ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರು ಬಿತ್ತನೆ ಬೀಜಕ್ಕೆ ಹೆಚ್ಚಿನ ಬೇಡಿಕೆ

ಆರಂಭವಾದ ಮುಂಗಾರು ಹಂಗಾಮು: ಕೃಷಿ ಚಟುವಟಿಕೆ ಚುರುಕು– ಅಗತ್ಯಬಿತ್ತನೆ ಬೀಜ ಹಾಗೂ ಗೊಬ್ಬರ ದಾಸ್ತಾನು
Last Updated 1 ಜೂನ್ 2017, 9:43 IST
ಅಕ್ಷರ ಗಾತ್ರ

ಗದಗ: ಪ್ರಸಕ್ತ ಮುಂಗಾರು ಹಂಗಾಮಿ ನಲ್ಲಿ  ಜಿಲ್ಲೆಯಲ್ಲಿ ಒಟ್ಟು 2.39 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿಯನ್ನು ಕೃಷಿ ಇಲಾಖೆ ಹಾಕಿಕೊಂಡಿದೆ. ಇದಕ್ಕೆ ಬೇಕಾದ ಅಗತ್ಯ ಬಿತ್ತನೆ ಬೀಜ, ಗೊಬ್ಬರ ದಾಸ್ತಾನನ್ನೂ ಮಾಡಿಕೊಂಡಿದೆ. 

ಹೆಸರು, ತೊಗರಿ, ಮೆಕ್ಕೆಜೋಳ, ಶೇಂಗಾ, ಬಿಟಿ ಹತ್ತಿ ಜಿಲ್ಲೆಯ ಪ್ರಮುಖ ಮುಂಗಾರು ಬೆಳೆ ಗಳು. ಈಗಾಗಲೇ ಕೆಲವೆಡೆ ಹೆಸರು ಮತ್ತು ಹೈಬ್ರಿಡ್‌ ಜೋಳದ ಬಿತ್ತನೆ ಪ್ರಾರಂಭವಾಗಿದೆ. ಸಮೀಪದ ಸಹಕಾರಿ ಸಂಘ, ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರು ಬೀಜ, ಗೊಬ್ಬರ ಖರೀದಿಗೆ ವಿಚಾರಿಸುತ್ತಿದ್ದಾರೆ.

22,037 ಕ್ವಿಂಟಲ್‌ ಬೀಜಕ್ಕೆ ಬೇಡಿಕೆ: ಕಳೆದೆರಡು ವರ್ಷ ಜಿಲ್ಲೆಯಲ್ಲಿ ನಿರೀಕ್ಷಿತ ಪ್ರಮಾಣದ ಮಳೆ ಲಭಿಸಿರಲಿಲ್ಲ. ಹೀಗಾಗಿ ನಿರೀಕ್ಷಿತ ಪ್ರಮಾಣದ ಪ್ರಮಾಣದ ಬಿತ್ತನೆ ಆಗಿರಲಿಲ್ಲ. ಕಡಲೆ ಬಿತ್ತನೆ ಬೀಜ ಹೊರತು ಪಡಿಸಿದರೆ ಉಳಿದ ಬೆಳೆಗಳ ಬಿತ್ತನೆ ಬೀಜ ಮತ್ತು ಗೊಬ್ಬರ ಸಮಸ್ಯೆ ಕಾಣಿಸಿಕೊಂಡಿ ರಲಿಲ್ಲ. ಈ ಬಾರಿ ಮುಂಗಾರು ಪೂರ್ವ ಉತ್ತಮ ಮಳೆಯಾಗಿದೆ.

ಹೀಗಾಗಿ, ದ್ವಿದಳ ಧಾನ್ಯ ಬಿತ್ತನೆ ಪ್ರದೇಶ ಹೆಚ್ಚುವ  ನಿರೀಕ್ಷೆ ಇದೆ. ಈ ಬಾರಿ ಒಟ್ಟು 78 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಆಗುವ ಗುರಿಯನ್ನು ಕೃಷಿ ಇಲಾಖೆ ನಿಗದಿ ಪಡಿಸಿದೆ. ಕಳೆದ ವರ್ಷ ಒಟ್ಟು 72,987 ಹೆಕ್ಟೇರ್‌ ಪ್ರದೇಶದಲ್ಲಿ ಹೆಸರು ಬಿತ್ತನೆ ಆಗಿತ್ತು. ಆದರೆ, ಮಳೆ ಕೊರತೆ, ಹಳದಿ ರೋಗದಿಂದ ಇಳುವರಿ ಗಣನೀಯವಾಗಿ ಕುಸಿದು ರೈತರಿಗೆ ನಷ್ಟವಾಗಿತ್ತು.

ರೈತರಿಗೆ ಅಲ್ಪಾವಧಿಯಲ್ಲಿ ಹೆಚ್ಚಿನ ಲಾಭ ತಂದು ಕೊಡುವ ಹೆಸರು ಬಿತ್ತನೆ ಈ ಬಾರಿ ಹೆಚ್ಚುವ ನಿರೀಕ್ಷೆ ಇದೆ. ಒಟ್ಟು 1965 ಕ್ವಿಂಟಲ್‌ ಹೆಸರು ಬಿತ್ತನೆ ಬೀಜದ ಬೇಡಿಕೆ ಇದ್ದು, ಸದ್ಯ 1200 ಕ್ವಿಂಟಲ್‌ ಬೀಜದ ದಾಸ್ತಾನು ಕೃಷಿ ಇಲಾಖೆ ಬಳಿ ಇದೆ.

ಒಟ್ಟು 8 ಸಾವಿರ ಹೆಕ್ಟೇರ್‌ ಪ್ರದೇಶ ದಲ್ಲಿ ಹೈಬ್ರಿಡ್‌ ಜೋಳ ಬಿತ್ತನೆ ಗುರಿ ಇದ್ದು ಇದಕ್ಕೆ 600 ಕ್ವಿಂಟಲ್‌ ಬೀಜದ ಬೇಡಿಕೆ ಇದೆ. ಸದ್ಯ 80 ಕ್ವಿಂಟಲ್‌ ಬೀಜದ ದಾಸ್ತಾನು ಇದೆ. 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗುವ ನಿರೀಕ್ಷೆ ಇದ್ದು, 96 ಕ್ವಿಂಟಲ್‌ ಬೀಜದ ಬೇಡಿಕೆ ಇದೆ. ಸದ್ಯ 60 ಕ್ವಿಂಟಲ್‌ ತೊಗರಿ ಬೀಜದ ದಾಸ್ತಾನು ಇದೆ.  400 ಕ್ವಿಂಟಲ್‌ನಷ್ಟು ಶೇಂಗಾ ಬಿತ್ತನೆ ಬೀಜದ ದಾಸ್ತಾನು ಇದ್ದು, ಬೇಡಿಕೆ 8820 ಕ್ವಿಂಟಲ್‌ನಷ್ಟಿದೆ.

‘ಜಿಲ್ಲೆಯಲ್ಲಿ ಅಲ್ಲಲ್ಲಿ ಬಿತ್ತನೆ  ಪ್ರಾರಂಭ ವಾಗಿದೆ. ಮುಂಗಾರು ಹಂಗಾಮಿನ ಪ್ರಮುಖ ಬೆಳೆಯಾದ ಹೆಸರು ಬಿತ್ತನೆ ಬೀಜಕ್ಕೆ ಯಾವುದೇ ಕೊರತೆಯಾಗದಂತೆ ದಾಸ್ತಾನು ಮಾಡಿಕೊಂಡಿದ್ದೇವೆ. ಬೀಜ ನಿಗಮವು, ನೇರವಾಗಿ ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಪೂರೈಕೆ ಮಾಡಲಿದೆ. ಈ ಬಾರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕವೂ  ರೈತರಿಗೆ ಬಿತ್ತನೆ ಬೀಜ ಪೂರೈಕೆ ಆಗಲಿದೆ’ ಎಂದು ಕೃಷಿ ಇಲಾಖೆಯ ಹಿರಿಯ ಅಧಿ ಕಾರಿ ಎಸ್.ಬಿ. ನೆಗಳೂರು ಮಾಹಿತಿ ನೀಡಿದರು.

‘ರಾಜ್ಯ ಬೀಜ ನಿಗಮವು ಶೀಘ್ರದಲ್ಲೇ ಜಿಲ್ಲೆಯ 11 ರೈತ ಸಂಪರ್ಕ ಕೇಂದ್ರಗಳಿಗೆ ಬಿತ್ತನೆ ಬೀಜ ಪೂರೈಕೆ ಮಾಡಲಿದೆ. ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಹೆಸರು ಬಿತ್ತನೆ ಪ್ರದೇಶ ಹೆಚ್ಚುತ್ತಿದೆ.  70 ರಿಂದ 75 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗುವ ಹೆಸರಿನ ಬೀಜಕ್ಕೆ ಹೆಚ್ಚು ಬೇಡಿಕೆ ಕಂಡುಬರುತ್ತಿದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು. 

ಹೆಸರು ಬಿತ್ತನೆಯ ನಂತರ ತೊಗರಿ, ಮೆಕ್ಕೆಜೋಳ, ಶೇಂಗಾ ಬೀಜಕ್ಕೆ ಬೇಡಿಕೆ ಹೆಚ್ಚಲಿದೆ. ಈ ಬಾರಿ ಬಿತ್ತನೆ ಬೀಜಕ್ಕೆ ಕೊರತೆಯಾಗದು ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು.

34,950 ಟನ್‌ ಗೊಬ್ಬರಕ್ಕೆ ಬೇಡಿಕೆ: ಜಿಲ್ಲೆ ಯಲ್ಲಿ ಯೂರಿಯಾ, ಡಿಎಪಿ, ಪೊಟ್ಯಾಶ್, ಕಾಂಪ್ಲೆಕ್ಸ್ ಗೊಬ್ಬರಕ್ಕೆ ಹೆಚ್ಚಿನ ಬೇಡಿಕೆ ಇದೆ. ಬಿತ್ತನೆ ಸಂದರ್ಭದಲ್ಲಿ ಡಿಎಪಿ ಗೊಬ್ಬರಕ್ಕೆ ನಂತರ ಯೂರಿಯಾಕ್ಕೆ ಬೇಡಿಕೆ ಇದೆ.  ಪ್ರಸಕ್ತ ಮುಂಗಾರು ಹಂಗಾಮಿಗೆ ಒಟ್ಟು 34,950 ಟನ್‌ ಗೊಬ್ಬರದ ಬೇಡಿಕೆ ಪಟ್ಟಿಯನ್ನು ಕೃಷಿ ಇಲಾಖೆ ಸರ್ಕಾ ರಕ್ಕೆ ಸಲ್ಲಿಸಿದೆ.

ಸದ್ಯ ಖಾಸಗಿ ಮಳಿಗೆಗಳು, ಸಹಕಾರ ಸಂಘಗಳು ಮತ್ತು ಫಡರೇಷನ್‌ ಬಳಿ 2017ರ ಮಾರ್ಚ್‌ ಅಂತ್ಯದವರೆಗೆ ಮಾರಾಟವಾಗದೇ ಬಾಕಿ ಉಳಿದ 6979 ಟನ್‌ ಗೊಬ್ಬರದ ದಾಸ್ತಾನು ಇದೆ.  ರಾಜ್ಯ ಸಹಕಾರಿ ಮಾರಾಟ ಮಂಡಳ, ಖಾಸಗಿ ಪೂರೈಕೆದಾರರಿಂದ ಇನ್ನುಳಿದ ಗೊಬ್ಬರ ಪೂರೈಕೆ ಆಗಬೇಕಿದೆ. ಉಳಿದಿರುವ ದಾಸ್ತಾನಿನಲ್ಲಿ 2,909 ಟನ್ ಯೂರಿಯಾ, 2,058ಟನ್ ಡಿಎಪಿ, 523 ಟನ್ ಎಂಒಪಿ ಹಾಗೂ 1,489 ಟನ್ ಎನ್‌ಪಿಕೆ  ಸೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT