ಅಪ್ಪನ ಗಂಟು

7

ಅಪ್ಪನ ಗಂಟು

Published:
Updated:
ಅಪ್ಪನ ಗಂಟು

ಒಂದು ಊರಿನಲ್ಲಿ ರಾಮಪ್ಪ ಎಂಬುವವನಿದ್ದ. ಅವನಿಗೆ ನಾಲ್ವರು ಗಂಡುಮಕ್ಕಳು. ತಕ್ಕಮಟ್ಟಿಗೆ ಆಸ್ತಿಯೂ ಇದ್ದು, ರಾಮಪ್ಪನೇ ಮನೆಯ ಯಜಮಾನನಾಗಿದ್ದ. ಎಲ್ಲರೂ ನೆಮ್ಮದಿಯಿಂದ ಇದ್ದರು. ಒಂದೇ ಕೊರತೆಯೆಂದರೆ ರಾಮಪ್ಪನ ಹೆಂಡತಿ ಬಹಳ ಹಿಂದೆಯೇ ತೀರಿಹೋಗಿದ್ದು. ರಾಮಪ್ಪ, ಮಕ್ಕಳನ್ನು ಕಷ್ಟಪಟ್ಟು ಬೆಳೆಸಿ, ನಾಲ್ವರಿಗೂ ಮದುವೆ ಮಾಡಿದ ಮೇಲೆ ಮನೆಯ ನೆಮ್ಮದಿ  ಹಾಳಾಗತೊಡಗಿತು.

ಸೊಸೆಯಂದಿರಿಗೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಅವರ ಮಾತನ್ನು ಕಟ್ಟಿಕೊಂಡು ಮಕ್ಕಳು ಜಗಳವಾಡುತ್ತಿದ್ದರು. ಮನೆ ಪಾಲಾಗುತ್ತದಲ್ಲ ಎಂದು ರಾಮಪ್ಪನಿಗೆ ನೆಮ್ಮದಿ ಹಾಳಾಯಿತು. ‘ಹುಟ್ಟುತ್ತಾ ಅಣ್ಣತಮ್ಮ; ಬೆಳೆಯುತ್ತಾ ದಾಯಾದಿಗಳು, ಆಸ್ತಿ–ಮನೆ ಪಾಲು ಮಾಡಿಕೊಡು. ಅವರ ಬಾಳು ಅವರು ಬದುಕಲಿ’ ಎಂದು ಊರವರು ಸಲಹೆ ಕೊಟ್ಟರು. ಅದರಂತೆ ತನ್ನ ಆಸ್ತಿಯನ್ನು ನಾಲ್ಕು ಭಾಗ ಮಾಡಿ ನಾಲ್ವರಿಗೂ ಕೊಟ್ಟ.

ಆದರೆ ರಾಮಪ್ಪನನ್ನು ನೋಡಿಕೊಳ್ಳುವವರು ಯಾರು? ಯಾವ ಸೊಸೆಯೂ ಮಗನೂ ‘ನಾವು ನೋಡಿಕೊಳ್ಳುತ್ತೇವೆ’ ಎಂದು ಮುಂದೆ ಬರಲಿಲ್ಲ. ಆಗ ಊರವರು, ‘ಒಬ್ಬೊಬ್ಬರ ಮನೆಯಲ್ಲಿ ಮೂರು ಮೂರು ತಿಂಗಳು ಇದ್ದುಬಿಡು’ ಎಂದರು. ರಾಮಪ್ಪನೂ ಒಪ್ಪಿದ; ಮಕ್ಕಳು ಸೊಸೆಯರೂ ಒಪ್ಪಿದರು. ಸ್ವಲ್ಪ ದಿನಗಳಲ್ಲೇ ರಾಮಪ್ಪನಿಗೆ ತಾನು ಒಬ್ಬಂಟಿಯಾದೆ, ಮಕ್ಕಳು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎನ್ನಿಸತೊಡಗಿತು. ‘ಏನೂ ಕೆಲಸವಿಲ್ಲದ ಮುದುಕ’ ಎಂದು ಸೊಸೆಯರೂ ಹೊತ್ತು ಹೊತ್ತಿಗೆ ಸರಿಯಾಗಿ ಊಟ ಕೊಡುತ್ತಿರಲಿಲ್ಲ. ಸ್ನಾನಕ್ಕೆ ನೀರು ಹಾಕುತ್ತಿರಲಿಲ್ಲ. ಬಹಳ ಬೇಸರವಾಯಿತು. ‘ನಾನು ಮಕ್ಕಳನ್ನು ಸಾಕಿ ಸಲಹಿದೆ. ಆದರೆ ಆ ನಾಲ್ವರಿಗೆ ನನ್ನೊಬ್ಬನನ್ನು ನೋಡಿಕೊಳ್ಳಲು ಆಗುತ್ತಿಲ್ಲವಲ್ಲ’ ಎಂದು ಕೊರಗು ಹತ್ತಿಸಿಕೊಂಡು ಮಂಕುಬಡಿದವನಂತೆ ಕುಳಿತುಬಿಡುತ್ತಿದ್ದನು.

ಒಂದು ದಿವಸ ಊರಾಚೆ ಬಾವಿಯಿಂದ ನೀರು ಸೇದಿಕೊಂಡು ಸ್ನಾನ ಮಾಡುತ್ತಿದ್ದ. ಆಗ ಅಲ್ಲಿಗೆ ಒಬ್ಬ ಸನ್ಯಾಸಿ ಬಂದು, ‘ಕುಡಿಯಲು ನೀರು ಕೊಡುತ್ತೀಯಪ್ಪಾ’ ಎಂದು ಕೇಳಿದನು. ಏನೂ ಮಾತನಾಡದ ರಾಮಪ್ಪ, ನೀರು ಸೇದಿ ಕೊಟ್ಟನು. ನೀರು ಕುಡಿದು ದಣಿವಾರಿಸಿಕೊಂಡ ಸನ್ಯಾಸಿ, ‘ಏಕೋ ನಿನ್ನ ಬಾಳಲ್ಲಿ ನೆಮ್ಮದಿ ಇಲ್ಲ ಅನ್ನಿಸುತ್ತಿದೆ. ನೀನು ನನ್ನ ಹತ್ತಿರ ಕಷ್ಟ ಸುಖ ಹೇಳಿಕೊಂಡರೆ, ಏನಾದರೂ ಪರಿಹಾರ ಸೂಚಿಸುತ್ತೇನೆ. ನೋವು ಹಂಚಿಕೊಂಡರೆ ನಿನ್ನ ಮನಸ್ಸಾದರೂ ಹಗುರ ಆಗುತ್ತೆ’ ಎಂದನು. ಸನ್ಯಾಸಿಯ ಮಾತುಗಳಿಂದ ಸಾಂತ್ವನ ಹೊಂದಿದ ರಾಮಪ್ಪ ತನ್ನ ಗೋಳು ಹೇಳಿದ. ‘ತಾನು ಬೆಳೆಸಿದ ಮಕ್ಕಳೇ ತನ್ನನ್ನು ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಬದುಕು ಬೇಡವಾಗಿದೆ’ ಎಂದ. ಸನ್ಯಾಸಿ ಸ್ವಲ್ಪ ಹೊತ್ತು ಯೋಚಿಸಿ, ‘ನಾಳೆ ಇದೇ ಸಮಯಕ್ಕೆ ಇಲ್ಲಿಗೆ ಬಾ. ನಿನ್ನ ಸಮಸ್ಯೆಗೆ ನಾನು ಪರಿಹಾರ ತರುತ್ತೇನೆ’ ಎಂದು ಹೊರಟುಹೋದ.

ಮರುದಿನ ರಾಮಪ್ಪ ಅಲ್ಲೇ ಹೋಗಿ ಕಾಯುತ್ತಿದ್ದ. ಸನ್ಯಾಸಿ ಬಂದವನೆ ಒಂದು ಪೆಟ್ಟಿಗೆಯನ್ನು ರಾಮಪ್ಪನಿಗೆ ಕೊಟ್ಟು, ಕಿವಿಯಲ್ಲಿ ಹೇಳಬೇಕಾದ್ದನ್ನೆಲ್ಲಾ ಹೇಳಿ, ಕೊನೆಯಲ್ಲಿ ‘ನೀನೆಂದಿಗೂ ಈ ಪೆಟ್ಟಿಗೆಯೊಳಗಿನ ಗಂಟನ್ನು ಬಿಚ್ಚಬಾರದು’ ಎಂದು ಎಚ್ಚರಿಕೆ ಕೊಟ್ಟು ಹೊರಟುಹೋದನು. ಇತ್ತ ರಾಮಪ್ಪ ಆ ಪೆಟ್ಟಿಗೆಯನ್ನು ಹಿಡಿದುಕೊಂಡು ಊರೊಳಗೆ ಬಂದ. ಸೊಸೆಯರು ಮಾವ ಪೆಟ್ಟಿಗೆಯೊಂದಿಗೆ ಬರುವುದನ್ನು ನೋಡಿ, ಒಬ್ಬೊಬ್ಬರು ಬಂದು ‘ನಮ್ಮ ಮನೆಗೆ ಬನ್ನಿ ಮಾವ, ಊಟ ಮಾಡಿಕೊಂಡು ಹೋಗಿ’ ಎಂದು ಕರೆದರು.

ರಾಮಪ್ಪ ಹಿರಿಯ ಮಗನ ಮನೆಯ ಜಗುಲಿಯಲ್ಲಿ ಕುಳಿತು ಮಕ್ಕಳನ್ನೂ ಸೊಸೆಯರನ್ನೂ ಕರೆದು ಹೀಗೆ ಹೇಳಿದ: ‘ನೋಡ್ರಪ್ಪಾ ನಾನು ಇಷ್ಟು ದಿವಸ ಈ ದಿನಕ್ಕಾಗಿ ಕಾಯುತ್ತಿದ್ದೆ. ನನ್ನ ಒಬ್ಬ ಸ್ನೇಹಿತನಿಂದ ನನಗೆ ಸ್ವಲ್ಪ ಹಣ ಬರಬೇಕಾಗಿತ್ತು. ಅದನ್ನು ಆತ ಬೆಳ್ಳಿ ರೂಪಾಯಿ ರೂಪದಲ್ಲಿ ಇಂದು ವಾಪಸ್ಸು ಕೊಟ್ಟಿದ್ದಾನೆ. ಈ ಮುದುಕನನ್ನು ನೋಡಿಕೊಳ್ಳಲು ನಿಮಗೂ ಕಷ್ಟವಾಗುತ್ತಿದೆ. ನಾನು ಈ ಹಣದಿಂದ ತೀರ್ಥಯಾತ್ರೆ ಹೋಗಿ ಅಲ್ಲೇ ಎಲ್ಲಾದರೂ ನನ್ನ ಜೀವನ ಮುಗಿಸಿಕೊಳ್ತೀನಿ’ ಎಂದ.

ಮಕ್ಕಳೆಲ್ಲಾ, ‘ಅಪ್ಪ, ನೀನೇಕೆ ಯಾರೂ ಇಲ್ಲದವನಂತೆ ಹೋಗಬೇಕು. ನಾವು ನಿನ್ನನ್ನು ಚೆನ್ನಾಗಿಯೇ ನೋಡಿಕೊಳ್ಳುತ್ತೇವೆ. ಸುಮ್ಮನೆ ಇಲ್ಲೇ ಇರು’ ಎಂದರು. ಆಗ ರಾಮಪ್ಪ, ‘ನನಗೂ ನಿಮ್ಮನ್ನು ಮೊಮ್ಮಕ್ಕಳನ್ನೆಲ್ಲಾ ಬಿಟ್ಟು ಹೋಗುವುದಕ್ಕೆ ಇಷ್ಟವಿಲ್ಲ. ನನ್ನನ್ನು ಸ್ವಲ್ಪ ಚೆನ್ನಾಗಿ ನೋಡಿಕೊಳ್ಳುವುದಾದರೆ ನಾನು ಇಲ್ಲೇ ಇರುತ್ತೇನೆ.

ನನ್ನ ನಂತರ ಈ ಹಣವನ್ನು ನೀವೇ ನಾಲ್ಕು ಭಾಗ ಮಾಡಿಕೊಳ್ಳಿ’ ಎಂದು ಪೆಟ್ಟಿಗೆ ತೆರೆದು, ರೇಷ್ಮೆ ಬಟ್ಟೆಯಲ್ಲಿ ಕಟ್ಟಿದ್ದ ಒಂದು ಗಂಟನ್ನು ಹೊರತೆಗೆದು ತೋರಿಸಿ ಮತ್ತೆ ಒಳಗೆ ಇಟ್ಟನು. ಬಟ್ಟೆಯ ಗಂಟನ್ನು ಎತ್ತಿ ಇಡುವಾಗ ಝಣ ಝಣ ಸದ್ದು ಮಾಡಿದ್ದು ಅಲ್ಲಿದ್ದವರ ಮುಖದ ಮೇಲೆಲ್ಲಾ ಆಸೆ ಮೂಡಿಸಿತ್ತು. ‘ನಾನು ಈ ಹಣ ಏನಾದರೂ ಪೋಲು ಮಾಡುತ್ತೇನೆ ಎಂದು ನಿಮಗನ್ನಿಸಿದರೆ, ನೀವೂ ಎಲ್ಲರೂ ಒಂದೊಂದು ಬೀಗವನ್ನು ಇದಕ್ಕೆ ಹಾಕಿಡಿ. ನನ್ನದೇನೂ ಅಭ್ಯಂತರವೇನಿಲ್ಲ’ ಎಂದೂ ಸೇರಿಸಿದ.

ಹಣದ ಗಂಟು ನೋಡುತ್ತಿದ್ದಂತೆ ಸೊಸೆಯಂದಿರು ‘ಮಾವಯ್ಯ ಮನೆಗೆ ಹಿರಿಯ ಆಗಿ ನೀನಿರು. ನಿಮ್ಮನ್ನ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು’ ಎಂದರು. ಊರವರೇ ಸಾಕ್ಷಿಯಾಗಿ ನಾಲ್ಕು ಬೀಗಗಳನ್ನು ತಂದು ಪೆಟ್ಟಿಗೆಗೆ ಹಾಕಲಾಯಿತು. ಮತ್ತೆ ಒಬ್ಬೊಬ್ಬ ಮಗನ ಮನೆಯಲ್ಲಿ ಮೂರು ಮೂರು ತಿಂಗಳು ರಾಮಪ್ಪನ ವಾಸ ಆರಂಭವಾಯಿತು. ಎಲ್ಲ ಮಕ್ಕಳೂ ಸೊಸೆಯರೂ ರಾಮಪ್ಪನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ರಾಮಪ್ಪನೂ ಮೊಮ್ಮಕ್ಕಳೊಂದಿಗೆ ಸಂತೋಷವಾಗಿ ಕಾಲ ಕಳೆಯತೊಡಗಿದನು.

ಹೀಗೆ ಸುಮಾರು ಎಂಟತ್ತು ವರ್ಷ ಬಾಳಿದ ರಾಮಪ್ಪ ಒಂದು ದಿನ ಕಾಲವಾದನು. ನಾಲ್ಕು ಮಕ್ಕಳೂ ಸೇರಿ ರಾಮಪ್ಪನ ಉತ್ತರಕ್ರಿಯಾದಿಗಳನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದರು. ನಂತರ ಎಲ್ಲರೂ ಸೇರಿ ಪೆಟ್ಟಿಗೆಯಲ್ಲಿದ್ದ ಹಣವನ್ನು ಹಂಚಿಕೊಳ್ಳುವ ತೀರ್ಮಾನಕ್ಕೆ ಬಂದರು. ಊರವರನ್ನು ಸಾಕ್ಷಿಯಾಗಿ ಕರೆದುಕೊಂಡು ಪೆಟ್ಟಿಗೆಯ ಬೀಗ ತೆರೆದರು. ಅದರಲ್ಲಿ ರೇಷ್ಮೆಗಂಟು ಹಾಗೆಯೇ ಇತ್ತು. ಅದನ್ನೂ ಬಿಚ್ಚುತ್ತಾರೆ. ಅಲ್ಲೇನಿದೆ? ಬರೀ ಗಾಜಿನ ಚೂರುಗಳು!

ಊರವರು ‘ರಾಮಪ್ಪ ಮಾಡಿದ್ದೇ ಸರಿ. ಇಲ್ಲ ಅಂದ್ರೆ ಇವರು ಅವನನ್ನು ಬೀದಿಪಾಲು ಮಾಡುತ್ತಿದ್ದರು’ ಎಂದುಕೊಂಡರು. ಸೊಸೆಯಂದಿರಿಗೆಲ್ಲಾ ನಿರಾಸೆಯಾಯಿತು. ಮಕ್ಕಳಿಗೆ ತಮ್ಮ ತಪ್ಪಿನ ಅರಿವಾಯಿತು. ‘ಅಪ್ಪ ಕಡೆಗಾಲದಲ್ಲಿ ಖುಷಿಯಾಗಿ ಬದುಕಿ ಸತ್ತನಲ್ಲ ಅಷ್ಟು ಸಾಕು’ ಎಂದುಕೊಂಡು ಸಮಾಧಾನಪಟ್ಟುಕೊಂಡರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry