ಬತ್ತಿದ ಕೊಳವೆಬಾವಿ; ತೋಟಗಾರಿಕೆ ಬೆಳೆ ನಾಶ

7
ಕೃಪೆ ತೋರದ ಮಳೆರಾಯ; ರೊಕ್ಕ ಕೊಟ್ಟರೂ ಸಿಗದ ಟ್ಯಾಂಕರ್‌ ನೀರು, ದಿಕ್ಕು ತೋಚದೆ ಕೈಹೊತ್ತು ಕುಳಿತ ರೈತ

ಬತ್ತಿದ ಕೊಳವೆಬಾವಿ; ತೋಟಗಾರಿಕೆ ಬೆಳೆ ನಾಶ

Published:
Updated:
ಬತ್ತಿದ ಕೊಳವೆಬಾವಿ; ತೋಟಗಾರಿಕೆ ಬೆಳೆ ನಾಶ

ವಿಜಯಪುರ: ಸತತ ಬರಕ್ಕೆ ತುತ್ತಾಗುತ್ತಿರುವ ಜಿಲ್ಲೆಯಲ್ಲಿ ಅಂತರ್ಜಲ ಕುಸಿದಿದೆ. ಕೊಳವೆಬಾವಿಗಳು ಬತ್ತುತ್ತಿದ್ದು, ತೋಟಗಾರಿಕೆ ಬೆಳೆ ದ್ರಾಕ್ಷಿ, ದಾಳಿಂಬೆ, ಬಾಳೆ, ನಿಂಬೆ ತೋಟಗಳು ಒಣಗಿವೆ.ವಿಜಯಪುರ, ಇಂಡಿ, ಸಿಂದಗಿ ತಾಲ್ಲೂಕಿನಲ್ಲಿ ಕೊಳವೆಬಾವಿ ಬತ್ತುತ್ತಿರುವುದರಿಂದ ತೋಟಗಾರಿಕೆ ಬೆಳೆ ಹೆಚ್ಚಿನ ಪ್ರಮಾಣದಲ್ಲಿ ಒಣಗಿದ್ದು, ಬಸವನಬಾಗೇವಾಡಿ, ಮುದ್ದೇಬಿಹಾಳ ತಾಲ್ಲೂಕು ವ್ಯಾಪ್ತಿಯಲ್ಲಿ ಈ ಪ್ರಮಾಣ ಕೊಂಚ ಕಡಿಮೆಯಿದೆ.ಇಂಡಿ ತಾಲ್ಲೂಕಿನ ವ್ಯಾಪ್ತಿಯಲ್ಲಿ ಇದುವರೆಗೂ ಒಮ್ಮೆಯೂ ಮಳೆ ಸುರಿಯ ದಿದ್ದುದರಿಂದ ಹಾನಿಯ ಪ್ರಮಾಣ ಹೆಚ್ಚಿದೆ. ಕಪನಿಂಬರಗಿ, ಹಳಗುಣಕಿ, ಬಬಲಾದಿ, ಹೊರ್ತಿ ಸುತ್ತಮುತ್ತ ದ್ರಾಕ್ಷಿ ತೋಟ, ಅಥರ್ಗಾ, ಹಿರೇರೂಗಿ, ತಡವಲಗಾ ಭಾಗದಲ್ಲಿ ನಿಂಬೆ ತೋಟ ಸಂಪೂರ್ಣವಾಗಿ ಒಣಗಿದ ದೃಶ್ಯಗಳು ಕಾಣುತ್ತಿವೆ.ಹೆಚ್ಚಿದ ಸಂಕಷ್ಟ: ‘ಒಕ್ಕಲುತನದ ಸಹವಾಸವೇ ಸಾಕಾಗಿದೆ. ಐದು ಎಕರೆಯಲ್ಲಿ ಬೆಳೆದು ನಿಂತಿದ್ದ ದ್ರಾಕ್ಷಿ ತೋಟ ನೀರಿಲ್ಲದೆ ಸಂಪೂರ್ಣ ಒಣಗಿದೆ. ಹಿಂದಿನ ಬೇಸಿಗೆಯಲ್ಲಿ ಎರಡು ತಿಂಗಳು ಟ್ಯಾಂಕರ್‌ ಮೂಲಕ ನೀರು ಹಾಯಿಸಿ ಗಿಡದ ಜೀವ ಕಾಪಾಡಿಕೊಂಡಿದ್ದೆ. ಇದಕ್ಕಾಗಿ ಸಾಲ ಮಾಡಿ ₹ 3 ಲಕ್ಷ ವ್ಯಯಿಸಿದ್ದೆ. ಮೂರ್ನಾಲ್ಕು ಕೊಳವೆ ಬಾವಿ ಕೊರೆಸಿದರೂ ನೀರು ಸಿಕ್ಕಿರಲಿಲ್ಲ.ಈ ವರ್ಷವೂ ಗಿಡ ಬದುಕಿಸಿಕೊಳ್ಳಬೇಕು ಎಂದು ಹರಸಾಹಸ ನಡೆಸಿದೆ. ಸುತ್ತಮುತ್ತ ಎಲ್ಲೂ ನೀರು ಸಿಗಲಿಲ್ಲ. ಒಂಬತ್ತು ವರ್ಷ ಪ್ರಾಯದ ಗಿಡವನ್ನು ಕಿತ್ತು ಹಾಕಬೇಕಿದೆ’ ಎಂದು ದಾದಾಗೌಡ ಖಾನಾಪುರ ಹತಾಶೆಯಿಂದ ಹೇಳಿದರು.‘ಐದು ದಶಕದಿಂದ ಕಬ್ಬು ಬೆಳೆಯುತ್ತಿದ್ದೆವು. ನಮ್ಮದೇ ಬೆಲ್ಲದ ಗಾಣವಿತ್ತು. ನೆಮ್ಮದಿಯ ಬದುಕು ಸಿಕ್ಕಿತ್ತು. ಮಳೆ ಕಡಿಮೆಯಾಗಿದ್ದರಿಂದ ಕಬ್ಬು ಬಿಟ್ಟು ದ್ರಾಕ್ಷಿ ಹಚ್ಚಿದೆವು. ಇದುವರೆಗೂ ಒಮ್ಮೆಯೂ ಆದಾಯ ಸಿಕ್ಕಿಲ್ಲ. ಐದು ಫಸಲು ಕೈಗೆ ಸಿಕ್ಕಿದೆ. ಖರ್ಚು ಮಾತ್ರ ಮರಳಿಲ್ಲ. ಉಲ್ಟಾ ₹ 20 ಲಕ್ಷ ಸಾಲವಾಗಿದೆ.ಎರಡು ವರ್ಷದಿಂದ ನೀರು ಇಲ್ಲದೆ ಉತ್ಪನ್ನ ಸಿಕ್ಕಿಲ್ಲ. ಕೃತ್ತಿಕಾ ಮಳೆ ಎಲ್ಲೆಡೆ ಆಗಿದೆ. ಇದೀಗ ರೋಹಿಣಿ ಆರಂಭಗೊಂಡರೂ ಒಂದು ಹನಿಯೂ ಮಳೆಯಾಗಿಲ್ಲ. ಇದೇ ಸ್ಥಿತಿ ಮುಂದುವರೆದರೆ ದಿನ ಕಳೆಯೋದು ಕಷ್ಟವಾಗುತ್ತದೆ. ದೊಡ್ಡ ಕುಟುಂಬ ತೂಗಿಸುವುದು ಹೇಗೆ ಎಂಬುದು ತೋಚದಾಗಿದೆ. ಇದರ ನಡುವೆ ಬ್ಯಾಂಕ್‌ನವರ ಕಾಟವೂ ಹೆಚ್ಚಿದೆ’ ಎಂದು ದಾದಾಗೌಡ ಹೇಳಿದರು.‘ಎಂಟು ವರ್ಷ ನೀರು ಕೊಂಡು ಬೆಳೆ ಉಳಿಸಿಕೊಂಡೆ. ಎರಡು ಎಕರೆಯಲ್ಲಿದ್ದ ದ್ರಾಕ್ಷಿ ಇದೀಗ ಅರ್ಧ ಎಕರೆಗೆ ಬಂದಿದೆ. ರೊಕ್ಕ ಕೊಟ್ಟರೂ ನೀರು ಸಿಗ್ತಿಲ್ಲ. ದ್ರಾಕ್ಷಿಯಿಂದ ನಮ್ಮ ಬದುಕು ಸಾಗದಾಗಿದೆ’ ಎಂದು ಭೀಮಾಶಂಕರ ಖಾನಾಪುರ ಅಳಲು ತೋಡಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry