ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಪಿಐ ವಿರುದ್ಧ ಜಾಮೀನು ಸಹಿತ ವಾರೆಂಟ್

Last Updated 9 ಮೇ 2017, 19:01 IST
ಅಕ್ಷರ ಗಾತ್ರ

ಬಾಗಲಕೋಟೆ: ಕೇಂದ್ರ ಸಚಿವ ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅವರ ಎಂಜಿನಿಯರಿಂಗ್‌ ಕಾಲೇಜು ಖರೀದಿ ವಿವಾದ ಕುರಿತು ತನಿಖೆ ನಡೆಸಿ ವರದಿ ನೀಡಲು ವಿಳಂಬ ಮಾಡಿದ ಇಲ್ಲಿನ ನಗರ ಠಾಣೆ ಸಿಪಿಐ ಶಿವಶಂಕರ ಗಣಾಚಾರಿ ಅವರ ವಿರುದ್ಧ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯ ಜಾಮೀನು ಸಹಿತ ಬಂಧನಕ್ಕೆ ಮಂಗಳವಾರ ಆದೇಶ ಹೊರಡಿಸಿದೆ.

ನ್ಯಾಯಾಲಯದ ಎದುರು ಬುಧವಾರ ಖುದ್ದು ಹಾಜರಾಗಿ ವರದಿ ಸಲ್ಲಿಸಲು ಗಡುವು ನಿಗದಿಗೊಳಿಸಿದ ನ್ಯಾಯಾಧೀಶರು, ತಪ್ಪಿದಲ್ಲಿ ₹50 ಸಾವಿರ ದಂಡ ಪಾವತಿಸಿ ಜಾಮೀನು ಪಡೆಯಲು ಸೂಚಿಸಿತು.

ಪ್ರಕರಣದ ವಿವರ: ಬೆಂಗಳೂರಿನ ಬಿಡದಿ ಸಮೀಪ ಇರುವ ತೇಜಸ್ವಿನಿ ಒಡೆತನದ ಅಮೃತಾ ಎಂಜಿನಿಯರಿಂಗ್ ಕಾಲೇಜ್ ಅನ್ನು ಇಲ್ಲಿನ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದಿಂದ ಖರೀದಿಸಲು ಮುಂದಾಗಿದ್ದನ್ನು ಪ್ರಶ್ನಿಸಿ ಸಂಘದ ಆಜೀವ ಸದಸ್ಯ ಮಲ್ಲಣ್ಣ ಜಿಗಳೂರ ಅವರು 2014ರ ಜೂನ್ 5ರಂದು ಜಿಲ್ಲಾ ಪ್ರಧಾನ ಸಿವಿಲ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದರು.

‘ಅಮೃತ ಎಂಜಿನಿಯರಿಂಗ್ ಕಾಲೇಜು ₹24 ಕೋಟಿ ಮೌಲ್ಯ ಹೊಂದಿದ್ದರೂ ಅದನ್ನು ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ₹50 ಕೋಟಿ ಕೊಟ್ಟು ಖರೀದಿಸುತ್ತಿದೆ. ವಾಸ್ತವ ದರಕ್ಕಿಂತ ಹೆಚ್ಚಿನ ಬೆಲೆಗೆ ಖರೀದಿಸಲಾಗುತ್ತಿದೆ’ ಎಂದು ದೂರಿನಲ್ಲಿ ಆರೋಪಿಸಿದ್ದರು.

ದೂರುದಾರರ ಆರೋಪದ ಬಗ್ಗೆ ತನಿಖೆ ನಡೆಸಿ ವರದಿ ನೀಡಲು ನ್ಯಾಯಾಲಯ ನಗರ ಠಾಣೆ ಸರ್ಕಲ್‌ ಇನ್‌ಸ್ಪೆಕ್ಟರ್‌ಗೆ ಸೂಚಿಸಿತ್ತು. ಆದರೆ ನಿಗದಿತ ಗಡುವಿನೊಳಗೆ ಅವರು ವರದಿ ಸಲ್ಲಿಸದ ಕಾರಣ ನ್ಯಾಯಾಲಯ ಈಗ ವಾರೆಂಟ್ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT