ಹಿಂದುತ್ವ ಮುಕ್ತ ಮನಸ್ಸು ಹೊಂದಲಿ

7
‘ಟು ಸೇಂಟ್ಸ್‌’ ಕೃತಿ ಬಿಡುಗಡೆ ಬಳಿಕ ನಡೆದ ಸಂವಾದದಲ್ಲಿ ಲೇಖಕ ಅರುಣ್‌ ಶೌರಿ ಅಭಿಮತ

ಹಿಂದುತ್ವ ಮುಕ್ತ ಮನಸ್ಸು ಹೊಂದಲಿ

Published:
Updated:
ಹಿಂದುತ್ವ ಮುಕ್ತ ಮನಸ್ಸು ಹೊಂದಲಿ

ಬೆಂಗಳೂರು: ‘ಬೌದ್ಧ ಧರ್ಮವು ಟೀಕೆಗಳನ್ನು ಮುಕ್ತವಾಗಿ ಸ್ವೀಕರಿಸುತ್ತದೆ. ಅಂತೆಯೇ  ಹಿಂದುತ್ವವೂ ಮುಕ್ತ ಮನಸ್ಸು ಹೊಂದಬೇಕು’ ಎಂದು ಲೇಖಕ ಅರುಣ್‌ ಶೌರಿ ಹೇಳಿದರು.

ತಮ್ಮ ‘ಟು ಸೇಂಟ್ಸ್‌’ ಕೃತಿ ಬಿಡುಗಡೆಯ ಬಳಿಕ ಸೋಮವಾರ ನಡೆದ ಸಂವಾದದಲ್ಲಿ ಅವರು ಮಾತನಾಡಿದರು.

‘ನಾವು ಹಿಂದೂಗಳು ಈಗಲೂ ದೇವರು, ಧಾರ್ಮಿಕ ಸಂಕೇತಗಳು ಹಾಗೂ ಧರ್ಮಗ್ರಂಥಗಳ ಬಗ್ಗೆ ತೀರಾ ರಕ್ಷಣಾತ್ಮಕ ಮನೋಭಾವ ಹೊಂದಿದ್ದೇವೆ. ಇದು ಸರಿಯಲ್ಲ. ಆದರೆ, ಬೌದ್ಧ ಸನ್ಯಾಸಿಗಳು ವಾಸ್ತವವನ್ನು ಬಿಚ್ಚುಮನಸ್ಸಿನಿಂದ ಒಪ್ಪಿಕೊಳ್ಳುತ್ತಾರೆ. ಅವರ ಧರ್ಮದ ದೋಷಗಳನ್ನೂ ಟೀಕಿಸುತ್ತಾರೆ. ಈ ಬಗ್ಗೆ ಮುಕ್ತ ಚರ್ಚೆಗೆ ಸಿದ್ಧವಿರುತ್ತಾರೆ’ ಎಂದು ಅಭಿಪ್ರಾಯಪಟ್ಟರು.

‘ರಾಮಕೃಷ್ಣ ಪರಮಹಂಸ ಹಾಗೂ ರಮಣ ಮಹರ್ಷಿಗಳು ಸಾವಿರಾರು ಅನುಯಾಯಿಗಳ ನೋವಿಗೆ  ಉಪಶಮನದ ದಾರಿ ತೋರಿದ್ದರು. ಆದರೆ, ಅವರಿಬ್ಬರೂ ಲೌಕಿಕ ಬವಣೆಗಳಿಂದ ಹೊರತಾಗಿರಲಿಲ್ಲ. ಕೊನೆಗಾಲದಲ್ಲಿ ಕಾಯಿಲೆಯಿಂದ ನೋವನ್ನು ಅನುಭವಿಸಿದ್ದರು.  ಇವನ್ನೆಲ್ಲ  ಹೇಗೆ ನಿಭಾಯಿಸಿದರು ಎಂಬ ಕುತೂಹಲ ನನಗಿತ್ತು. ಹಾಗಾಗಿ ಅವರ ಬಗ್ಗೆ ಚರ್ಚೆಯಾಗುತ್ತಿರುವ ಆಧ್ಯಾತ್ಮಿಕ ಸಂಗತಿಗಳ ಬೆನ್ನು ಹತ್ತಿದೆ’ ಎಂದು ಶೌರಿ ತಿಳಿಸಿದರು.

‘ಆಗಾಗ ಮೂರ್ಚೆ ಹೋಗುತ್ತಿದ್ದ ಬಗ್ಗೆ, ಸತ್ತು ಬದುಕಿದ ಅನುಭವಗಳ ಬಗ್ಗೆ ರಮಣ ಮಹರ್ಷಿ ಹೇಳಿಕೊಂಡಿದ್ದರು. ಒಮ್ಮೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿ ಬಂದಾಗ ಅರಿವಳಿಕೆ ಮದ್ದು ಪಡೆಯಲು ನಿರಾಕರಿಸಿದ್ದರು. ಆಧ್ಯಾತ್ಮಿಕ ಸಾಧನೆಯಿಂದ ದೇಹಕ್ಕೆ ಆಗುವ ನೋವಿನ ಅನುಭವವನ್ನೇ ನಿಯಂತ್ರಿಸುವಷ್ಟರ ಮಟ್ಟಿಗೆ ಮನಸ್ಸಿನ ಮೇಲೆ ಹಿಡಿತ ಸಾಧಿಸಿದ್ದರೇ?  ಇದಕ್ಕೆ ಮಿದುಳಿನ ಸ್ಪಂದನೆ ಹೇಗಿತ್ತು ಎಂಬ ಅಂಶಗಳನ್ನು ಕಂಡುಕೊಳ್ಳಲು ಸಂಶೋಧನೆ ಅಗತ್ಯವಿದೆ’ ಎಂದರು.

ಭಾರತೀಯ ವಿಜ್ಞಾನ ಸಂಸ್ಥೆಯ ನರವಿಜ್ಞಾನ ವಿಭಾಗದ ಪ್ರಾಧ್ಯಾಪಕಿ ಡಾ. ವಿಜಯಲಕ್ಷ್ಮಿ ರವೀಂದ್ರನಾಥ್‌, ‘ನೆನಪಿನಲ್ಲಿಟ್ಟುಕೊಂಡ ಅಂಶಗಳನ್ನು ಆಧರಿಸಿ ಮಿದುಳಿನ ಕೆಲವು ಭಾಗಗಳ ಗಾತ್ರ ಬದಲಾಗುವ  ಕುರಿತು ಆಳವಾದ ಸಂಶೋಧನೆ ನಡೆಯಬೇಕು. ರಿಚರ್ಡ್‌ ಡೇವಿಡ್ಸನ್‌  ಎಂಬ ವಿಜ್ಞಾನಿ ಬೌದ್ಧ ಬಿಕ್ಕುಗಳ ಮಿದುಳಿನ ಬಗ್ಗೆ ಸಂಶೋಧನೆಯಲ್ಲಿ ತೊಡಗಿದ್ದಾರೆ. ಭಾರತದ ಆಧ್ಯಾತ್ಮಿಕ ನಾಯಕರಿಗೆ ಸಂಬಂಧಿಸಿದಂತೆ, ಇಂತಹ ಪ್ರಯತ್ನ ನಡೆದಿಲ್ಲ’ ಎಂದರು.

‘ಆಧ್ಯಾತ್ಮಿಕ ಸಾಧನೆಯಿಂದ ಮಿದುಳಿನ ಮೇಲಾಗುವ ಪರಿಣಾಮಅರಿಯಬೇಕು. ಸಾಧಕರ ಮಾನಸಿಕ ಸ್ಥಿತಿಗೂ ನರಕೋಶಗಳ ನಡುವಿನ ಸಂಬಂಧದ ಒಗಟು ಬಿಡಿಸುವ ನಿಟ್ಟಿನಲ್ಲೂ ಸಂಶೋಧನೆ ಅಗತ್ಯವಿದೆ’ ಎಂದರು.

ಇನ್ಫೊಸಿಸ್‌ ಸಹಸಂಸ್ಥಾಪಕ ಎನ್‌.ಆರ್‌.ನಾರಾಯಣಮೂರ್ತಿ ಮಾತನಾಡಿ, ‘ಈ ಕೃತಿ ಅಂತರಂಗದ ದರ್ಶನ ಮಾಡಿಸುತ್ತದೆ.  ದೇಶದಲ್ಲಿ ಅತ್ಯಂತ ಗೌರವಕ್ಕೆ ಪಾತ್ರವಾಗಿರುವ ಇಬ್ಬರು ದಾರ್ಶನಿಕರ ಕುರಿತಾದ ದಂತಕತೆಗಳ  ನೈಜ ಸಂಗತಿಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುತ್ತಾ  ಲೇಖಕರು ನಮ್ಮನ್ನು  ಆತ್ಮ ಹಾಗೂ ಅಧ್ಯಾತ್ಮದ ಕುರಿತ ಆಳವಾದ ಚಿಂತನೆಗೆ ಒರೆ ಹಚ್ಚುತ್ತಾರೆ’ ಎಂದರು.

ಕೃತಿ ಹೆಸರು : ಟು ಸೇಂಟ್ಸ್‌

ಲೇಖಕ : ಅರುಣ್‌ ಶೌರಿ

ಮುಖ ಬೆಲೆ  : ₹ 699

ಪ್ರಕಾಶನ ಸಂಸ್ಥೆ : ಹಾರ್ಪರ್‌ ಕಾಲಿನ್ಸ್‌ ಇಂಡಿಯಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry