ನಿದಿರೆಯ ಪರಿ...

7

ನಿದಿರೆಯ ಪರಿ...

Published:
Updated:
ನಿದಿರೆಯ ಪರಿ...

ಒಬ್ಬ ವ್ಯಕ್ತಿಗೆ ದಿನಕ್ಕೆ 8 ಗಂಟೆ ನಿದ್ದೆ ಅವಶ್ಯಕ. ಅಂದರೆ, ದಿನದ 33% ಸಮಯ ನಿದ್ದೆಗೆ ಮೀಸಲಿಡಬಹುದು.

*ಫ್ಲೆಮಿಂಗೊ ಒಂಟಿ ಕಾಲಿನಲ್ಲೇ ನಿಂತು ನಿದ್ರಿಸಬಲ್ಲದು. ಜೊತೆಗೆ ಹಿಂಬದಿಗೆ ತಲೆಯನ್ನು ಅವಿತಿಟ್ಟು ನಿದ್ರಿಸುತ್ತವೆ. ಇದೇ ಜಾತಿಗೆ ಸೇರಿದ ಇನ್ನಿತರ ಹಕ್ಕಿಗಳು ಕೊಕ್ಕನ್ನು ಎದೆಯ ಭಾಗಕ್ಕೆ ಅವಿತಿಟ್ಟುಕೊಂಡು ನಿದ್ರಿಸುತ್ತವೆ.

*ಜಿರಾಫೆ ದಿನಕ್ಕೆ ಕೇವಲ 2 ಗಂಟೆ ನಿದ್ರಿಸುವುದು. ಅಂದರೆ ದಿನದ 8% ಮಾತ್ರ ನಿದ್ದೆಗೆ ವ್ಯಯಿಸುತ್ತದೆ. ಜಿರಾಫೆಯ ಮತ್ತೂ ಒಂದು ವಿಶೇಷವೆಂದರೆ, ಅವು ನಿದ್ದೆ ಮಾಡದೇ ವಾರಾನುಗಟ್ಟಲೆ ಬೇಕಾದರೂ ಇರಬಲ್ಲವು.

*ನಾಯಿಯು ದಿನದಲ್ಲಿ 9 ರಿಂದ 14 ಗಂಟೆಗಳ ಅವಧಿ ನಿದ್ರಿಸುತ್ತದೆ. ಆದರೆ ಆ ನಾಯಿ ಯಾವ ತಳಿ ಎಂಬುದರ ಮೇಲೆ ನಿದ್ದೆಯ ಪ್ರಮಾಣವೂ ಅವಲಂಬಿತವಾಗಿರುತ್ತದೆ. ಈ ಅವಧಿಯಲ್ಲೇ ಹಲವು ಬಾರಿ ಸಣ್ಣ ನಿದ್ದೆಯನ್ನು ಮಾಡಿ, ಎರಡು ಬಾರಿ ದೀರ್ಘ ನಿದ್ದೆ ಮುಗಿಸುತ್ತವೆ.

*ಸ್ವಿಫ್ಟ್‌ ಹಕ್ಕಿಗೆ ಹಾರುತ್ತಲೇ ನಿದ್ದೆ ಮಾಡುವ ಛಾತಿ ಇದೆ. ಆಕಾಶದಲ್ಲಿ ಬಲು ಮೇಲೆ ಹಾರುವಾಗ ನಿದ್ದೆ ಮಾಡುತ್ತಾ ನಿರಾಳವಾಗಿ ದಾರಿ ಸಾಗಿಸಬಲ್ಲವು. ಕೆಲವು ಹಕ್ಕಿಗಳು ಒಂದು ಕಣ್ಣನ್ನು ತೆರೆದುಕೊಂಡೇ ನಿದ್ರಿಸುತ್ತವೆ. ಏಕೆಂದರೆ, ತಮ್ಮ ಬೇಟೆಯನ್ನು ತಪ್ಪಿಸದೇ ಇರಲು, ಹಾಗೆಯೇ ಇನ್ನೊಂದು ಪ್ರಾಣಿಗೆ ತಾನು ಬೇಟೆ ಆಗದೇ ಇರಲು.

*ಹಸು ನಿದ್ರಿಸುವುದು ದಿನದಲ್ಲಿ 4 ಗಂಟೆಗಳ ಕಾಲ. ಆದರೆ ಅವು ಒಂಟಿಯಾಗಿ ನಿದ್ರಿಸಲು ಇಷ್ಟಪಡುವುದಿಲ್ಲ. ತನ್ನ ಮರಿಗಳೊಂದಿಗೆ ನಿದ್ರಿಸುವುದೇ ಅದಕ್ಕೆ ಬಲು ಇಷ್ಟವಂತೆ. ಆದ್ದರಿಂದ ಕುಟುಂಬ ಇದ್ದರೆ ಮಾತ್ರ ಆರಾಮಾಗಿ ನಿದ್ದೆಗೆ ಜಾರುತ್ತವೆ ಅವು.

*ಬಾವಲಿಗಳದ್ದು ನಿದ್ದೆ ಪಾಲು ಹೆಚ್ಚು. ಅವು ದಿನದ 20 ಗಂಟೆ ಮಲಗುತ್ತವೆ. 4 ಗಂಟೆ ಮಾತ್ರ ಎಚ್ಚರವಾಗಿ ಆಹಾರ ಹುಡುಕುವ ಕೆಲಸದಲ್ಲಿ ನಿರತವಾಗಿರುತ್ತವೆ.

*ಎಲ್ಲರೂ ತಮ್ಮ ಕುಟುಂಬದ ರಕ್ಷಣೆಗೆ ಆದ್ಯತೆ ನೀಡುತ್ತಾರೆ. ಈ ವಿಷಯದಲ್ಲಿ ಬಾತುಕೋಳಿ ಮತ್ತೂ ಹೆಚ್ಚು. ಅದು ನಿದ್ದೆಯಲ್ಲೂ ಎಚ್ಚರ ತಪ್ಪುವುದಿಲ್ಲ. ಬಾತುಕೋಳಿಗಳು ಸಾಲಿನಲ್ಲಿ ನಿದ್ರಿಸುತ್ತವೆ. ಸಾಲಿನ ಕೊನೆಯ ಕೋಳಿ ಒಂದು ಕಣ್ಣು ತೆರೆದು ನಿದ್ರಿಸಿದರೆ, ಮಧ್ಯದಲ್ಲಿರುವ ಬಾತುಕೋಳಿಗಳು ಸುರಕ್ಷಿತವಾಗಿ ನಿದ್ರಿಸುತ್ತವೆ.

*ಕುದುರೆ ಮಲಗುವುದು ಹಗಲಿನ ಹೊತ್ತು, ದಿನಕ್ಕೆ 3 ಗಂಟೆ ಮಾತ್ರ. ಅಂದರೆ 12% ನಿದ್ದೆ ಮಾಡಿದರೆ, 88% ಸಮಯ ಅದು ನಿಂತೇ ಕಳೆಯುತ್ತದೆ.

*ಗಿನ್ನಿ ಬಬೂನ್‌ ಮರದ ಮೇಲೆ ತನ್ನ ಹಿಂಗಾಲಿನ ಮೇಲೆ ಕುಳಿತು ನಿದ್ರಿಸುತ್ತದೆ. ಇದು ಅದಕ್ಕೆ ತುರ್ತು ಸಮಯದಲ್ಲಿ ಎಚ್ಚರಗೊಳ್ಳಲು ನೆರವಾಗುವ ತಂತ್ರ. ಜೊತೆಗೆ ತನ್ನ ಶತ್ರುವನ್ನು ಹೆದರಿಸಲು ಆಗಾಗ್ಗೆ ಜೋರಾಗಿ ಆಕಳಿಸುತ್ತಲೂ ಇರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry