ಕಾಡು–ನಾಡಲ್ಲಿ ಸಸಿ ನೆಡಲು ಸಿದ್ಧತೆ

7
ಜಿಲ್ಲೆಯಲ್ಲಿ ಅರಣ್ಯ ಇಲಾಖೆಗೆ 15 ಲಕ್ಷ ಗಿಡ ನೆಡುವ ಗುರಿ, ರೈತರಿಗೂ ಕಡಿಮೆ ದರದಲ್ಲಿ ವಿತರಣೆ

ಕಾಡು–ನಾಡಲ್ಲಿ ಸಸಿ ನೆಡಲು ಸಿದ್ಧತೆ

Published:
Updated:
ಕಾಡು–ನಾಡಲ್ಲಿ ಸಸಿ ನೆಡಲು ಸಿದ್ಧತೆ

ರಾಮನಗರ: ಉತ್ತಮ ಮಳೆಯಿಂದಾಗಿ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ ಚಟುವಟಿಕೆ ಚುರುಕಾಗಿದೆ. ಕಾಡಿನ ಒಳ–ಹೊರಗೆ ಸಸಿಗಳನ್ನು ನೆಡಲು ಅರಣ್ಯ ಇಲಾಖೆಯು ಸಿದ್ಧತೆ ನಡೆಸಿದ್ದರೆ, ರೈತರೂ ತಮಗಿಷ್ಟವಾದ ಗಿಡಗಳನ್ನು ಕೊಂಡೊಯ್ಯುತ್ತಿದ್ದಾರೆ.

ಬೆಂಗಳೂರು–ಮೈಸೂರು ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಬಳಿಯ ಯಂಗಯ್ಯನಕೆರೆ ಸಸ್ಯಕ್ಷೇತ್ರದಲ್ಲಿ ಸದ್ಯ ಚಟುವಟಿಕೆ ಗರಿಗೆದರಿವೆ. ಈ ಬಾರಿ ಮುಂಗಾರಿಗೆಂದೇ ಬೆಳೆಸಿರುವ ಗಿಡ ನೆಡಲು ಆಯಕಟ್ಟಿನ ಸ್ಥಳಗಳಿಗೆ ಸಾಗಿಸಲಾಗುತ್ತಿದೆ. ಹಂತಹಂತವಾಗಿ ನೆಡಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ.

ಈ ಬಾರಿ ಜಿಲ್ಲೆಯಲ್ಲಿ ಸುಮಾರು 15 ಲಕ್ಷ ಸಸಿಗಳನ್ನು ನೆಡುವ ಗುರಿಯನ್ನು ಅರಣ್ಯ ಇಲಾಖೆ ಹೊಂದಿದೆ.  ಇಲಾಖೆ ಅಧೀನದಲ್ಲಿರುವ ರಾಮನಗರದ ಯಂಗಯ್ಯನಕೆರೆ, ಚನ್ನಪಟ್ಟಣದ ಕೆಂಗಲ್‌, ಕನಕಪುರದ ಕೋಡಿಹಳ್ಳಿ, ಸಾತನೂರು ಹಾಗೂ ಮಾಗಡಿ ತಾಲ್ಲೂಕಿನಲ್ಲಿರುವ ಎರಡು ಕ್ಷೇತ್ರಗಳೂ ಸೇರಿದಂತೆ ಪ್ರಾದೇಶಿಕ ಅರಣ್ಯ ವ್ಯಾಪ್ತಿಯ ಒಟ್ಟು 6 ಕ್ಷೇತ್ರಗಳಲ್ಲಿ ಈ ಸಸಿಗಳನ್ನು ಬೆಳೆಸಲಾಗಿದೆ.

ದೇಸಿ ಸಸಿಗಳಿಗೆ ಆದ್ಯತೆ: ಈ ಮೊದಲು ಕಾಡುಗಳಲ್ಲಿ ಹೆಚ್ಚಾಗಿ ನೀಲಗಿರಿ ಹಾಗೂ ಅಕೇಶಿಯಾ ಸಸಿಗಳನ್ನು ನೆಡಲಾಗುತ್ತಿತ್ತು. ಇವುಗಳಿಂದಾಗುವ ದುಷ್ಪರಿಣಾಮ ಅರಿತು ಈ ಗಿಡಗಳಿಗೆ ನಿಷೇಧ ಹೇರಿದ ಬಳಿಕ ಇಲಾಖೆಯು ಈ ಸಸಿಗಳನ್ನು ಬೆಳೆಸುವುದನ್ನು ಕೈಬಿಟ್ಟಿದೆ. ಬದಲಾಗಿ ದೇಸಿ ಜಾತಿಯ ಸಸಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಬೆಳೆಸಲಾಗಿದೆ.

ತಿಹೆಚ್ಚು ಪ್ರಮಾಣದಲ್ಲಿ ಹೊಂಗೆ ಸಸಿಗಳನ್ನು ಪಾಲನೆ ಮಾಡಲಾಗಿದೆ. ಇದಲ್ಲದೆ ತೇಗ, ಹೊನ್ನೆ, ಮತ್ತಿ, ನೇರಳೆ ಸೇರಿದಂತೆ 10–15 ಬಗೆಯ ಗಿಡಗಳನ್ನು ಕಾಡು ಹಾಗೂ ಕಾಡಂಚಿನಲ್ಲಿ ನೆಟ್ಟು ಬೆಳೆಸಲಾಗುವುದು ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದೇವರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ರೈತರಿಗೆ ವಿತರಣೆ: ರೈತರಿಗೆ ಅನುಕೂಲವಾಗುವ ಹತ್ತು ಹಲವು ಬಗೆಯ ಸಸಿಗಳನ್ನು ಸಾಮಾಜಿಕ ಅರಣ್ಯ ಇಲಾಖೆ  ಸಸ್ಯಕ್ಷೇತ್ರದಲ್ಲಿ ಬೆಳೆಸಲಾಗುತ್ತಿದ್ದು, ಈಗಾಗಲೇ ಇವುಗಳಿಗೆ ಬೇಡಿಕೆ ಆರಂಭವಾಗಿದೆ.

‘ಜಾನಪದ ಲೋಕ’ ಎದುರಿನ ಸಾಮಾಜಿಕ ಅರಣ್ಯ ಸಸ್ಯಕ್ಷೇತ್ರದಲ್ಲಿ ಸಾವಿರಾರು ಸಸಿಗಳು ಮಾರಾಟಕ್ಕೆ ಲಭ್ಯವಿದೆ. ರೈತರು ಹೊಲದ ಬದುಗಳಲ್ಲಿ ನೆಡುವ ಸಲುವಾಗಿ ತುರುಕು ಬೇವು, ಸಿಲ್ವರ್‌, ನೇರಳೆ ಮೊದಲಾದ ಸಸಿಗಳನ್ನು ಹೆಚ್ಚಾಗಿ ಒಯ್ಯುತ್ತಿದ್ದಾರೆ.

ಕೈತೋಟಕ್ಕೆ ಒತ್ತು: ಈಚಿನ ದಿನಗಳಲ್ಲಿ ಜನರಲ್ಲಿ ಕೈತೋಟದ ಬಗ್ಗೆ ಅರಿವು ಹೆಚ್ಚಾಗುತ್ತಿದೆ. ಇಲ್ಲಿ ಬೆಳೆಸುವ ಸಸಿಗಳನ್ನು ಹುಡುಕಿಕೊಂಡು ಸಸ್ಯಕ್ಷೇತ್ರಗಳಿಗೆ ಬರಲು ಆರಂಭಿಸಿದ್ದಾರೆ. ನುಗ್ಗೆ, ಪಪ್ಪಾಯಿ, ನಿಂಬೆ ಮೊದಲಾದ ಸಸಿಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದೀಗ ಮಳೆಗಾಲ ಆರಂಭವಾಗಿರುವ ಕಾರಣ ಹೆಚ್ಚಿನ ಜನರು ಇತ್ತ ಬಂದು ವಿಚಾರಿಸಿಕೊಂಡು ಹೋಗುತ್ತಿದ್ದಾರೆ ಎನ್ನುತ್ತಾರೆ ಇಲ್ಲಿನ ಸಸ್ಯಕ್ಷೇತ್ರದ ಸಿಬ್ಬಂದಿ.

**

ಒಂದು ರೂಪಾಯಿಗೆ ಒಂದು ಗಿಡ

ಜನರಲ್ಲಿ ಪರಿಸರ ಪ್ರೇಮವನ್ನು ಬೆಳೆಸಿ ಗಿಡ ನೆಡುವ ಪ್ರವೃತ್ತಿಯನ್ನು ಹೆಚ್ಚಿಸುವ ಸಲುವಾಗಿ ಸಾಮಾಜಿಕ ಅರಣ್ಯ ವಿಭಾಗವು ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯ ಅಡಿ ಅತ್ಯಂತ ಕಡಿಮೆ ದರದಲ್ಲಿ ಸಸಿಗಳನ್ನು ವಿತರಿಸುತ್ತಿದೆ.

5X8 ಹಾಗೂ 6X9 ಇಂಚಿಗಿಂತ ಕಡಿಮೆ ಎತ್ತರವುಳ್ಳ ಸಸಿಗಳನ್ನು ಕೇವಲ ಒಂದು ರೂಪಾಯಿಯ ಕನಿಷ್ಠ ದರದಲ್ಲಿ ನೀಡಲಾಗುತ್ತಿದೆ. 8X12 ಅಳತೆಯ ಸಸಿಗಳಿಗೆ ಮೂರು ರೂಪಾಯಿ ದರ  ನಿಗದಿ ಪಡಿಸಲಾಗಿದೆ.

10X16 ಅಳತೆಯ ಸಸಿಗಳಿಗೆ ₹40 ಹಾಗೂ 14X20 ಅಳತೆಯ ಸಸಿಗಳಿಗೆ ₹60 ದರವಿದೆ. ಲಭ್ಯವಿರುವ ಪ್ರಮಾಣವನ್ನು ಆಧರಿಸಿ ಈ ಸಸಿಗಳನ್ನು ಪ್ರತಿ ವ್ಯಕ್ತಿಗೆ ಗರಿಷ್ಠ 50ರವರೆಗೂ ನೀಡಲಾಗುವುದು ಎಂದು ಸಸ್ಯಕ್ಷೇತ್ರದ ಸಿಬ್ಬಂದಿ ತಿಳಿಸಿದರು.

**

ಸದ್ಯ ಉತ್ತಮ ಮಳೆಯಾಗುತ್ತಿರುವ ಕಾರಣ ಸಸಿ ನೆಡುವ ಕಾರ್ಯಕ್ಕೆ ಚಾಲನೆ ದೊರೆತಿದೆ. ಈ ಬಾರಿ ಜಿಲ್ಲೆಯಲ್ಲಿ 15 ಲಕ್ಷ ಸಸಿಗಳನ್ನು ನೆಡಲು ಉದ್ದೇಶಿಸಲಾಗಿದೆ

-ದೇವರಾಜು,

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry