ಕಿರುಕುಳ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

7

ಕಿರುಕುಳ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

Published:
Updated:
ಕಿರುಕುಳ: ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಶಿಫಾರಸು

ತುಮಕೂರು: ‘ಮಹಿಳೆಯರೂ ಎಂಬುದನ್ನು ನೋಡದೇ ಜೈಲರ್ ಶೈನಜಾ ಹಾಗೂ ಕೆಲ ಸಿಬ್ಬಂದಿ ಮನುಷ್ಯತ್ವ ಮರೆತು ಮಹಿಳಾ ಕೈದಿಗಳಿಗೆ ಶೋಷಣೆ ಮಾಡಿದ್ದಾರೆ. ಕೈದಿಗಳು ದೂರು ಸಲ್ಲಿಸಿದ್ದು, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡುತ್ತೇನೆ’ ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಹೇಳಿದರು.

ಮಹಿಳಾ ಕೇಂದ್ರ ಕಾರಾಗೃಹಕ್ಕೆ ಶುಕ್ರವಾರ ಭೇಟಿ ನೀಡಿದ್ದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಂಬಂಧಿಕರು ನೋಡಲು ಬಂದರೆ, ಊಟ ಕೇಳಿದರೆ, ಮೊಬೈಲ್‌ನಲ್ಲಿ ಸಂಬಂಧಿಕರೊಂದಿಗೆ ಮಾತನಾಡಲು ಎಲ್ಲದಕ್ಕೂ ಹಣ ಪಡೆಯುತ್ತಾರೆ. ಹಲ್ಲೆ ಮಾಡಿ ಶೋಷಣೆ ಮಾಡುತ್ತಾರೆ ಎಂದು ಕೈದಿಗಳು ದೂರಿದ್ದಾರೆ’  ಎಂದರು.

‘ಸಲ್ಮಾ ಎಂಬ ಕೈದಿ ಸರಿಯಾಗಿ ಊಟ ಕೊಡಿ ಎಂದು ಕೇಳಿದ್ದಕ್ಕೆ ಆಕೆಯ ಮೇಲೆ ಹಲ್ಲೆ ಮಾಡಿ ಕೈ ಮುರಿದಿದ್ದಾರೆ. ಇನ್ನೊಬ್ಬ ಕೈದಿ ವಕೀಲರಿಗೆ ಕೊಡಲು ₹ 80 ಸಾವಿರ ಮೊತ್ತವನ್ನು ಕೈದಿ ಸಂಬಂಧಿಕ ಕೊಟ್ಟು ಹೋಗಿದ್ದರಂತೆ. ಶೈನಜಾ ಬಳಿ ಇಟ್ಟುಕೊಳ್ಳಲು ಕೊಟ್ಟರೆ ಅವರು ಮರಳಿ ₹ 60 ಸಾವಿರ ಮಾತ್ರ ಕೊಟ್ಟಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ’ ಎಂದು ವಿವರಿಸಿದರು.

‘ವೀಕ್ಷಕಿಯಾಗಿದ್ದ (ವಾಚರ್) ಉಮಾ, ಈಗ ಚಿತ್ರದುರ್ಗಕ್ಕೆ ವರ್ಗಾವಣೆಗೊಂಡಿದ್ದಾರೆ. ಆದರೆ, ಇಲ್ಲಿಯ ಕ್ವಾರ್ಟ್ರಸ್‌ನಲ್ಲಿಯೇ ಉಳಿದುಕೊಂಡಿದ್ದಾರಂತೆ. ಆಕೆಯ ಪತಿ ಮುರುಳಿಕೃಷ್ಣ, ಮೊಬೈಲ್‌ನಲ್ಲಿ ಮಹಿಳಾ ಕೈದಿಗಳ ವಿಡಿಯೊ ಮಾಡುವುದು, ದಿಟ್ಟಿಸಿ ನೋಡುವುದು, ಮೈ ಮೇಲೆ ಬೀಳುವ ಹಾಗೆ ಬರುವುದು ಸೇರಿ ಅನೇಕ ರೀತಿ ಕಿರುಕುಳ ನೀಡಿದ್ದಾನೆ ಎಂದು ಕೈದಿಗಳು ದೂರು ಸಲ್ಲಿಸಿದ್ದಾರೆ’ ಎಂದರು.

ಕಾರಾಗೃಹ ಪಕ್ಕದಲ್ಲಿರುವ ಬೃಹತ್ ಕಟ್ಟಡದ ಕಿಟಕಿಗಳಿಂದ ಕಾರಾಗೃಹದೊಳಗಿನ ದೃಶ್ಯಗಳನ್ನು ಯಾರೊ ವಿಡಿಯೊ ಮಾಡುತ್ತಾರೆ. ಜೈಲಿನಲ್ಲಿ ನಡೆಯುವ ಸಂಗತಿಗಳು ಟಿವಿಗಳಲ್ಲಿ ಪ್ರಸಾರ ಆಗಿವೆ. ಹೀಗಾದರೆ ನಮ್ಮ ಮಾನ ಮರ್ಯಾದೆ ಏನಾಗುತ್ತದೆ. ಕುಟುಂಬದವರು ನಮ್ಮ ಬಗ್ಗೆ ಏನು ತಿಳಿದುಕೊಳ್ಳುತ್ತಾರೆ ಎಂದು ಕೈದಿಗಳು ಅಳಲು ತೋಡಿಕೊಂಡರು ಎಂದು ಹೇಳಿದರು.

ವೃದ್ಧರು ಸೇರಿ ಈ ಮಹಿಳಾ ಕೇಂದ್ರ ಕಾರಾಗೃಹದಲ್ಲಿ 80 ಕೈದಿಗಳಿದ್ದು, ತಮಗಾಗುತ್ತಿರುವ ಶೋಷಣೆಯ ಬಗ್ಗೆ ಒಬ್ಬೊಬ್ಬರು ಒಂದೊಂದು ರೀತಿ ಹೇಳಿದ್ದಾರೆ ಎಂದು ತಿಳಿಸಿದರು.

‘ಜೈಲರ್‌ಗಳಾದ ಶೈನಜಾ, ರತ್ನಮ್ಮ, ವೀಕ್ಷಕಿ ಉಮಾ ಮತ್ತು ಉಮಾಳ ಗಂಡ ತಮಗೆ ಕಿರುಕುಳ ನೀಡಿದ್ದಾರೆ ಎಂದು ಹೇಳಿದ್ದಾರೆ. ಜೈಲರ್ ಶೈನಜಾ ವಿರುದ್ಧ ಪ್ರತಿಭಟನೆ ನಡೆಸಿದ್ದರಿಂದ ಅವರನ್ನು ಅನ್ಯ ಕಾರ್ಯನಿಮಿತ್ತ ವರ್ಗಾವಣೆ ಮಾಡಲಾಗಿದೆ. ಆದರೆ, ಕೂಲಂಕಷ ತನಿಖೆ ಮಾಡಿ ಕ್ರಮ ಜರುಗಿಸಬೇಕು ಎಂಬುದು ಕೈದಿಗಳ ಬೇಡಿಕೆಯಾಗಿದೆ. ಇದಕ್ಕಾಗಿಯೇ ಅವರು ಶುಕ್ರವಾರ ಪ್ರತಿಭಟನೆ ಮುಂದುವರಿಸಿದ್ದರು. ನಾನು ಹಣ್ಣಿನ ರಸ ನೀಡಿ ಪ್ರತಿಭಟನೆ ಹಿಂದಕ್ಕೆ ಪಡೆಯಲು ಕೋರಿದಾಗ ನಿಲ್ಲಿಸಿದರು’ ಎಂದು ತಿಳಿಸಿದರು.

‘ಕಾರಾಗೃಹ ಅಧೀಕ್ಷಕಿ ಬಗ್ಗೆ ಕೈದಿಗಳು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದರು’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry