‘ಬಡವರ ಕೆಲಸಕ್ಕೆ 56 ಇಂಚಿನ ಎದೆ ಬೇಡ’

7

‘ಬಡವರ ಕೆಲಸಕ್ಕೆ 56 ಇಂಚಿನ ಎದೆ ಬೇಡ’

Published:
Updated:
‘ಬಡವರ ಕೆಲಸಕ್ಕೆ 56 ಇಂಚಿನ ಎದೆ ಬೇಡ’

ಮೈಸೂರು: ‘ಕೊಟ್ಟ ಮಾತು ದಿಟ್ಟ ಸಾಧನೆ’ ಎಂಬ ಹೆಸರಿನಡಿ ಶನಿವಾರ ನಗರದಲ್ಲಿ ಆಯೋಜಿಸಿದ್ದ ಮೈಸೂರು ವಿಭಾಗೀಯ ಮಟ್ಟದ ಸೌಲಭ್ಯ ವಿತರಣಾ ಸಮಾರಂಭವು ಕಾಂಗ್ರೆಸ್‌ ಸರ್ಕಾರದ ಸಾಧನೆಗಳ ಪ್ರಚಾರದ ಜೊತೆಗೆ ಮುಂಬರುವ ಚುನಾವಣಾ ಸಿದ್ಧತೆಗೆ ಮುನ್ನುಡಿ ಬರೆದಂತಿತ್ತು.

ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ಸಮಾವೇಶ ನಾಲ್ಕು ವರ್ಷಗಳ ಸಾಧನೆಯ ಗುಣಗಾನ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಾಯಕತ್ವ ಹೊಗಳಿಕೆಗೆ ಮೀಸಲಾಯಿತು.

ಮೈಸೂರು, ಕೊಡಗು, ಮಂಡ್ಯ, ಚಾಮರಾಜನಗರ, ಹಾಸನ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಯಿಂದ ಸುಮಾರು 500 ಬಸ್‌ಗಳಲ್ಲಿ 25 ಸಾವಿರಕ್ಕೂ ಅಧಿಕ ಜನರು ಬಂದಿದ್ದರು. ಹಲವು ಯೋಜನೆಗಳ ಸೌಲಭ್ಯವನ್ನು ಪ್ರತಿ ಜಿಲ್ಲೆಯ 10 ಫಲಾನುಭವಿಗಳಿಗೆ ಸಿದ್ದರಾಮಯ್ಯ ಸಾಂಕೇತಿಕವಾಗಿ ವಿತರಿಸಿದರು.

ಸಿದ್ದರಾಮಯ್ಯ ಬರೋಬ್ಬರಿ ಮುಕ್ಕಾಲು ಗಂಟೆ ಮಾತನಾಡಿದರು. ಮಾತಿನುದ್ದಕ್ಕೂ ಬಿಜೆಪಿ ಮುಖಂಡರ ಕಾಲು ಎಳೆದರು. ಒಮ್ಮೆ ಆವೇಶಕ್ಕೆ ಒಳಗಾದರೆ, ಮತ್ತೊಮ್ಮೆ ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಮಗದೊಮ್ಮೆ ಭಾವುಕರಾಗಿ ಮಾತನಾಡಿದರು.

‘ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಅರ್ಧ ಗಂಟೆಯಲ್ಲಿ ಆರು ಯೋಜನೆಗಳಿಗೆ ಸಹಿ ಹಾಕಿದೆ. ಬಡವರು, ದಲಿತರು, ಹಿಂದುಳಿದವರ ಕೆಲಸ ಮಾಡಲು 56 ಇಂಚಿನ ಎದೆ ಬೇಕಾಗಿಲ್ಲ; ಮಾನವೀಯ ಹೃದಯವಿದ್ದರೆ ಸಾಕು’ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಆರ್ಥಿಕ ಕ್ಷೇತ್ರದ ಚಾಣಕ್ಯ: ‘ಭಾರತದ ಆರ್ಥಿಕ ಕ್ಷೇತ್ರದ ಚಾಣಕ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ. ಇದುವರೆಗೆ ಮಂಡಿಸಿ ರುವ ಬಜೆಟ್‌ ವೈಖರಿ ಹಾಗೂ ಗಾತ್ರವೇ ಅದಕ್ಕೆ ಸಾಕ್ಷಿ’ ಎಂದು ರಾಜ್ಯಸಭಾ ಸದಸ್ಯ ಆಸ್ಕರ್‌ ಫರ್ನಾಂಡಿಸ್‌ ಹೇಳಿದರು.

‘ಸಾಮಾಜಿಕ ನ್ಯಾಯದ ಹರಿಕಾರ. ದಲಿತ ಸಮುದಾಯಕ್ಕೆ ಸಿದ್ದರಾಮಯ್ಯ ಅವರ ಕೊಡುಗೆ ಅನನ್ಯ. ಹಲವು ರಾಜ್ಯಗಳಿಗೆ ಕರ್ನಾಟಕ ಮಾದರಿ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry