ಮಹತ್ಕಾರ್ಯಕ್ಕೆ ಹೆಗಲು ಕೊಟ್ಟ ‘ಮಾಮೂಲಿ’ ಮನುಷ್ಯರು

7
ಬರ, ಎಂದೆಂದಿಗೂ ದೂರ

ಮಹತ್ಕಾರ್ಯಕ್ಕೆ ಹೆಗಲು ಕೊಟ್ಟ ‘ಮಾಮೂಲಿ’ ಮನುಷ್ಯರು

Published:
Updated:
ಮಹತ್ಕಾರ್ಯಕ್ಕೆ ಹೆಗಲು ಕೊಟ್ಟ ‘ಮಾಮೂಲಿ’ ಮನುಷ್ಯರು

‘ನೋಡ್ತಾ ಇರಿ. ನಾನು ಹನಿಸುವ ನೀರೇ ಮಳೆ, ಇದು ನಿಮ್ಮ ಪಕ್ಕದ ಗುಡ್ಡ ಎಂದುಕೊಳ್ಳಿ, ಏನು ಬದಲಾವಣೆ ಕಾಣುತ್ತೀರಾ?’ ಕೈಯಲ್ಲಿ ರೋಸ್ ಕ್ಯಾನ್ ಹಿಡಿದು ಕಿರು ಇಳಿಮೇಡು, ಎಂದರೆ, ಒಂದು ಇಳಿಜಾರಿನ ಗುಡ್ಡದ ಪ್ರತಿಕೃತಿಗೆ ನೀರೆರೆಯುತ್ತಾ ಕೇಳುತ್ತಾರೆ ತರಬೇತಿದಾರರು.

ಚಿತ್ರ ಎದುರೇ ಇರುವ ಕಾರಣ ಎಲ್ಲರಿಗೂ ಪರಿಣಾಮ ಗೊತ್ತಾಗುತ್ತದೆ. ಗುಡ್ಡದ ಮೇಲ್ಮಣ್ಣು ಕರಕರಗಿ ನೀರಿನೊಂದಿಗೆ ಬೆರೆತು ದೂರ ಹೋಗುತ್ತದೆ. ‘ಗೊತ್ತಾಯಿತು ತಾನೇ. ಇದನ್ನೇ ಹೇಳೋದು ಮಣ್ಣಿನ ಸವಕಳಿ ಅಂತ. ಓಡೋ ಮಳೆನೀರನ್ನು ತಡೆದರೆ ಈ ಅತ್ಯಮೂಲ್ಯ ಮೇಲ್ಮಣ್ಣೂ ನಿಮ್ಮನಿಮ್ಮಲ್ಲೇ ಉಳಿಯುತ್ತದೆ’.

ತರಬೇತಿಯಲ್ಲಿ ಭಾಗವಹಿಸಿರುವ ಸುರೇಖಾ ಫಾಲ್ಕೆ ಅವರಿಗೆ ಇವೆಲ್ಲಾ ಹೊಸದು, ಆದರೆ ಕುತೂಹಲಕಾರಿ. ರಸಾಯನಶಾಸ್ತ್ರದಲ್ಲಿ ಪದವಿ ಪಡೆದ ಇವರು ಟ್ಯುಟೋರಿಯಲ್ ನಡೆಸುತ್ತಿದ್ದರು, ಈಗ ಪಾನಿ ಫೌಂಡೇಶನಿನ ಸತ್ಯಮೇವ ಜಯತೇ ವಾಟರ್ ಕಪ್ – 2 ಸ್ಪರ್ಧೆಯಲ್ಲಿ ತಾಂತ್ರಿಕ ತರಬೇತಿಗಾರ್ತಿ.

ಸುರೇಖಾರಂತೆ ನಲವತ್ತು ಮಂದಿ ಟೆಕ್ನಿಕಲ್ ಟ್ರೈನರುಗಳನ್ನು ತರಬೇತುಗೊಳಿಸಿರುವುದು ‘ವೋಟ್ರ್’ – ವಾಟರ್ ಶೆಡ್ ಡೆವಲಪ್ ಮೆಂಟ್ ಆರ್ಗನೈಸೇಷನ್ ಟ್ರಸ್ಟ್. 24 ವರ್ಷ ಹಳೆಯ ಈ ಖ್ಯಾತ ಸಂಸ್ಥೆಯ ತರಬೇತಿ ಕೇಂದ್ರ ಇರುವುದು ಪುಣೆಯಿಂದ ತುಸು ದೂರದಲ್ಲಿರುವ ದರೆವಾಡಿಯಲ್ಲಿ. ಹತ್ತು ದಿನಗಳ ತರಬೇತಿಯಲ್ಲಿ ಪ್ರಯೋಗ, ಆಟ, ಕ್ಷೇತ್ರ ದರ್ಶನ, ಥಿಯರಿ – ಎಲ್ಲವೂ ಇರುತ್ತವೆ.

‘ಒಂದು ಹೆಕ್ಟರ್ ಜಮೀನಿನ ಮೇಲೆ ಒಂದು ಮಿಲಿಮೀಟರ್ ಮಳೆ ಬಿದ್ದರೆ 10,000 ಲೀಟರ್ ಆಗುತ್ತದೆ’ ಎನ್ನುವ ಲೆಕ್ಕದಿಂದ ಹಿಡಿದು ಜಲಾನಯನ ಅಭಿವೃದ್ಧಿಯ ಒಳಹೊರಗುಗಳೆಲ್ಲಾ ಸುರೇಖಾಗೀಗ ಗೊತ್ತು. ಅದನ್ನವರು ಸ್ಪರ್ಧೆಯಲ್ಲಿ ಭಾಗವಹಿಸುವ ಹಳ್ಳಿಗರಿಗೆ ಚೆನ್ನಾಗಿ ತಿಳಿಸಿಕೊಡುತ್ತಿದ್ದಾರೆ.

ತಾಂತ್ರಿಕ ತರಬೇತುದಾರರ ಆಯ್ಕೆ ನಡೆಸಲು ಕಳೆದ ವರ್ಷದ ಸ್ಪರ್ಧೆಯ ಭಾಗಿಗಳ ನಡುವೆಯೇ ಪಾನಿ ಫೌಂಡೇಶನ್ ಕರೆ ಕೊಟ್ಟಿತ್ತು. ಉದ್ದೇಶ ಇಷ್ಟೆ. ಅನನುಭವಿಗಳಾದರೂ ಅಡ್ಡಿಯಿಲ್ಲ. ಗ್ರಹಣಶಕ್ತಿ ಇರೋದರ ಜತೆಗೆ ನೀರಿನ ಕೆಲಸದಲ್ಲಿ ಪ್ರೀತಿ ಇರಬೇಕು. ಸಮೂಹಚಿಂತನೆ ಇರಬೇಕು. ಬಂದ ನೂರು ಅರ್ಜಿಗಳಲ್ಲಿ ಸುರೇಖಾರಂತಹ ನಲುವತ್ತು ಮಂದಿಯನ್ನು ಫೌಂಡೇಶನ್ ಸಜ್ಜುಗೊಳಿಸಿ ರಂಗಕ್ಕಿಳಿಸಿದೆ.

ಸ್ಪರ್ಧೆಗಿಳಿಯುವ ಎಲ್ಲ ಗ್ರಾಮಗಳೂ  ತಮ್ಮಲ್ಲಿಂದ ತರಬೇತಿಗಾಗಿ ಐದು ಪ್ರತಿನಿಧಿಗಳನ್ನು ಕಳಿಸಬೇಕು. ಇದರಲ್ಲಿ ಇಬ್ಬರು ಮಹಿಳೆಯರಿರಬೇಕು. ಎಂಥ ವ್ಯಕ್ತಿಗಳನ್ನು ಆಯ್ಕೆ ಮಾಡಿ ಕಳಿಸಬೇಕು ಎಂದು ತಿಳಿಸಲು ಫೌಂಡೇಶನ್ ಒಂದು ಕಿರುಚಿತ್ರ ಮಾಡಿದೆ. ಗ್ರಾಮ ತರಬೇತಿಯಲ್ಲಿ ಭಾಗವಹಿಸದಿದ್ದರೆ ತನ್ನಿಂದ ತಾನೇ ಅಮಾನ್ಯವಾಗುತ್ತದೆ.

ತರಬೇತಿ ಪಡೆದ ನವೀ ಬುಡ್ರುಕ್ ಗ್ರಾಮದ ಯುವಕ ದಯಾನಂದ ನಿಕಾಮ್ ಬಿ.ಎಸ್ಸಿ ಪದವೀಧರ. ‘ಹೋಗೋ ಮೊದಲು ನೀರಿನ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಆದರೆ ಈ ತರಬೇತಿ ಬದುಕಿನ ಬಹುದೊಡ್ಡ ಪಾಠ ಕಲಿಸಿದೆ’ ಎಂದು ಅತ್ಯುತ್ಸಾಹದಿಂದ ನೆನೆಯುತ್ತಾರೆ.

ಮೊನ್ನೆಮೊನ್ನೆ ಸಂಪರ್ಕಿಸುವಾಗ ಉತ್ತರ ಸೋಲಾಪುರದ ತಾಲೂಕು ಸಮನ್ವಯಕಾರ ವಿಕಾಸ್ ಗಾಯಕ್ ವಾಡ್ ಅತಿ ಖುಷಿಯಲ್ಲಿದ್ದರು. ಅದು ಜಗತ್ತು ವಿಶ್ರಮಿಸುವ ಸಮಯ, ರಾತ್ರಿ ಒಂಭತ್ತೂವರೆ. ವಿಕಾಸ್ ಹುಮ್ಮಸ್ಸು ಕುಂದಿರಲಿಲ್ಲ. ‘ಸರ್ ತುಂಬಾ ಸಂತೋಷದಲ್ಲಿದ್ದೇನೆ’ ಎಂದೇ ಮಾತು ಆರಂಭಿಸಿದರು. ‘ಶ್ರಮದಾನಕ್ಕೆ ಓಗೊಡದ ಹಳ್ಳಿಯವರು ಮರುದಿನವೇ ಬಾಗಿಲಿಗೆ ಬೀಗ ಜಡಿದು ಬರಲು ಒಪ್ಪಿದ್ದಾರೆ’.

ಬಾಳಾಸಾಹೇಬ್ ಶಿಂಧೆ ಝಕನ್ ಗಾಂವಿನವರು. ದರ್ಜಿ. ಓದಿದ್ದು ಹತ್ತನೇ ಇಯತ್ತೆ. ಐದಾರು ವರ್ಷಗಳಿಂದ ನೆಲಜಲ ಅಭಿವೃದ್ಧಿಯ ಗೀಳು.  ಹುಚ್ಚು ಹತ್ತಿದ್ದು ಡಾ.ಅವಿನಾಶ್ ಪೋಲ್ ಅವರ ಸಹವಾಸದಿಂದ. ಸತಾರಾದ ಅಜಿಂಕ್ಯತಾರಾ ಶ್ರಮದಾನ ಗುಂಪಿನ ಸಾಧನೆಯಿಂದ.

‘ಬೇಕಾದಷ್ಟು ಹೊಲಿಗೆ ಕೆಲಸ ಬರುತ್ತಿತ್ತು. ಆದರೂ ಅದು ರುಚಿಸಲಿಲ್ಲ. ಆ ಕೆಲಸದಲ್ಲಿ ನನ್ನೊಬ್ಬನ ಕುಟುಂಬ ಭವಿಷ್ಯ ಗಟ್ಟಿ ಮಾಡುತ್ತಿದ್ದೆ. ಅದಕ್ಕಿಂತಲೂ ನೂರಾರು, ಸಾವಿರಾರು ಕುಟುಂಬಗಳ ಭವಿಷ್ಯ ಭದ್ರವಾಗಿಸಬಲ್ಲ ಈ ಕೆಲಸ ಖುಷಿ ಕೊಡುತ್ತಿದೆ’ ಎನ್ನುತ್ತಾರೆ ಶಿಂಧೆ.

ಹಳ್ಳಿಮೂಲೆಯ ಈ ಕುಗ್ರಾಮಗಳ ಹಲವು ಮಂದಿಗೀಗ ‘ಗುಡ್ಡದ ಮೇಲ್ತುದಿಯಿಂದ ಕೆಲಸ ಮಾಡುತ್ತಾ ಕೊಳ್ಳದ ವರೆಗೆ ಬರಬೇಕು’ (ರಿಡ್ಜ್ ಟು ವ್ಯಾಲೀಸ್), ಓಡುವ ನೀರು ನಡೆಯುವಂತೆ ಮಾಡಬೇಕು ಎಂಬಿತ್ಯಾದಿ ಜಲಾನಯನ ಅಭಿವೃದ್ಧಿಯ ಸುವರ್ಣ ನಿಯಮಗಳು ಬಾಯಿಪಾಠ.

‘ಸತ್ಯಮೇವ ಜಯತೆ ವಾಟರ್ ಕಪ್’ ಗಿಮಿಕ್ ಅಲ್ಲ, ಮನರಂಜನೆಯೂ ಅಲ್ಲ. ‘ಬರವಿಮುಕ್ತ ಮಹಾರಾಷ್ಟ್ರ’ ಕಟ್ಟುವ ಸವಾಲುದಾಯಕ ಕನಸಿನ ಆರಂಭಿಕ ಹೆಜ್ಜೆಗಳಿವು. ಪಾನಿ ಫೌಂಡೇಶನ್

ಈ ಮಹತ್ಕಾರ್ಯಕ್ಕಾಗಿ ಆಯ್ದ ಸಾರಥಿಗಳು ಹಲವರೂ ಹೀಗೆ ಶಿಂಧೆಯವರ ಹಾಗೆ, ವಿಕಾಸರ ಹಾಗೆ, ಶ್ರೀಸಾಮಾನ್ಯರು. ಹೊಸದಾಗಿ ನೀರ ಪಾಠ ಮೈಗೂಡಿಸಿಕೊಂಡವರು. ಹೆಚ್ಚಿನವರು ಪುಸ್ತಕದ ವಿಜ್ಞಾನ ಓದಿರಲಾರರು, ಇಂಗ್ಲಿಷ್ ಮಾತಾಡಲಾರರು.

‘ವೋಟ್ರ್’ - ಪಾನಿ ಫೌಂಡೇಶನಿನ ಜ್ಞಾನದ ಪಾಲುದಾರ ಸಂಸ್ಥೆ.  ಇದು ಇಡೀ ಸ್ಪರ್ಧಾಕ್ಷೇತ್ರಕ್ಕೆ  ನಲುವತ್ತು ಜನ ಆನ್-ಫೀಲ್ಡ್ ತಾಂತ್ರಿಕ ತರಬೇತಿಗಾರರನ್ನು ಒದಗಿಸಿದೆ. ‘ಪಾಣಿಲೋಟ್ ಸೇವಕ್’ ಎಂದೇ ಇವರ ಹೆಸರು. ಇವರೂ ಬರಿಗಾಲ ವೈದ್ಯರಂಥವರು -  ಹಳ್ಳಿಗಳ ಮಾಮೂಲಿ ಮನುಷ್ಯರು.

‘ನಮ್ಮ ಈ ತರಬೇತಿದಾರ, ಸಮನ್ವಯಕಾರರನ್ನು ಕಂಡರೆ ಎಂಜಿನಿಯರುಗಳಲ್ಲ ಎಂದು ನಂಬುವುದು ಕಷ್ಟ’ ಎನ್ನುತ್ತಾರೆ ಪಾನಿ ಫೌಂಡೇಶನ್ ಟ್ರಸ್ಟಿ ಡಾ.ಅವಿನಾಶ್ ಪೋಲ್.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry