ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂತ್ರಸ್ತೆಗೆ ₹ 1,000 ಮಾಸಾಶನ: ಉಗ್ರಪ್ಪ

Last Updated 4 ಜೂನ್ 2017, 20:20 IST
ಅಕ್ಷರ ಗಾತ್ರ

ಬೆಂಗಳೂರು: ನಾಗವಾರದಲ್ಲಿ ನಡೆದಿದ್ದ ಅತ್ಯಾಚಾರ ಪ್ರಕರಣ ಸಂಬಂಧ ಬೌರಿಂಗ್‌ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ ಮಹಿಳಾ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿಯ ಅಧ್ಯಕ್ಷ ವಿ.ಎಸ್‌.ಉಗ್ರಪ್ಪ, ಸಂತ್ರಸ್ತ ಬಾಲಕಿಯ ಆರೋಗ್ಯ ವಿಚಾರಿಸಿದರು.

ಸಮಿತಿಯ ಸದಸ್ಯರೊಂದಿಗೆ ಮಧ್ಯಾಹ್ನ ಆಸ್ಪತ್ರೆಗೆ ಬಂದಿದ್ದ ಅವರು ವೈದ್ಯರಿಂದ ಮಾಹಿತಿ ಪಡೆದರು.

ಸುದ್ದಿಗಾರರೊಂದಿಗೆ ಮಾತನಾಡಿದ ಉಗ್ರಪ್ಪ, ‘ಬಾಲಕಿಯ ಕೈ ಬೆರಳಿಗೆ ಗಾಯವಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಜೀವಕ್ಕೆ ಯಾವುದೇ ತೊಂದರೆ ಇಲ್ಲವೆಂದು ವೈದ್ಯರು ಹೇಳಿದ್ದಾರೆ’ ಎಂದು ತಿಳಿಸಿದರು.

‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಪ್ರತಿ ತಿಂಗಳು ಬಾಲಕಿಗೆ ₹ 1,000 ಮಾಸಾಶನ ಸಿಗುವ ವ್ಯವಸ್ಥೆ ಮಾಡಲಾಗಿದೆ. ವೈದ್ಯಕೀಯ ವೆಚ್ಚಕ್ಕಾಗಿ ₹25,000 ನೀಡುವಂತೆಯೂ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.
‘ಆರೋಪಿಯು ಬಾಲಕಿಯ ಕೊಲೆಗೆ ಯತ್ನಿಸಿದ್ದಾನೆ. ಹೀಗಾಗಿ ಆತನ ವಿರುದ್ಧ ಕೊಲೆಗೆ ಯತ್ನ ಪ್ರಕರಣ ದಾಖಲಿಸಲು ಪೊಲೀಸರಿಗೆ ಹೇಳಿದ್ದೇವೆ’ ಎಂದು ಉಗ್ರಪ್ಪ ವಿವರಿಸಿದರು.

ಪ್ರವೇಶ ನಿರ್ಬಂಧ– ಪರದಾಟ: ಉಗ್ರಪ್ಪ ಅವರ ಭೇಟಿ ಕಾರಣ ಆಸ್ಪತ್ರೆಯೊಳಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿತ್ತು. ಇದರಿಂದ ರೋಗಿಗಳು ಹಾಗೂ ಅವರ ಸಂಬಂಧಿಕರು ತೊಂದರೆ ಅನುಭವಿಸಿದರು.

‘ಮಧ್ಯಾಹ್ನ 3 ಗಂಟೆಗೆ ಉಗ್ರಪ್ಪ ಬರಲಿದ್ದಾರೆ’ ಎಂಬ ಮಾಹಿತಿ ತಿಳಿದ ಪೊಲೀಸರು, 2.30ರಿಂದಲೇ  ಸಾರ್ವಜನಿಕರ ಪ್ರವೇಶ ನಿರ್ಬಂಧಿಸಿದರು. ಒಳ ಹೋಗಲು ಯತ್ನಿಸಿದ ಕೆಲವರಿಗೆ  ಲಾಠಿ ತೋರಿಸಿ ಬೆದರಿಸಿ ಹೊರಗೆ ಕಳುಹಿಸಿದರು. ಎರಡು ದಿನಗಳ ಹಿಂದೆ ನಡೆದಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಆಟೊ ಚಾಲಕ ಮುರುಗಪುತ್ರ ಎಂಬುವರು ಈ ವೇಳೆಯೇ ಆಸ್ಪತ್ರೆಗೆ ಬಂದಿದ್ದರು.  

ಸ್ಥಳದಲ್ಲಿದ್ದ ಪೊಲೀಸರು ಅವರನ್ನು ತಡೆದು ನಿಲ್ಲಿಸಿದ್ದರು. ಮಾಧ್ಯಮದವರು ನೋಡುತ್ತಿದ್ದಂತೆ ಅವರನ್ನು ಒಳಗೆ ಕಳುಹಿಸಿದರು. ಅರ್ಧ ಗಂಟೆ ತಡವಾಗಿ ಆಸ್ಪತ್ರೆಗೆ ಬಂದ ಉಗ್ರಪ್ಪ, ಬಾಲಕಿಯ ಆರೋಗ್ಯ ವಿಚಾರಿಸಿ ವಾಪಸ್‌ ಹೋದರು. ಅದಾದ ನಂತರವೇ ನಿರ್ಬಂಧ ಹಿಂಪಡೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT