‘ಸ್ಕಾಲರ್‌ಷಿಪ್‌–ಸ್ನೇಹಿತರ ಸಹಕಾರದಿಂದ ಸಾಧನೆ’

7

‘ಸ್ಕಾಲರ್‌ಷಿಪ್‌–ಸ್ನೇಹಿತರ ಸಹಕಾರದಿಂದ ಸಾಧನೆ’

Published:
Updated:
‘ಸ್ಕಾಲರ್‌ಷಿಪ್‌–ಸ್ನೇಹಿತರ ಸಹಕಾರದಿಂದ ಸಾಧನೆ’

ವಿಜಯಪುರ: ‘ಪಿಯುಸಿ, ಎಂಜಿನಿಯರಿಂಗ್ ಶಿಕ್ಷಣಕ್ಕೆ ಸ್ಕಾಲರ್‌ಷಿಪ್‌ ಆಸರೆಯಾದರೆ, ಯುಪಿಎಸ್‌ಸಿ ಮುಖ್ಯ ಪರೀಕ್ಷೆಯಲ್ಲಿ 1,039ನೇ ರ‍್ಯಾಂಕ್ ಗಳಿಸಲು ಸ್ನೇಹಿತರು ನೀಡಿದ ಸಹಕಾರವೇ ಕಾರಣ. ಅವರ ಸಹಕಾರವನ್ನು ಉಸಿರು ಇರೋ ತನಕ ಮರೆಯಂಗಿಲ್ಲ..’

ಜಿಲ್ಲೆಯ ಬಸವನಬಾಗೇವಾಡಿ ತಾಲ್ಲೂಕಿನ ಕಲಗುರ್ಕಿ ಗ್ರಾಮದ ಸೀತವ್ವ–ರಾಮಪ್ಪ ನಡುವಿನಮನಿ ದಂಪತಿಯ ಪುತ್ರ ಅವಿನಾಶ ನಡುವಿನಮನಿ ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡ ಮನದಾಳದ ಮಾತುಗಳಿವು.

‘ನನ್ನ ಸಾಧನೆ ಅಪ್ಪ–ಅವ್ವಗಿಂತ ಸ್ನೇಹಿತರಿಗೆ ಅಪಾರ ಖುಷಿ ನೀಡಿದೆ. ಯಶಸ್ಸೂ ಸ್ನೇಹಿತರಿಗೆ ಸಲ್ಲಬೇಕು. ಅವರು ನೀಡಿದ ಸಹಕಾರದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದರು.

ಹುಬ್ಬಳ್ಳಿಯ ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ‘ಎಲೆಕ್ಟ್ರಾನಿಕ್ಸ್‌ ಅಂಡ್‌ ಕಮ್ಯುನಿಕೇಷನ್‌’ ವಿಭಾಗದಲ್ಲಿ ಓದುತ್ತಿದ್ದಾಗ ಆತ್ಮೀಯ ಗೆಳೆಯರಾದ ಉತ್ತರ ಕನ್ನಡ ಜಿಲ್ಲೆಯ ಗಿರೀಶ, ಹಾವೇರಿಯ ಹರೀಶ, ಗದಗದ ಪ್ರಶಾಂತ, ವಿಜಯಪುರದ ಅಭಿಲಾಷ ಬೆಂಬಲಕ್ಕೆ ನಿಂತರು.

ಎಂಜಿನಿಯರಿಂಗ್‌ ಶಿಕ್ಷಣ ಮುಗಿದ ಬಳಿಕ ಐಟಿ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಸೇರಿದ ಅವರು, ‘ನಿನಗೆ ಸಹಕಾರ ನೀಡುತ್ತೇವೆ. ನಿನ್ನ ಕನಸಿನ ಗುರಿಯತ್ತ ನೀ ಸಾಗು’ ಎಂಬ ಅಭಯ ನೀಡಿದ್ದರು. ಮಾತಿನಂತೆ ನಡೆದುಕೊಂಡ ಅವರು, ನಾಲ್ಕು ವರ್ಷ ಪ್ರತಿ ತಿಂಗಳು ₹10 ಸಾವಿರ ಕಳುಹಿಸುತ್ತಿದ್ದರು. ಇದರ ಜೊತೆಗೆ ನವದೆಹಲಿಯ ಕೋಚಿಂಗ್‌ ಕ್ಲಾಸ್‌ವೊಂದರ ಜತೆ ಒಪ್ಪಂದ ಮಾಡಿಕೊಂಡು ಯುಪಿಎಸ್‌ಸಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ನೋಟ್ಸ್‌, ಪ್ರಶ್ನೆ ಸಿದ್ಧಪಡಿಸಿಕೊಡುತ್ತಿದ್ದೆ. ಪ್ರಶ್ನೆಯೊಂದಕ್ಕೆ ₹ 40 ಸಿಕ್ಕರೆ, ನೋಟ್ಸ್‌ಗೂ ಹಣ ದೊರೆಯುತ್ತಿತ್ತು’ ಎಂದು ನೆನಪಿಸಿಕೊಂಡರು.

‘ಅದೇ ಹಣದಲ್ಲಿ ಬೆಂಗಳೂರಿನಲ್ಲಿ ಕೋಚಿಂಗ್‌ ಕ್ಲಾಸ್‌ಗೆ ಸೇರಿದೆ.  ಆರು ಮಂದಿ ಮನೆ ಮಾಡಿಕೊಂಡು ಅಭ್ಯಾಸ ಮಾಡುತ್ತಿದ್ದೆವು. ಅವರಲ್ಲಿ, ನಾನು ಹಾಗೂ ಹುಬ್ಬಳ್ಳಿಯ ಫಕ್ಕೀರೇಶ ಬದಾಮಿ ಆಯ್ಕೆಯಾಗಿದ್ದೇವೆ’ ಎಂದರು.

ಕನ್ನಡ ಮಾಧ್ಯಮ: ‘ನಾಲ್ಕನೇ ಪ್ರಯತ್ನದಲ್ಲಿ ಯಶಸ್ಸು ಕಂಡಿರುವೆ. ನನ್ನೂರಿನಿಂದ ಐದು ಕಿ.ಮೀ. ದೂರದಲ್ಲಿರುವ ಮುಳವಾಡಕ್ಕೆ ಪ್ರೌಢಶಾಲೆಗೆ ಸೈಕಲ್‌ನಲ್ಲಿ ಹೋಗುತ್ತಿದ್ದೆ. ಎಸ್‌ಎಸ್‌ಎಲ್‌ಸಿವರೆಗೂ ಕನ್ನಡ ಮಾಧ್ಯಮದಲ್ಲಿ ಓದಿದ್ದೇನೆ.  ಯುಪಿಎಸ್‌ಸಿ ಪರೀಕ್ಷೆಯನ್ನೂ ಕನ್ನಡದಲ್ಲಿಯೇ  ಬರೆದಿರುವೆ’ ಎಂದರು.

ಈ ಹಿಂದೆ ಓದಿಗೆ ಆದ್ಯತೆ ನೀಡಿದ್ದೆ. ಈ ಬಾರಿ ಬರವಣಿಗೆಗೆ ಒತ್ತು ನೀಡಿದ್ದೆ. ‘ಐಎಎಸ್‌ ಹುದ್ದೆ ಪಡೆಯಬೇಕೆಂಬ ಹಠ ನನ್ನದು. ಇದಕ್ಕಾಗಿ ಮತ್ತೊಮ್ಮೆ ಪರೀಕ್ಷೆಗೆ ಸಿದ್ಧತೆ ನಡೆಸುವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry