ಹಳೆ ನೌಕೆಗೆ ಭಾರಿ ಹಣ ಕೊಡಲು ಒಪ್ಪಿದ್ದೇಕೆ

7
ರಷ್ಯಾದ ಗೋರ್ಶ್‌ಕೋವ್ ಖರೀದಿಯಲ್ಲಿ ಬೆಲೆ ಪರಿಷ್ಕರಣೆ; ಕಾರಣ ಬಹಿರಂಗಪಡಿಸಲು ಮಾಹಿತಿ ಆಯೋಗ ಸೂಚನೆ

ಹಳೆ ನೌಕೆಗೆ ಭಾರಿ ಹಣ ಕೊಡಲು ಒಪ್ಪಿದ್ದೇಕೆ

Published:
Updated:
ಹಳೆ ನೌಕೆಗೆ ಭಾರಿ ಹಣ ಕೊಡಲು ಒಪ್ಪಿದ್ದೇಕೆ

ನವದೆಹಲಿ: ‘ನವೀಕೃತ ಯುದ್ಧ ವಿಮಾನ ವಾಹಕ ನೌಕೆ ಅಡ್ಮಿರಲ್ ಗೋರ್ಶ್‌ಕೋವ್ ಖರೀದಿಗೆ  ಮೊದಲೇ ನಿಗದಿಪಡಿಸಿದ್ದಕ್ಕಿಂತಲೂ ಹೆಚ್ಚುವರಿ ಹಣ ನೀಡಬೇಕು ಎಂಬ ರಷ್ಯಾದ ಬೇಡಿಕೆಗೆ ಒಪ್ಪಿಗೆ ಸೂಚಿಸಿದ್ದು ಏಕೆ ಎಂಬುದನ್ನು ಬಹಿರಂಗಪಡಿಸಿ’ ಎಂದು ಕೇಂದ್ರ ಮಾಹಿತಿ ಆಯೋಗವು ನೌಕಾಪಡೆಗೆ ಸೂಚನೆ ನೀಡಿದೆ.

 

ಜತೆಗೆ, ‘ಹೊಸ ನೌಕೆಯ ಬದಲಿಗೆ ಹಳೆಯ ನೌಕೆ ಖರೀದಿಸಲು ನಿರ್ಧರಿಸಿದ್ದು ಏಕೆ ಎಂಬುದನ್ನೂ ಬಹಿರಂಗಪಡಿಸಿ’ ಎಂದು ಆಯೋಗ, ರಕ್ಷಣಾ ಸಚಿವಾಲಯಕ್ಕೂ ನಿರ್ದೇಶನ ನೀಡಿದೆ.

 

ಈ ವಿಚಾರಗಳಿಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಗಳಿಗೆ (ಆರ್‌ಟಿಐ) ನೌಕಾಪಡೆ ಮತ್ತು ರಕ್ಷಣಾ ಸಚಿವಾಲಯ ಉತ್ತರಿಸಿರಲಿಲ್ಲ. ‘ದೇಶದ ಭದ್ರತೆ ದೃಷ್ಟಿಯಿಂದ ಈ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ’ ಎಂದು ಸಮಜಾಯಿಷಿ ನೀಡಿದ್ದವು.

 

‘ಈ ಬಗ್ಗೆ ಮಾಹಿತಿ ನೀಡಿ, ಎಂದು ಆಯೋಗ ನೌಕಾಪಡೆಗೆ ಈ ಹಿಂದೆಯೇ ಪತ್ರ ಬರೆದಿತ್ತು. ಆದರೆ ನೌಕಾಪಡೆ, ‘ನಮ್ಮಲ್ಲಿ ಯಾವುದೇ ಮಾಹಿತಿ ಇಲ್ಲ. ರಕ್ಷಣಾ ಸಚಿವಾಲಯವನ್ನು ಕೇಳಿ’ ಎಂದು ಹೇಳಿತ್ತು.

 

ಆದರೆ, ‘ಎಲ್ಲಾ ಕಡತಗಳೂ ನೌಕಾಪಡೆ ಬಳಿಯೇ ಇವೆ’ ಎಂದು ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿತ್ತು. ಈ ವಿಚಾರದಲ್ಲಿ ನೌಕಾಪಡೆ, ಆಯೋಗದ ಹಾದಿತಪ್ಪಿಸಲು ಪ್ರಯತ್ನಿಸಿದೆ ಎಂಬುದು ಸಾಬೀತಾಗಿದೆ. ಹೀಗಾಗಿ ಆಯೋಗ ಈ ಕ್ರಮ ತೆಗೆದುಕೊಂಡಿದೆ’ ಎಂದು ಮೂಲಗಳು ಹೇಳಿವೆ.

 

ಭಾರತೀಯ ನೌಕಾಪಡೆ ಸೇವೆಗೆ ನಿಯೋಜನೆ ನಂತರ ನೌಕೆಗೆ ಐಎನ್‌ಎಸ್‌ ವಿಕ್ರಮಾದಿತ್ಯ ಎಂದು ಮರುನಾಮಕರಣ ಮಾಡಲಾಗಿತ್ತು.

****

ಆಯೋಗ ಕೇಳಿದ ಇತರ ಮಾಹಿತಿಗಳು

* ನೌಕೆ ಖರೀದಿಸಲು ಹೆಚ್ಚುವರಿ ಹಣ  ನೀಡಬೇಕಾಗುತ್ತದೆ ಎಂದು ರಷ್ಯಾ ಬೇಡಿಕೆ ಸಲ್ಲಿಸಿದ್ದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆ

* ನವೀಕರಣ, ಮಾರ್ಪಾಡು ಸೇರಿ ನೌಕೆಗೆ ತಗುಲಿದ ಒಟ್ಟು ವೆಚ್ಚವೆಷ್ಟು?

* ರಷ್ಯಾಕ್ಕೆ, ಭಾರತ ಯಾವ ದಿನಾಂಕಗಳಲ್ಲಿ ಎಷ್ಟು ಹಣ ಪಾವತಿ ಮಾಡಿದೆ ಎಂಬ ವಿವರ

 


****

ನೌಕೆಯ ತಾಂತ್ರಿಕ ವಿವರ

44,500 ಟನ್ ತೂಕ

284 ಮೀಟರ್ ಉದ್ದ

60 ಮೀಟರ್ ಎತ್ತರ

34 ಯುದ್ಧ ವಿಮಾನ ಮತ್ತು ಹೆಲಿಕಾಪ್ಟರ್‌ಗಳನ್ನು ಹೊರುವ ಸಾಮರ್ಥ್ಯ

1,600 ಸಿಬ್ಬಂದಿ ಸಂಖ್ಯೆ

22 ನೌಕೆಯ ಅಂತಸ್ತುಗಳು

13,000 ಕಿ.ಮೀ.ಒಮ್ಮೆ ಇಂಧನ ಭರ್ತಿಯಾದರೆ ನೌಕೆ ಕ್ರಮಿಸುವ ದೂರ

****

* 2013ರ ನವೆಂಬರ್‌ನಲ್ಲಿ ಭಾರತೀಯ ನೌಕಾಪಡೆ ಸೇವೆಗೆ

* ಐಎನ್‌ಎಸ್‌ ವಿಕ್ರಮಾದಿತ್ಯ ಎಂದು ಮರುನಾಮಕರಣ

****

ರಾಷ್ಟ್ರೀಯ ಭದ್ರತೆಯ ನೆಪದಲ್ಲಿ ನೌಕಾಪಡೆ, ರಕ್ಷಣಾ ಸಚಿವಾಲಯಗಳು ಮುಚ್ಚಿಟ್ಟಿರುವ ವಿಷಯಗಳು ಸಾರ್ವಜನಿಕ  ಹಿತಾಸಕ್ತಿಯ ಕಾರಣಕ್ಕೆ ಬಹಿರಂಗವಾಗಬೇಕಿದೆ

ಅಮಿತಾವ್ ಭಟ್ಟಾಚಾರ್ಯ, ಮಾಹಿತಿ ಆಯುಕ್ತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry