ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ನಾಲ್ಕು ವಲಯಗಳಿಗೆ ನಿರಂತರ ನೀರು

Last Updated 4 ಜೂನ್ 2017, 19:30 IST
ಅಕ್ಷರ ಗಾತ್ರ

ಗದಗ: ಗದಗ– ಬೆಟಗೇರಿ ಅವಳಿ ನಗರಕ್ಕೆ ದಿನದ 24 ಗಂಟೆ ನಿರಂತರ ನೀರು ಪೂರೈಸುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾನುವಾರ ಇಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ‘ಅವಳಿ ನಗರಗಳಿಗೆ ನಿರಂತರ ಕುಡಿಯುವ ನೀರು ಪೂರೈಸುವುದಕ್ಕಾಗಿ ಮೊದಲನೇ ಹಂತದ ಯೋಜನೆ ರೂಪಿಸಿದ್ದೆವು. ಆದರೆ, ಅದರಿಂದ ಎಲ್ಲಾ ಭಾಗಕ್ಕೂ ನೀರು ಒದಗಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ಎರಡನೇ ಹಂತದ ಯೋಜನೆಗೂ ಗುದ್ದಲಿ ಪೂಜೆ ಮಾಡಲಾಗಿದೆ. ಆ ಮೂಲಕ ಈ ಭಾಗದ ನೀರಿನ ಬವಣೆ ನೀಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ’ ಎಂದರು.

‘ಒಟ್ಟು 42 ಸಾವಿರ ಮನೆಗಳಿಗೆ ನಿರಂತರ ಕುಡಿಯುವ ನೀರಿನ ಸಂಪರ್ಕ ಕಲ್ಪಿಸಲಾಗುವುದು. ಸದ್ಯಕ್ಕೆ ಯೋಜನಾ ವ್ಯಾಪ್ತಿಯ 12 ವಲಯಗಳ ಪೈಕಿ ನಾಲ್ಕು ವಲಯಗಳಿಗೆ ನೀರು ಒದಗಿಸಲಾಗಿದೆ. ಉಳಿದ ವಲಯಗಳ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳ್ಳಲಿದ್ದು, ನಾನೇ ಬಂದು ಉದ್ಘಾಟಿಸುತ್ತೇನೆ’ ಎಂದು ಹೇಳಿದರು.

‘ಈ ಯೋಜನೆಯ ಪ್ರೇರಕ ಶಕ್ತಿ  ಸಿದ್ದರಾಮಯ್ಯ ಆಗಿದ್ದು, ಅವರ ಕಾಳಜಿಯಿಂದಾಗಿಯೇ ನಮ್ಮ ಜಿಲ್ಲೆಯಲ್ಲಿ ಈ ಯೋಜನೆ ಜಾರಿಯಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಹೊಗಳಿದರು.  ಸಚಿವರಾದ ಯು.ಟಿ. ಖಾದರ್, ಈಶ್ವರ ಖಂಡ್ರೆ, ರುದ್ರಪ್ಪ ಲಮಾಣಿ  ಭಾಗವಹಿಸಿದ್ದರು.

ಒಡೆದ ಪೈಪ್‌ಲೈನ್‌
ಮುಂಡರಗಿ:
ಹಮ್ಮಿಗಿ ಗ್ರಾಮದಿಂದ ಗದಗ–ಬೆಟಗೇರಿ ಅವಳಿ ನಗರಕ್ಕೆ ನೀರು ಪೂರೈಸುವ ಯೋಜನೆಯ ಬೃಹತ್ ಪೈಪ್‌ಲೈನ್ ಬರದೂರ ಗ್ರಾಮದ ಬಳಿ ಭಾನುವಾರ ಒಡೆದಿದ್ದು, ಅಪಾರ ಪ್ರಮಾಣದ ನೀರು ಅಕ್ಕಪಕ್ಕದ ಹೊಲಗಳಿಗೆ ನುಗ್ಗಿದೆ. ಇದರಿಂದಾಗಿ ಬಿತ್ತನೆ ಮಾಡಲಾದ ಸುಮಾರು ಏಳು ಎಕರೆ ಜಮೀನು ಸಂಪೂರ್ಣವಾಗಿ ಜಲಾವೃತಗೊಂಡಿದೆ.

‘ಒಂದು ವಾರದ ಹಿಂದೆ, ಎಕರೆಗೆ ಹತ್ತು ಸಾವಿರ ರೂಪಾಯಿ ಖರ್ಚು ಮಾಡಿ ಹತ್ತಿ ಮತ್ತು ಸೂರ್ಯಕಾಂತಿ ಬೀಜ ಬಿತ್ತನೆ ಮಾಡಲಾಗಿತ್ತು. ಆದರೆ ಬೆಳೆ ಚಿಗುರೊಡೆಯುವ ಮುನ್ನವೇ ಪೈಪ್‌ಲೈನ್ ಒಡೆದು ಬಿತ್ತಿದ್ದ ಬೀಜ ನೀರಿನಲ್ಲಿ ಕೊಚ್ಚಿ ಹೋಗಿದೆ. ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು’ ಎಂದು ರೈತ ಚಿನ್ನಪ್ಪ ನಾಡಗೌಡ್ರ ಆಗ್ರಹಿಸಿದ್ದಾರೆ.

* ಗೃಹಖಾತೆಯನ್ನು ಯಾರಿಗೂ ಕೊಡುವುದಿಲ್ಲ. ನಾನೇ ಇಟ್ಟುಕೊಳ್ಳುತ್ತೇನೆ

-ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT