ಮುಂದುವರಿದ ಡಿಕೆಶಿ ಮುನಿಸು

7

ಮುಂದುವರಿದ ಡಿಕೆಶಿ ಮುನಿಸು

Published:
Updated:
ಮುಂದುವರಿದ ಡಿಕೆಶಿ ಮುನಿಸು

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷ ಸ್ಥಾನ ಕೈತಪ್ಪಿದ್ದರಿಂದ  ಮುನಿಸಿಕೊಂಡಿರುವ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಮನವೊಲಿಸಲು ರಾಜ್ಯ ನಾಯಕರು ಮುಂದಾಗಿದ್ದಾರೆ.

ಆದರೆ, ಶಿವಕುಮಾರ್‌ ಯಾರನ್ನೂ ಭೇಟಿ ಮಾಡದೆ ನುಣುಚಿಕೊಳ್ಳುತ್ತಿದ್ದಾರೆ. ಸಾಮಾನ್ಯವಾಗಿ ವಿಧಾನಸೌಧದ ಅಧಿಕೃತ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸುತ್ತಿದ್ದ ಅವರು ಶುಕ್ರವಾರ ಸದಾಶಿವನಗರದ ತಮ್ಮ ನಿವಾಸದಲ್ಲಿ ಸಭೆ ನಡೆಸಿದ್ದಾರೆ.

ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಿಂದಲೂ  ದೂರ ಉಳಿಯುವ ಮೂಲಕ ಅಸಮಾಧಾನ ಹೊರಹಾಕಿದ್ದ ಶಿವಕುಮಾರ್‌, ಸಿದ್ದಗಂಗಾ ಮಠಕ್ಕೆ ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್‌ ಶುಕ್ರವಾರ ಭೇಟಿ ನೀಡಿದ ಸಂದರ್ಭದಲ್ಲೂ ಅವರ ಜೊತೆ ಹೋಗದೆ ಅಂತರ ಕಾಯ್ದುಕೊಂಡಿದ್ದಾರೆ.

ಪರಮೇಶ್ವರ್‌ ಜೊತೆ ಕಾರ್ಯಾಧ್ಯಕ್ಷರಾದ  ದಿನೇಶ್‌ ಗುಂಡೂರಾವ್‌ ಹಾಗೂ ಎಸ್‌.ಆರ್‌. ಪಾಟೀಲ ತೆರಳಿ ಶ್ರೀಗಳ ಆಶೀರ್ವಾದ ಪಡೆದರು. ಕೆಪಿಸಿಸಿ ಅಧ್ಯಕ್ಷರು ಶಿವಕುಮಾರ್‌ಗೂ ಆಹ್ವಾನ ನೀಡಿದ್ದರು ಎಂದು ಮೂಲಗಳು ತಿಳಿಸಿವೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿಯೇ ಸಿಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಅವರು  ನಿರಾಶರಾಗಿದ್ದಾರೆ. ಅವರಿಗೆ ಹೈಕಮಾಂಡ್‌ ಚುನಾವಣಾ ಪ್ರಚಾರ ಸಮಿತಿಯ ಹೊಣೆ ವಹಿಸಿದೆ. ಆದರೂ, ಪಟ್ಟುಬಿಡದೆ ದೆಹಲಿ ಮಟ್ಟದಲ್ಲಿ ಲಾಬಿ ಮುಂದುವರೆಸಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ವಿವೇಚನೆಗೆ: ‘ಇಂಧನ ಖಾತೆಯೇ ಸಾಕಾಗಿದೆ. ಈ ಖಾತೆಯಲ್ಲಿ ಇದ್ದುಕೊಂಡೇ ಜನರ ಸಮಸ್ಯೆಗೆ ಸ್ಪಂದಿಸಬೇಕಾಗಿದೆ. ಅಷ್ಟಕ್ಕೂ ಗೃಹ ಖಾತೆ ನೀಡುವ ವಿಚಾರ ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟಿದ್ದು’ ಎಂದು ಶಿವಕುಮಾರ್‌ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಶುಕ್ರವಾರ ಮಾತನಾಡಿದ ಅವರು, ‘ಯಾವ ಜವಾಬ್ದಾರಿ ಕೊಟ್ಟರೂ ನಾನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂಬ ವಿಶ್ವಾಸ ಮುಖ್ಯಮಂತ್ರಿ ಮತ್ತು ಹೈಕಮಾಂಡ್‌ಗೆ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry