ಬೀದಿ ವ್ಯಾಪಾರದಲ್ಲೇ ನಿತ್ಯ ಬದುಕು

7

ಬೀದಿ ವ್ಯಾಪಾರದಲ್ಲೇ ನಿತ್ಯ ಬದುಕು

Published:
Updated:
ಬೀದಿ ವ್ಯಾಪಾರದಲ್ಲೇ ನಿತ್ಯ ಬದುಕು

ಕಲಬುರ್ಗಿ:  ನಗರದ ವಿವಿಧೆಡೆ ಕೆಲವರು ಬೀದಿಬದಿ ವ್ಯಾಪಾರವನ್ನೆ ನೆಚ್ಚಿಕೊಂಡಿದ್ದಾರೆ. ಆದರೆ, ಅಂಥವರಿಗೆ ಶಾಶ್ವತ ನೆಲೆ ಸಿಗದ ಕಾರಣ ಪ್ರತಿ ನಿತ್ಯ ಪರದಾಡುವಂತಾಗಿದೆ.

ಮಹಾನಗರ ಪಾಲಿಕೆ ಹಾಗೂ ಜಿಲ್ಲಾಡಳಿತ ವತಿಯಿಂದ ನಗರದ ಕಣ್ಣಿ ಮಾರ್ಕೆಟ್‌, ಸೂಪರ್‌ ಮಾರ್ಕೆಟ್‌ನಲ್ಲಿ ಬೀದಿ ವ್ಯಾಪಾರಿಗಳಿಗೆ ಸ್ಥಳವಾಕಾಶ ಒದಗಿಸಲಾಗಿದೆ. ಉಳಿದೆಡೆ ಸೂಕ್ತ ಸ್ಥಳವಾಕಾಶ, ಮೂಲ ಸೌಕರ್ಯದ ಕೊರತೆ ಮಧ್ಯೆಯೇ ಬಿಸಿಲು, ಮಳೆ ಮತ್ತು ದೂಳನ್ನು ಲೆಕ್ಕಿಸದೇ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಕಣ್ಣಿ ಮಾರುಕಟ್ಟೆಯಲ್ಲಿ ಮಳಿಗೆ ನಿರ್ಮಾಣ, ಮೂಲಸೌಕರ್ಯ ಪೂರೈಕೆಗೆ ನಗರಾಭಿವೃದ್ಧಿ ಇಲಾಖೆ ₹5 ಕೋಟಿ ಅನುದಾನ ಮಂಜೂರು ಮಾಡಿದೆ. ನಗರದ ಏಳು ವಲಯಗಳಲ್ಲಿ ವ್ಯಾಪಾರಸ್ಥರಿಗೆ ನೆಲೆ ಒದಗಿಸಲೆಂದೇ ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ (ಎಚ್‌ಕೆಆರ್‌ಡಿಬಿ) ₹3 ಕೋಟಿ ಅನುದಾನ ಒದಗಿಸಿದೆ.

ಆದರೆ, ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವ್ಯಾಪಾರಿಗಳು ರಸ್ತೆಗಳಲ್ಲೇ ವ್ಯಾಪಾರ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ ಎಂಬುದು ವ್ಯಾಪಾರಿಗಳ ಆರೋಪ.

‘ವ್ಯಾಪಾರಿಗಳಿಗೆ ನೆಲೆ ಕಲ್ಪಿಸಲು ಕಲಬುರ್ಗಿ ಹೈಕೋರ್ಟ್‌ ಪೀಠ ಆದೇಶ ನೀಡಿ 6 ತಿಂಗಳಾದರೂ ಜಿಲ್ಲಾಡಳಿತ ಹಾಗೂ ಪಾಲಿಕೆ ಕ್ರಮಕ್ಕೆ ಮುಂದಾಗಿಲ್ಲ.

ನ್ಯಾಯಾಂಗ ನಿಂದನೆಯಿಂದ ತಪ್ಪಿಸಿಕೊಳ್ಳಲು 200 ಮಂದಿಗೆ ಕೆಎಸ್‌ಆರ್‌ಪಿ ಕ್ಯಾಂಪಸ್‌ ಬಳಿ ಸ್ಥಳಾವಕಾಶ ನೀಡಲಾಗಿದೆ’ ಎಂದು ಬೀದಿಬದಿ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ ‘ಪ್ರಜಾವಾಣಿ’ಗೆ ತಿಳಿಸಿದರು.

ಆಳಂದ ನಾಕಾ ಬಳಿ ಮತ್ತು ಬೇರೆಡೆ ವ್ಯಾಪಾರಸ್ಥರು ವ್ಯಾಪಾರ ಪೂರ್ಣಗೊಳಿಸಿ, ಉಳಿದ ತರಕಾರಿಯನ್ನು ಸೂಪರ್‌ ಮಾರ್ಕೆಟ್‌ ಬಳಿ ವ್ಯಾಪಾರ ಮಾಡಲೆತ್ನಿಸಿದರೆ, ನಗರಪಾಲಿಕೆ ಸಿಬ್ಬಂದಿ ದಂಡ ವಿಧಿಸುತ್ತಾರೆ, ಇಲ್ಲವೇ ತರಕಾರಿ ಬೀದಿಗೆ ಎಸೆಯುುತ್ತಾರೆ ಎಂದು  ದೂರಿದರು.

ವ್ಯಾಪಾರಿಗಳ ನಿರಾಸಕ್ತಿ

‘ಹಳೆ ಕೆಎಸ್‌ಆರ್‌ಪಿ ಕ್ಯಾಂಪಸ್‌ ಬಳಿ 200 ಮಂದಿಗೆ ಸ್ಥಳಾವಕಾಶ ಕಲ್ಪಿಸಲಾಗಿದೆ. ಅಲ್ಲಿ ಶೌಚಾಲಯ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು. ಹಂತಹಂತವಾಗಿ ಉಳಿದ ವ್ಯಾಪಾರಸ್ಥರಿಗೆ  ವಿವಿಧ ಕಡೆ ಅವಕಾಶ ಕಲ್ಪಿಸಲಾಗುವುದು’ ಎಂದು ಪಾಲಿಕೆ ಆಯುಕ್ತ ಪಿ.ಸುನಿಲ್‌ಕುಮಾರ್‌ ತಿಳಿಸಿದರು.

‘ಬೀದಿಬದಿ ವ್ಯಾಪಾರಸ್ಥರಿಗೆ ನಲ್ಮ್‌ ಯೋಜನೆಯಡಿ ಸಾಲ ಮತ್ತು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಿದ್ದೇವೆ. ಆದರೆ, ವ್ಯಾಪಾರಸ್ಥರು ಸೌಲಭ್ಯ ಪಡೆಯಲು ಮುಂದೆ ಬರುತ್ತಿಲ್ಲ’ ಎಂದು ಪಾಲಿಕೆ ಸಮುದಾಯ ಅಭಿವೃದ್ಧಿ ಅಧಿಕಾರಿ ವಿಜಯಲಕ್ಷ್ಮಿ ಪಟ್ಟೇದಾರ ಹೇಳುತ್ತಾರೆ.

ಎಲ್ಲೆಲ್ಲಿ ಬೀದಿ ವ್ಯಾಪಾರ?

ಕಣ್ಣಿ ಮಾರುಕಟ್ಟ, ಸೂಪರ್‌ ಮಾರ್ಕೆಟ್‌, ಶಹಾಬಜಾರ್‌ ನಾಕಾ, ಖಾದ್ರಿ ಚೌಕ್, ಬಂಬೂಬಜಾರ್‌, ಸುಲ್ತಾನಪುರ, ರೋಜಾ ಪೊಲೀಸ್‌ ಠಾಣೆ (ದರ್ಗಾ ಬಳಿ), ಲಾಲ್‌ ಹನುಮಾನ್‌ ಗುಡಿ, ಹುಮನಾಬಾದ್‌ ರಿಂಗ್‌ ರೋಡ್‌, ಖರ್ಗೆ ಪೆಟ್ರೊಲ್‌ ಬಂಕ್‌, ಗಣೇಶ ಮಂದಿರ, ಸೋನಾರ್‌ ಬಜಾರ್‌, ರಾಮನಗರ, ರಾಮಮಂದಿರ, ಮಿಂಚುಗೋರಿ, ಗಂಜ್‌ ಬಸ್‌ನಿಲ್ದಾಣ.

ವ್ಯಾಪಾರಿಗಳ ಸಂಖ್ಯೆ

2,185 ಬೀದಿ ಬದಿ ಒಟ್ಟು ವ್ಯಾಪಾಸ್ಥರು

ವಸತಿ ಸೌಲಭ್ಯ ಕಲ್ಪಿಸಿ ಬೀದಿಬದಿ ವ್ಯಾಪಾರಿಗಳಿಗೆ ವಸತಿ, ಸಾಲ ಸೌಲಭ್ಯ ಕಲ್ಪಿಸಬೇಕು ಎಂದು ವ್ಯಾಪಾರಿ ನಿಜಲಿಂಗಪ್ಪ ಆಗ್ರಹಿಸಿದ್ದಾರೆ.

200  ಜನರಿಗೆ ಸೂಪರ್‌ ಮಾರ್ಕೆಟ್ ಬಳಿ ವ್ಯಾಪಾರಕ್ಕೆ ಅವಕಾಶ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry