ಔಷಧ ಅಂಗಡಿಗಳ ವಿಷಯಯಕ್ಕೆ ಸಂಬಂಧಿಸಿದ್ದು. ಇದು ನಮ್ಮ ಆರೋಗ್ಯ ವ್ಯವಸ್ಥೆಯ ಶೇ.80ಷ್ಟು ಎನ್ನಬಹುದು. ಉಳಿದ ಶೇ.20ರಷ್ಟು ಸರ್ಕಾರಿ ಅರೋಗ್ಯ ಸೇವಾವಲಯದಲ್ಲಿ ಜೆನೆರಿಕ್ ಔಷಧಗಳನ್ನು ಸರ್ಕಾರ ಹರಾಜಿನ ಮೂಲಕ ಕಡಿಮೆ ಬೆಲೆಗೆ  ಖರೀದಿಸಿ ಸರ್ಕಾರಿ ವ್ಯವಸ್ಥೆಯಲ್ಲಿ ಜನರಿಗೆ ಒದಗಿಸುವುದು ಸುಲಭ. ತಮಿಳುನಾಡು ಸರ್ಕಾರ ಅಂಥ ವ್ಯವಸ್ಥೆಯನ್ನು ಅಳವಡಿಸಿಕೊಂಡಿದೆ. ಸರ್ಕಾರಿ ವ್ಯವಸ್ಥೆ ಆರೋಗ್ಯ ಸೇವೆಗೆ ನೆರವಾಗಿ ನಿಲ್ಲುವುದರಿಂದ ಔಷಧ ಕಂಪೆನಿಗಳಿಂದ ಕಡಿಮೆ ಬೆಲೆಗೆ ಸಗಟು ವ್ಯಾಪಾರಮಾಡಿ ಜನಸಾಮಾನ್ಯರಿಗೆ ಕೈಗೆಟುಕುವ ಬೆಲೆಗೆ ಸರಬರಾಜು ಮಾಡಬಹುದು. ಹೀಗಲ್ಲದೆ ಔಷಧಕಂಪೆನಿಗಳ ವ್ಯವಹಾರದಲ್ಲಿ ಕೇವಲ ಅಲ್ಲಿ ಇಲ್ಲಿ ಮಧ್ಯಪ್ರವೇಶ ಮಾಡುವುದರಿಂದ ಕಲ್ಯಾಣರಾಜ್ಯ ಎನ್ನುವುದು ಆರೋಗ್ಯದ ವಿಷಯದಲ್ಲಿ ಮರೀಚಿಕೆಯಾಗಿಯೇ ಉಳಿಯಬಹುದು. ಅಧಿಕ ಬಂಡವಾಳ ಹೂಡಿಕೆ ಮತ್ತು ಕನಿಷ್ಠ ತನ್ನ ಒಟ್ಟು ಅರ್ಥಿಕತೆಯ ಈಗಿನ ಶೇ. 1.25ರಿಂದ ಶೇ.2.5ಕ್ಕೆ ಹೆಚ್ಚಿಸುವುದೇ ಈ ದಾರಿಯಲ್ಲಿ ಸರ್ಕಾರದ ಮೊದಲ ನಡಿಗೆಯಾಗಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry