ಉತ್ತಮ ತೆರಿಗೆ ವ್ಯವಸ್ಥೆ ಸ್ವಾಗತಿಸೋಣ ಬನ್ನಿ...

7

ಉತ್ತಮ ತೆರಿಗೆ ವ್ಯವಸ್ಥೆ ಸ್ವಾಗತಿಸೋಣ ಬನ್ನಿ...

Published:
Updated:
ಉತ್ತಮ ತೆರಿಗೆ ವ್ಯವಸ್ಥೆ ಸ್ವಾಗತಿಸೋಣ ಬನ್ನಿ...

ದೇಶದ ಅರ್ಥ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾಯಿಸಲಿರುವ  ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)  ವ್ಯವಸ್ಥೆ ಜಾರಿಗೆ ವೇದಿಕೆ ಸಜ್ಜಾಗುತ್ತಿದೆ.  ಸ್ವಾತಂತ್ರ್ಯಾ ನಂತರದ ಅತಿದೊಡ್ಡ ತೆರಿಗೆ ಸುಧಾರಣೆಯು ಜುಲೈ 1ರಿಂದ ಜಾರಿಗೆ ಬರಲು ಗಡುವು ನಿಗದಿಯಾಗಿದೆ.

ಕ್ರಾಂತಿಕಾರಿ ಸ್ವರೂಪದ ಈ ವ್ಯವಸ್ಥೆಯ ಪ್ರಯೋಜನಗಳು ಮತ್ತು ಅದು ಒಡ್ಡಿರುವ ಹೊಸ ಸವಾಲುಗಳ ಬಗ್ಗೆ  ತೆರಿಗೆ ಸಲಹೆಗಾರ ಆರ್‌. ಜಿ. ಮುರಳೀಧರ್‌ ಅವರ ಜತೆಗೆ ‘ಪ್ರಜಾವಾಣಿ’ ನಡೆಸಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಏನಿದು ಜಿಎಸ್‌ಟಿ?

ಸರಕು ಮತ್ತು ಸೇವೆಗಳ ಉಪಭೋಗದ ಸಂದರ್ಭದಲ್ಲಿ (ಕೊನೆಯ ಹಂತ) ಬಳಕೆದಾರ ಪಾವತಿಸುವ ತೆರಿಗೆ ಮತ್ತು ಸರಕು ಹಾಗೂ ಸೇವೆಗಳ ಪೂರೈಕೆಗೆ ಸಂಬಂಧಿಸಿದ ತೆರಿಗೆ ವ್ಯವಸ್ಥೆ ಇದಾಗಿದೆ. ಸದ್ಯಕ್ಕೆ ಜಾರಿಯಲ್ಲಿ ಇರುವ– ಸರಕುಗಳ ಮೇಲಿನ ಕೇಂದ್ರ ಸರ್ಕಾರದ ಅಬಕಾರಿ ಸುಂಕ, ಸೇವೆಗಳ ಮೇಲಿನ ಕೇಂದ್ರದ ತೆರಿಗೆ, ರಾಜ್ಯ – ರಾಜ್ಯಗಳ ಮಧ್ಯೆ ನಡೆಯುವ ಸರಕುಗಳ ಮಾರಾಟದ ಮೇಲಿನ ಕೇಂದ್ರೀಯ ಮಾರಾಟ ತೆರಿಗೆ (ಸಿಎಸ್‌ಟಿ) ಮತ್ತು ರಾಜ್ಯದ ಒಳಗೆ ಮಾರಾಟವಾಗುವ ಸರಕುಗಳ ಮೇಲೆ ರಾಜ್ಯ ಸರ್ಕಾರ ವಿಧಿಸುವ ಮೌಲ್ಯವರ್ಧಿತ ತೆರಿಗೆಗಳು (ವ್ಯಾಟ್‌) ರದ್ದಾಗಲಿವೆ. ತೆರಿಗೆ ಮೇಲಿನ ತೆರಿಗೆ ಹೊರೆ ತಪ್ಪಲಿದೆ.

* ಹೊಸ ವ್ಯವಸ್ಥೆಯ ಒಟ್ಟಾರೆ ಪ್ರಯೋಜನಗಳೇನು?

ತೆರಿಗೆ ಹೊರೆ ಕಡಿಮೆಯಾಗಲಿದೆ.  ಜನಸಾಮಾನ್ಯರಿಗೆ ಹೆಚ್ಚು ಪ್ರಯೋಜನವಾಗಲಿದೆ. ಬಹುಬಗೆಯ ತೆರಿಗೆಗಳ ಬದಲಿಗೆ  ಒಂದೇ ತೆರಿಗೆ ಮತ್ತು ವಹಿವಾಟಿನ ಕೊಡು –ತೆಗೆದುಕೊಳ್ಳುವುದಕ್ಕೆ ಒಂದೇ  ವ್ಯವಸ್ಥೆ  ಇರಲಿದೆ. ತೆರಿಗೆ ಮೇಲೆ ತೆರಿಗೆಯ ಕೆಟ್ಟ ಪರಿಣಾಮಗಳಿಗೆ ಕೊನೆ ಹಾಡಲಿದೆ.  ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ದೊರೆಯಲಿದೆ. ಹೊಸ ಉದ್ಯೋಗ ಅವಕಾಶಗಳೂ ಸೃಷ್ಟಿಯಾಗಲಿವೆ.

* ಯಾರೆಲ್ಲ ಇದರ ವ್ಯಾಪ್ತಿಗೆ ಬರಲಿದ್ದಾರೆ?

ಸರಕು ತಯಾರಕರು, ಸೇವೆ ಒದಗಿಸುವವರು ಮತ್ತು ವರ್ತಕರು ಇದರ ವ್ಯಾಪ್ತಿಗೆ ಒಳಪಡಲಿದ್ದಾರೆ. ಇದೊಂದು ‘ತೆರಿಗೆ ಪಾವತಿದಾರ ಸ್ನೇಹಿ’ ವ್ಯವಸ್ಥೆಯಾಗಿದೆ.

* ಒಂದೇ ತೆರಿಗೆ ಎಂದರೂ, ಹಲವು ಬಗೆಯ ತೆರಿಗೆ ವ್ಯವಸ್ಥೆ ಇದೆಯಲ್ಲ?

ಕೇಂದ್ರೀಯ ಜಿಎಸ್‌ಟಿ, ರಾಜ್ಯ ಜಿಎಸ್‌ಟಿ ಮತ್ತು ಸಮಗ್ರ ಜಿಎಸ್‌ಟಿ– ಹೀಗೆ ಮೂರು ಹಂತಗಳ ಸಮಗ್ರ  ತೆರಿಗೆ ವ್ಯವಸ್ಥೆ ಇದಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳನ್ನೂ ಜತೆಯಲ್ಲಿ ತೆಗೆದುಕೊಂಡು ಹೋಗಬೇಕಾಗಿದೆ. ಈ ಕಾರಣಕ್ಕೆ ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗಿದೆ. ಎಸ್‌ಜಿಎಸ್‌ಟಿ, ಸಿಜಿಎಸ್‌ಟಿ, ಐಜಿಎಸ್‌ಟಿ ಹೆಸರಿನಲ್ಲಿ ತೆರಿಗೆ ಪಾವತಿಸಿದರೂ, ನೋಂದಣಿ, ಲೆಕ್ಕಪತ್ರ ಸಲ್ಲಿಕೆ, ಪಾವತಿ ಚಲನ್‌, ತೆರಿಗೆ ಪ್ರಾಧಿಕಾರದ ಸ್ವರೂಪವು ಒಂದೇ ಆಗಿರುತ್ತದೆ.

* ಏನಿದು ಇನ್‌ಪುಟ್‌ ಕ್ರೆಡಿಟ್‌ ಟ್ಯಾಕ್ಸ್‌?

ಸರಕುಗಳ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಖರೀದಿಗೆ ಮಾಡಿದ ವೆಚ್ಚವನ್ನು (ಹೂಡುವಳಿ ತೆರಿಗೆ) ಮರಳಿ ಪಡೆ

ಯುವುದಕ್ಕೆ ತಯಾರಕನು ಸೂಕ್ತ ದಾಖಲೆ ಸಲ್ಲಿಸಬೇಕು.  ವರ್ತಕನು ಮರು ಮಾರಾಟಕ್ಕೆ ಸರಕುಗಳನ್ನು ಖರೀದಿಸಿದ್ದರೆ  ಆತನೂ ಹೂಡುವಳಿ ತೆರಿಗೆ ಪ್ರಯೋಜನ ಪಡೆಯಲು ಅರ್ಹನಾಗಿರುತ್ತಾನೆ. ಖರೀದಿ ಮತ್ತು ಮಾರಾಟದ ವಿವರಗಳೆಲ್ಲ ಆನ್‌ಲೈನ್‌ನಲ್ಲಿ ದಾಖಲಿಸಿದ್ದರೆ ಮಾತ್ರ ವರ್ತಕರು ಹುಟ್ಟುವಳಿ ತೆರಿಗೆ ಮರಳಿ ಪಡೆಯಲು ಅರ್ಹರಾಗಿರುತ್ತಾರೆ.

* ಹೊಸ ತೆರಿಗೆ ವ್ಯವಸ್ಥೆಯು ಹೊರೆಯಾಗಲಿದೆಯೇ?

ನಿಜ, ಸ್ವಲ್ಪ ದಿನಗಳವರೆಗೆ ಇದು ಹೊರೆಯಾಗಲಿದೆ. ದಿನಗಳು ಉರುಳಿದಂತೆ ಬೆಲೆಗಳ ಮಟ್ಟದಲ್ಲಿ ಸ್ಥಿರತೆ  ಕಂಡು ಬರಲಿದೆ. ಶಿಕ್ಷಣ ಮತ್ತು ಆರೋಗ್ಯ ಸೇವೆಗೆ ವಿನಾಯ್ತಿ ನೀಡಲಾಗಿದೆ. ಹಣಕಾಸು, ವಿಮೆ ಮತ್ತು ಬ್ಯಾಂಕಿಂಗ್‌ ಸೇವೆಗಳೂ ತೆರಿಗೆ ವ್ಯಾಪ್ತಿಗೆ ಒಳಪಡಲಿವೆ.

* ಜಾರಿ ಸಂದರ್ಭದಲ್ಲಿ ಎದುರಾಗಲಿರುವ  ಸವಾಲುಗಳೇನು?

ಪ್ರತಿಯೊಬ್ಬ ವರ್ತಕ, ಉದ್ಯಮಿಯು ಪ್ರತಿ ತಿಂಗಳಿಗೆ 3 ತೆರಿಗೆ ಲೆಕ್ಕಪತ್ರ ಸಲ್ಲಿಸಬೇಕು. ಮಾರಾಟ, ಖರೀದಿ ಮತ್ತು  ತೆರಿಗೆ ಪಾವತಿಯ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಈ ಉದ್ದೇಶಕ್ಕೆ ರೂಪಿಸಿರುವ ತಂತ್ರಜ್ಞಾನ ವ್ಯವಸ್ಥೆ ‘ಜಿಎಸ್‌ಟಿಎನ್‌’, ಅಪಾರ ಸಂಖ್ಯೆಯ ದಾಖಲೆಗಳನ್ನು ಕನ್ನ ಹಾಕಲು ಅವಕಾಶಕ್ಕೆ ಇರದಂತೆ ಸಮರ್ಥವಾಗಿ ನಿಭಾಯಿಸಬೇಕಾಗಿದೆ. ಇದೊಂದು ಸ್ವಯಂ ಮೇಲ್ವಿಚಾರಣಾ ವ್ಯವಸ್ಥೆಯಾಗಿದೆ. ಖರೀದಿ, ಮಾರಾಟ ಮತ್ತು ಪಾವತಿ– ಎಲ್ಲವನ್ನೂ  ‘ಜಿಎಸ್‌ಟಿಎನ್‌’ ನೋಡಿಕೊಳ್ಳುತ್ತದೆ.

* ರಾಜ್ಯದಲ್ಲಿ ಇರುವ ತೆರಿಗೆದಾರರ ಸಂಖ್ಯೆ ಎಷ್ಟು?

ಸರಿಸುಮಾರು 5 ಲಕ್ಷದಷ್ಟು ವಹಿವಾಟುದಾರರು ಇದ್ದಾರೆ. ವಾರ್ಷಿಕ  ₹1.50 ಕೋಟಿಗಳಷ್ಟು ವಹಿವಾಟು ನಡೆಸುವವರ ಸಂಖ್ಯೆ1 ಲಕ್ಷಕ್ಕಿಂತ ಕಡಿಮೆ ಇದೆ. ವರ್ಷಕ್ಕೆ ₹ 50 ಲಕ್ಷದಷ್ಟು ವಹಿವಾಟು ನಡೆಸುವವರು ಶೇ 1 ರಷ್ಟು  (composition tax)  ತೆರಿಗೆ ಪಾವತಿ  ಮಾಡಬಹುದು. ಆದರೆ, ಅವರಿಗೆ ಹೂಡುವಳಿ ತೆರಿಗೆ ಮರು ಪಾವತಿ ವ್ಯವಸ್ಥೆ ಇರುವುದಿಲ್ಲ. ₹ 50 ಲಕ್ಷಕ್ಕಿಂತ ಹೆಚ್ಚಿನ ವಹಿವಾಟು ನಡೆಸುವವರು ಜಿಎಸ್‌ಟಿ ವ್ಯಾಪ್ತಿಗೆ ಒಳಪಡಲಿದ್ದಾರೆ. ಇವರೆಲ್ಲ ‘ಹುಟ್ಟುವಳಿ ತೆರಿಗೆ’ ಪ್ರಯೋಜನಕ್ಕೆ ಒಳಪಡಲಿದ್ದಾರೆ. ವರ್ಷಕ್ಕೆ ₹20 ಲಕ್ಷದಷ್ಟು ವಹಿವಾಟು ನಡೆಸುವವರು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ಇದ್ದರೂ, ಅವರು ರಾಜ್ಯದ ಒಳಗೆ ಮಾತ್ರ ವಹಿವಾಟು ನಡೆಸಬೇಕು. ಇವರು ಅಂತರರಾಜ್ಯ ವಹಿವಾಟು ನಡೆಸಬಾರದು ಎನ್ನುವ ನಿರ್ಬಂಧ ಇದೆ.* ಇ–ಕಾಮರ್ಸ್‌ ವಹಿವಾಟಿನ ಮೇಲೆ ಆಗುವ ಪರಿಣಾಮಗಳೇನು?

ತೆರಿಗೆ ಕಡಿಮೆ ಇದೆ ಎನ್ನುವ ಕಾರಣಕ್ಕೆ ವಹಿವಾಟನ್ನು ಇತರ ರಾಜ್ಯಗಳಿಗೆ ವರ್ಗಾಯಿಸುವ ಸಾಧ್ಯತೆ ಉದ್ಭವಿಸಲಾರದು. ಒಕ್ಕೂಟ ವ್ಯವಸ್ಥೆಯ ಎಲ್ಲ ರಾಜ್ಯಗಳಲ್ಲಿ ಒಂದೇ ಬಗೆಯ ತೆರಿಗೆ ಇರಲಿರುವುದರಿಂದ ಬೇರೆ ರಾಜ್ಯಕ್ಕೆ ವಲಸೆ ಹೋಗುತ್ತೇವೆ ಎಂದು ಯಾರೊಬ್ಬರೂ ಬೆದರಿಕೆ ಹಾಕಲಾರರು.

* ಯಾರಿಗೆ ಹೆಚ್ಚು ತೊಂದರೆ ಒಡ್ಡಲಿದೆ?

ಹೋಟೆಲ್‌  ಮತ್ತು ರೆಸ್ಟೊರೆಂಟ್‌ಗಳ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಕಂಡು ಬರಲಿದೆ. ಏ.ಸಿ ರಹಿತಹೋಟೆಲ್‌ಗಳ ಮೇಲೆ ಶೇ 12 , ಏ. ಸಿ  ಹೋಟೆಲ್‌ಗಳ ಮೇಲೆ ಶೇ 18 ಮತ್ತು ಮದ್ಯ ಸರಬರಾಜು ಮಾಡುವ ಹೋಟೆಲ್‌ಗಳ ಮೇಲೆ ಶೇ 28ರಷ್ಟು ತೆರಿಗೆ ಬೀಳಲಿದೆ. ಸದ್ಯದ ದಿನಗಳಲ್ಲಿ  ಏ.ಸಿ ಸೌಲಭ್ಯವು ಐಷಾರಾಮಿ ಎನ್ನುವ ಭಾವನೆ ದೂರವಾಗಿದೆ.  ಹೋಟೆಲ್‌ ಗ್ರಾಹಕರು ಹೆಚ್ಚಿನ ತೆರಿಗೆ ಹೊರೆ ಕಾರಣಕ್ಕೆ ಬೇರೆ ಹೋಟೆಲ್‌ಗಳಿಗೆ ವಲಸೆ ಹೋಗಬಹುದು. ಇದರಿಂದ ತಮ್ಮ ವಹಿವಾಟಿಗೆ ಧಕ್ಕೆ ಒದಗಲಿದೆ ಎನ್ನುವ ಭೀತಿ ಮಾಲೀಕರನ್ನು ಕಾಡುತ್ತಿದೆ. ಹೋಟೆಲ್ ಉದ್ಯಮವು ತೆರಿಗೆ ವ್ಯಾಪ್ತಿಗೆ ಒಳಪಡಲಿರುವುದರಿಂದಲೂ ಅವರು ಪ್ರತಿಭಟನೆ ಮಾರ್ಗ ತುಳಿದಿದ್ದಾರೆ.

* ಚಿನ್ನದ ಮೇಲೆ ಎಷ್ಟು ತೆರಿಗೆ ವಿಧಿಸಬಹುದು?

ನನ್ನ ಪ್ರಕಾರ, ಶೇ 3ರಷ್ಟು ತೆರಿಗೆ ವಿಧಿಸಬಹುದು. ಸದ್ಯಕ್ಕೆ ಶೇ 5ರಷ್ಟು ತೆರಿಗೆ ವಿಧಿಸುವ ಪ್ರಸ್ತಾವ ಇದೆ. ಇದು ಜಾರಿಗೆ ಬಂದರೆ  ಚಿನ್ನ ದುಬಾರಿಯಾಗಲಿದೆ. ಗ್ರಾಮೀಣ ವಲಯದ ರೈತಾಪಿ ವರ್ಗಕ್ಕೆ ಇದು ಹೊರೆಯಾಗಬಹುದು. ಚಿನ್ನವೇ ಅವರ ಪಾಲಿಗೆ ಭದ್ರತೆಯಾಗಿದೆ. ತುರ್ತು ಸಂದರ್ಭಗಳಲ್ಲಿ ಹಣ ಬೇಕಾದಾಗಲ್ಲೆಲ್ಲ ಅಷ್ಟಿಷ್ಟು ಚಿನ್ನ ಅಡಮಾನ ಇಟ್ಟು ಹಣ ಪಡೆಯುತ್ತಾರೆ. ಇಂತಹ ಚಟುವಟಿಕೆಗಳಲ್ಲಿ ಕೆಲಮಟ್ಟಿಗೆ ಏರುಪೇರು ಕಾಣಬಹುದು.

* ಮಾಹಿತಿ ಕ್ರೋಡೀಕರಣದ ಪ್ರಯೋಜನ ಏನು?

ಸಂಪೂರ್ಣ ತಂತ್ರಜ್ಞಾನ ಆಧಾರಿತ ತೆರಿಗೆ ವ್ಯವಸ್ಥೆಯಲ್ಲಿ ಅಗಾಧ ಪ್ರಮಾಣದ ಮಾಹಿತಿಯು ಸ್ವಯಂಚಾಲಿತವಾಗಿ  ಕ್ರೋಡೀಕರಣ ಆಗಲಿದೆ. ಸರಕು–ಸೇವೆಗಳ ಬಳಕೆ, ಮೌಲ್ಯವರ್ಧನೆ, ಸರಕುಗಳ ಸಾಗಾಣಿಕೆ, ಸಾರಿಗೆ, ಕೇಟರಿಂಗ್‌ – ಹೀಗೆ ಪ್ರತಿಯೊಂದು ಉದ್ಯಮದ ವಹಿವಾಟಿನ, ಬೇಡಿಕೆ ಮತ್ತು ಪೂರೈಕೆಯ ಖಚಿತ ಮಾಹಿತಿ ಸಿಗಲಿದೆ. ಹಣಕಾಸು ಮತ್ತು ಆರ್ಥಿಕ ಯೋಜನೆಗಳನ್ನು ಕರಾರುವಾಕ್ಕಾಗಿ ರೂಪಿಸಲು ಇದರಿಂದ ಸಾಧ್ಯವಾಗಲಿದೆ.

* ಜಿಡಿಪಿ ಜಾಸ್ತಿಯಾಗಲಿದೆಯೇ?

ಗ್ರಾಹಕರ ಕೊಳ್ಳುವ ಸಾಮರ್ಥ್ಯ ಆಧರಿಸಿ ದೇಶವೊಂದರ ಜಿಡಿಪಿ ಬೆಳವಣಿಗೆ ದರ ನಿಗದಿಯಾಗುತ್ತದೆ. ಜಿಎಸ್‌ಟಿಗೂ – ಜಿಡಿಪಿಗೂ ಅಂತಹ ಸಂಬಂಧ ಇಲ್ಲ.

* ರಾಜಕೀಯ ಪರಿಣಾಮಗಳು ಏನು ಇರಬಹುದು?

ಬೇರೆ, ಬೇರೆ ದೇಶಗಳಲ್ಲಿ ಜಿಎಸ್‌ಟಿ ಜಾರಿಗೆ ಬಂದ ನಂತರ ನಡೆದ ಚುನಾವಣೆಗಳಲ್ಲಿ ಅಧಿಕಾರದಲ್ಲಿದ್ದ ಪಕ್ಷವು ಜನರ ವಿಶ್ವಾಸಕ್ಕೆ ಎರವಾದ ಹಲವಾರು ನಿದರ್ಶನಗಳಿವೆ. ಆದರೆ ಮುಂದಿನ  ಲೋಕಸಭಾ ಚುನಾವಣೆಯಲ್ಲಿ ಮತದಾರರು ಕೇಂದ್ರ ಸರ್ಕಾರದ ವಿರುದ್ಧ ಮತ ಚಲಾಯಿಸುವ  ಸಾಧ್ಯತೆ ಕಡಿಮೆ. ನೋಟು ರದ್ದತಿಯ ಕಾರಣಕ್ಕೆ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿ ಹಿಡಿಶಾಪ ಹಾಕಿದರೂ, ಒಳ್ಳೆಯದೇನೋ ಆಗಲಿದೆ ಎನ್ನುವ ನಿರೀಕ್ಷೆಯಲ್ಲಿ ಜನರು ತಮ್ಮ ಸಂಕಷ್ಟಗಳನ್ನೆಲ್ಲ ಮರೆತಿದ್ದರು. ಅದೇ ಪ್ರವೃತ್ತಿ ಚುನಾವಣೆ ಸಂದರ್ಭದಲ್ಲೂ ಕಂಡುಬರಬಹುದು.

* ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಸ್‌ಎಂಇ) ಮೇಲೆ ಯಾವ ಪರಿಣಾಮ ಕಂಡು ಬರಬಹುದು?

ಈ ಬಗ್ಗೆ ಹೊಸ ವ್ಯವಸ್ಥೆಯಲ್ಲಿ ಇದುವರೆಗೂ ಸ್ಪಷ್ಟತೆ ಕಂಡು ಬಂದಿಲ್ಲ. ಕಂಪ್ಯೂಟರ್‌, ಲೆಕ್ಕಪತ್ರ ನಿರ್ವಹಣೆಯು ‘ಎಸ್‌ಎಂಇ’ಗಳ ಪಾಲಿಗೆ ಹೆಚ್ಚುವರಿ  ಹೊರೆಯಾಗಲಿವೆ. ‘ಸುಂಕದವನ ಹತ್ತಿರ ಕಷ್ಟ ಸುಖ ಹೇಳಿಕೊಂಡರೆ ಏನು ಪ್ರಯೋಜನ’ ಎನ್ನುವುದನ್ನು ಇಲ್ಲಿ ನಾನು, ‘ಸುಂಕದವರು ಕಷ್ಟ ಸುಖದತ್ತ ಗಮನ ಹರಿಸಬಾರದು.  ಅದು ಅವರ ಕೆಲಸವೂ ಅಲ್ಲ. ತೆರಿಗೆ ಸಂಗ್ರಹ ಹೆಚ್ಚಿಸುವುದಷ್ಟೇ ಅವರ ಗುರಿಯಾಗಿರಬೇಕು’ ಎಂದು ಹೇಳಲು ಬಯಸುವೆ. ಈಗ ಆಗುತ್ತಿರುವುದೂ ಅದೇ ಎಂದು ನಾನು ಭಾವಿಸುವೆ.

* ಕಿರಾಣಿ ಅಂಗಡಿಯವರೂ ತೆರಿಗೆ ಪಾವತಿಸಬೇಕಾಗಬಹುದೇ?

ಕೆಲವರು ಇದರ ವ್ಯಾಪ್ತಿಗೆ ಬರಬಹುದು. ಕೆಲ ಅಂಗಡಿಗಳವರ ವಾರ್ಷಿಕ ವ್ಯಾಪಾರ ಹಲವು ಲಕ್ಷ ರೂಪಾಯಿಗಳನ್ನು ದಾಟುತ್ತದೆ. ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಸರಕುಗಳನ್ನು  (ಎಫ್‌ಎಂಸಿಜಿ) ತಯಾರಿಸುವ ಸಂಸ್ಥೆಗಳಿಂದಲೇ ಖರೀದಿಸುವುದರಿಂದ ‘ಜಿಎಸ್‌ಟಿ’ ವ್ಯಾಪ್ತಿಗೆ ಬರಬೇಕಾಗುತ್ತದೆ.  ‘ಜಿಎಸ್‌ಟಿ’ ವ್ಯಾಪ್ತಿಗೆ ಬಂದರೆ ನನಗೂ ಲಾಭ ಆಗಲಿದೆ ಎನ್ನುವ ಮನೋಭಾವ ಅವರಲ್ಲಿಯೂ ಮೂಡಬೇಕಾಗಿದೆ.

* ಗ್ರಾಹಕರು ಹೇಗೆ ಪ್ರತಿಕ್ರಿಯಿಸಬೇಕು?

ಬಳಕೆದಾರರೂ ಈ  ತೆರಿಗೆ ವ್ಯವಸ್ಥೆಯ ಬದಲಾವಣೆ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗಿಯಾದರೆ ಖಂಡಿತವಾಗಿಯೂ ಗುಣಾತ್ಮಕ ಬದಲಾವಣೆ ಕಂಡು ಬರಲಿದೆ.

*ಕಾರ್ಯನಿರ್ವಹಣೆಯ ಸ್ವರೂಪ ಹೇಗೆ?

ಸರಳವಾಗಿ ಹೇಳುವುದಾದರೆ ಇಡೀ ದೇಹಕ್ಕೆ ಶುದ್ಧ ರಕ್ತ ಪೂರೈಸುವ ಹೃದಯದ ರೀತಿಯಲ್ಲಿ  ‘ಜಿಎಸ್‌ಟಿ’ ವ್ಯವಸ್ಥೆ  ಕಾರ್ಯ

ನಿರ್ವಹಿಸಲಿದೆ. ಆರ್ಥಿಕ ಚಟುವಟಿಕೆಗಳ ಎಲ್ಲ ಭಾಗಿದಾರರು  ಈ ವ್ಯವಸ್ಥೆಗೆ ಒಳಪಟ್ಟರೆ ತೆರಿಗೆ ಹೊರೆ ಕಡಿಮೆಯಾಗಲಿದೆ. ಕೆಲ ಸರಕುಗಳು ಅಗ್ಗವಾಗಲಿವೆ.

* ಹೊಸ ತೆರಿಗೆ ಹೊರೆಯಾಗಲಿದೆಯೇ?

ಸದ್ಯಕ್ಕೆ ಶೇ 22 ರಿಂದ ಶೇ 33ರಷ್ಟು ತೆರಿಗೆಗಳು ಜಾರಿಯಲ್ಲಿ ಇವೆ. ಹೊಸ ವ್ಯವಸ್ಥೆಯಡಿ, ಕೆಲ ಸರಕು ಮತ್ತು ಸೇವೆಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ. ಉಳಿದಂತೆ ಶೇ 5, 12 ,18 ಮತ್ತು ಶೇ 28ರ ವ್ಯಾಪ್ತಿಗೆ ತರಲಾಗಿದೆ. ಬಹುತೇಕ ಸರಕುಗಳು ಶೇ 18ರ ವ್ಯಾಪ್ತಿಯಲ್ಲಿ ಇವೆ. ಹೀಗಾಗಿ ಹೊರೆ ಎನಿಸುತ್ತಿಲ್ಲ.

* ಜುಲೈ 1 ರಿಂದ  ಹೊಸ ವ್ಯವಸ್ಥೆ ಜಾರಿಗೆ ಬರುವುದೇ?

ವೈಯಕ್ತಿಕವಾಗಿ ನನಗೂ ಈ ಬಗ್ಗೆ ಸಂದೇಹ ಇದೆ. ಆದರೆ, ಕೇಂದ್ರ ಸರ್ಕಾರ ಈ ಬಗ್ಗೆ ದೃಢ ನಿಶ್ಚಯ ಮಾಡಿದೆ. ಮೊದಲು ಜಾರಿಗೆ ತರೋಣ, ಆಮೇಲೆ ಬಂದಿದ್ದನ್ನು ನೋಡೋಣ ಎನ್ನುವ ಧೋರಣೆ  ಸರ್ಕಾರದ್ದು. ನೋಡೋಣ, ಏನಾಗುತ್ತದೆ ಅಂತ.

* ತಕ್ಷಣದ ಪರಿಣಾಮಗಳೇನು?

ಆರಂಭದಲ್ಲಿ ಮಾರಾಟ ಕಡಿಮೆ ಇರಬಹುದು. ವರ್ತಕರು ಈಗಾಗಲೇ ಹಲವಾರು ಕಾರಣಗಳಿಗೆ ತಮ್ಮ ದಾಸ್ತಾನು ಪ್ರಮಾಣವನ್ನು ಕಡಿಮೆ  ಮಾಡುತ್ತಿದ್ದಾರೆ.

*ಮುಖ್ಯ ಸವಾಲುಗಳೇನು?

ಸವಾಲುಗಳು ಸಾಕಷ್ಟಿವೆ. ಜನರ ಭಾಗವಹಿಸುವಿಕೆಯೂ ಇಲ್ಲಿ ಮುಖ್ಯವಾಗಿದೆ.  ಬಳಕೆದಾರರು ತಾವು ಖರೀದಿಸಿದ ಸರಕು ಮತ್ತು ಸೇವೆಗಳಿಗೆ ಕಡ್ಡಾಯವಾಗಿ ಬಿಲ್‌ ಕೇಳಿ ಪಡೆಯಬೇಕು. ತೆರಿಗೆ ವ್ಯವಸ್ಥೆಗೆ ಒಳಪಡುವವರೆಲ್ಲ ಈ ಸರಳ ವ್ಯವಸ್ಥೆ ಸ್ವಾಗತಿಸಲು ಸಿದ್ಧರಾಗಬೇಕಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry