ಪಯಣಿಗನ ಕಥಾತುಣುಕು ‘ಲೈಫ್ 360’

7

ಪಯಣಿಗನ ಕಥಾತುಣುಕು ‘ಲೈಫ್ 360’

Published:
Updated:
ಪಯಣಿಗನ ಕಥಾತುಣುಕು ‘ಲೈಫ್ 360’

‘ಅವನಿಗೆ ಚಿಕ್ಕಂದಿನಿಂದಲೂ ಸೈಕಲ್ ಎಂದರೆ ತುಂಬಾ ಇಷ್ಟ. ಖುಷಿಯಾಗಲಿ, ಬೇಜಾರಾಗಲೀ, ಸೈಕಲ್ ಹ್ಯಾಂಡಲ್ ಹಿಡಿದು ಗಾಳಿಯಲ್ಲಿ ಜೋಲಿ ಹೊಡೆಯುತ್ತಾ ಒಂದಷ್ಟು ದೂರ ಹೋಗಿ ಬಂದರೇನೇ ಸಮಾಧಾನ. ಆ ಪುಟ್ಟ ಪಯಣವೇ ಖುಷಿ’– ಹೀಗೆ ಪಾತ್ರವೇ ತಾವಾಗಿ ಮಾತನಾಡಿದರು ಅರ್ಜುನ್.

ಕನ್ನಡದಲ್ಲಿ ಸಾಹಸಮಯ ಹಾಗೂ ಪಯಣದ ಪರಿಕಲ್ಪನೆಯಲ್ಲಿ ಮೂಡಿಬಂದಿರುವ ಸಿನಿಮಾಗಳು ವಿರಳ ಎಂಬ ಅಂಶವೇ ಅವರಿಗೆ ಈ ಸಿನಿಮಾದೆಡೆಗೆ ಮನಸ್ಸು ಮಾಡಲು ಪ್ರೇರೇಪಿಸಿದ್ದು. ಎಂ.ಟೆಕ್. ಓದುತ್ತಲೇ ಈ ವಿಷಯದ ಮೇಲೆ ಟೆಲಿಚಿತ್ರ ಮಾಡಲು ಮುಂದಾದರು. ಅದೇ ಈಗ ಸಿನಿಮಾ ಆಗಿ ರೂಪು ಪಡೆದಿದೆ. ಈ ಸಿನಿಮಾ ಕೂಡ ಒಂದು ರೀತಿ ಜೀವನವನ್ನು ಕಾಣುವ ಪಯಣವಂತೆ.

‘ಟ್ರಾವೆಲ್, ಲವ್, ಲೈಫ್’– ಸಿನಿಮಾದ ತಿರುಳು. ಒಬ್ಬ ವ್ಯಕ್ತಿ, ಪ್ರಯಾಣ ಮಾಡುವುದರಿಂದ ಏನೆಲ್ಲಾ ಪಡೆದುಕೊಳ್ಳುತ್ತಾನೆ? ಅದು ಹೇಗೆ ಅವನ ದೃಷ್ಟಿಕೋನವನ್ನು ಬದಲಿಸುತ್ತದೆ? ಪ್ರಕೃತಿ ಅವನಿಗೆ ಏನೆಲ್ಲಾ ಕಲಿಸುತ್ತದೆ, ಬದುಕು ಹೇಗೆ ತಿರುವುಪಡೆಯುತ್ತದೆ ಎಂಬ ವಿಷಯವನ್ನು ಪಾತ್ರಗಳ ಮೂಲಕ ಕಂಡುಕೊಳ್ಳುವ ಕಥೆ.

ರೈತನ ಪಾತ್ರದಲ್ಲಿ ಬಿರಾದರ್, ಫಾರೆಸ್ಟ್ ಗಾರ್ಡ್‌ ಪಾತ್ರದಲ್ಲಿ ಸರ್ದಾರ್ ಸತ್ಯ, ಸೈಕಲ್ ಶಾಪ್ ಮಾಲೀಕರಾಗಿ ಸಿಲ್ಲಿ ಲಲ್ಲಿ ಶ್ರೀನಿವಾಸ್, ಒಬ್ಬ ಪಯಣಿಗನಾಗಿ ಕೆ.ಎಸ್. ಶ್ರೀಧರ್ – ಸಿನಿಮಾದಲ್ಲಿ ಭಿನ್ನ ಆಯಾಮಗಳಲ್ಲಿ ಬದುಕನ್ನು ನೋಡಲು ಕಲಿಸುತ್ತಾರಂತೆ. ಆ ಆಕಸ್ಮಿಕ ಭೇಟಿಗಳೇ ಬದುಕಿನ ಬಿಂಬಗಳಂತೆ.

ಪ್ರೀತಿಯ ನೆಲೆಗಟ್ಟಲ್ಲೇ ಜೀವನ ಪಯಣವೂ ಸಾಗುವುದು. ಇಲ್ಲೂ ಪ್ರೀತಿಯ ಎಳೆಯಿಟ್ಟುಕೊಂಡೇ ನಾಯಕನ ಪಯಣ ಆರಂಭವಾಗುತ್ತದೆ. ಪ್ರೀತಿ–ಸ್ನೇಹದ ನಡುವಿನ ಗೊಂದಲ, ಯೌವನದ ಸೆಳೆತ, ನಿರಾಸೆಗಳ ನಡುವೆ ತನ್ನನ್ನು ತಾನು ಕಂಡುಕೊಳ್ಳಲು ಹಳೆ ನೆನಪುಗಳನ್ನೇ ಕಟ್ಟಿಕೊಂಡು ಸಂಚಾರಿಯಾಗಿ ಹೊರಟೇಬಿಡುವ ಶಿಶಿರನ ಪಾತ್ರ ಸಿನಿಮಾ ಪಯಣವನ್ನು ಮುಂದುವರೆಸುತ್ತದೆಯಂತೆ.

‘ಒಂದು ಪಯಣ ಹೇಗೆ ಎಲ್ಲಾ ಆಲೋಚನೆಗಳನ್ನೂ ಬದಲು ಮಾಡುತ್ತಾ ಹೋಗುತ್ತದೆ ಎಂಬುದನ್ನು ಇಲ್ಲಿ ನೋಡಬಹುದು. ಇದಕ್ಕೆ ಪ್ರೀತಿ–ಪ್ರೇಮ, ಮಾನವೀಯತೆಯ ಸ್ಪರ್ಶವಿದೆ. ಜೀವನವನ್ನು ಒಂದು ಸುತ್ತಿನ ಪಯಣದಲ್ಲಿ ಹೇಗೆ ಕಂಡುಕೊಳ್ಳುತ್ತಾನೆ ಎಂಬುದೇ ಈ ಸಿನಿಮಾದ ನಿಜ ಅರ್ಥ.

ಕಣ್ಣಿಗೆ ಕಟ್ಟುವ ಪ್ರಕೃತಿಯೊಂದಿಗೆ ತನ್ನತನವನ್ನು ಅರಸುತ್ತಾ, ಆ ನಡುವೆ ಸುಳಿಯುವ ಹರೆಯ, ಪ್ರೇಮ, ಬದುಕು ಇವೆಲ್ಲಕ್ಕೂ ಸ್ಪಂದಿಸುತ್ತಾ ನಡೆಸುವ ಜರ್ನಿ ಇದು’ ಎಂದು ವಿವರಿಸುತ್ತಾರೆ ಅರ್ಜುನ್.

ರಂಗಭೂಮಿ ಕಲಾವಿದ ಕುಟುಂಬದ ಹಿನ್ನೆಲೆಯಿಂದ ಬಂದ ಅರ್ಜುನ್ ಅವರಿಗೂ ಅಡ್ವೆಂಚರ್, ಟ್ರೆಕ್ಕಿಂಗ್, ಟ್ರಾವೆಲಿಂಗ್ ಎಂದರೆ ತುಂಬಾ ಇಷ್ಟ. ಎಂ.ಟೆಕ್‌. ಓದುವಾಗಲೇ ಕಿರುಚಿತ್ರ ತಂಡ ರೂಪಿಸಿದ್ದರು. ಓದುವ ಜೊತೆಜೊತೆಗೇ ಸಿನಿಮಾ ತಯಾರಿಯೂ ನಡೆದಿತ್ತು. ಶನಿವಾರ, ಭಾನುವಾರ, ಸರ್ಕಾರಿ ರಜೆ ಇದ್ದಾಗೆಲ್ಲಾ ಚಿತ್ರೀಕರಣ ಸದ್ದಿಲ್ಲದೇ ಸಾಗುತ್ತಿತ್ತು. ಸಿವಿಲ್ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿಕೊಂಡ ಮೇಲೂ ಸಿನಿಮಾ ಸೆಳೆತ ಅವರನ್ನು ಬಿಡಲಿಲ್ಲ.

ನಿರ್ದೇಶನದ ತರಬೇತಿ ಪಡೆದು, ಸಮಾನ ಮನಸ್ಕ ಸ್ನೇಹಿತರೇ ಸೇರಿ  ಕ್ರೌಡ್‌ ಫಂಡಿಂಗ್ ಮೂಲಕ ಸಿನಿಮಾ ಮಾಡಲು ಮುಂದಾದರು. ಅದರ ಕಾರಣವಾಗೇ ಸಿದ್ಧಗೊಂಡಿದ್ದು ಟೀಸರ್. ಟೀಸರ್ ನೋಡಿ ಮೆಚ್ಚಿಕೊಂಡು ರಾಜಶೇಖರ್ ಎಂಬುವರು ಹಣ ಹೂಡಲು ಒಪ್ಪಿದರು. 

‘ಎಂಜಿನಿಯರಿಂಗ್ ಮುಗಿಸಿ ಇದೇನು ಹುಚ್ಚಾಟ’ ಎಂದು ಮನೆಯವರ ವಿರೋಧವಿದ್ದರೂ ಪಯಣ ಮಾತ್ರ ನಿಲ್ಲಲಿಲ್ಲ. ‘ಪಯಾಣ’ವೇ ಈ ಸಿನಿಮಾದ ವಿಷಯವಾದ್ದರಿಂದ ಅರ್ಜುನ್ ಅವರೂ ಹಲವೆಡೆ ಓಡಾಡಿ ಹೊಸ ಸಾಧ್ಯತೆಗಳಿಗೆ ತೆರೆದುಕೊಂಡರು. ಪ್ರೇಕ್ಷಕರು ಸಿನಿಮಾದಿಂದ ಏನೇನು ಬಯಸಬಹುದು ಎಂಬುದರ ಪಟ್ಟಿಯನ್ನೂ ಮುಂದಿಟ್ಟರು ಅರ್ಜುನ್.

‘ಒಂದೇ ಕಡೆ ಅಂಟಿಕೊಳ್ಳದೇ ಬದುಕನ್ನು ವಿಸ್ತಾರವಾಗಿ ನೋಡುವ, ಅನುಭವಿಗಳಿಂದ ಪಾಠ ಕಲಿತರೆ ಜೀವನ ಹೇಗಿರುತ್ತದೆ ಎನ್ನುವ, ಬಹುಮುಖ್ಯವಾಗಿ ಪ್ರಕೃತಿಯ ಮಡಿಲಲ್ಲಿ ಮನುಷ್ಯ ಹೇಗೆ ತನ್ನನ್ನು ತಾನು ಅರಿಯಬಹುದು ಎಂಬುದನ್ನು  ಸೂಕ್ಷ್ಮವಾಗಿ ವಿವರಿಸಲಾಗಿದೆ. ಅರ್ಧ ಕರ್ನಾಟಕವನ್ನೇ ಸಿನಿಮಾದಲ್ಲಿ ನೋಡಿಬಿಡಬಹುದು. ರಾಜ್ಯದ ಸಾಕಷ್ಟು ಸ್ಥಳಗಳನ್ನು ಸುಂದರವಾಗಿ ಚಿತ್ರೀಕರಿಸಲಾಗಿದೆ. ಪ್ರಯಾಣ ಮಾಡಬೇಕು ಎಂದುಕೊಂಡವರು ಈ ಸಿನಿಮಾ ನೋಡಲೇಬೇಕು’ ಎನ್ನುತ್ತಾರೆ ಅವರು.

ಚಿತ್ರದಲ್ಲಿ ಆರು ಹಾಡುಗಳಿಗೆ ಸಾಹಿತ್ಯ ಅರ್ಜುನ್ ಅವರದ್ದೇ. ಒಂದು ಹಾಡನ್ನು ಬಿ.ಎಸ್. ಮೋಹನ್ ಬರೆದಿದ್ದರೆ, ಪ್ರಜ್ವಲ್ ಪೈ, ಮಹಾಂತ್ ನೀಲ್ ಸಂಗೀತ ಸಂಯೋಜಿಸಿದ್ದಾರೆ. ಅನುಷಾ ರಂಗನಾಥ್, ಪಾಯಲ್ ರಾಧಾಕೃಷ್ಣನ್‌ ನಾಯಕಿಯರು.

‘ಸಿನಿಮಾ ಅತಿ ಅದ್ಭುತ ಎಂದು ಹೇಳುವುದಿಲ್ಲ. ನಿಮ್ಮಲ್ಲಿ ಒಳ್ಳೆ ಭಾವನೆ ಮೂಡಿಸುವ ಭರವಸೆಯಂತೂ  ನೀಡುತ್ತೇವೆ. ಭೂಮಿ ದುಂಡಾಗಿದೆ. ಪಯಣಿಸುವ ಸೈಕಲ್ ಚಕ್ರಗಳೂ ವೃತ್ತಾಕಾರವಾಗಿದೆ. ಅದೇ ರೀತಿ ಬದುಕು ಕೂಡ. ನಮ್ಮ ಹೊರ–ಒಳಗೂ ತಿರುಗಿ ಒಂದೆಡೆಗೇ ಸೇರುವ ಸುಂದರ ಜರ್ನಿ. ಏನೇ ಆದರೂ ಜರ್ನಿ ಮುಂದುವರೆಯಬೇಕು....’ ಎಂದರು.

ಟೀಸರ್‌ ಮೂಲಕ ಸದ್ದು ಮಾಡಿದ್ದ ‘ಲೈಫ್ 360’ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಯುವಮನಗಳ ಹೊಸ ಕನಸುಗಳಿಂದ  ರೂಪು ಪಡೆದ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ ‘ಲೈಫ್ 360’ ನಟ ಹಾಗೂ ನಿರ್ದೇಶಕ ಅರ್ಜುನ್ ಕಿಶೋರ್ ಚಂದ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry