ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

950ಕ್ಕೂ ಹೆಚ್ಚು ಮರ ಪೋಷಿಸಿದ ನಿಂಗಣ್ಣ

ನಿರಂತರ ಶ್ರಮ; ಕೆರೆ, ಬಾವಿಗಳಿಂದ ನೀರು ತಂದೆರೆದ ಕುಟುಂಬ
Last Updated 5 ಜೂನ್ 2017, 8:52 IST
ಅಕ್ಷರ ಗಾತ್ರ

ರಾಮನಗರ: ಅರೆಹಳ್ಳಿ ಗ್ರಾಮದ ನಿಂಗಣ್ಣ ರಸ್ತೆಯ ಎರಡು ಬದಿಗಳಲ್ಲಿ 950ಕ್ಕೂ ಅಧಿಕ ಮರಗಳನ್ನು ನೆಟ್ಟು ತನ್ನ ಮಕ್ಕಳಂತೆ ಪೋಷಣೆ ಮಾಡಿದ್ದಾರೆ.

16 ವರ್ಷಗಳ ಹಿಂದೆ ಕೂನಮುದ್ದನಹಳ್ಳಿ ಹೊರಭಾಗದಲ್ಲಿರುವ ಕೋಡಿಬಸವೇಶ್ವರ ದೇವಾಲಯದ ಆವರಣದಲ್ಲಿನ ಗುಂಡುತೋಪು ಮರಗಳಿಲ್ಲದೆ ಬಣಗುಡುತ್ತಿತ್ತು. ಇದನ್ನು ಕಂಡ ನಿಂಗಣ್ಣ ಸುಮಾರು 300 ಗಿಡಗಳನ್ನು ಅರಣ್ಯ ಇಲಾಖೆಯ ನರ್ಸರಿಯಿಂದ ತಂದು ನೆಟ್ಟು ಪೋಷಿಸಿದರು.

ಇವುಗಳಲ್ಲಿ ಕೆಲವು ಗಿಡಗಳು ಒಣಗಿ ಹೋದವು. ಈಗ ಸುಮಾರು 250 ಗಿಡಗಳು ಚೆನ್ನಾಗಿ ಬೆಳೆದು ಇಡೀ ಗುಂಡುತೋಪು ಹಸಿರಿನಿಂದ ಕಂಗೊಳಿಸುತ್ತಿದೆ. ಬೇಸಿಗೆಯ ರಣಬಿಸಿಲಿನಲ್ಲೂ ತನ್ನ ಮನೆ ಕೆಲಸ ಬಿಟ್ಟು, ಹೆಂಡತಿ ಮಕ್ಕಳ ಜತೆಯಲ್ಲಿ ಇಲ್ಲಿನ ಗಿಡಗಳಿಗೆ ಹತ್ತಿರದ ಕೆರೆ ಹಾಗೂ ಬಾವಿಯಿಂದ ನೀರು ತಂದು ತನ್ನ ಮಕ್ಕಳಂತೆ ಬೆಳೆಸಿದ್ದಾರೆ.

‘ಗುಂಡು ತೋಪಿನ ಮರಗಳ ಸಂರಕ್ಷಣೆ ಹಾಗೂ ಬೆಳವಣಿಗೆ ಗಮನಿಸಿದ ಅರಣ್ಯ ಇಲಾಖೆಯವರು ಬಿಳಗುಂಬ ಗ್ರಾಮದಿಂದ ಕೂನಮುದ್ದನಹಳ್ಳಿ ಗ್ರಾಮದ ನಡುವೆ ಸುಮಾರು 3 ಕಿ.ಮೀ.ವರೆಗೆ ರಸ್ತೆಯ ಎರಡು ಬದಿಗಳಲ್ಲಿ ಸುಮಾರು 680ಕ್ಕೂ ಹೆಚ್ಚಿನ ಗಿಡಗಳನ್ನು ನೆಟ್ಟು ಅವುಗಳ ಪೋಷಣೆ ಹೊಣೆ ನನಗೆ ವಹಿಸಿದರು’ ಎಂದು ಸಾಲುಮರದ ನಿಂಗಣ್ಣ ‘ಪ್ರಜಾವಾಣಿ’ಗೆ ತಿಳಿಸಿದರು.

‘ನನ್ನ ಶ್ರಮಕ್ಕೆ ಪ್ರತಿಫಲ ಸಿಗದಿದ್ದರೂ ಒಂದಿಷ್ಟು ಹಣ ನೀಡುತ್ತಿದ್ದರು. ಸತತ 14 ವರ್ಷಗಳಿಂದ ರಸ್ತೆ ಬದಿಯ ಮರಗಳನ್ನು ಕಾಪಾಡಿಕೊಂಡು ಬಂದಿದ್ದೇನೆ’ ಎಂದರು.
‘ನನಗೆ ಮನೆ ಇದೆ. ಆದರೆ ಜೀವನ ನಡೆಸಲು ಜಮೀನು ಇರಲಿಲ್ಲ. ಇದರಿಂದ ಜೀವನದಲ್ಲಿ ನನಗೆ ಬಹಳ ಬೇಜಾರಾಗಿತ್ತು. ಭೂಮಿಯ ಮೇಲೆ ಹುಟ್ಟಿದ ನಾವುಗಳು ಏನಾದರೊಂದು ಒಳ್ಳೆಯ ಕೆಲಸವನ್ನು ಮಾಡಬೇಕು ಎಂಬ ಆಸೆ ಸದಾ ನನ್ನಲ್ಲಿ ಕಾಡುತ್ತಿತ್ತು. ಇಂತಹ ಸಂದರ್ಭದಲ್ಲಿ ನನಗೆ ಹೊಳೆದದ್ದು ಗಿಡ ನೆಡುವುದು’ ಎಂದು ಅವರು ಹೇಳಿದರು.

‘ಇಂದು ನಾವು ನೆಟ್ಟ ಒಂದು ಗಿಡ ಮುಂದಿನ ಹಲವು ವರ್ಷಗಳ ಕಾಲ ಈ ಭೂಮಿಯ ಮೇಲಿರುತ್ತದೆ. ನಾನು ಸತ್ತರೂ ಮರದ ನೆನಪಿನಲ್ಲಿ ಜೀವಂತವಾಗಿರುತ್ತೇನೆ. ಸ್ಥಳೀಯರಿಂದ ಉತ್ತಮ ಬೆಂಬಲ ದೊರೆಯದಿದ್ದರೂ, ಇದುವರೆಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ನನ್ನ ಕೆಲಸವನ್ನು ಕಳೆದ 20 ವರ್ಷಗಳಿಂದಲೂ ಶ್ರದ್ಧೆಯಿಂದ ಮಾಡಿದ್ದೇನೆ. ಯಾವುದೇ ರೀತಿಯ ಪ್ರತಿಫಲಾಪೇಕ್ಷೆಯನ್ನು ಬಯಸದೆ ಮರಗಳನ್ನು ಯಾರೂ ಕಡಿದು ಹಾಕದಿದ್ದರೆ ನನ್ನ ಶ್ರಮ ಸಾರ್ಥಕವಾಗುತ್ತದೆ’ ಎಂದರು.

‘ನಾನು ನೆಟ್ಟಿರುವ ಸಾಲುಮರಗಳು ಇಂದು ಹದಿನೈದು ಅಡಿ ಎತ್ತರಕ್ಕೆ ಬೆಳೆದಿದ್ದು, ಅವುಗಳನ್ನು ನೋಡಲು ಬಹಳ ಸಂತೋಷವಾಗುತ್ತದೆ. ವರ್ಷಾನುಗಟ್ಟಲೆ ಇವುಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಪೋಷಣೆ ಮಾಡಿದ್ದೇನೆ. ಇಲ್ಲಿನ ಸಾಲು ಮರಗಳನ್ನು ನೋಡಿದ ಸಾವಿರಾರು ಮಂದಿ ನನ್ನನ್ನು ಪ್ರಶಂಶಿಸಿದ್ದಾರೆ. ಬೇಸಿಗೆಯಲ್ಲಿ ನನ್ನ ಹೆಂಡತಿ ಸಾವಿತ್ರಮ್ಮ, ಮಗ ನೀಲಕಂಠಮೂರ್ತಿ, ಮಗಳು ಪುಷ್ಪಲತಾ ನನ್ನೊಂದಿಗೆ ಬಂದು ಗಿಡಗಳಿಗೆ ನೀರನ್ನು ಹೊತ್ತು ತಂದು ಹಾಕಿದ್ದಾರೆ’ ಎಂದು ತಿಳಿಸಿದರು.

‘ನಮ್ಮ ಯಜಮಾನರು ಗಿಡ ನೆಡುವ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ. ಆದರೆ ಹಲವು ಮಂದಿ ಈ ಕೆಲಸವನ್ನು ಯಾಕೆ ಮಾಡಬೇಕು ಎಂದು ಪ್ರಶ್ನಿಸುತ್ತಾರೆ. ಆದರೆ ಕೆಲವರಾದರೂ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಾಗ ನನಗೆ ಸಂತೋಷವಾಗುತ್ತದೆ’ ಎಂದು ನಿಂಗಣ್ಣ ಅವರ ಪತ್ನಿ ಸಾವಿತ್ರಮ್ಮ ತಿಳಿಸಿದರು.  –ಎಸ್. ರುದ್ರೇಶ್ವರ

**

ಜಮೀನು ಕೊಡಲು ಮನವಿ
‘ನನಗೆ ಹಾಗೂ ಹೆಂಡತಿಗೆ ವಯಸ್ಸಾಗಿದೆ. ಜೀವನ ನಿರ್ವಹಣೆಗೆ  4 ಎಕರೆ ಸರ್ಕಾರಿ ಜಮೀನನ್ನು ನಮಗೆ ಮಂಜೂರು ಮಾಡಿಕೊಡಬೇಕು’ ಎಂದು ಸಾಲು ಮರದ ನಿಂಗಣ್ಣ ಮನವಿ ಮಾಡಿದ್ದಾರೆ. ‘ಕೂಲಿ ಮಾಡಿ ಜೀವನ ನಡೆಸಲು ಆಗುತ್ತಿಲ್ಲ. ಸರ್ಕಾರ ಸೇರಿದಂತೆ ಹಲವು ಸಂಘಸಂಸ್ಥೆಗಳು ನಮ್ಮನ್ನು ಗುರುತಿಸಿ ಸನ್ಮಾನ ಮಾಡಿವೆ. ಈಗ ಜೀವನ ನಡೆಸುವುದು ಕಷ್ಟವಾಗಿದೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT