ಫಿಟ್‌ನೆಸ್‌ ಕೇಂದ್ರಿತ ತರಬೇತಿಗೆ ಒತ್ತು

7

ಫಿಟ್‌ನೆಸ್‌ ಕೇಂದ್ರಿತ ತರಬೇತಿಗೆ ಒತ್ತು

Published:
Updated:
ಫಿಟ್‌ನೆಸ್‌ ಕೇಂದ್ರಿತ ತರಬೇತಿಗೆ ಒತ್ತು

ಬಿ.ಸಿ.ರಮೇಶ್‌

ಭಾರತದಲ್ಲಿ  ಪ್ರೊ ಕಬಡ್ಡಿ ಅಲೆ ಶುರುವಾದ ಮೇಲೆ ಈ ಕ್ರೀಡೆಗೆ ಸಂಬಂಧಿಸಿದ ತರಬೇತಿ ಚಟುವಟಿಕೆಯಲ್ಲಿಯೂ ಬಹಳ ಸುಧಾರಣೆಗಳಾಗಿವೆ. ಇವತ್ತು ಆಟಗಾರರ ‘ಫಿಟ್‌ನೆಸ್‌’ ಕೇಂದ್ರಿತ ತರಬೇತಿಯೇ ಮಹತ್ವ ಕಂಡುಕೊಳ್ಳುತ್ತಿದೆ.

ಹಿಂದೆಲ್ಲಾ ಕಬಡ್ಡಿಯಲ್ಲಿ ಆಟಗಾರರ ಫಿಟ್‌ನೆಸ್‌ ಬಗ್ಗೆ ಗಮನ ಹರಿಸುತ್ತಿರಲಿಲ್ಲವೆಂದಲ್ಲ. ಆದರೆ ಆಟದ ತಂತ್ರಗಳ ಬಗ್ಗೆಯೇ ಕೋಚ್‌ಗಳು ಹೆಚ್ಚು ತಲೆಕೆಡಿಸಿಕೊಳ್ಳುತ್ತಿದ್ದರು. ಇವತ್ತು ಹಾಕಿ, ಫುಟ್‌ಬಾಲ್‌, ಕ್ರಿಕೆಟ್‌ಗಳಲ್ಲಿ ಆಟಗಾರರ ಫಿಟ್‌ನೆಸ್‌ಗೇ ಹೆಚ್ಚು ಒತ್ತು ನೀಡಲಾಗುತ್ತದೆ. ಅದಕ್ಕಾಗಿಯೇ ಕ್ರೀಡಾ ತಂಡಗಳಲ್ಲಿ ಪ್ರತ್ಯೇಕ ಸಲಹೆಗಾರರು ಇದ್ದೇ ಇರುತ್ತಾರೆ.  ಇದೀಗ ಅಂತಹದ್ದೊಂದು ಸಂಸ್ಕೃತಿ ಕಬಡ್ಡಿಯಲ್ಲಿ ಶುರುವಾಗಿದೆ. ಇದೂ ಸಕಾರಾತ್ಮಕ ಬೆಳವಣಿಗೆ.

ಇಂತಹ ‘ಫಿಟ್‌ನೆಸ್‌ ಕೇಂದ್ರಿತ’ ತರಬೇತಿಯ ಪರಂಪರೆ ಪ್ರೊ ಕಬಡ್ಡಿಯ ಮೂರನೇ ಋತುವಿನ ಸಂದರ್ಭದಲ್ಲಿ ಹೆಚ್ಚು ಚಾಲ್ತಿಗೆ ಬಂದಿತು.

ಈಗ ನಮ್ಮ ಪುಣೇರಿ ಪಲ್ಟನ್‌ ತಂಡಕ್ಕೆ ‘ಫಿಸಿಕಲ್‌ ಟ್ರೈನರ್‌’ ಒಬ್ಬರು ಸೇರ್ಪಡೆಗೊಳ್ಳಲಿದ್ದಾರೆ. ಅವರು ಆಟಗಾರರ ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುವ  ಬಗ್ಗೆ ಹೆಚ್ಚು ಮುತುವರ್ಜಿ ವಹಿಸಲಿದ್ದಾರೆ.

ಕೆಲವು ಆಟಗಾರರು ತಮಗೆ ಆಟದ ವೇಳೆ ಆಗಿರುವ ಗಾಯಗಳ ನೋವುಗಳನ್ನು ಹೊರಗೆ ಗೊತ್ತಾಗದಂತೆ ಮುಚ್ಚಿಡುತ್ತಾರೆ. ಒಂದು ವೇಳೆ ಅಂತಹ ಗಾಯಗಳಾಗಿವೆ ಎಂದು ಗೊತ್ತಾದರೆ ಮುಂದಿನ ಪಂದ್ಯಗಳಲ್ಲಿ ಅವಕಾಶ ಸಿಗದಿರಬಹುದು ಅಥವಾ ತಂಡಕ್ಕೇ ಆಯ್ಕೆಯಾಗದಿರಬಹುದು ಎಂಬ ಭಯದಿಂದ ಆ ರೀತಿ ಮಾಡುತ್ತಾರೆ. ಇಂತಹ ಸೂಕ್ಷ್ಮ ಅಂಶಗಳೆಲ್ಲದರ ಬಗ್ಗೆ ‘ಫಿಸಿಕಲ್‌ ಟ್ರೈನರ್‌’ಗೆ ಅರಿವು ಇರುತ್ತದೆ. ಇದರಿಂದ ನಿರ್ದಿಷ್ಟ ಆಟಗಾರರು ಅಗತ್ಯವಾದ ಚಿಕಿತ್ಸೆ ಪಡೆದು ದೈಹಿಕ ಸಾಮರ್ಥ್ಯವನ್ನು ಇನ್ನಷ್ಟೂ ಸುಧಾರಿಸಿಕೊಳ್ಳಲು ಸಾಧ್ಯವಿದೆ.

ವಿಡಿಯೊ ಅನಾಲಿಸಿಸ್‌ ಸಾಫ್ಟ್‌ವೇರ್‌ ಈಗ ಕೋಚ್‌ಗಳಿಗೆ ವರದಾನವಾಗಿದೆ. ಇದೂ ಪ್ರೊ ಕಬಡ್ಡಿಯ ಮೂರನೇ ಋತುವಿನಲ್ಲಿ ಚಾಲ್ತಿಗೆ ಬಂದಿತು. ಎದುರಾಳಿ ಆಟಗಾರ ಯಾವ ಜಾಗದಲ್ಲಿ ಪದೇ ಪದೇ ತಪ್ಪುಗಳನ್ನು ಮಾಡುತ್ತಾನೆ ಎಂಬುದನ್ನು ಗುರುತಿಸಿ, ಅಂತಹ ದೌರ್ಬಲ್ಯಗಳನ್ನು ನಮ್ಮ ಆಟಗಾರರು ಯಾವ ರೀತಿ ಸದುಪಯೋಗ ಮಾಡಿಕೊಳ್ಳಬಹುದು ಎಂದೂ ಈ ಸಾಫ್ಟ್‌ವೇರ್‌ ಮೂಲಕ ಯೋಜನೆ ರೂಪಿಸಲು ಸಾಧ್ಯವಿದೆ.

ಹಿಂದೆಲ್ಲಾ ನಾನೇ ತರಬೇತಿ ನೀಡುತ್ತಿದ್ದ ಆಟಗಾರರಿಗೆ ಆಟದ ವೇಳೆ ನೀನು ಇಂತಹ ತಪ್ಪು ಮಾಡಿದ್ದೀಯ ಎಂದು ವಿವರಿಸಿ ಹೇಳಿದರೂ ಆತ ಅದನ್ನು ಕೇಳಿಸಿಕೊಳ್ಳುತ್ತಿರಲಿಲ್ಲ. ಅಂತಹ ತಪ್ಪನ್ನು ತಾನು ಮಾಡಿಯೇ ಇಲ್ಲ ಎಂದು ವಾದಿಸುತ್ತಿದ್ದ. ಈಗ ಈ ಸಾಫ್ಟ್‌ವೇರ್‌ ನೆರವಿನಿಂದ ಆತನ ಪ್ರತಿ ನಡೆಯನ್ನೂ ಆತನೇ ನೋಡಬಹುದಾಗಿದೆ. ಆತನ ದೌರ್ಬಲ್ಯಗಳನ್ನು ಆತನಿಗೇ ಕೋಚ್‌ ಪ್ರತ್ಯಕ್ಷ ತೋರಿಸಿ, ಆತನನ್ನು ಸುಧಾರಿಸಲು ಸಾಧ್ಯವಿದೆ. ನಾನು ಹಿಂದೆ ಭಾರತ ತಂಡಕ್ಕೆ ಆಡುವಾಗಲೂ ಇಂತಹ ಸಾಫ್ಟವೇರ್‌ ಸೌಲಭ್ಯಗಳು ಇರಲೇ ಇಲ್ಲ.‌

ಇದೀಗ ಜಾರಿಗೆ ಬಂದಿರುವ ‘ಯಂಗ್‌ ಟಾಲೆಂಟ್‌ ಪೂಲ್‌’ ಕಾರ್ಯಕ್ರಮದ ಅನ್ವಯ ದೇಶದಾದ್ಯಂತ ಸಾವಿರಾರು ಎಳೆಯ ಆಟಗಾರರ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಇಂತಹ ಆಯ್ದ ಆಟಗಾರರಿಗೆ ತರಬೇತಿ ನೀಡಿ ಉನ್ನತ ಮಟ್ಟಕ್ಕೆ ಏರಿಸಲು ಸಾಧ್ಯವಿದೆ.

ಪ್ರಸಕ್ತ ಪ್ರೊ ಕಬಡ್ಡಿ ಲೀಗ್‌ ಬಂದ ಮೇಲೆ ಕೋಚ್‌ಗಳಿಗೆ ಇಂತಹ ಅನೇಕ ಲಾಭಗಳಾಗಿವೆ. ಇದರಿಂದ ಭಾರತದಲ್ಲಿ ಕಬಡ್ಡಿ ಇನ್ನಷ್ಟೂ ಜನಪ್ರಿಯಗೊಳ್ಳಲು ಸಾಧ್ಯವಾಗಿದೆ.

ಕೆಲವು ತಿಂಗಳ ಹಿಂದೆ ನಡೆದ ವಿಶ್ವ ಕಪ್‌ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಥಾಯ್ಲೆಂಡ್‌, ಪೋಲೆಂಡ್‌, ಜಪಾನ್‌, ಕೊರಿಯಾದಂತಹ ದೇಶಗಳು ತೋರಿಸಿದ ಅದ್ಭುತ ಸಾಮರ್ಥ್ಯವನ್ನು ಗಮನಿಸಿದಾಗ ಮುಂದಿನ ದಿನಗಳಲ್ಲಿ ಭಾರತಕ್ಕೆ ಈ ಕ್ರೀಡೆಯಲ್ಲಿ ಪ್ರಬಲ ಪೈಪೋಟಿ ಎದುರಾಗಲಿರುವುದಂತು ನಿಜ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಭಾರತ ಈಗಲೇ ಎಚ್ಚತ್ತುಕೊಂಡು ಈ ಕ್ರೀಡೆಯಲ್ಲಿ ತನ್ನ ತಂತ್ರ ಮತ್ತು ಸಾಮರ್ಥ್ಯವನ್ನು ಇನ್ನೂ ಹೆಚ್ಚಿಸಿಕೊಳ್ಳುವ ದಿಕ್ಕಿನಲ್ಲಿ ಹೆಜ್ಜೆ ಇಡಬೇಕಿದೆ. ಇಲ್ಲದಿದ್ದರೆ ಹಾಕಿ ಕ್ರೀಡೆಯಲ್ಲಿ ಭಾರತ ಎದುರಿಸಿದ ಸಂಕಷ್ಟವನ್ನೇ ಕಬಡ್ಡಿಯೂ ಎದುರಿಸಬೇಕಾಗಬಹುದು.

1928ರಿಂದ 1956ರವರೆಗೆ ಭಾರತ ಹಾಕಿ ತಂಡ ಒಲಿಂಪಿಕ್ಸ್‌ನಲ್ಲಿ ಸತತವಾಗಿ ಚಿನ್ನದ ಪದಕ ಗೆದ್ದಿತ್ತು. 1964ರಲ್ಲಿ ಇನ್ನೊಮ್ಮೆ ಗೆದ್ದಿತು. ಆ ನಂತರ ಈವರೆಗೂ ಭಾರತದ ಹಾಕಿ ರಂಗ ಜಗತ್ತಿನ ಇತರ ದೇಶಗಳ ಪೈಪೋಟಿಯನ್ನು ಎದುರಿಸಲಾಗದೆ ಪಡುತ್ತಿರುವ ಪಡಿಪಾಟಲು ಎಲ್ಲರಿಗೂ ಗೊತ್ತಿರುವುದೇ ಆಗಿದೆ.

ಇದೀಗ ಪ್ರೊ ಕಬಡ್ಡಿಯಿಂದಾಗಿ ಭಾರತದಲ್ಲಿ ಈ ಕ್ರೀಡೆ ವೃತ್ತಿಪರತೆಯನ್ನು ಕಂಡುಕೊಂಡಿದೆ. ಕೋಚಿಂಗ್‌ ವಿಧಾನವಂತೂ ಸಂಪೂರ್ಣ ವೈಜ್ಞಾನಿಕ ನೆಲೆಯನ್ನು ಕಂಡು ಕೊಂಡಿದೆ. ಭಾರತದಲ್ಲಿ ಈ ಕ್ರೀಡೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಇವೆಲ್ಲವೂ ಮಹತ್ತರ ಬೆಳವಣಿಗೆಗಳಾಗಿವೆ.

ಮುಂದಿನ ತಿಂಗಳು ಪ್ರೊ ಕಬಡ್ಡಿ ಲೀಗ್‌ ನಡೆಯಲಿದೆ. ಅಲ್ಲಿ ಪುಣೇರಿ ಪಲ್ಟನ್‌ ಅತ್ಯುತ್ತಮ ಸಾಮರ್ಥ್ಯ ತೋರಲಿದೆ. ಅಂಗಣದ ಒಳಗೆ ಕೋಚ್‌ನ ಮಾರ್ಗದರ್ಶನವಿಲ್ಲದೆಯೇ ಆಟಗಾರರು ಸ್ವಂತ ತೀರ್ಮಾನಗಳನ್ನು ತೆಗೆದುಕೊಳ್ಳುವಂತಹ ಶಕ್ತಿ ತುಂಬುವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇನೆ.

****

ಹಿಂದೆ ಭಾರತ ಕಬಡ್ಡಿ ತಂಡದ ನಾಯಕರಾಗಿದ್ದ ಬಿ.ಸಿ.ರಮೇಶ್‌ ಇದೀಗ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪುಣೇರಿ ಪಲ್ಟನ್‌ ತಂಡದ ಮುಖ್ಯ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

ಇವರು 2013–14ರಲ್ಲಿ ನಡೆದ ಕರ್ನಾಟಕ ರಾಜ್ಯ ಕಬಡ್ಡಿ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಗೆದ್ದ ಬೆಂಗಳೂರು ನಗರ ಜಿಲ್ಲಾ ತಂಡಕ್ಕೆ ತರಬೇತಿ ನೀಡಿದ್ದರಲ್ಲದೆ, ಹೋದ ವರ್ಷ ಕೇರಳದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ರಜತ ಪದಕ ಗೆದ್ದ ರಾಜ್ಯ ತಂಡಕ್ಕೂ ಕೋಚ್‌ ಆಗಿದ್ದರು. ವಿಶ್ವಕಪ್‌ನಲ್ಲಿ ಪಾಲ್ಗೊಂಡಿದ್ದ ಅರ್ಜೆಂಟಿನಾ ತಂಡಕ್ಕೂ ಇವರೇ ತರಬೇತಿ ನೀಡಿದ್ದು. ಪ್ರಸಕ್ತ ಕಬಡ್ಡಿ ಕೋಚಿಂಗ್‌ ಬಗ್ಗೆ ಅನಿಸಿಕೆಗಳನ್ನು ‘ಪ್ರಜಾವಾಣಿ’ಗಾಗಿ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry