ಮೆಟ್ರೊ ನಿಲ್ದಾಣದಲ್ಲಿ ಮಾವು ಮೇಳಕ್ಕೆ ಚಾಲನೆ

ಬೆಂಗಳೂರು: ಕಾರ್ಬೈಡ್ ಮುಕ್ತ ಮಾವಿನ ಹಣ್ಣುಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶದಿಂದ ‘ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ’ ನಾಯಂಡಹಳ್ಳಿ ಮೆಟ್ರೊ ನಿಲ್ದಾಣದಲ್ಲಿ ಬುಧವಾರ ‘ಮಾವು ಮೇಳ’ಕ್ಕೆ ಚಾಲನೆ ನೀಡಿತು.
‘ಮೆಟ್ರೊ ನಿಲ್ದಾಣದಲ್ಲಿ ಇದೇ ಮೊದಲ ಬಾರಿ ಮಾವು ಮಾರಾಟ ಆಯೋಜಿಸಿದ್ದೇವೆ. ಇಲ್ಲಿ ಇದು ಯಶಸ್ವಿಯಾದರೆ, ಇತರೆ ಮೆಟ್ರೊ ನಿಲ್ದಾಣಗಳಲ್ಲೂ ಪ್ರಾರಂಭಿಸುತ್ತೇವೆ’ ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಕದಿರೇಗೌಡ ತಿಳಿಸಿದರು.
‘ಐದು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ಗ್ರಾಹಕರು ರೈತರಿಂದಲೇ ನೇರವಾಗಿ ಮಾವು ಖರೀದಿಸಬಹುದು. ಶೇ 10ರಷ್ಟು ರಿಯಾಯಿತಿ ದರ ನಿಗದಿ ಪಡಿಸಿದ್ದೇವೆ’ ಎಂದು ಹೇಳಿದರು.
ಲಾಲ್‌ಬಾಗ್‌ನಲ್ಲಿ ನಡೆಯುತ್ತಿರುವ ಮಾವು–ಹಲಸು ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಒಂದು ವಾರದಲ್ಲಿ 105 ಟನ್ ಮಾವು ಮಾರಾಟವಾಗಿದೆ. ಭಾನುವಾರ ಒಂದೇ ದಿನ 70 ಟನ್ ಮಾವು ಮಾರಾಟವಾಗಿತ್ತು.
‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚು ಮಾವು ಮಾರಾಟವಾಗಿದೆ. ಕಡಿಮೆ ಬೆಲೆಯಲ್ಲಿ ಉತ್ತಮ ಹಣ್ಣುಗಳು ದೊರೆಯುತ್ತಿರುವುದೇ ಇದಕ್ಕೆ ಕಾರಣ. ಆದರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಉತ್ತಮ ಪ್ರತಿಕ್ರಿಯೆ ಇಲ್ಲ. ಈ ಬಗ್ಗೆ ರೈತರು ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸುತ್ತೇವೆ’ ಎಂದರು.
‘ಸಹಕಾರನಗರದ ಬಿಬಿಎಂಪಿ ಆವರಣದಲ್ಲಿ ಶುಕ್ರವಾರದಿಂದ ಮೇಳ ಆರಂಭಿಸುತ್ತೇವೆ. ಅಲ್ಲದೆ, ಇದೇ ಶನಿವಾರ ಮತ್ತು ಭಾನುವಾರ ಕನಕಪುರ, ಚಿಕ್ಕಬಳ್ಳಾಪುರಕ್ಕೆ ‘ಮ್ಯಾಂಗೊ ಪಿಕ್ಕಿಂಗ್’ ಪ್ರವಾಸ ಆಯೋಜಿಸಿದ್ದೇವೆ’ ಎಂದು ಮಾಹಿತಿ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.