ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ ನೀಡುವ ರೇಷ್ಮೆ ಇಲಾಖೆ ಸಸ್ಯಕ್ಷೇತ್ರ

ಮಾಗಡಿಯ ಮೌನ ಕಣಿವೆಯಂತಿದೆ ಈ ಪರಿಸರ * ನವೀಕೃತ ಇಲ್ಲಿನ ಜನಪದ ಮಾಸ್ತಮ್ಮ ದೇವತೆಯ ಗುಡಿ
Last Updated 5 ಜೂನ್ 2017, 9:02 IST
ಅಕ್ಷರ ಗಾತ್ರ

ಮಾಗಡಿ: ಪಟ್ಟಣದ ಕರಣೀಕರ ಕಲ್ಯಾಣಿ ನೀಲಯ್ಯನ ಕಟ್ಟೆಯ ಬಳಿ ಇರುವ ರೇಷ್ಮೆ ಇಲಾಖೆಯ ಫಾರಂನಲ್ಲಿ (ಸಸ್ಯಕ್ಷೇತ್ರ) ಸಾವಿರಾರು ಮರಗಿಡಗಳು ಬೆಳೆದಿದ್ದು ಮಾಗಡಿಯ ಮೌನ ಕಣಿವೆಯಂತಿವೆ. ಸಂಜೆ ಮತ್ತು ಮುಂಜಾನೆ ಸಹಸ್ರಾರು ವಿವಿಧ ಪಕ್ಷಿಗಳ ಕಲರವ ಮನಸ್ಸಿಗೆ ಮುದ ನೀಡುತ್ತಿದೆ.

ಫಾರಂನ ನೈಋತ್ಯ ಮೂಲೆಯಲ್ಲಿ ಅನಾದಿಯಿಂದಲೂ ನೆಲೆ ನಿಂತಿರುವ ಜನಪದ ದೇವತೆ ‘ಮಾಸ್ತಮ್ಮ’ ಇಲ್ಲಿನ ವನಸಂಪತ್ತು ರಕ್ಷಿಸುತ್ತಿದ್ದಾಳೆ ಎಂಬ ನಂಬಿಕೆ ಇದೆ. ಅಲ್ಲಿ ಬೆಳೆದಿರುವ ಬಹುದೊಡ್ಡ ವೃಕ್ಷಗಳು, ವಿವಿಧ ನಮೂನೆಯ ಬಳ್ಳಿಗಳು, ಗಿಡಮೂಲಿಕಾ ಸಸ್ಯಗಳು ಸೇರಿಕೊಂಡು ಹಚ್ಚಹಸಿರಿನ ಪರಿಸರವನ್ನು ಉಳಿಸಿಕೊಂಡಿವೆ.

ಮಾಸ್ತಮ್ಮ ದೇವಿ ಅಲ್ಲಿನ ಗಿಡಮರಗಳು ಪಶುಪಕ್ಷಿಗಳು, ಕ್ರಿಮಿಕೀಟಗಳು, ಹಾವುಗಳನ್ನು ರಕ್ಷಿಸುತ್ತಿದ್ದಾಳೆ. ಅಲ್ಲಿರುವ ಗಿಡಮರಗಳನ್ನು ಕತ್ತರಿಸಿದರೆ ಮಾಸ್ತಮ್ಮ ದೇವಿ ಮುನಿಯುತ್ತಾಳೆ ಎಂಬ ನಂಬಿಕೆ ಇರುವುದರಿಂದ ಮಾಗಡಿ ಪಟ್ಟಣದ ಮೌನಕಣಿವೆ ಉಳಿದಿದೆ ಎಂಬುದು ಪರಿಸರವಾದಿ ಪಡುವಗೆರೆ ಚನ್ನೇಗೌಡ ಕನ್ನಡ ಕುಮಾರ ಅವರ ಅಚಲವಾದ ನಂಬಿಕೆ.

ಈ ಮೌನಕಣಿವೆಯಲ್ಲಿ ನಡೆದಾಡಿದರೆ ಶುದ್ಧ ಗಾಳಿ ಸೇವನೆಯಿಂದ ರೋಗಗಳು ವಾಸಿಯಾಗುತ್ತದೆ ಎಂಬುದು ರೇಷ್ಮೆ ಇಲಾಖೆಯ ನಿವೃತ್ತ ನೌಕರ ಮಹದೇವ್‌ ಅವರ ನಂಬಿಕೆಯಾಗಿದೆ. ರೇಷ್ಮೆ ಇಲಾಖೆ ನೌಕರರಾದ ನಂಜೇಗೌಡ, ಚಂದ್ರಣ್ಣ ಇತರರು ಸೇರಿ ಇತ್ತೀಚೆಗೆ ವನದೇವತೆ ಮಾಸ್ತಮ್ಮ ದೇವಿಯ ಗುಡಿಯನ್ನು ನವೀಕರಿಸಿದ್ದಾರೆ. ಜೊತೆಗೆ ನೂರಾರು ವಿವಿಧ ನಮೂನೆಯ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದಾರೆ. ಕೋಟೆಯ ಪೂರ್ವ ದಿಕ್ಕಿನಲ್ಲಿ ಇದ್ದ ವಿಶಾಲವಾದ ಕಂದಕವನ್ನು ಮುಚ್ಚಿ ನ್ಯಾಯಾಲಯದ ಕಟ್ಟಡ ಕಟ್ಟಲಾಗಿದೆ, ಉಳಿದ ಕಂದಕದ ಭಾಗವನ್ನು ಮುಚ್ಚಿ ಅರಣ್ಯ ಇಲಾಖೆಯ ಸಹಯೋಗದಲ್ಲಿ ಸ್ಥಳೀಯ ನ್ಯಾಯಾಧೀಶರು, ವಕೀಲರು, ನ್ಯಾಯಾಲಯದ ಸಿಬ್ಬಂದಿ ನೂರಾರು ಸಸಿಗಳನ್ನು ನೆಟ್ಟಿದ್ದಾರೆ. ಸಮಾಜಸೇವಕ ಕೆ.ಬಾಗೇಗೌಡ ನೂರಾರು ಸಸಿಗಳಿಗೂ ಕಬ್ಬಿಣದ ಟ್ರಿಗಾರ್ಡ್‌ ಮಾಡಿಸಿಕೊಟ್ಟಿದ್ದಾರೆ.

ಅರಣ್ಯ ಇಲಾಖೆಯ ಸಿಬ್ಬಂದಿ ನಿತ್ಯ ಟ್ರ್ಯಾಕ್ಟರ್‌ನಲ್ಲಿ ನೀರು ತಂದು ಸಸಿಗಳಿಗೆ ಸುರಿದು ಗಿಡ ಬೆಳೆಸಲು ಶ್ರಮಿಸಿದ್ದಾರೆ. ಎಲ್ಲರ ಸಹಕಾರದೊಂದಿಗೆ ಕೋಟೆಯ ಪೂರ್ವದಲ್ಲಿದ್ದ ಕಂದಕ ಮುಚ್ಚಿ ಸಸಿ ಬೆಳೆಸಿರುವುದು ಪಟ್ಟಣದಲ್ಲಿ ಇರುವ ಎರಡನೆಯ ಸುಂದರ ಪರಿಸರ ರಕ್ಷಣೆಯ ಮಹತ್ವದ ಕೆಲಸವಾಗಿದೆ.

ಮಳೆಗಾಲ ಆರಂಭವಾಗಿರುವುದರಿಂದ ಅರಣ್ಯ ಇಲಾಖೆ, ಗ್ರಾಮ ಪಂಚಾಯಿತಿಗಳು ಸೇರಿಕೊಂಡು ದೇಶೀಯ ಸಸಿಗಳನ್ನು ಬೆಳೆಸುವುದು ತೀರಾ ಅಗತ್ಯವಾಗಿದೆ ಎಂಬುದು ಪರಿಸರವಾದಿ ರತ್ನಕುಮಾರ್‌ ಅವರ ಮಾತಾಗಿದೆ.

ಕಳೆದ ವರ್ಷದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ವತಿಯಿಂದ ಗುಡೇಮಾರನ ಹಳ್ಳಿ ಹ್ಯಾಂಡ್‌ ಪೋಸ್ಟ್‌ ಮೂಲಕ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಾವಿರಾರು ಸಸಿ ನೆಟ್ಟಿರುವುದಾಗಿ ಅನುದಾನ ಬಳಸಿಕೊಂಡದ್ದು ಬಿಟ್ಟರೆ ಒಂದೇ  ಒಂದು ಸಸಿ ಬೆಳೆಸಿದ ಉದಾಹರಣೆ ಇಲ್ಲ ಎಂದು ಸೋಲೂರು ಮೂರ್ತಿ ತಿಳಿಸಿದ್ದಾರೆ.

ಕಳೆದ ವರ್ಷ ಬೆಳಗುಂಬ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಸಾವಿರಾರು ಸಸಿ ಬೆಳೆಸಿರುವುದಾಗಿ ಕಳ್ಳಲೆಕ್ಕ ಬರೆದು ಲಕ್ಷಾಂತರ ಅನುದಾನ ದುರುಪಯೋಗವಾಗಿತ್ತು ಎಂದು ಬೆಳಗುಂಬ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದರು ಎಂದು ಬೆಳಗುಂಬದ ಸಾಮಾಜಿಕ ಕಾರ್ಯಕರ್ತ ಗುಡ್ಡೇಗೌಡ ತಿಳಿಸಿದ್ದಾರೆ.

ಅರಣ್ಯ ಉಳಿಸದಿದ್ದರೆ ಮುಂದಿನ ಮಕ್ಕಳ ಬದುಕು ನರಕ ಸದೃಶವಾಗಲಿದೆ ಎಂದು ಕುದೂರಿನ ಪರಿಸರವಾದಿ ಎಚ್‌. ರಾಜಶೇಖರ್‌ ಎಚ್ಚರಿಸಿದ್ದಾರೆ.

**

ಅರೆ ಮಲೆನಾಡ ಸೊಬಗಿನ ಸಿರಿ

ಹಿಂದೆ ಮಾಗಡಿ ತಾಲ್ಲೂಕನ್ನು ಅರೆಮಲೆನಾಡು ಎಂದು ಕರೆಯಲಾಗುತ್ತಿತ್ತು, 10 ಸಾವಿರದ 600 ಎಕರೆ ವಿಸ್ತೀರ್ಣದಲ್ಲಿ ಸಾವನದುರ್ಗದ ಅಭಯಾರಣ್ಯ ಹಬ್ಬಿತ್ತು ಎಂದು ಲೇಖಕ ಡಿ.ಆರ್‌.ಚಂದ್ರಮಾಗಡಿ ಹೇಳುತ್ತಾರೆ.

ಸಿದ್ದೇದೇವರ ಬೆಟ್ಟ, ಭಂಟರಕುಪ್ಪೆ, ಮತ್ತಿಕೆರೆ, ಅದರಂಗಿ, ಕಾಗಿಮಡು ಇತರೆಡೆಗಳಲ್ಲಿ ಅರಣ್ಯ ಪ್ರದೇಶದ ಜೊತೆಗೆ ಸಾವಿರಾರು ಎಕರೆ ಗೋಮಾಳದಲ್ಲಿ ಹುಲುಸಾಗಿ ಗಿಡಮರಗಳು ಬೆಳೆದಿದ್ದವು, ಮಾನವನ ದುರಾಕ್ರಮಣದಿಂದ ಸಾವನದುರ್ಗದ ಅರಣ್ಯ 6 ಸಾವಿರ ಎಕರೆಯಾಗಿದೆ. ಗೋಮಾಳ ಉಳಿದಿಲ್ಲ.  ಚಕ್ರಬಾವಿ ಅರಣ್ಯವನ್ನು ಕಡಿದು ಹಾಕಿ ವಸತಿ ಶಾಲೆ ನಿರ್ಮಿಸಲಾಗಿದೆ. ಉಳಿದಿರುವ ಅರಣ್ಯ ಪ್ರದೇಶವನ್ನಾದರೂ ಉಳಿಸುವ ಜೊತೆಗೆ ಮನೆಗೊಂದು ಸಸಿ ನೆಟ್ಟು ಬೆಳೆಸಬೇಕಿದೆ ಎಂದು ಅವರ ಅನಿಸಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT