ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ ಕುಟುಂಬಶಕ್ತಿ

ಚಿತ್ರರಂಗ ಕಂಡಂತೆ
Last Updated 1 ಜೂನ್ 2017, 19:30 IST
ಅಕ್ಷರ ಗಾತ್ರ

‘ಇಡೀ ಚಿತ್ರರಂಗವೇ ಅಮ್ಮನನ್ನು ಕಳೆದುಕೊಂಡು ಅನಾಥವಾಗಿದೆ’ – ನಡುಗುವ ಸ್ವರದಲ್ಲಿಯೇ ಹೇಳಿ ತುಸು ಹೊತ್ತು ಮೌನಿಯಾದರು ನಟಿ ತಾರಾ. ಅವರ ಮಾತಿನಲ್ಲಿ ಅತಿಶಯೋಕ್ತಿ ಇಲ್ಲ. ಪಾರ್ವತಮ್ಮನವರ ಸಾವು ಕನ್ನಡ ಚಿತ್ರರಂಗಕ್ಕೆ ಸೂತಕ ತಂದಿದೆ.

ಅವರು ಸಿನಿಮಾದಲ್ಲಿ ನಟಿಸಿದವರಲ್ಲ, ರಾಜಕೀಯಕ್ಕೆ ಇಳಿದವರಲ್ಲ. ಪ್ರಚಾರದ ಅಮಲು ಹತ್ತಿಸಿಕೊಂಡು ಮೆರೆದವರಲ್ಲ. ಆದರೂ ಕರ್ನಾಟದ ಪ್ರತಿಯೊಬ್ಬನಿಗೂ ಪಾರ್ವತಮ್ಮ ಚಿರಪರಿಚಿತೆ.

ತೆರೆಯ ಹಿಂದೆ ಇದ್ದುಕೊಂಡೇ ಜನಮಾನಸದಲ್ಲಿ ಹೀಗೆ ಶಾಶ್ವತಸ್ಥಾನ ಪಡೆದುಕೊಂಡ ಇನ್ನೊಬ್ಬರನ್ನು ಉಲ್ಲೇಖಿಸುವುದು ಕಷ್ಟ. ರಾಜಕುಮಾರ್ ಅವರಂಥ ಮೇರುನಟನ ಜನಪ್ರಿಯತೆಯ ಪ್ರಭಾವಳಿಯ ನಡುವೆಯೂ ತಮ್ಮ ಅಸ್ಮಿತೆಯನ್ನು ಅವರು ಉಳಿಸಿಕೊಂಡಿದ್ದರು.

ಸಾಹಿತಿ ಜಯಂತ್‌ ಕಾಯ್ಕಿಣಿ ಅವರು ಇದನ್ನೇ ಅರ್ಥಪೂರ್ಣವಾಗಿ ‘ರಾಜಕುಮಾರ ಅವರ ಪ್ರತಿಭೆಯ ಹೂಬಳ್ಳಿಗೆ ಚಪ್ಪರ ಕಟ್ಟುವ ಕೆಲಸವನ್ನು ಪಾರ್ವತಮ್ಮ ಮಾಡಿದರು’ ಎನ್ನುತ್ತಾರೆ.

ರಾಜ್‌ ಪ್ರಭಾವಳಿ ಹಾಗೂ ಮಕ್ಕಳ ಸಿನಿಮಾ ಬದುಕನ್ನು ಪಾರ್ವತಮ್ಮ ರೂಪಿಸಿದ ಬಗೆಯನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ವಿಶ್ಲೇಷಿಸುವ ಜಯಂತ್‌ಗೆ, ಅಮ್ಮನೊಳಗೆ ‘ತುಂಬ  ಸಹಜವಾದ ಅನಾಮಿಕ ಸಾಹಿತ್ಯಾಸಕ್ತ ಓದುಗ’ರೊಬ್ಬರು ಕಾಣಿಸಿದ್ದರು. ಅವರು ಮೊದಲು ಪಾರ್ವತಮ್ಮನವರನ್ನು ನೋಡಿದ್ದು ‘ಚಿಗುರಿದ ಕನಸು’ ಸಿನಿಮಾದ ಸಂದರ್ಭದಲ್ಲಿ.

‘ರಾಜ್‌ ಅವರ ಪ್ರತಿಭೆಗೆ ಬೇಕಾದಂಥ ಕೌಟುಂಬಿಕ, ವ್ಯವಹಾರಿಕ ಮತ್ತು ಸಾಂಸ್ಕೃತಿಕ ಸ್ಥಿರತೆಯಾಗಿ ಪಾರ್ವತಮ್ಮ ಒದಗಿಬಂದಿದ್ದರು. ಯಾಕೆಂದರೆ ಕೆಲಸವೇ ರಾಜಕುಮಾರ್‌ ಅವರ ಅಧ್ಯಾತ್ಮವಾಗಿತ್ತು. ಅದು ಕನ್ನಡದ ಅಧ್ಯಾತ್ಮವೂ ಹೌದು. ಆದರೆ ಅದಕ್ಕೊಂದು ಸ್ಥಿರತೆ ಬೇಕಾಗುತ್ತದೆ. ಮನೆ ಹಿತ್ತಿಲಿನ ತೊಂಡೆ ಬಳ್ಳಿಯೋ, ಬಸಳೆ ಬಳ್ಳಿಯೋ ಅಥವಾ ಮಲ್ಲಿಗೆ ಬಳ್ಳಿಗೋ ಹರಡಲು ಒಂದು ಚಪ್ಪರ ಬೇಕಾಗುತ್ತದೆ.

ಹಾಗೆ ಚಪ್ಪರ ಕಟ್ಟುವ ಕೆಲಸವನ್ನು ಪಾರ್ವತಮ್ಮ ಮಾಡಿದರು. ಕನ್ನಡ ಎಂಬ ಸಂಯುಕ್ತಮನಸ್ಸಿನ ಬೆಳವಣಿಗೆಯಲ್ಲಿ ರಾಜ್ ಪಾಲು ಹೇಗೆ ಮಹತ್ವದ್ದೋ ಅಷ್ಟೇ ಮಹತ್ವದ ಪಾತ್ರ ಪಾರ್ವತಮ್ಮ ಅವರದು’ ಎನ್ನುವ ಅವರು ಪಾರ್ವತಮ್ಮನವರ ಸಾಹಿತ್ಯಾಸಕ್ತಿಯ ಬಗೆಗೂ ಗಮನ ಸೆಳೆಯುತ್ತಾರೆ.
*

ಮಿತಿಯಿಲ್ಲದ ವಾತ್ಸಲ್ಯದ ಮಹಾಮಾದರಿ
ನಾನು ಚಿತ್ರರಂಗಕ್ಕೆ ಬಂದ ಹೊಸದರಲ್ಲಿಯೇ ಪಾರ್ವತಮ್ಮನವರನ್ನುನೋಡಿದೆ. ಚಾಮುಂಡೇಶ್ವರಿ ಸ್ಟುಡಿಯೊದಲ್ಲಿ ‘ಸುಂದರ ಸ್ವಪ್ನಗಳು’ ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಆಗ ಅದೇ ಸ್ಟುಡಿಯೊದಲ್ಲಿ ಶಿವರಾಜ್‌ಕುಮಾರ್‌ ಅವರ ‘ಆನಂದ್‌’ ಚಿತ್ರದ ಚಿತ್ರೀರಣವೂ ನಡೆಯುತ್ತಿತ್ತು. ಆಗ ಆ ಚಿತ್ರದ ಒಂದು ಪಾತ್ರಕ್ಕಾಗಿ ನಟಿಯ ಹುಡುಕಾಟ ನಡೆಸುತ್ತಿದ್ದರು.

ಗೌರಿಶಂಕರ್‌ ಅವರು ನನ್ನನ್ನು ಕರೆದುಕೊಂಡುಹೋಗಿ ಪಾರ್ವತಮ್ಮನವರಿಗೆ ಪರಿಚಯಿಸಿದರು. ಅವರು ನನ್ನನ್ನು ನೋಡಿ ಸಿಂಗೀತಂ ಶ್ರೀನಿವಾಸ್‌ ಅವರನ್ನು ಕರೆದು ಮಾತುಕತೆ ನಡೆಸಿ ನಟಿಸಲು ಅವಕಾಶ ಕೊಟ್ಟರು.

ನಂತರ ‘ರಣರಂಗ’ ಸಿನಿಮಾ ಮಾಡಬೇಕಾದರೆ ನನ್ನನ್ನೇ ಕರೆದು ನಾಯಕಿಯಾಗಿ ಅವಕಾಶ ಕೊಟ್ಟರು.  ಈ ಸಿನಿಮಾದಲ್ಲ ’ಮುಸ್ಸಂಜೆಲಿ ನಮ್ಮೂರಲ್ಲಿ...’ ಅಂತೊಂದು ಹಾಡಿದೆ. ರಾಜಕುಮಾರ್‌ ಬ್ಯಾನರ್‌ ಸಿನಿಮಾದಲ್ಲಿ ನಾಯಕಿಗೆ ಇಂಟ್ರೊಡಕ್ಷನ್‌ ಹಾಡು ಕೊಟ್ಟದ್ದು ಅದೇ ಮೊದಲು. ಅವರೇ ನಿರ್ಮಾಪಕರು ಅವರ ಮಗನೇ ಹೀರೊ. ಆದರೂ ನಾಯಕಿಗೆ ಇಂಟ್ರೊಡಕ್ಷನ್‌ ಸಾಂಗ್‌ ಕೊಡುವುದಿದೆಯಲ್ಲ, ಅದು ಪಾರ್ವತಮ್ಮ.

‘ಆನಂದ್‌’ ಚಿತ್ರೀಕರಣ ನಡೆಯುತ್ತಿದ್ದಾಗ ನಾವೆಲ್ಲ ಲಂಗ ಬ್ಲೌಸ್‌ ಹಾಕಿಕೊಂಡುಹೋಗುತ್ತಿದ್ದೆವು. ಆಗ ಪಾರ್ವತಮ್ಮ ಹತ್ತಿರಕ್ಕೆ ಕರೆದು ‘ಹೀಗೆಲ್ಲ ಲಂಗ ಬ್ಲೌಸ್‌ ಹಾಕಿಕೊಂಡು ಬರಬಾರದು. ಜತೆಗೊಂದು ವೇಲ್‌ ಹಾಕಿಕೊಳ್ಳಬೇಕು. ದಾವಣಿ ಹಾಕಿಕೊಳ್ಳಬೇಕು’ ಎಂದೆಲ್ಲ ಹೇಳುತ್ತಿದ್ದರು.

ಹೀಗೆ ಸ್ವಂತ ತಾಯಿ ತಂದೆಯರು ನೋಡಿಕೊಳ್ಳುವ ಹಾಗೆ ನಾವು ಧರಿಸುವ ಬಟ್ಟೆಗಳು, ನಮ್ಮ ನಡವಳಿಕೆಗಳನ್ನು ಗಮನಿಸಿ ತಿದ್ದುತ್ತಿದ್ದರು. ಯಾರ ಜತೆ ಹೇಗೆ ನಡೆದುಕೊಳ್ಳಬೇಕು, ಹಿರಿಯರು ಬಂದಾಗ ನಮಸ್ಕಾರ ಮಾಡಬೇಕು ಎಂಬುದನ್ನೆಲ್ಲ ಹೇಳಿಕೊಡುತ್ತಿದ್ದರು. ಅದನ್ನೆಲ್ಲ ನಮಗೆ ಹೇಳಿಕೊಡಬೇಕಾದ ಅವಶ್ಯಕತೆ ಅವರಿಗೆ ಇರಲಿಲ್ಲ. ಅವರ ಮಕ್ಕಳ ಬಗ್ಗೆಯಷ್ಟೇ ಕಾಳಜಿ ತೆಗೆದುಕೊಂಡು ಇರಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ ಅವರು. ನಮ್ಮನ್ನೂ ಮಕ್ಕಳ ಹಾಗೆಯೇ ನೋಡಿಕೊಂಡರು.

ಹಾಗೆಯೇ ಒಮ್ಮೆ ಅವರ ಜತೆ ಕೆಲಸ ಮಾಡಿದವರ ಜತೆಗೆ ಯಾವಾಗಲೂ ಸೌಹಾರ್ದಯುತ ಸಂಬಂಧ ಇರಿಸಿಕೊಳ್ಳುತ್ತಿದ್ದರು. ನಾನು ರಾಜಕೀಯಕ್ಕೆ ಬಂದ ಮೇಲೆ ಒಂದು ಸಿನಿಮಾ ಕಾರ್ಯಕ್ರಮದಲ್ಲಿ ನಾವಿಬ್ಬರೂ ಒಂದೇ ವೇದಿಕೆಯಲ್ಲಿದ್ದೆವು. ಅಲ್ಲಿ ನನ್ನ ಭಾಷಣ ಕೇಳಿ ’ಎಷ್ಟು ಚೆನ್ನಾಗಿ ಮಾತಾಡ್ತೀಯಾ ನೀನು. ನನಗೆ ಗೊತ್ತೇ ಇರಲಿಲ್ಲ. ನೀನು ರಾಜಕೀಯಕ್ಕೆ ಬಂದಿರುವುದು ಸರಿಯಾಗಿದೆ’ ಎಂದು ಖುಷಿಯಿಂದ ಹೇಳಿದ್ದರು. ಹೀಗೆ ತುಂಬ ಸಣ್ಣ ಸಣ್ಣ ಸಂಗತಿಗಳನ್ನು ಗುರ್ತಿಸಿ ಹೇಳುತ್ತಿದ್ದರು.

ಶಾಂತಮ್ಮ ಎನ್ನುವವರು ಪಾರ್ವತಮ್ಮನವರ ಜತೆ ಯಾವಾಗಲೂ ಇರುತ್ತಿದ್ದರು. ಯಾವಾಗಲಾದರೂ ನಾನು ಭಾಷಣ ಮಾಡಿದ್ದನ್ನು ಕೇಳಿದಾಗ, ಟೀವಿಯಲ್ಲಿ ಬಂದಾಗ ಶಾಂತಮ್ಮ ಆಂಟಿಯ ಜತೆ ಸೇರಿಕೊಂಡು ನನಗೆ ಫೋನ್‌ ಮಾಡುತ್ತಿದ್ದರು. ಸರಿಯಾಗಿ ಮಾತನಾಡಿಲ್ಲದಿದ್ದರೆ ‘ನೀನು ಹಾಗೆ ಹೇಳಬೇಕಾಗಿತ್ತು’ ಅಂತ ಸಲಹೆ ಕೊಡುತ್ತಿದ್ದರು. ಚೆನ್ನಾಗಿ ಮಾತಾಡಿದರೆ ಮೆಚ್ಚಿಕೊಳ್ಳುತ್ತಿದ್ದರು.

ಅವರನ್ನು ನೋಡಿಕೊಳ್ಳಲಿಕ್ಕಾಗಿ ಒಬ್ಬರು ಮಲಯಾಳಿ ನರ್ಸ್‌ ಇದ್ದರು. ಅವರ ಫೋನ್‌ನಲ್ಲಿ ಎಷ್ಟೋ ಸಲ ಫೋನ್  ಮಾಡಿ ನನ್ನ ಜತೆ ಮಾತನಾಡಿದ್ದಾರೆ.

ಮದುವೆಯಾದ ಕೂಡಲೆ ‘ಫಸ್ಟ್‌ ಮಗು ಮಾಡ್ಕೋ ನೀನು’ ಎಂದು ಗದರಿದ್ದರು. ಗರ್ಭಿಣಿಯಾದಾಗ ’ನಿಂಗೆ ಗಂಡುಮಗೂನೇ ಆಗ್ತದೆ ನೋಡು’ ಎಂದಿದ್ದರು. ಮಗು ಹೆತ್ತಾಗ ‘ಮಗೂನ ನಾನು ನೋಡಬೇಕು. ಕರ್ಕೊಂಡು ಬಾ’ ಎಂದಿದ್ದರು.

ಇಷ್ಟು ನಿಷ್ಕಳಂಕ ವಾತ್ಸಲ್ಯ ಹೇಳಿಕೊಟ್ಟು ಬರುವಂಥದ್ದಲ್ಲವೇ ಅಲ್ಲ. ನಮ್ಮ ತಾಯಿಗೆ ನಾನು ಪ್ರೀತಿ ಮಾಡು ಅಂತ ಹೇಳಿಕೊಡುತ್ತೇವಾ? ಅವರ ಪ್ರೇಮ ಎಷ್ಟು ಸಹಜವಾಗಿದ್ದಲ್ಲವೇ? ಪಾರ್ವತಮ್ಮ ನಮ್ಮ ಮೇಲೆ ತೋರುವ ಅಕ್ಕರೆಯೂ ಅಷ್ಟೇ ಸಹಜವಾದ್ದಾಗಿತ್ತು. ಇದಕ್ಕೂ ಮೊದಲು ಒಮ್ಮೆ ಆಸ್ಪತ್ರೆಗೆ ಹೋಗಿ ಬಂದಿದ್ದರು. ಆಗ ನಾವೆಲ್ಲ ಅವರನ್ನು ನೋಡಲು ಹೋಗಿದ್ದೆವು.  ‘ನನಗೇನೂ ಆಗಿಲ್ಲ. ಆರಾಮಾಗೇ ಇದ್ದೀನಿ. ಸ್ವಲ್ಪ ಸುಸ್ತು ಅಷ್ಟೇ’ ಎಂದು ನಮ್ಮನ್ನೇ ಸಮಾಧಾನ ಮಾಡಿ ಕಳಿಸಿದ್ದರು. ಇಂಥ ಮೇರು ವ್ಯಕ್ತಿತ್ವದ ಅವರನ್ನು ಕಳೆದುಕೊಂಡು ಇಡೀ ಚಿತ್ರರಂಗ  ಅನಾಥವಾಗಿದೆ.
–ತಾರಾ ಅನೂರಾಧಾ

*


ಸಹಜ ಸಾಹಿತ್ಯಾಸಕ್ತಿ: ‘ಅವರಿಗೆ ತುಂಬ ಸಹಜವಾದ ಸಾಹಿತ್ಯಾಸಕ್ತಿ ಇತ್ತು. ಸಿನಿಮಾ ಮಾಡಲಿಕ್ಕೆ ಕಾದಂಬರಿ ಓದುತ್ತಿದ್ದರು ಅಂತಲ್ಲ ಅದು.  ಸಿನಿಮಾಕ್ಕಲ್ಲದೆಯೂ ಬೇರೆಯೂ ಅವರು ಸಾಕಷ್ಟು ಓದುತ್ತಿದ್ದರು. ‘ಚಂದವಳ್ಳಿಯ ತೋಟ’, ‘ಕರುಣೆಯೇ ಕುಟುಂಬದ ಕಣ್ಣು’, ‘ಮಯೂರ’, ‘ಚಿಗುರಿದ ಕನಸು’ ಇವೆಲ್ಲ ಕಾದಂಬರಿಗಳನ್ನು ಅವರು ವಾಚನಾಲಯದಲ್ಲಿ ಓದಿ ನಂತರ ಸಿನಿಮಾ ಮಾಡಬಹುದು ಅಂದುಕೊಂಡಿದ್ದು.

ರಾಜಕುಮಾರ್ ಕುಟುಂಬ ಸಾಂಸ್ಕೃತಿಕವಾಗಿ ತುಂಬ ಶ್ರೀಮಂತವಾಗಿರುವ ಕುಟುಂಬ. ಅದರ ವಿಸ್ತರಣೆಯನ್ನು ಮಕ್ಕಳಲ್ಲಿಯೂ ಕಾಣುತ್ತೇವೆ. ಈ ಶ್ರೀಮಂತಿಕೆಯ ಮೂಲ ಪಾರ್ವತಮ್ಮನವರ ಸಾಹಿತ್ಯಾಭಿರುಚಿಯಲ್ಲಿಯೂ ಇತ್ತು. ರಾಜಕುಮಾರ್‌ ತಂದೆಯ ರಂಗಭೂಮಿಯ ಬೇರುಗಳು ಎಷ್ಟು ಮಹತ್ವದ್ದೋ ಪಾರ್ವತಮ್ಮ ಅವರ ಸಾಹಿತ್ಯಾಭಿರುಚಿ ಕೂಡ ಮಹತ್ವದ್ದು’ ಎನ್ನುವುದು ಜಯಂತ್‌ ಅಭಿಪ್ರಾಯ.

ಜಯಂತ್‌ ಮೊದಲ ಬಾರಿಗೆ ಪಾರ್ವತಮ್ಮನವರನ್ನು ಭೇಟಿಯಾದಾಗ ಅವರು ಕೇಳಿದ್ದು – ‘ನಿಮ್ಮ ತಂದೆ ಗೌರೀಶ ಕಾಯ್ಕಿಣಿ ಅವರು ಹೇಗಿದ್ದಾರೆ? ಏನು ಬರೆಯುತ್ತಿದ್ದಾರೆ?’.

‘ಒಡಹುಟ್ಟಿದವರು’ ಸಿನಿಮಾ ಗುಜರಾತಿ ಕಾದಂಬರಿಯನ್ನು ಆಧರಿಸಿದ್ದು. ಆ ಕಾದಂಬರಿಯನ್ನು ಕನ್ನಡಕ್ಕೆ ಅನುವಾದಿಸಿದ್ದು ಗೌರೀಶ ಕಾಯ್ಕಿಣಿ. ಅದನ್ನೂ ಓದಿ ಮೆಚ್ಚಿಕೊಂಡಿದ್ದ ಪಾರ್ವತಮ್ಮ, ಜಯಂತ್‌ ಕಾಯ್ಕಿಣಿ ಸಿಕ್ಕ ಕೂಡಲೇ ತಂದೆಯ ಬಗ್ಗೆ ವಿಚಾರಿಸಿದ್ದರು.

‘ಕಾರಂತರ ಕಾದಂಬರಿ ಚಿಗುರಿದ ಕನಸು ಸಿನಿಮಾ ಮಾಡುವಾಗ ಆ ಕೃತಿಗೆ ಅಪಚಾರ ಆಗಬಾರದು. ಅದಕ್ಕಾಗಿ ಕರಾವಳಿಯ ಬದುಕು ಬಲ್ಲ, ಹಾಗೆಯೇ ಸಾಹಿತ್ಯದಲ್ಲಿ ಕೆಲಸ ಮಾಡಿದವರು ಬೇಕು ಎಂಬ ಕಾರಣಕ್ಕೆ ಆ ಚಿತ್ರದ ಕೆಲಸಕ್ಕೆ ನನ್ನನ್ನು ಕೇಳಿಕೊಂಡಿದ್ದು’ ಎಂದು ಜಯಂತ್‌ ನೆನಪಿಸಿಕೊಳ್ಳುತ್ತಾರೆ.

*


ಅಪರಿಚಿತರಿಗೂ ಆಪ್ತರಾಗುತ್ತಿದ್ದರು: ಯಾರಲ್ಲಾದರೂ ಒಂದು ವಿಷಯ ತಮಗೆ ಇಷ್ಟವಾದರೆ, ಅದನ್ನು ಮುಕ್ತವಾಗಿ ಪ್ರಶಂಸಿಸುವ ಅಕ್ಕರೆಯ ಗುಣ ಪಾರ್ವತಮ್ಮ ಅವರಲ್ಲಿತ್ತು. ಯೋಗರಾಜ ಭಟ್‌ ಅವರು ಕನ್ನಡ ಮಾತನಾಡುವ ರೀತಿ ಅವರಿಗೆ ತುಂಬ ಇಷ್ಟವಾಗಿತ್ತು. ಅದನ್ನು ಮೆಚ್ಚಿಕೊಂಡು ಮಾತನಾಡಿದ್ದರು ಕೂಡ.

‘ನಾನು ಟೀವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದನ್ನು ಅವರು ನೋಡಿದ್ದರು. ನಂತರ ಅವರ ಮನೆಗೆ ಹೋದಾಗ ‘ತುಂಬ ಚೆನ್ನಾಗಿ ಮಾತನಾಡುತ್ತೀರಿ. ಭಾಷೆ ಚೆನ್ನಾಗಿದೆ. ಸಣ್ಣಪುಟ್ಟ ತಪ್ಪುಗಳನ್ನೂ ಮಾಡುವುದಿಲ್ಲ. ದೊಡ್ಡವರು (ರಾಜಕುಮಾರ್‌) ಇದ್ದಿದ್ದರೆ ನಿಮ್ಮ ಕನ್ನಡವನ್ನು ಕೇಳಿ ಮನೆಗೆ ಕರೆದು ಊಟ ಹಾಕಿಸುತ್ತಿದ್ದರು’ ಎಂದು ಹೇಳಿದ್ದರು.

ರಾಜಕುಮಾರ್‌ ಅವರ ಅದ್ಭುತ ಕನ್ನಡವನ್ನೇ ಕೇಳಿದವರು ನನ್ನ ಕನ್ನಡವನ್ನು ಹೊಗಳಿದ್ದು ಕೇಳಿ ತುಂಬ ಖುಷಿಯಾಗಿತ್ತು. ಆ ಸಂದರ್ಭವನ್ನು ನಾನು ಯಾವತ್ತೂ ನೆನಪಿಟ್ಟುಕೊಂಡಿದ್ದೇನೆ’ ಎಂದು ಭಟ್ಟರು ನೆನಪಿಸಿಕೊಳ್ಳುತ್ತಾರೆ.

ಹೊಸಬರ ಜತೆಗೂ ಅರೆಕ್ಷಣದಲ್ಲಿ ಆಪ್ತರಾಗಿಬಿಡುವ, ಗಂಟೆಗಟ್ಟಲೆ ಹರಟಿಕೊಳ್ಳುವ ವಿಶಿಷ್ಟ ಗುಣವೂ ಅವರಲ್ಲಿತ್ತು. ಇದನ್ನು ಭಟ್ಟರು ಒಂದು ಘಟನೆಯ ಮೂಲಕವೇ ನೆನಪಿಸಿಕೊಳ್ಳುತ್ತಾರೆ.

‘‘ಒಮ್ಮೆ ಪುನೀತ್‌ ಅವರನ್ನು ಭೇಟಿಯಾಗಲು ಅವರ ಮನೆಗೆ ಹೋಗಿದ್ದೆ. ಅವರು ಆಗಷ್ಟೇ ಆಸ್ಪತ್ರೆಯಿಂದ ಬಂದಿದ್ದರು. ಸುಸ್ತಾಗಿ ಕೂತಿದ್ದರು. ನನ್ನನ್ನು ನೋಡಿ ಏನನಿಸಿತೋ ಗೊತ್ತಿಲ್ಲ. ಒಂದು ಲಹರಿಯಲ್ಲಿ ಎರಡು–ಎರಡೂವರೆ ಗಂಟೆಗಳ ಕಾಲ ಸತತವಾಗಿ ಮಾತನಾಡಿದರು. ಮದ್ರಾಸ್‌ನಲ್ಲಿನ ದಿನಗಳು, ರಾಜಕುಮಾರ್‌ ಜತೆ ಸಂಸಾರ ಆರಂಭಿಸಿದ ಆರಂಭದ ದಿನಗಳನ್ನೆಲ್ಲ ನೆನಪಿಸಿಕೊಂಡು ಹೇಳಿದರು.

ಮದ್ರಾಸ್‌ನ ಸಣ್ಣ ಮನೆಯಲ್ಲಿದ್ದೆವು. ಆಗಷ್ಟೇ ಶಿವಣ್ಣ ಹುಟ್ಟಿದ್ದ. ಆಗ ಒಂದು ಮೂಟೆ ಅಕ್ಕಿ ಮತ್ತೆ ಮೂರ್ನಾಲ್ಕು ಕೆಜಿ ಕಲ್ಲುಪ್ಪು ಇದ್ದುಬಿಟ್ಟಿದ್ದರೆ ಎರಡು ಮೂರು ತಿಂಗಳವರೆಗೆ ಗಂಜಿಯ ಚಿಂತೆ ಇರುತ್ತಿರಲಿಲ್ಲವಂತೆ. ರಾಜಕುಮಾರ್‌ ಅವರಿಗೂ ಗಂಜಿ ಮತ್ತು ಉಪ್ಪು ತುಂಬ ಇಷ್ಟವಂತೆ. ಆ ರೀತಿ ಒಂದು–ಒಂದೂವರೆ ವರ್ಷದ ಬದುಕು ಸಾಗಿಸಿದ ಮೇಲೆ ಮತ್ಯಾವುದೋ ಸಿನಿಮಾದ ಸಂಭಾವನೆ ಬಂದ ಮೇಲೆ ಸಾಂಬಾರ ಪುಡಿ, ಖಾರದ ಪುಡಿಗಳೆಲ್ಲ ಅಡುಗೆ ಮನೆಗೆ ಬಂದವಂತೆ’’.

‘‘ಬೆಂಗಳೂರಿನ ಹಳೆ ಮನೆಯಲ್ಲಿ ಯಾರೇ ಊಟದ ಸಮಯಕ್ಕೆ ಬಂದರೂ ‘ಊಟ ಆಯ್ತಾ ಎಂದು ಕೇಳಿಯೇ ಕೇಳುತ್ತಿದ್ದರು’. ಊಟ ಮಾಡಿಯೇ ಬಂದಿದ್ದರೂ ಒಂದು ತುತ್ತು ಉಣ್ಣಬೇಕು ಅನಿಸುವಂಥ ವಾತಾವರಣ ಆ ಮನೆಯಲ್ಲಿತ್ತು. ಆ ವಾತಾವರಣ ಸೃಷ್ಟಿಯಾಗಿದ್ದು ಪಾರ್ವತಮ್ಮನಿಂದ’’ ಎನ್ನುವ ಅವರು, ಪಾರ್ವತಮ್ಮನೇ ಹೇಳಿದ ಇನ್ನೊಂದು ಘಟನೆಯನ್ನೂ ನೆನಪಿಸಿಕೊಳ್ಳುತ್ತಾರೆ.

‘ಅವರ ಮನೆ ಪಕ್ಕ ಪುಟ್ಟ ಔಟ್‌ ಹೌಸ್‌ ಥರ ಇತ್ತು. ಅಲ್ಲಿ ರಾಜಕುಮಾರ್‌ ಅವರು ಚಡ್ಡಿ ಹಾಕಿಕೊಂಡು ಇಡೀ ದಿನ ಮೊಮ್ಮಕ್ಕಳ ಜತೆ ಆಡ ಆಡುತ್ತಿದ್ದರಂತೆ. ರಾತ್ರಿ ಎಲ್ಲ ಮೊಮ್ಮಕ್ಕಳೂ ಊಟ ಮಾಡಿದ್ದಾರೋ ಇಲ್ಲವೋ ನೋಡಿ, ನಂತರ ಹೊರಗೆ ಛಾವಣಿ ಕೆಳಗಡೆ ಗಂಡ–ಹೆಂಡತಿ ಇಬ್ಬರೂ ಮಲಗುತ್ತಿದ್ದರಂತೆ. ಅದು ಇಬ್ಬರಿಗೂ ತುಂಬ ಖುಷಿ ಕೊಡುತ್ತಿತ್ತಂತೆ.’

*


ಆಯ್ಕೆಯ ಸೂಕ್ಷ್ಮ: ‘ಪಾರ್ವತಮ್ಮ ಇನ್ನಿಲ್ಲ’ ಎಂಬ ಸುದ್ದಿ ಕೇಳಿದಾಗ ನಿರ್ದೇಶಕ ಸೂರಿ ಅವರಿಗೆ ನೆನಪಾಗಿದ್ದು ಅಪ್ಪು (ಪುನೀತ್‌ ರಾಜಕುಮಾರ್‌). ‘‘ನಾನು ಅಮ್ಮನ ಹತ್ರ ಮಾತಾಡಿದ್ದು ‘ಜಾಕಿ’ ಸಿನಿಮಾ ಮಾಡುವ ಸಮಯದಲ್ಲಿ. ಅಪ್ಪು ಅವರ ಜೊತಗೆ ಅಮ್ಮನನ್ನು ನೋಡುತ್ತಿದ್ದೆ. ಅವರಿಬ್ಬರೂ ತುಂಬ ಹಚ್ಚಿಕೊಂಡಿದ್ದರು. ನಾನೊಮ್ಮೆ ಕುಂವೀ ಅವರ ‘ಕನಕಾಂಗಿ ಕಲ್ಯಾಣ’ ಕಾದಂಬರಿ ಬಗ್ಗೆ ಮಾತನಾಡಿದಾಗ ‘ನಾನು ಅದನ್ನು ಓದಿದ್ದೀನಿ’ ಅಂದ್ರು. ನನಗೆ ಆಶ್ಚರ್ಯ ಆಯ್ತು. ಅವರು ತುಂಬ ಓದುತ್ತಿದ್ದರು. ಯಾವುದು ಸಿನಿಮಾ ಆಗಬಲ್ಲದು ಎಂಬ ಬಗ್ಗೆ ಅವರಿಗೆ ತುಂಬ ಸ್ಪಷ್ಟತೆ ಇತ್ತು.

ಯಾವ ಪಾತ್ರಕ್ಕೆ ಯಾರು ಸೂಕ್ತವಾಗಿ ಹೊಂದುತ್ತಾರೆ ಎಂದು ಕರಾರುವಾಕ್‌ ಆಗಿ ಗುರ್ತಿಸುವ ಶಕ್ತಿಯೂ ಅವರಿಗಿತ್ತು. ಇದಕ್ಕೆ ಉದಾಹರಣೆ ‘ಹೃದಯ ಹಾಡಿತು’ ಸಿನಿಮಾ. ಇದು ಶಿವರಾಜಕುಮಾರ್‌ ಅವರಿಗಾಗಿ ರೂಪಿಸಿದ ಕಥೆ. ಸ್ಕ್ರಿಪ್ಟ್‌ ಸಿದ್ಧವಾದ ಮೇಲೆ ಆ ಚಿತ್ರದ ಡಾಕ್ಟರ್‌ ಪಾತ್ರಕ್ಕೆ ಶಿವರಾಜಕುಮಾರ್‌ ಅವರಿಗಿಂತ ಅಂಬರೀಷ್‌ ಚೆನ್ನಾಗಿ ಹೊಂದುತ್ತಾರೆ ಎಂದು ಗುರ್ತಿಸಿ, ಅವರನ್ನು ಹಾಕಿಕೊಂಡು ಸಿನಿಮಾ ಮಾಡಬೇಕು ಎಂದು ನಿರ್ಧರಿಸಿದ್ದು ಪಾರ್ವತಮ್ಮ ಅವರೇ. ಹಾಗೆಯೇ ‘ಗಜಪತಿ ಗರ್ವಭಂಗ, ನಂಜುಂಡಿ ಕಲ್ಯಾಣ ಹೀಗೆ ಹಲವು ಸಿನಿಮಾಗಳನ್ನು ಈ ಕಾಲಕ್ಕೆ ಇಂಥ ಸಿನಿಮಾಗಳು ಬೇಕು ಎಂದು ಗುರ್ತಿಸುವ ಶಕ್ತಿ ತುಂಬ ಮಹತ್ವದ್ದು’’ ಎನ್ನುತ್ತಾರೆ ಸೂರಿ.

*


ತರತಮವಿಲ್ಲದ ಅಕ್ಕರೆ: ರಾಜಕುಮಾರ್‌ ಬ್ಯಾನರ್‌ನ ‘ಆನಂದ್‌’ ಚಿತ್ರದ ಮೂಲಕ ನಾಯಕನಟಿಯಾಗಿ ಪರಿಚಿತರಾದ ಸುಧಾರಾಣಿ, ರಾಜಕುಮಾರ್‌ ಮತ್ತು ಪಾರ್ವತಮ್ಮ ಇಬ್ಬರಿಗೂ ಆಪ್ತರಾಗಿದ್ದವರು. ‘ನನ್ನ ಬಣ್ಣದ ಬದುಕಿನ ಪ್ರತಿ ಹೆಜ್ಜೆಯಲ್ಲಿಯೂ ಪಾರ್ವತಮ್ಮನವರ ಪ್ರಭಾವದ ಗುರುತಿದೆ’ ಎನ್ನುತ್ತಾರೆ ಅವರು.

‘‘ಬಾಲ್ಯನಟಿಯಾಗಿದ್ದಾಗಲೂ ಅವರ ಬ್ಯಾನರ್‌ನಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿದ್ದೆ. ಮದ್ರಾಸ್‌ನ ಚಿ. ಉದಯಶಂಕರ್‌ ಮನೆಗೆ ಹೋದಾಗ ಅಲ್ಲಿ ಹೆಚ್ಚು ಕಮ್ಮಿ ಪ್ರತಿದಿನವೂ ಅಪ್ಪಾಜಿ ಮತ್ತು ಅಮ್ಮ ಬರ್ತಿದ್ರು. ಆಗೆಲ್ಲ ಅವರ ಬಗ್ಗೆ ಹೆಚ್ಚೆನೂ ಗೊತ್ತಿರಲಿಲ್ಲ. ಆದರೆ ನನ್ನನ್ನು ಮಗುವಾಗಿದ್ದಾಗಿನಿಂದಲೂ ಅವರು ನೋಡಿದ್ದಾರೆ. ನಂತರ ‘ಆನಂದ್‌’ ಸಿನಿಮಾ ಸಂದರ್ಭದಲ್ಲಿ ಅವರೇ ಹಟ ಹಿಡಿದು ನಾನೇ ನಾಯಕಿಯಾಗಬೇಕು ಎಂದು ಅವಕಾಶ ಕೊಡಿಸಿದರು.

ಆಗ ನನಗೆ ಉದ್ದ ಕೂದಲಿತ್ತು. ಪಾರ್ವತಮ್ಮ ಅವರು, ಕಾಲೇಜು ಹುಡುಗಿ ಪಾತ್ರಕ್ಕೆ ಇಷ್ಟುದ್ದದ ಕೂದಲು ಇದ್ದರೆ ಚೆನ್ನಾಗಿರಲ್ಲ ಎಂದು ನನ್ನ ಹೇರ್‌ ಕಟ್‌ ಮಾಡಿಸಿದರು. ನನ್ನ ಮೂಲ ಹೆಸರು ಜಯಶ್ರೀ ಎಂದಿತ್ತು. ‘ಜಯಶ್ರೀ ಎನ್ನುವವರು ಇದ್ದಾರೆ’ ಎಂದು ಹೇಳಿ ನನ್ನ ಜಾತಕ, ಜನ್ಮದಿನಾಂಕ ತೆಗೆದುಕೊಂಡು ವಿಚಾರಿಸಿ ‘ಸುಧಾರಾಣಿ’ ಎಂಬ ಹೆಸರನ್ನು ಆಯ್ಕೆ ಮಾಡಿದ್ದರೂ ಅವರೇ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. 
‘ಆನಂದ್‌’ ಅಷ್ಟೇ ಅಲ್ಲ, ಸುಧಾರಾಣಿ ಸಾಕಷ್ಟು ಸಿನಿಮಾಗಳನ್ನು ರಾಜಕುಮಾರ್‌ ಬ್ಯಾನರ್‌ನಲ್ಲಿ ಮಾಡಿದ್ದಾರೆ.

‘ಅಪ್ಪಾಜಿ ಮತ್ತು ಅಮ್ಮ ಇಬ್ಬರಿಗೂ ನಾನು ನೆಚ್ಚಿನವಳಾಗಿದ್ದೆ. ನಂತರದ ದಿನಗಳಲ್ಲಿಯೂ ಸಿನಿಮಾಗಳ ಆಯ್ಕೆ ವಿಷಯದಲ್ಲಿ, ಬೇರೆ ಭಾಷೆಗಳಲ್ಲಿ ನಟಿಸಬೇಕೇ ಎಂಬ ಪ್ರಶ್ನೆ ಬಂದಾಗ, ಅವರ ಬ್ಯಾನರ್‌ ಬಿಟ್ಟು ಬೇರೆ ಬ್ಯಾನರ್‌ ಸಿನಿಮಾ ಮಾಡುವಾಗ – ಹೀಗೆ ಪ್ರತಿ ಸಂದರ್ಭದಲ್ಲಿಯೂ ಅವರು ನನಗೆ ಮಾರ್ಗದರ್ಶಕರಾಗಿದ್ದರು’ ಎನ್ನುತ್ತಾರೆ.

‘ಪಾರ್ವತಮ್ಮನವರ ಮನೆಯಲ್ಲಿ ಯಾವಾಗಲೂ ಮನೆತುಂಬ ಜನ ಇರ್ತಿದ್ರು. ಸಿನಿಮಾದವರು, ನೆಂಟರು, ಇಷ್ಟರು... ಎಲ್ಲರನ್ನೂ ಒಂದೇ ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಅಂಥ ದೊಡ್ಡ ನಟನ ಹೆಂಡತಿಯಾಗಿ ಎಷ್ಟೆಲ್ಲ ಜಂಬ ಮಾಡಬಹುದಾಗಿತ್ತು. ಆದರೆ ಅವರು ಕೊನೆಯವರೆಗೂ ಸರಳವಾಗಿಯೇ ಇದ್ದರು. ಅವರು ತೊಡುತ್ತಿದ್ದ ಕಾಟನ್‌ ಸೀರೆಗಳು, ಹಣೆ ಕುಂಕುಮ, ಒಂದೇ ರೀತಿ ಮುಡಿಕಟ್ಟಿಕೊಳ್ಳುತ್ತಿದ್ದ ರೀತಿ ಎಲ್ಲವೂ ಕಣ್ಮುಂದೆ ಕಟ್ಟಿದಂತಿದೆ’ ಎನ್ನುತ್ತ ಭಾವುಕರಾದರು ಸುಧಾರಾಣಿ.

*
‘ಅವರಂಥ ಮೇರು ವ್ಯಕ್ತಿತ್ವದವರು ಇನ್ನು ತುಂಬ ದಿನ ನಮ್ಮ ಜೊತೆ ಇರಬೇಕಾಗಿತ್ತು. ಅವರನ್ನು ಉಳಿಸಿಕೊಳ್ಳುವ ಅದೃಷ್ಟ ನಮಗಿಲ್ಲ’ ಎನ್ನುವ ಅವರ ಮಾತು, ‘ಅಮ್ಮ’ನನ್ನು ಕಳೆದುಕೊಂಡ ಚಿತ್ರರಂಗ ಮತ್ತು ಸಿನಿರಸಿಕರ ಹೃದಯದಲ್ಲಿ ಉಂಟಾದ ನಿರ್ವಾತದಲ್ಲಿನ ವಿಷಾದದ ಪ್ರತಿಧ್ವನಿಯೂ ಹೌದು.
–ತಾರಾ ಅನೂರಾಧಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT